ಕಾವೇರಿ ಹುಟ್ಟುವ ಕೊಡಗಿನ ಅರಣ್ಯಾಭಿವೃದ್ಧಿಯಲ್ಲಿ ತಮಿಳುನಾಡು ಪಾಲುದಾರಿಕೆಯೂ ಬೇಕು
ಕಾವೇರಿ ನದಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ವಿರುದ್ಧ ನಿಯಂತ್ರಣ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುನ್ನಡೆದಿದೆ.ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಇದೆ. ಮಳೆ ಕೊರತೆಯಿಂದಾಗಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರು ಸದ್ಯ ಕುಡಿಯುವ ಅಗತ್ಯಕ್ಕೆ ಮಾತ್ರ ಸಾಲುತ್ತದೆ ಎಂಬ ಅಂದಾಜು ಮಾಡಲಾಗಿದ

ಕಾವೇರಿ ನದಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ವಿರುದ್ಧ ನಿಯಂತ್ರಣ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುನ್ನಡೆದಿದೆ.ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಇದೆ. ಮಳೆ ಕೊರತೆಯಿಂದಾಗಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರು ಸದ್ಯ ಕುಡಿಯುವ ಅಗತ್ಯಕ್ಕೆ ಮಾತ್ರ ಸಾಲುತ್ತದೆ ಎಂಬ ಅಂದಾಜು ಮಾಡಲಾಗಿದೆ. ಹವಾಮಾನ ವೈಪರೀತ್ಯ ಜಾಗತಿಕವೇ ಆಗಿದ್ದರೂ ಸ್ಥಳೀಯ ಕಾರಣಗಳೇ ಇದಕ್ಕೆ ಮುನ್ನುಡಿ ಬರೆದಿರುವುದು. ಕಾವೇರಿ ನದಿ ಹುಟ್ಟುವ ಕೊಡಗಿನಲ್ಲಿ ದಶಕಗಳಿಂದ ಅರಣ್ಯನಾಶ ಕೂಡ ಮಳೆ ಪ್ರಮಾಣ ಇಳಿಮುಖಗೊಂಡಿರುವ ಕಾರಣಗಳಲ್ಲಿ ಒಂದು. ರಾಜ್ಯ ಸರ್ಕಾರ ಅರಣ್ಯ ನಾಶ ತಡೆ ಮತ್ತು ಅಭಿವೃದ್ಧಿ ಹಿನ್ನೆಲೆಯಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳುತ್ತಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ. ಅರಣ್ಯಾಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದ್ದು ಅದು ಕರ್ನಾಟಕದ ಬೊಕ್ಕಸವನ್ನೇ ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿನೀರು ಹಂಚಿಕೆಗೆ ತಮಿಳುನಾಡು ಹಕ್ಕು ಮಂಡಿಸಿದರಷ್ಟೇ ಸಾಲದು, ಕೊಡಗಿನ ಅರಣ್ಯಪ್ರದೇಶ ಅಭಿವೃದ್ಧಿಯಲ್ಲೂ ಪಾಲುದಾರಿಕೆ ಪಡೆಯಬೇಕು.ಈಗಿರುವ ಮಾಹಿತಿಯಂತೆ ಆಗಸ್ಟ್ 3 ರಂದು ಕಾವೇರಿ ನೀರು ನದಿ ನೀರು ಹಂಚಿಕೆ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿಧಾನಸೌಧದಲ್ಲಿ ಮಾತುಕತೆ ನಡೆಸಲಿದ್ದಾರೆ. ಈ ಅಂಶವನ್ನೂ ಪರಿಗಣಿಸಿದರೆ ಒಳಿತು.ನಿಯಂತ್ರಣ ಸಮಿತಿ ಸೂಚನೆಯ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಹೋರಾಟದ ಮುನ್ಸೂಚನೆ ನೀಡಿವೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಹೋರಾಟದ ಭಾಗವಾಗಿ ಕರ್ನಾಟಕ ಬಂದ್ ಗೆ ಕರೆ ನೀಡುವುದು ಸಮಂಜಸವಲ್ಲ, ಬಂದ್ ಬ್ರಹ್ಮಾಸ್ತ್ರ ಪ್ರತಿಭಟನೆಯ ಎಲ್ಲ ಹಂತಗಳ ನಂತರ ಕೊನೆಯಲ್ಲಷ್ಟೇ ಬಳಸಬೇಕು ಎಂದು ಹೇಳಿದ್ದಾರೆ. ಅವರ ಈ ಮಾತು ಮೇಲ್ನೋಟಕ್ಕೆ ವಾಟಾಳ್ ನಾಗರಾಜ್ ನಾಯಕತ್ವದಲ್ಲಿ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್ ಕುರಿತ ಪ್ರಸ್ತಾಪದ ವಿರುದ್ಧ ಅನ್ನಿಸಿದರೂ ಇದು ವಿವೇಕಯುತ ನಿಲುವಾಗಿದೆ.ಬಂದ್ ಹೋರಾಟದ ಪ್ರಮುಖ ಅಸ್ತ್ರವಾಗಿದ್ದರೂ ಅದರಿಂದ ಜನಸಾಮಾನ್ಯರ ಪಡಿಪಾಟಲುಗಳು ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲೂ ಕನ್ನಡಪರ ಸಂಘಟನೆಗಳು ಚಿಂತಿಸಬೇಕು. ವಾಟಾಳ್ ನಾಗರಾಜ್, ನಾರಾಯಣಗೌಡ ಸೇರಿದಂತೆ ಕನ್ನಡ ಪರ ಹೋರಾಟಗಾರರ ಬಗ್ಗೆ ಅದೆಂಥದ್ದೇ ಗುಸುಗುಸು ಮಟ್ಟದ ಆರೋಪಗಳಿದ್ದರೂ ಅವರೆಲ್ಲರ ಪ್ರಯತ್ನಗಳಿಂದಾಗಿಯೇ ನೆಲ, ಜಲ, ಭಾಷೆಗೆ ಸಂಬಂಧಿಸಿದ ಹೋರಾಟಕ್ಕೆ ಸದಾ ಬಲ ದೊರೆಯುತ್ತಿರುವುದನ್ನು ಕನ್ನಡಿಗರು ಮರೆಯಬಾರದು.( ಲೇಖಕರು: ಪತ್ರಕರ್ತರು)