ಎಸ್ಐಆರ್ ಅರ್ಜಿ ಕೊಡುವ ವಿಚಾರಕ್ಕೆ ಗಲಾಟೆ: ಅಧಿಕಾರಿ ಮೇಲೆ ಹಲ್ಲೆ; ಇಬ್ಬರ ಬಂಧನ
ಬೆಂಗಳೂರು: ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೋಷನ್ನಗರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಇಬ್ಬರನ್ನು ದೇವರಜೀವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸೂಪರಿಂಟೆಂಡೆಂಟ್ ಹಾಗೂ ಡಿ.ಜಿ.ಹಳ್ಳಿಯ 11 ಬೂ

ಬೆಂಗಳೂರು: ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೋಷನ್ನಗರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಇಬ್ಬರನ್ನು ದೇವರಜೀವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸೂಪರಿಂಟೆಂಡೆಂಟ್ ಹಾಗೂ ಡಿ.ಜಿ.ಹಳ್ಳಿಯ 11 ಬೂತ್ಗಳ ಮೇಲ್ವಿಚಾರಕ ಅಧಿಕಾರಿಯಾಗಿದ್ದ ಫಕೀರಪ್ಪ ಅವರ ದೂರು ಆಧರಿಸಿ ಯಾರಬ್, ದಸ್ತಗೀರ್, ಇಕ್ಬಾಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಯಾರಬ್, ದಸ್ತಗೀರ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಫಕೀರಪ್ಪ ಅವರು ಎಸ್ಐಆರ್ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ರೋಷನ್ ನಗರಕ್ಕೆ ಹೋಗಿದ್ದರು. ಈ ವೇಳೆ ಯಾರಬ್ ಮತ್ತು ದಸ್ತಗೀರ್ ತಾವು ಜಯನಗರ ನಿವಾಸಿಗಳಾಗಿದ್ದು, ಗಣತಿ ನಮೂನೆ ಕೊಡಬೇಕೆಂದು ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್ಒ) ವಾಗ್ವಾದ ನಡೆಸಿದ್ದರು. ಅದಕ್ಕೆ ಬಿಎಲ್ಒಗಳು, ಜಯನಗರಕ್ಕೆ ಹೋಗಿ ಗಣತಿ ನಮೂನೆ ಪಡೆದುಕೊಳ್ಳುವಂತೆ ಅವರಿಗೆ ಸೂಚಿಸಿದ್ದರು. ಇದಕ್ಕೆ ಒಪ್ಪದ ಯಾರಬ್ ಮತ್ತು ದಸ್ತಗೀರ್, ಬಿಎಲ್ಒಗಳೊಂದಿಗೆ ಜಗಳವಾಡಿದ್ದಾರೆ. ಆಗ ಜಗಳ ಬಿಡಿಸಲು ಹೋದ ಫಕೀರಪ್ಪ ಅವರ ಮುಖಕ್ಕೆ ಆರೋಪಿಗಳು ಕೈಯಿಂದ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಅಂಬೇಡ್ಕರ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದ ಬಳಿಕ ದೂರು ನೀಡಿದ್ದಾರೆ. ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದರು.ಪೂರ್ವ ವಿಭಾಗ ಡಿಸಿಪಿ ವಿಕ್ರಮ್ ಅಮಟೆ, ‘ಎಸ್ಐಆರ್ ಅರ್ಜಿ ಕೇಳುವ ವಿಚಾರಕ್ಕೆ ಗಲಾಟೆ ಆಗಿದೆ. ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ’ ಎಂದು ಹೇಳಿದ್ದಾರೆ.