ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಮತ್ಸೋದ್ಯಮಕ್ಕೂ ಧಕ್ಕೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆ ಕೇವಲ ಕೃಷಿ, ತೋಟಗಾರಿಕೆ ಬೆಳೆಗಳಿಗಷ್ಟೇ ಹಾನಿ ಮಾಡಿಲ್ಲ. ಅವುಗಳೊಂದಿಗೆ ಮೀನುಗಾರಿಕಾ ಕ್ಷೇತ್ರಕ್ಕೂ ಹೊಡೆತ ನೀಡಿದೆ. ಜಿಲ್ಲೆಯ ಮತ್ಸೋದ್ಯಮಕ್ಕೂ ತೀವ್ರ ಹಾನಿಯಾಗಿದೆ.ಕೊಡಗು ಜಿಲ್ಲೆಯ ಎಲ್ಲೆಡೆ ಈ ವರ್ಷ ಉಂಟಾಗಿರುವ ಮಳೆ ಕೊರತೆಯಿಂದ ಬಹುತೇಕ ಎಲ್ಲ ಕೆರೆಗಳೂ ಭರ್ತಿಯಾಗಿಲ್ಲ. ಹಲವು ಕೆರೆಗಳಲ್ಲಿ ಕೇವಲ ಅರ್ಧದಷ್ಟು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆ ಕೇವಲ ಕೃಷಿ, ತೋಟಗಾರಿಕೆ ಬೆಳೆಗಳಿಗಷ್ಟೇ ಹಾನಿ ಮಾಡಿಲ್ಲ. ಅವುಗಳೊಂದಿಗೆ ಮೀನುಗಾರಿಕಾ ಕ್ಷೇತ್ರಕ್ಕೂ ಹೊಡೆತ ನೀಡಿದೆ. ಜಿಲ್ಲೆಯ ಮತ್ಸೋದ್ಯಮಕ್ಕೂ ತೀವ್ರ ಹಾನಿಯಾಗಿದೆ.ಕೊಡಗು ಜಿಲ್ಲೆಯ ಎಲ್ಲೆಡೆ ಈ ವರ್ಷ ಉಂಟಾಗಿರುವ ಮಳೆ ಕೊರತೆಯಿಂದ ಬಹುತೇಕ ಎಲ್ಲ ಕೆರೆಗಳೂ ಭರ್ತಿಯಾಗಿಲ್ಲ. ಹಲವು ಕೆರೆಗಳಲ್ಲಿ ಕೇವಲ ಅರ್ಧದಷ್ಟು ಮಾತ್ರ ನೀರಿದೆ. ಮಳೆ ಬಾರದೇ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ವರ್ಷಾಂತ್ಯಕ್ಕೆ ಕೆರೆಗಳು ಬತ್ತಲಿವೆ, ಇಲ್ಲವೇ ನೀರು ತೀರಾ ಕಡಿಮೆಯಾಗಲಿದೆ. ಹಾಗಾಗಿ, ಹೊಸದಾಗಿ ಮೀನು ಮರಿಗಳನ್ನು ಕೆರೆಗಳಿಗೆ ಬಿಡಲು ಯಾರೂ ಮುಂದಾಗುತ್ತಿಲ್ಲ.ಜಿಲ್ಲೆಯ ಮೀನುಗಾರಿಕಾ ಇಲಾಖೆಗೆ ಈ ವರ್ಷ ಸರ್ಕಾರ 88 ಲಕ್ಷ ಮೀನುಮರಿಗಳನ್ನು ವಿತರಿಸುವ ಗುರಿ ನೀಡಿದೆ. ಆದರೆ, ಇದುವರೆಗೂ ಕೇವಲ 4 ಲಕ್ಷ ಮೀನು ಮರಿಗಳನ್ನಷ್ಟೇ ವಿತರಿಸಲಾಗಿದೆ. ಪರಿಸ್ಥಿತಿ ನೋಡಿದರೆ, ಗುರಿಯಲ್ಲಿ ಶೇ 50ರಷ್ಟನ್ನೂ ತಲುಪಲು ಅಸಾಧ್ಯ ಎನ್ನುವಂತಾಗಿದೆ.ಕಳೆದ ವರ್ಷ ಜುಲೈ ಅಂತ್ಯಕ್ಕೆ 8 ಲಕ್ಷ ಮೀನು ಮರಿಗಳನ್ನು ವಿತರಣೆ ಮಾಡಲಾಗಿತ್ತು. ಈ ವರ್ಷದಂತಹ ಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.40 ಹೆಕ್ಟೇರ್ಗಿಂತ ಹೆಚ್ಚು ವಿಸ್ತೀರ್ಣ ಅಚ್ಚುಕಟ್ಟು ಪ್ರದೇಶ ಇರುವ 9 ಕೆರೆಗಳು ಸೋಮವಾರಪೇಟೆ ತಾಲ್ಲೂಕುನಲ್ಲಿವೆ. ಇಂತಹ ದೊಡ್ಡದಾದ ಕೆರೆಗಳಲ್ಲಿ ಮೀನುಗಾರಿಕೆಯ ಗುತ್ತಿಗೆ ಪಡೆದವರೂ ಈ ಬಾರಿ ಮೀನುಮರಿ ಖರೀದಿಸಲು ಮುಂದಾಗುತ್ತಿಲ್ಲ. ಇವರು ಮಾತ್ರವಲ್ಲ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳನ್ನು ಗುತ್ತಿಗೆಗೆ ಪಡೆದವರೂ ಮೀನುಮರಿ ಖರೀದಿಸುತ್ತಿಲ್ಲ. ತೋಟಗಳಲ್ಲಿ ಕೆರೆಗಳನ್ನು ಹೊಂದಿರುವವರೂ ಸಹ ಈ ಬಾರಿ ಮೀನುಮರಿ ಖರೀದಿಸಲು ಉತ್ಸುಕತೆ ತೋರುತ್ತಿಲ್ಲ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಸಚಿನ್ ‘ಪ್ರಜಾವಾಣಿ’ಗೆ ತಿಳಿಸಿದರು.ಇದುವರೆಗೂ ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲ, ಪಕ್ಕದ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳು ಹಾಗೂ ಹಾಸನ ಜಿಲ್ಲೆಯ ಗಡಿಭಾಗದ ಮೀನು ಕೃಷಿಕರೂ ಕೊಡಗು ಜಿಲ್ಲೆಯ ಮೀನುಗಾರಿಕಾ ಇಲಾಖೆಯಿಂದಲೇ ಮೀನುಮರಿಗಳನ್ನು ಖರೀದಿಸುತ್ತಿದ್ದರು. ಆದರೆ, ಈ ಬಾರಿ ಅಲ್ಲೂ ಮಳೆ ಇಲ್ಲದೇ ಇರುವುದರಿಂದ ಕೆರೆಗಳು ಭರ್ತಿಯಾಗಿಲ್ಲ. ಹಾಗಾಗಿ, ಅಲ್ಲಿಂದಲೂ ಬೇಡಿಕೆ ವ್ಯಕ್ತವಾಗುತ್ತಿಲ್ಲ.ಬಿಟ್ಟ ಮೀನು ಮರಿ ಬೆಳವಣಿಗೆಯಾಗಿ ಕನಿಷ್ಠ 1 ಕೆ.ಜಿ. ತೂಕ ಬರಬೇಕಾದರೆ ಕೊಡಗು ಜಿಲ್ಲೆಯಲ್ಲಾದರೆ ಒಂದೂವರೆ ವರ್ಷದಿಂದ ಒಂದು ಮುಕ್ಕಾಲು ವರ್ಷ ಬೇಕು. ಅದೇ ಹೊರ ಜಿಲ್ಲೆಯಲ್ಲಿ ಒಂದು ವರ್ಷ ಸಾಕು. ಈಗ ಮಳೆ ಕೊರತೆಯಿಂದ ಕೆರೆಗಳು ತುಂಬದೇ ಇರುವುದರಿಂದ ಇರುವ ನೀರು ಒಂದು ವರ್ಷ ಕೆರೆಯಲ್ಲಿ ಉಳಿಯುತ್ತದೆಯೇ ಎಂಬುದೇ ಅನುಮಾನ ಎನಿಸಿದೆ. ಸದ್ಯ, ಈಗಾಗಲೆ ಬಿಟ್ಟಿರುವ ಮೀನುಗಳನ್ನು ಹಿಡಿದು ಮಾರಾಟ ಮಾಡಿದರೆ ಸಾಕು ಹೊಸದಾಗಿ ಮೀನು ಮರಿಗಳನ್ನು ಬಿಡುವುದು ಬೇಡ ಎಂಬ ತೀರ್ಮಾನಕ್ಕೆ ಅವರು ಬಂದಂತಿದೆ. ಕೊಡಗು ಜಿಲ್ಲೆಯಲ್ಲಿ ಹಾರಂಗಿಯಲ್ಲಿ ಮಾತ್ರವೇ ಮೀನು ಮರಿ ಉತ್ಪಾದನಾ ಕೇಂದ್ರವಿದೆ. ಪೊನ್ನಂಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆಗಳಲ್ಲಿ ಈ ಕೇಂದ್ರದಿಂದ ಮೀನುಮರಿಗಳನ್ನು ತೆಗೆದುಕೊಂಡು ಮಾರಾಟ ಮಾಡುವಂತಹ ಮತ್ಸ್ಯಾಗಾರಗಳಿವೆ. ಈ ವರ್ಷ ಜಿಲ್ಲೆಯಲ್ಲಿ ಮೀನುಗಾರಿಕಾ ಇಲಾಖೆಯಿಂದ 96 ಲಕ್ಷ ಮೊಟ್ಟೆಯಿಂದ ಮೀನುಮರಿಗಳು ಹೊರ ಬಂದಿದ್ದು, ಬೆರಳುದ್ದ ಇರುವ ಮರಿಗಳು 4 ಲಕ್ಷ ಇವೆ. ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ (ಕಾಮನ್ ಕಾರ್ಪ್), ಮೃಗಾಲ್ ಸಹ ಮಾರಾಟ ಮಾಡಲಾಗುತ್ತಿದೆ.ನಾಳೆ: ತುಂಬದ ಕೆರೆಗಳು, ರೈತರಲ್ಲಿ ಆತಂಕಮೀನು ಮರಿಗೆ ಬೇಡಿಕೆ ಇಲ್ಲ‘1987ರಿಂದ ಮೀನು ಕೃಷಿ ಮಾಡುತ್ತಿರುವೆ. ಕಳೆದ 39 ವರ್ಷಗಳಿಂದ ಒಂದೂ ವರ್ಷವೂ ಮೀನು ಮರಿ ಖರೀದಿಸದೇ ಇರುತ್ತಿರಲಿಲ್ಲ. ಜೂನ್ ತಿಂಗಳಿಗೆ ಖರೀದಿ ಮಾಡಿ ನನ್ನ ಬಳಿ ಇರುವ ಕೆರೆಗಳಿಗೆ ಬಿಡುತ್ತಿದ್ದೆ. ಆದರೆ, ಈ ವರ್ಷ ಮಳೆ ಕೊರತೆಯಿಂದ ನನ್ನಲ್ಲಿರುವ 5 ಕೆರೆಗಳೂ ತುಂಬಿಲ್ಲ. ಹಾಗಾಗಿ, ಜುಲೈ ತಿಂಗಳು ಕಳೆಯುತ್ತಾ ಬಂದರೂ, ಮೀನು ಮರಿ ಖರೀದಿಸಲಾಗಿಲ್ಲ’ ಎಂದು ಪೊನ್ನಂಪೇಟೆ ತಾಲ್ಲೂಕಿನ ಹುದೂರು ಹಳ್ಳಿಗಟ್ಟು ಗ್ರಾಮದ ಮೀನು ಕೃಷಿಕ ರವಿಶಂಕರ್ ಬಿ.ಪಿ. ‘ಪ್ರಜಾವಾಣಿ’ಗೆ ತಿಳಿಸಿದರು.ಇವರ ಬಳಿ 5 ಕೆರೆಗಳಿದ್ದು, ಬೇಸಿಗೆಯಲ್ಲಿ ಮಳೆ ಇಲ್ಲದೇ ನೀರು ಕಡಿಮೆಯಾಗಿ ಮೀನುಗಳು ಸತ್ತು ಹೋದವು. ಜುಲೈ ತಿಂಗಳ ಅಂತ್ಯಕ್ಕೂ ಕೆರೆಗಳು ತುಂಬಿಲ್ಲ. ಹಾಗಾಗಿ, ಪ್ರತಿ ವರ್ಷ 40ರಿಂದ 50 ಸಾವಿರ ಮೀನು ಮರಿಗಳನ್ನು ಖರೀದಿಸುತ್ತಿದ್ದ ರವಿಶಂಕರ್ ಈ ವರ್ಷ ಮೀನು ಮರಿಗಳನ್ನು ಖರೀದಿಸಿಲ್ಲ. ಇದೇ ಸ್ಥಿತಿ ಜಿಲ್ಲೆಯ ಬಹುಪಾಲು ಮೀನು ಕೃಷಿಕರದ್ದಾಗಿದೆ.– ಸಚಿನ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ.ಕೊಡಗು ಜಿಲ್ಲೆಯಲ್ಲಿರುವ ಬಹುತೇಕ ಯಾವ ಕೆರೆಗಳೂ ತುಂಬಿಲ್ಲ. ಹೀಗಾಗಿ, ಮೀನು ಮರಿಗಳನ್ನು ಖರೀದಿಸುವವರ ಸಂಖ್ಯೆ ಹಿಂದೆಂದಿಗಿಂತಲೂ ಈ ಬಾರಿ ಕಡಿಮೆ ಇದೆ.