ಸಚಿವ ಸ್ಥಾನಕ್ಕೆ ಹೆಬ್ಬಾಳಕರ, ಸವದಿ ಪಟ್ಟು: ಮುಖ್ಯಮಂತ್ರಿಗೆ ಇಕ್ಕಟ್ಟು
ನವದೆಹಲಿ: ಸಚಿವ ಸಂಪುಟ ಸೇರ್ಪಡೆ ಸಂಬಂಧ ಬೆಳಗಾವಿ ಕಾಂಗ್ರೆಸ್ ನಾಯಕರ ನಡುವಿನ ಬಿಕ್ಕಟ್ಟು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಲೆನೋವಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಬೆಳಗಾವಿಯಿಂದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಸಚಿವರಾಗಿದ್ದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಲಕ್ಷ್ಣಣ ಸವದಿ ಅವರನ್ನು ಕಾಂಗ್ರೆಸ್ ನಾಯಕರು ಸಮಾ

ನವದೆಹಲಿ: ಸಚಿವ ಸಂಪುಟ ಸೇರ್ಪಡೆ ಸಂಬಂಧ ಬೆಳಗಾವಿ ಕಾಂಗ್ರೆಸ್ ನಾಯಕರ ನಡುವಿನ ಬಿಕ್ಕಟ್ಟು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಲೆನೋವಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಬೆಳಗಾವಿಯಿಂದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಸಚಿವರಾಗಿದ್ದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಲಕ್ಷ್ಣಣ ಸವದಿ ಅವರನ್ನು ಕಾಂಗ್ರೆಸ್ ನಾಯಕರು ಸಮಾಧಾನಿಸಿದ್ದರು. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸತೀಶ ಜಾರಕಿಹೊಳಿ ಸಚಿವರಾಗಿದ್ದಾರೆ. ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನಿರೀಕ್ಷೆ ಇದೆ. ಈ ಸ್ಥಾನಕ್ಕಾಗಿ ಲಕ್ಷ್ಣಣ ಸವದಿ ಹಾಗೂ ಲಕ್ಷ್ಮಿ ನಡುವ ತೀವ್ರ ಪೈಪೋಟಿ ಏರ್ಪಟ್ಟಿದೆ. ಸವದಿಗೆ ಸಚಿವ ಸ್ಥಾನ ನೀಡುವುದಕ್ಕೆ ಜಾರಕಿಹೊಳಿ ಹಾಗೂ ಲಕ್ಷ್ಮಿ ಅವರ ವಿರೋಧ ಇದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಜಾರಕಿಹೊಳಿ, ಸವದಿ ಹಾಗೂ ಲಕ್ಷ್ಮಿ ಅವರನ್ನು ಪ್ರತ್ಯೇಕವಾಗಿ ಕರೆಸಿ ಬುಧವಾರ ಸಂಜೆ ಮಾತುಕತೆ ನಡೆಸಿದರು. ಲಕ್ಷ್ಮಿ ಅವರನ್ನು ಸಚಿವರನ್ನಾಗಿ ಮಾಡುವುದಕ್ಕೆ ಹೆಚ್ಚೇನೂ ವಿರೋಧ ವ್ಯಕ್ತವಾಗಿಲ್ಲ. ಸವದಿ ಸೇರ್ಪಡೆಗೆ ಉಳಿದ ಇಬ್ಬರು ನಾಯಕರು ವಿರೋಧಿಸಿದರು. ಮೂರು ವರ್ಷಗಳ ಹಿಂದೆಯಷ್ಟೇ ಸವದಿ ಪಕ್ಷಕ್ಕೆ ಸೇರಿದ್ದಾರೆ. ಅವರನ್ನು ಈ ಸಲ ಪರಿಗಣಿಸುವುದು ಬೇಡ ಎಂಬುದು ಉಳಿದವರ ವಾದ. ʼಪಕ್ಷ ಸೇರ್ಪಡೆ ಸಂದರ್ಭದಲ್ಲೇ ಸಚಿವ ಸ್ಥಾನದ ವಾಗ್ದಾನ ನೀಡಲಾಗಿತ್ತು. ಮೂರು ವರ್ಷಗಳಿಂದ ತಾಳ್ಮೆಯಿಂದ ಕಾದಿದ್ದೇನೆ. ವಚನ ಭ್ರಷ್ಟರಾಗಬೇಡಿʼ ಎಂದು ಸವದಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸವದಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಶಿವಕುಮಾರ್ ಉತ್ಸುಕರಾಗಿದ್ದಾರೆ. ಜಿಲ್ಲೆಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸವದಿ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂಬುದು ಅವರ ಆಶಯ. ʼಅಂತಿಮ ನಿರ್ಧಾರವು ಪಕ್ಷದ ಹೈಕಮಾಂಡ್ಗೆ ಬಿಟ್ಟದ್ದು. ಅದನ್ನು ಎಲ್ಲರೂ ಪಾಲಿಸಬೇಕುʼ ಎಂದು ಮೂವರು ನಾಯಕರಿಗೂ ಮುಖ್ಯಮಂತ್ರಿ ಸೂಚಿಸಿದ್ದಾರೆ.