ಪೂರೈಕೆ ಸರಪಳಿ, ನಾವಿಕರ ಸುರಕ್ಷತೆ: ಹಿರಿಯ ಸಚಿವರೊಂದಿಗೆ ಪ್ರಧಾನಿ ಚರ್ಚೆ
ನವದೆಹಲಿ ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದ ಭಾರತದ ಪೂರೈಕೆ ಸರಪಳಿಗಳಿಗೆ ಅಡಚಣೆಯಾಗದಂತೆ ನೋಡಿಕೊಳ್ಳುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಪುಟದ ಹಿರಿಯ ಸಚಿವರೊಂದಿಗೆ ಚರ್ಚಿಸಿದರು.ಪ್ರಧಾನಿ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ (ಸಿಸಿಎಸ್) ಹೊರ್ಮುಜ್ ಜಲಸಂಧಿ, ಕಪ್ಪು ಸಮುದ್ರ, ಕೆಂಪ

ನವದೆಹಲಿ ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದ ಭಾರತದ ಪೂರೈಕೆ ಸರಪಳಿಗಳಿಗೆ ಅಡಚಣೆಯಾಗದಂತೆ ನೋಡಿಕೊಳ್ಳುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಪುಟದ ಹಿರಿಯ ಸಚಿವರೊಂದಿಗೆ ಚರ್ಚಿಸಿದರು.ಪ್ರಧಾನಿ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ (ಸಿಸಿಎಸ್) ಹೊರ್ಮುಜ್ ಜಲಸಂಧಿ, ಕಪ್ಪು ಸಮುದ್ರ, ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿನ ಸಂಘರ್ಷಮಯ ಪರಿಸ್ಥಿತಿಯಿಂದ ತೈಲ ಹಾಗೂ ಇತರ ಸರಕುಗಳ ಪೂರೈಕೆ ಸರಪಳಿಯಲ್ಲಿ ಆಗಿರುವ ಅಡಚಣೆಯನ್ನು ನಿಭಾಯಿಸುವ ಬಗ್ಗೆ ಚರ್ಚೆ ನಡೆಯಿತು. ‘ಪ್ರಸ್ತುತ ನಡೆಯುತ್ತಿರುವ ಜಾಗತಿಕ ಸಂಘರ್ಷಗಳು, ಅವುಗಳು ಒಡ್ಡಿರುವ ಸವಾಲುಗಳು, ಭಾರತದ ಆಮದು ಹಾಗೂ ಪೂರೈಕೆ ಸರಪಳಿಗಳ ಮೇಲೆ ಉಂಟಾಗಿರುವ ವ್ಯತ್ಯಯಗಳು, ಭಾರತೀಯ ನಾವಿಕರ ಸುರಕ್ಷತೆ ಕುರಿತು ಸಮಗ್ರ ಚರ್ಚೆ ನಡೆಯಿತು’ ಎಂದು ಮೂಲಗಳು ತಿಳಿಸಿವೆ. ಭಾರತದ ಹೆಚ್ಚಿನ ಸರಕು ಸಾಗಣೆಯು ಈ ಸಂಘರ್ಷ ಪೀಡಿತ ವಲಯಗಳ ಮೂಲಕವೇ ನಡೆಯುತ್ತದೆ. ‘ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ಬಗ್ಗೆ ಸಿಸಿಎಸ್ಗೆ ಮಾಹಿತಿ ನೀಡಿದರು. ಎಲ್ಎನ್ಜಿ, ಎಲ್ಪಿಜಿ ಹಾಗೂ ರಸಗೊಬ್ಬರಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು’ ಎಂದು ಪ್ರಕಟಣೆ ತಿಳಿಸಿದೆ. ‘ಮುಂಬರುವ ರಬಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರಗಳ ದಾಸ್ತಾನು ಕುರಿತು ಪರಿಶೀಲನೆ ನಡೆಸಲಾಯಿತು. ರಸಗೊಬ್ಬರದ ಪರ್ಯಾಯ ಮೂಲಗಳ ಬಗ್ಗೆಯೂ ಚರ್ಚಿಸಲಾಯಿತು. ರಸಗೊಬ್ಬರದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದರು’ ಎಂದು ಹೇಳಿದೆ. ಭಾರತದ ಹಾಗೂ ವಿದೇಶಿ ಧ್ವಜವನ್ನು ಹೊಂದಿರುವ ಹಡಗುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವಿಕರ ಪರಿಸ್ಥಿತಿಯ ಕುರಿತೂ ಚರ್ಚಿಸಲಾಯಿತು. ಸಂಕಷ್ಟಕ್ಕೆ ಒಳಗಾಗುವ ನಾವಿಕರು ಮತ್ತು ಅವರ ಕುಟುಂಬಗಳಿಗೆ ಸಕಾಲದಲ್ಲಿ ಮಾಹಿತಿ ಹಾಗೂ ತುರ್ತು ನೆರವು ಒದಗಿಸಲು ಸೂಕ್ತ ವ್ಯವಸ್ಥೆಯನ್ನು ರೂಪಿಸುವಂತೆ ಮೋದಿ ಅವರು ಸಚಿವರಿಗೆ ಸೂಚಿಸಿದರು.ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಂಡರು.