ಸ್ಪರ್ಧಾತ್ಮಕ ಪರೀಕ್ಷೆಗೆ ಪದವಿ ಹಂತದಲ್ಲೇ ತಯಾರಿ ಆರಂಭಿಸಿ:ಐಪಿಎಸ್ ಅಧಿಕಾರಿ ಸೂರಜ್
ಮೈಸೂರು: ದೊಡ್ಡ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಬದುಕನ್ನು ಬದಲಿಸುತ್ತವೆ. ಹೀಗಾಗಿ, ವಿದ್ಯಾರ್ಥಿಗಳು ಪದವಿ ಹಂತದಲ್ಲಿರುವಾಗಲೇ ತಯಾರಿ ಆರಂಭಿಸಬೇಕು ಎಂದು ಐಪಿಎಸ್ ಅಧಿಕಾರಿ ಕೆ.ಎಲ್.ಸೂರಜ್ ಸಲಹೆ ನೀಡಿದರು.ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆಯೋಜಿಸಿರುವ ‘

ಮೈಸೂರು: ದೊಡ್ಡ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಬದುಕನ್ನು ಬದಲಿಸುತ್ತವೆ. ಹೀಗಾಗಿ, ವಿದ್ಯಾರ್ಥಿಗಳು ಪದವಿ ಹಂತದಲ್ಲಿರುವಾಗಲೇ ತಯಾರಿ ಆರಂಭಿಸಬೇಕು ಎಂದು ಐಪಿಎಸ್ ಅಧಿಕಾರಿ ಕೆ.ಎಲ್.ಸೂರಜ್ ಸಲಹೆ ನೀಡಿದರು.ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆಯೋಜಿಸಿರುವ ‘ಕೆಪಿಎಸ್ಸಿ ಮತ್ತು ವಿವಿಧ ಹುದ್ದೆಗಳ ಪರೀಕ್ಷಾ ತರಬೇತಿ ಶಿಬಿರ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೆಲಸ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಅದನ್ನು ಉತ್ತಮವಾಗಿ ಮಾಡಬೇಕು. ಏನೇ ಮಾಡಿದರೂ ಅದನ್ನು ತೀವ್ರ ಹಾಗೂ ನಿಖರವಾಗಿರುವಂತೆ ನೋಡಿಕೊಳ್ಳಬೇಕು. ಕೇಳಿಸಿಕೊಳ್ಳುವುದನ್ನೂ ನಿಖರವಾಗಿ ಕೇಳಿಸಿಕೊಳ್ಳಿ. ಎಲ್ಲದರಲ್ಲೂ ಸ್ಪಷ್ಟತೆ, ನಿಖರತೆ ಇರಲಿ ಎಂದು ಸಲಹೆ ನೀಡಿದರು.ಪರೀಕ್ಷಾ ಮಾದರಿ ಅರ್ಥ ಮಾಡಿಕೊಂಡು, ವಿಷಯಗಳನ್ನು ಚೆನ್ನಾಗಿ ಓದಬೇಕು. ಉತ್ತಮ ಅಂಕ ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಓದೇ ಸ್ನೇಹಿತ, ಅದೇ ಆಹಾರ ಎಂದು ಭಾವಿಸಬೇಕು ಎಂದು ತಿಳಿಸಿದರು.ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ಯಾವುದನ್ನು ಓದಬೇಕು ಎನ್ನುವ ಬದಲು ಯಾವುದನ್ನು ಓದಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಶ್ರದ್ಧೆ, ಏಕಾಗ್ರತೆ ಮತ್ತು ಆಸಕ್ತಿ ಕಳೆದುಕೊಳ್ಳಬಾರದು. ಶ್ರಮಪಟ್ಟು ಓದಿದರೆ ಮಾತ್ರ ಯಶಸ್ಸು ಕಾಣಬಹುದು ಎಂಬುದನ್ನು ಮರೆಯಬಾರದು ಎಂದರು.ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಲಕ್ಷಾಂತರ ಜನ ಪರೀಕ್ಷೆ ಬರೆಯುತ್ತಾರೆ. ಅಯ್ಕೆ ಆಗುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಹೀಗಾಗಿ, ಶ್ರದ್ಧೆಯಿಂದ ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಶ್ನೆಪತ್ರಿಕೆ ಸೋರಿಕೆ ಆಗುತ್ತದೆ, ಹಣದ ಆಮಿಷ ಒಡ್ಡುತ್ತಾರೆ ಎನ್ನುವ ಊಹಾಪೋಹವನ್ನು ಮನಸ್ಸಿನಿಂದ ತೆಗೆದು ಹಾಕಿ ಓದಿನತ್ತ ಗಮನಕೊಡಬೇಕು. ಎಐ ಮೊದಲಾದ ತಂತ್ರಜ್ಞಾನದಿಂದ ಎಲ್ಲ ಸಂಪನ್ಮೂಲವೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಅದನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಎಸಿಪಿ ರವಿಪ್ರಸಾದ್ ಮಾತನಾಡಿ, ಇಂದಿನ ಯುವಕರು ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಹಿಂದೆ ಉಳಿದಿದ್ದಾರೆ. ಅದರಲ್ಲೂ ದಕ್ಷಿಣ ಕರ್ನಾಟಕದ ಯುವಕರಲ್ಲಿ ಆಸಕ್ತಿ ಕಡಿಮೆಯಾಗಿದೆ. ಉತ್ತರ ಕರ್ನಾಟಕದ ಯುವಕರು ಹೆಚ್ಚು ಸರ್ಕಾರಿ ಕೆಲಸ ಪಡೆಯುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಬರವಣಿಗೆ ಮುಖ್ಯ. ಹೀಗಾಗಿ ಓದುವಾಗ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಲೆಕ್ಕಪತ್ರ ಇಲಾಖೆಯ ನಿವೃತ್ತ ಐಎಎಸ್ ಅಧಿಕಾರಿ ಸಿದ್ದರಾಜು ಮಾತನಾಡಿದರು. ಕೆಎಸ್ಒಯು ಪರೀಕ್ಷಾಂಗ ಕುಲಸಚಿವ ಪ್ರೊ.ಆನಂದ್ಕುಮಾರ್ ಸಿ.ಎಸ್., ಡೀನ್ (ಶೈಕ್ಷಣಿಕ) ಪ್ರೊ.ರಾಮನಾಥಂ ನಾಯ್ಡು, ಡೀನ್ (ಅಧ್ಯಯನ ಕೇಂದ್ರ) ಆನಂದ ಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ ಶೈಲೇಶ್ ರಾಜೇ ಅರಸ್, ಸಹಾಯಕ ಪ್ರಾಧ್ಯಾಪಕ ಬೀರಪ್ಪ, ಸ್ಟುಡಿಯೊ ವಿಭಾಗದ ನಿರ್ಮಾಪಕ ಬಿ.ಸಿದ್ದೇಗೌಡ, ಗಣೇಶ್ ಕೆ.ಜಿ. ಕೊಪ್ಪಲ್ ಪಾಲ್ಗೊಂಡಿದ್ದರು.