ಕಸ ಯಂತ್ರ: ಸ್ಕ್ಯಾಮ್ ಮಾಡೆಲ್; ವಿರೋಧ ಪಕ್ಷದ ನಾಯಕ ಆರ್. ಅಶೋಕ
ಬೆಂಗಳೂರು: ‘ನಗರದ ಜನರ ತೆರಿಗೆ ಹಣದಲ್ಲಿ ‘ಕಸ’ ಹೊಡೆಯಲು ಹೊರಟಿದ್ದೀರಾ, ಇಲ್ಲಾ ‘ಕಮಿಷನ್‘ ಹೊಡೆಯಲು ಹೊರಟಿದ್ದೀರಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರೇ? ದಕ್ಷಿಣ ಮತ್ತು ಪಶ್ಚಿಮ ನಗರ ಪಾಲಿಕೆಗಳಲ್ಲಿ ಕಸ ಗುಡಿಸುವ ಯಂತ್ರಗಳ ಟೆಂಡರ್ನಲ್ಲಿ ನಡೆದಿರುವ ಅಕ್ರಮ, ನಿಮ್ಮ ಸರ್ಕಾರದ ‘ಸ್ಕ್ಯಾಮ್ ಮಾಡೆಲ್’ ಆಡಳಿತಕ್ಕೆ ಸ್ಪಷ್ಟ ಉದಾಹರಣೆ’ ಎ

ಬೆಂಗಳೂರು: ‘ನಗರದ ಜನರ ತೆರಿಗೆ ಹಣದಲ್ಲಿ ‘ಕಸ’ ಹೊಡೆಯಲು ಹೊರಟಿದ್ದೀರಾ, ಇಲ್ಲಾ ‘ಕಮಿಷನ್‘ ಹೊಡೆಯಲು ಹೊರಟಿದ್ದೀರಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರೇ? ದಕ್ಷಿಣ ಮತ್ತು ಪಶ್ಚಿಮ ನಗರ ಪಾಲಿಕೆಗಳಲ್ಲಿ ಕಸ ಗುಡಿಸುವ ಯಂತ್ರಗಳ ಟೆಂಡರ್ನಲ್ಲಿ ನಡೆದಿರುವ ಅಕ್ರಮ, ನಿಮ್ಮ ಸರ್ಕಾರದ ‘ಸ್ಕ್ಯಾಮ್ ಮಾಡೆಲ್’ ಆಡಳಿತಕ್ಕೆ ಸ್ಪಷ್ಟ ಉದಾಹರಣೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.‘ಪ್ರಜಾವಾಣಿ’ಯಲ್ಲಿ ‘ಕಸ ಯಂತ್ರ: ಅರ್ಹತೆಗೆ ರಿಯಾಯಿತಿ’ ಶೀರ್ಷಿಕೆಯಡಿ ಜುಲೈ 28ರಂದು ಪ್ರಕಟವಾದ ವಿಶೇಷ ವರದಿಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ‘ನಿಮ್ಮ ಮೂಗಿನ ಕೆಳಗೆ ಈ ದರೋಡೆ ನಡೆಯುತ್ತಿದ್ದರೂ ಬೆಂಗಳೂರು ಅಭಿವೃದ್ಧಿ ಸಚಿವರು ಮೌನವಾಗಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.‘ಉತ್ತರ, ಪೂರ್ವ ಮತ್ತು ಕೇಂದ್ರ ಪಾಲಿಕೆಗಳಲ್ಲಿ ಸರಿಯಾದ ಮಾನದಂಡ ಇಟ್ಟುಕೊಂಡು, ದಕ್ಷಿಣ ಹಾಗೂ ಪಶ್ಚಿಮ ಪಾಲಿಕೆಗಳಲ್ಲಿ ಮಾತ್ರ ಏಕಾಏಕಿ ಅರ್ಹತಾ ಷರತ್ತುಗಳನ್ನು ಸಡಿಲಗೊಳಿಸಿರುವುದು ಯಾರನ್ನು ಮೆಚ್ಚಿಸಲು? ಕಮಿಷನ್ಗಾಗಿ ತಾಂತ್ರಿಕ ಅರ್ಹತೆಯನ್ನೇ ಗಾಳಿಗೆ ತೂರಲಾಗಿದೆಯೇ? ರಸ್ತೆ ಕಸ ಗುಡಿಸುವ ಅನುಭವಕ್ಕೂ, ದ್ರವ ತ್ಯಾಜ್ಯ ನಿರ್ವಹಣೆಯ ಅನುಭವಕ್ಕೂ ಏನು ಸಂಬಂಧ’ ಎಂದು ಕೇಳಿದ್ದಾರೆ.‘ಒಂದೇ ನಗರ, ಒಂದೇ ಕೆಲಸ –ಆದರೆ ಒಂದೊಂದೂ ಪಾಲಿಕೆಗೊಂದು ನಿಯಮವೇ? ಉತ್ತರ ಮತ್ತು ಪೂರ್ವ ವಲಯಗಳಿಗೆ ಅನ್ವಯವಾಗುವ ಕೆಟಿಪಿಪಿ ಕಾಯ್ದೆಯ ನಿಯಮ ದಕ್ಷಿಣ-ಪಶ್ಚಿಮ ವಲಯಗಳಿಗೆ ಏಕೆ ಅನ್ವಯವಾಗುತ್ತಿಲ್ಲ? ನಿರ್ದಿಷ್ಟ ಸಂಸ್ಥೆಗೆ ಅನುಕೂಲ ಮಾಡಲು ಈ ಹುನ್ನಾರವೇ? ಅರ್ಹತೆ ಇಲ್ಲದ, ಕೆಲಸದ ಅನುಭವವೇ ಇಲ್ಲದ ಕಂಪನಿಗಳಿಗೆ ಗುತ್ತಿಗೆ ನೀಡಲು ತಾಂತ್ರಿಕ ಮಾನದಂಡಗಳನ್ನೇ ಬಲಿ ಕೊಡಲಾಗಿದೆ. ಇದು ಕೇವಲ ತಾಂತ್ರಿಕ ಲೋಪವಲ್ಲ, ಬೆಂಗಳೂರಿನ ತೆರಿಗೆ ಪಾವತಿದಾರರಿಗೆ ಕಾಂಗ್ರೆಸ್ ಮಾಡುತ್ತಿರುವ ಮಹಾದ್ರೋಹ’ ಎಂದು ಹೇಳಿದ್ದಾರೆ.