ತಿರುಪತಿ: ನಕಲಿ ವೆಬ್ಸೈಟ್ನಿಂದ ಭಕ್ತರಿಗೆ ವಂಚನೆ
ತಿರುಪತಿ: ದೇವರ ದರ್ಶನದ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ ಎಸಗುವ ನಕಲಿ ವೆಬ್ಸೈಟ್ ttddevasthanam.online ಬಗ್ಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಭಕ್ತರಿಗೆ ಎಚ್ಚರಿಕೆ ನೀಡಿದೆ. ಟಿಟಿಡಿಯ ಅಧಿಕೃತ ವೆಬ್ಸೈಟ್ ಅನ್ನೇ ಹೋಲುವ ನಕಲಿ ವೆಬ್ಸೈಟ್ ಅನ್ನು ರಚಿಸಿ ಭಕ್ತರನ್ನು ವಂಚಿಸುತ್ತಿರುವ ಅಕ್ರಮವು ಟಿಟಿಡಿ ಗಮನಕ್ಕೆ ಬಂದಿದೆ ಎಂದು ಪ್

ತಿರುಪತಿ: ದೇವರ ದರ್ಶನದ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ ಎಸಗುವ ನಕಲಿ ವೆಬ್ಸೈಟ್ ttddevasthanam.online ಬಗ್ಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಭಕ್ತರಿಗೆ ಎಚ್ಚರಿಕೆ ನೀಡಿದೆ. ಟಿಟಿಡಿಯ ಅಧಿಕೃತ ವೆಬ್ಸೈಟ್ ಅನ್ನೇ ಹೋಲುವ ನಕಲಿ ವೆಬ್ಸೈಟ್ ಅನ್ನು ರಚಿಸಿ ಭಕ್ತರನ್ನು ವಂಚಿಸುತ್ತಿರುವ ಅಕ್ರಮವು ಟಿಟಿಡಿ ಗಮನಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ‘ಟಿಟಿಡಿಯ ವಿಚಕ್ಷಣ ವಿಭಾಗವು ttddevasthanam.online ಹೆಸರಿನ ನಕಲಿ ವೆಬ್ಸೈಟ್ ಅನ್ನು ಪತ್ತೆ ಮಾಡಿದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ದೇವರ ದರ್ಶನಕ್ಕೆ ಟಿಕೆಟ್ ಲಭ್ಯವಿವೆ ಎಂಬ ತಪ್ಪು ಮಾಹಿತಿಯನ್ನು ಈ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಭಕ್ತರನ್ನು ವಂಚಿಸುವ ಜೊತೆಗೆ ದೇವಸ್ಥಾನದ ಖ್ಯಾತಿಗೆ ಕಳಂಕ ತರುವ ಉದ್ದೇಶವನ್ನೂ ಇದು ಹೊಂದಿದೆ’ ಎಂದು ಟಿಟಿಡಿ ಹೇಳಿದೆ. ‘ನಕಲಿ ವೆಬ್ಸೈಟ್ ಅನ್ನು ತಕ್ಷಣವೇ ತೆಗೆದು ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ. ಈ ಕುರಿತು ತಿರುಮಲ ಪೊಲೀಸ್ ಠಾಣೆಯಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ’ ಎಂದು ತಿಳಿಸಿದೆ. ‘ಸಾಮಾಜಿಕ ಜಾಲತಾಣಗಳಲ್ಲಿ ಬರುವ ವೆಬ್ಸೈಟ್ಗಳು ಹಾಗೂ ಲಿಂಕ್ಗಳನ್ನು ನಂಬಿ ಮೋಸಹೋಗಬೇಡಿ. ದರ್ಶನ, ಆನ್ಲೈನ್ ಟಿಕೆಟ್ ಬುಕಿಂಗ್ ಹಾಗೂ ವಸತಿ ಸೇರಿದಂತೆ ಟಿಟಿಡಿಯ ಯಾವುದೇ ಸೇವೆಗಳಿಗಾಗಿ ಅಧಿಕೃತ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಅನ್ನೇ ಬಳಸಿ’ ಎಂದು ಜನರಲ್ಲಿ ಕೇಳಿಕೊಂಡಿದೆ.