ದೇವರ ಚಿತ್ರಣ: ಕೆಲವರಿಗಾಗಿ ಸೃಜನಶೀಲತೆಗೆ ತಡೆಯೊಡ್ಡಲಾಗದು ಎಂದ ಸುಪ್ರೀಂ ಕೋರ್ಟ್
ನವದೆಹಲಿ: ‘ದೇವರನ್ನು ಚಿತ್ರಿಸಿದ ರೀತಿಯ ಕುರಿತು ಕೆಲವರು ವ್ಯಕ್ತಪಡಿಸುವ ಅಭಿಪ್ರಾಯಗಳ ಕಾರಣಕ್ಕೆ ಕಲೆ, ಸೃಜನಶೀಲತೆಗೆ ತಡೆಯೊಡ್ಡಲು ಅಥವಾ ನಿಷೇಧ ಹೇರಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಗಂಭೀರವಾಗಿ ಹೇಳಿದೆ.‘ಮಹಾಪ್ರಭು ಜಗನ್ನಾಥ’ ಎನ್ನುವ ಆ್ಯನಿಮೇಷನ್ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒಡಿಶಾ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಅರ್ಜ

ನವದೆಹಲಿ: ‘ದೇವರನ್ನು ಚಿತ್ರಿಸಿದ ರೀತಿಯ ಕುರಿತು ಕೆಲವರು ವ್ಯಕ್ತಪಡಿಸುವ ಅಭಿಪ್ರಾಯಗಳ ಕಾರಣಕ್ಕೆ ಕಲೆ, ಸೃಜನಶೀಲತೆಗೆ ತಡೆಯೊಡ್ಡಲು ಅಥವಾ ನಿಷೇಧ ಹೇರಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಗಂಭೀರವಾಗಿ ಹೇಳಿದೆ.‘ಮಹಾಪ್ರಭು ಜಗನ್ನಾಥ’ ಎನ್ನುವ ಆ್ಯನಿಮೇಷನ್ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒಡಿಶಾ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ, ಸಿನಿಮಾ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.‘ಇಷ್ಟೊಂದು ಸೂಕ್ಷ್ಮವಾಗುತ್ತಾ, ಈ ರೀತಿಯ ಅರ್ಜಿಗಳನ್ನು ಸಲ್ಲಿಸುವುದು ಮುಂದುವರಿದರೆ, ಹಿಂದೂ ದೇವಾನುದೇವತೆಗಳ ಅಥವಾ ಪುರಾಣಗಳ ಕುರಿತು ಸೃಜನಶೀಲ ಅಭಿವ್ಯಕ್ತಿಯನ್ನೇ ನಿಷೇಧಿಸುವ ಆದೇಶ ಹೊರಡಿಸಬೇಕಾಗುತ್ತದೆ’ ಎಂದು ನ್ಯಾಯಾಲಯ ಹೇಳಿದೆ....‘ಇಬ್ಬರು ಅಥವಾ ಮೂವರು ಅರ್ಜಿ ಸಲ್ಲಿಸುತ್ತೀರಿ, ಹಿಂದೂ ದೇವರ ಮೇಲಿನ ಗೌರವದಿಂದ ನಾವು ಆದೇಶ ನೀಡುತ್ತೇವೆ. ಬಳಿಕ, ಭಾರತದಲ್ಲಿ ಕಲೆ ಎಂಬುದೇ ಇರುವುದಿಲ್ಲ. ಕಲಾವಿದರ ಅಭಿವ್ಯಕ್ತಿಗೆ ಈ ರೀತಿ ನಿಷೇಧ ಹೇರಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.‘ಪುರಿಯಲ್ಲಿ ರಥಯಾತ್ರೆ ಪೂರ್ಣಗೊಂಡ ಬಳಿಕ ಸಿನಿಮಾವನ್ನು ಬಿಡುಗಡೆ ಮಾಡಬಹುದು’ ಎಂದು ಪೀಠ ಜುಲೈ 17ರಂದು ಆದೇಶ ನೀಡಿತ್ತು.‘ದೇಶದಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ರಾಮಾಯಣದ ವೈವಿಧ್ಯಮಯ ಕಥೆಗಳಿವೆ. ನಾವು ಈ ವೈವಿಧ್ಯಕ್ಕೆ ನಿಷೇಧ ಹೇರಿದರೆ, ರಾಮಾಯಣ ಮತ್ತು ಮಹಾಭಾರತ ಆಧಾರಿತ ಧಾರಾವಾಹಿಗಳು ಪ್ರಸಾರವೇ ಆಗುವುದಿಲ್ಲ. ಹಿಂದೂ ದೇವರ ಕುರಿತ ಚಿತ್ರಕಲೆ, ಶಿಲ್ಪಕಲೆ ಮತ್ತು ಇತರ ಎಲ್ಲ ಕಲಾ ಪ್ರಕಾರಗಳಿಗೂ ನಿಷೇಧ ಹೇರಬೇಕಾಗುತ್ತದೆ’ ಎಂದರು.‘ಮಹಾಪ್ರಭು ಜಗನ್ನಾಥ’ ಸಿನಿಮಾ ತೆರೆಗೆ ಸಿಬಿಎಫ್ಸಿ ಕೂಡ ಹಸಿರು ನಿಶಾನೆ ತೋರಿದೆ ಮತ್ತು ಆ್ಯನಿಮೇಷನ್ ಸಿನಿಮಾಗಳು ಮಕ್ಕಳಿಗಾಗಿ ಇರುವಂಥವು’ ಎಂದು ಪೀಠ ಅಭಿಪ್ರಾಯಪಟ್ಟಿತು.