ಎಸ್ಐಆರ್ ಸಮೀಕ್ಷೆ| ಅಧಿಕಾರಿಯ ಮೇಲೆ ಹಲ್ಲೆ – ರಕ್ತ ಬರುವಂತೆ ಹೊಡೆದಿದ್ದ ಡಿಜೆಹಳ್ಳಿಯ ಇಬ್ಬರು ಅರೆಸ್ಟ್
ಬೆಂಗಳೂರು: ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಕೆಲಸಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಾರಬ್ ಮತ್ತು ದಸ್ತಗೀರ್ ಬಂಧಿತ ಆರೋಪಿಗಳು. ಬುಧವಾರ ಮಧ್

ಬೆಂಗಳೂರು: ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಕೆಲಸಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಾರಬ್ ಮತ್ತು ದಸ್ತಗೀರ್ ಬಂಧಿತ ಆರೋಪಿಗಳು. ಬುಧವಾರ ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಸ್ಲಂ ಡೆವಲಪ್ಮೆಂಟ್ ಬೋರ್ಡ್ನ ಅಧಿಕಾರಿಗಳ ತಂಡವು ಡಿ.ಜೆ. ಹಳ್ಳಿಯ ರೋಶನ್ ನಗರದಲ್ಲಿರುವ ಕೌಸರ್ ಮಸೀದಿ ಬಳಿ SIR ಸಮೀಕ್ಷಾ ಕಾರ್ಯಕ್ಕಾಗಿ ತೆರಳಿತ್ತು. ಇದನ್ನೂ ಓದಿ: ಬೆಂಗಳೂರು ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲಿ ಪಂಚರ್ ದಂಧೆ – ಕಿಡಿಗೇಡಿಗಳು ಕೊನೆಗೂ ಲಾಕ್! ಈ ವೇಳೆ ಸ್ಥಳಕ್ಕೆ ಬಂದ ದಸ್ತಗೀರ್ ತನಗೂ SIR ಫಾರ್ಮ್ ನೀಡುವಂತೆ ಅಧಿಕಾರಿಗಳ ಬಳಿ ಪಟ್ಟು ಹಿಡಿದು ಗಲಾಟೆ ಆರಂಭಿಸಿದ್ದಾನೆ. ಆದರೆ ದಸ್ತಗೀರ್ ಈಗಾಗಲೇ ಜಯನಗರಕ್ಕೆ ವಾಸ್ತವ್ಯ ಬದಲಾಯಿಸಿರುವುದರಿಂದ ಆತನಿಗೆ ಫಾರ್ಮ್ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ ದಸ್ತಗೀರ್ ಹಾಗೂ ಆತನಿಗೆ ಸಾಥ್ ನೀಡಿದ ಯಾರಬ್ ಎಂಬಾತ ಕರ್ತವ್ಯನಿರತ ಅಧಿಕಾರಿಯ ಮುಖಕ್ಕೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಸ್ಲಂ ಡೆವಲಪ್ಮೆಂಟ್ ಬೋರ್ಡ್ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಫಕೀರಪ್ಪ ಗಂಭೀರ ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿಗಳು ಕೈಯಿಂದ ಮುಖಕ್ಕೆ ಮತ್ತು ಕಟಿ ಭಾಗಕ್ಕೆ ಪಂಚ್ ಮಾಡಿ, ಬೆನ್ನಿಗೆ ಹೊಡೆದು ಹಲ್ಲೆ ನಡೆಸಿದ್ದರಿಂದ ಅಧಿಕಾರಿಯ ತುಟಿಯಿಂದ ರಕ್ತ ಹರಿದಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಬಂದು ಗಲಾಟೆಯನ್ನು ಬಿಡಿಸಿದ್ದು, ಗಾಯಗೊಂಡ ಅಧಿಕಾರಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.