ರೀಲ್ಸ್ಗಳು ಸಕಾರಾತ್ಮಕವಾಗಿರಲಿ: ಅದ್ವಿತೀಯ ಕುಮಾರ್ ಅಭಿಮತ
ದೇವನಹಳ್ಳಿ: ‘ಸಮಾಜಕ್ಕೆ ಒಳಿತನ್ನೇ ಬಯಸುವ ಸಕಾರಾತ್ಮಕ ವಿಷಯಗಳ ಆಯ್ಕೆ ಬಹುಮುಖ್ಯ. ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಅವುಗಳಿಗೆ ಕಂಟೆಂಟ್ ನೀಡುವ ಯುವಜನತೆ ಹೆಚ್ಚು ಜವಾಬ್ದಾರಿಯುತವಾಗಿ ಇರಬೇಕು’ ಎಂದು ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ನಾರ್ಥ್ ಕ್ಯಾಂಪಸ್ನ ಸಿಇಒ ಅದ್ವಿತೀಯ ಕುಮಾರ್ ಉದಯ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕುಂದಾಣದಲ್ಲಿರುವ ಕೇಂಬ್

ದೇವನಹಳ್ಳಿ: ‘ಸಮಾಜಕ್ಕೆ ಒಳಿತನ್ನೇ ಬಯಸುವ ಸಕಾರಾತ್ಮಕ ವಿಷಯಗಳ ಆಯ್ಕೆ ಬಹುಮುಖ್ಯ. ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಅವುಗಳಿಗೆ ಕಂಟೆಂಟ್ ನೀಡುವ ಯುವಜನತೆ ಹೆಚ್ಚು ಜವಾಬ್ದಾರಿಯುತವಾಗಿ ಇರಬೇಕು’ ಎಂದು ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ನಾರ್ಥ್ ಕ್ಯಾಂಪಸ್ನ ಸಿಇಒ ಅದ್ವಿತೀಯ ಕುಮಾರ್ ಉದಯ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕುಂದಾಣದಲ್ಲಿರುವ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್ನ ನಾರ್ಥ್ ಕ್ಯಾಂಪಸ್ ಸಹಯೋಗದಲ್ಲಿ ‘ಪ್ರಜಾವಾಣಿ’ ಆಯೋಜಿಸಿದ್ದ ‘ವ್ಯಾಲೆಂಟೈನ್ಸ್ ಡೇ ರೀಲ್ಸ್’ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಗುರುವಾರ ಮಾತನಾಡಿದರು.‘ಪ್ರೀತಿ ಎಂದರೆ ಕೇವಲ ಪ್ರಣಯವಲ್ಲ. ಪಾಲಕರು, ಸ್ನೇಹಿತರು, ಪ್ರಕೃತಿ, ಸಮಾಜ, ಪ್ರಾಣಿ... ಹೀಗೆ ಪ್ರೀತಿ ಹಂಚಿ ಬದುಕಲು ಸಾಕಷ್ಟು ಅವಕಾಶಗಳಿವೆ ಎಂಬುದಕ್ಕೆ ಪ್ರಜಾವಾಣಿ ನಡೆಸಿದ ರೀಲ್ಸ್ ಸ್ಪರ್ಧೆಯ ಫಲಿತಾಂಶವೇ ಸಾಕ್ಷಿ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಪರ್ಧೆಯ ತೀರ್ಪುಗಾರ, ರೀಲ್ಸ್ ಸ್ಟಾರ್ ಯಶವಂತ್ ಶೆಟ್ಟಿ, ‘ಸಾಮಾಜಿಕ ಮಾಧ್ಯಮ ಎಂಬ ಪ್ರಬಲ ಅಸ್ತ್ರವನ್ನು ಯುವಜನತೆ ಅತ್ಯಂತ ಎಚ್ಚರಿಕೆಯಿಂದ ಮತ್ತು ಸಕಾರಾತ್ಮಕ ಸಂಗತಿಗಳಿಗೆ ಬಳಸಿಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.ಕಳೆದ ಫೆಬ್ರುವರಿಯಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಪ್ರವೇಶಗಳು ಬಂದಿದ್ದವು. ಅವುಗಳಲ್ಲಿ ತೀರ್ಪುಗಾರ ಮಂಡಳಿಯು ಅಂತಿಮವಾಗಿ ಆಯ್ಕೆ ಮಾಡಿದ್ದರಲ್ಲಿ ಪ್ರಥಮ ಬಹುಮಾನವನ್ನು ಉಡುಪಿ ಜಿಲ್ಲೆಯ ಕಟಪಾಡಿಯ ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ಅವರು ಪಡೆದರು. ಇವರಿಗೆ ₹25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಪ್ರದಾನ ಮಾಡಿದರು. ದ್ವಿತೀಯ ಬಹುಮಾನ ಪಡೆದ ಮಂಗಳೂರಿನ ಬಿ.ಸಿ.ರೋಡ್ನವರಾದ ಛಾಯಾಗ್ರಾಹಕ ಪ್ರದೀಪ್ ನಾಯಕ್ ಹಾಗೂ ತೃತೀಯ ಬಹುಮಾನ ಪಡೆದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ನೇಹಾ ಶಂಕರ್ ಶೇಟ್ ಅವರಿಗೆ ಕ್ರಮವಾಗಿ ₹20 ಸಾವಿರ ಹಾಗೂ ₹15 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.ಉಳಿದಂತೆ ಡಾ.ನಂದೀಶ್ ವೈ.ಡಿ., ರಂಜಿತ್ ನೀರಮಾರ್ಗ್, ಮೇಘಾ ವಾದಿರಾಜ್, ಅಕ್ಷಯ್ ಕುಮಾರ್, ಹರ್ಷ ಕುಮಾರ್, ದೀಕ್ಷಿತ್ ಕುಮಾರ್ ಬಿ., ವಿದ್ಯಾ ಮಂಜುನಾಥ್ ಬಡಿಗೇರ್, ಪುನೀತ್ ಶಿವಕುಮಾರ್, ಅಭಿಲಾಷ್ ಮತ್ತು ಹರ್ಷಿತಾ, ಪ್ರದೀಪ್ರಾಜ್ ಬಿ.ಕೆ. ಅವರು ಸಮಾಧಾನಕರ ಬಹುಮಾನಕ್ಕೆ ಭಾಜನರಾದರು.ಕಾರ್ಯಕ್ರಮದಲ್ಲಿ ಪ್ರಜಾವಾಣಿ ಡಿಜಿಟಲ್ ಸಂಪಾದಕ ರಾಧಾಕೃಷ್ಣ ಎಸ್. ಭಡ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಪ್ರಸಾದ್ ನಾಯಕ್ ಹಂಸವತ್ ಉಪಸ್ಥಿತರಿದ್ದರು.ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಪ್ರಜಾವಾಣಿ ರೀಲ್ಸ್ ಸ್ಪರ್ಧೆ