ಕಲಬುರಗಿ: ಉಪಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಎರಡು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಗುರುವಾರ ಬೆಳಿಗ್ಗೆ ಉಪಾಹಾರ ಸೇವಿಸಿದ 80ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಹುದಿನಗಳಿಂದ ಶೇಖರಿಸಿದ್ದ ಅವಲಕ್ಕಿಯಿಂದ ಮಾಡಿದ ಉಪಾಹಾರ ಸೇವಿಸಿ 33 ವಿದ್ಯಾರ್ಥ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಎರಡು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಗುರುವಾರ ಬೆಳಿಗ್ಗೆ ಉಪಾಹಾರ ಸೇವಿಸಿದ 80ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಹುದಿನಗಳಿಂದ ಶೇಖರಿಸಿದ್ದ ಅವಲಕ್ಕಿಯಿಂದ ಮಾಡಿದ ಉಪಾಹಾರ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಉಪಾಹಾರ ಸೇವಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ, ಹೊಟ್ಟೆನೋವು ಹಾಗೂ ಅಸ್ವಸ್ಥತೆ ಕಾಣಿಸಿ ಕೊಂಡಿದೆ. ಕೂಡಲೇ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ 31 ವಿದ್ಯಾರ್ಥಿಗಳನ್ನು ಅಫಜಲಪುರ ತಾಲ್ಲೂಕು ಆಸ್ಪತ್ರೆಗೆ ಹಾಗೂ ಇಬ್ಬರು ಮಕ್ಕಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ತಹಶೀಲ್ದಾರ್ ಮತ್ತು ಅಕ್ಷರ ದಾಸೋಹ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿ ಉಪಾಹಾರಕ್ಕೆ ಬಳಸಿರುವ ಅವಲಕ್ಕಿಯನ್ನು ಪರಿಶೀಲಿಸಿದ್ದಾರೆ. ‘ಅವಲಕ್ಕಿಯಲ್ಲಿ ತುಸು ವಾಸನೆ ಬರುತ್ತಿತ್ತು. ಅದನ್ನು ಹಾಗೂ ನೀರಿನ ಮಾದರಿಯನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಮೂಲಗಳು ಹೇಳಿವೆ.‘ಅಫಜಲಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಾದ ಪೈಕಿ ಐವರು ಹಾಗೂ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾದ ಇಬ್ಬರು ಮಕ್ಕಳನ್ನು ಹೊರತು ಪಡಿಸಿ ಇನ್ನುಳಿದವರನ್ನು ಸಂಜೆ ಹೊತ್ತಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ ಏಳು ಮಕ್ಕಳನ್ನು ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದು ವೈದ್ಯರು ತಿಳಿಸಿದ್ದಾರೆ.ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ವಿದ್ಯಾರ್ಥಿಗಳ ಪೋಷಕರು ಗ್ರಾಮಸ್ಥರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ ಸಿಂಧನೂರು: 50ಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥ ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಹೊರವಲಯದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 50ಕ್ಕೂ ಅಧಿಕ ವಿದ್ಯಾರ್ಥಿನಿಯರು ಹುಳು ಮಿಶ್ರಿತ ಆಹಾರ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದಾರೆ. ಗುರುವಾರ ಬೆಳಿಗ್ಗೆ ಶಾಲೆಯಲ್ಲಿ ಉಪಾಹಾರಕ್ಕಾಗಿ ಪುಲಾವ್ ಸಿದ್ಧಪಡಿಸಲಾಗಿತ್ತು. ಅದನ್ನು ಕೆಲವರು ಸೇವಿಸಿದ್ದಾರೆ. ಈ ವೇಳೆ ಪುಲಾವ್ನಲ್ಲಿ ಹುಳಗಳು ಕಾಣಿಸಿವೆ. ನಂತರ ಇನ್ನುಳಿದ ಮಕ್ಕಳು ಉಪಾಹಾರ ಸೇವನೆಯಿಂದ ದೂರ ಉಳಿದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ ಚಿತ್ರಾನ್ನ ಮಾಡಿಸಿ ಮಕ್ಕಳಿಗೆ ಉಣ ಬಡಿಸಿದ್ದಾರೆ. ಕೆಲ ಹೊತ್ತಿನ ನಂತರ ಐದಾರು ವಿದ್ಯಾರ್ಥಿನಿಯರಿಗೆ ಹೊಟ್ಟೆ ನೋವು ತಲೆಸುತ್ತು ಕಾಣಿಸಿತು. ಕ್ರಮೇಣ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಧ್ಯಾಹ್ನ ಊಟದ ನಂತರ ಪುನಃ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.