ಸರ್ಕಾರಿ ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ?: ತಮಿಳುನಾಡು ಸಿಎಂ ಮುಂದೆ ಪ್ರಸ್ತಾಪ
ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಾರಕ್ಕೊಮ್ಮೆ 'ಚಿಕನ್ ಬಿರಿಯಾನಿ' ನೀಡುವ ಪ್ರಸ್ತಾಪವೊಂದನ್ನು ರಾಜ್ಯ ಸರ್ಕಾರದ ಮುಂದಿದೆ. ಶಾಲಾ ಶಿಕ್ಷಣ ಸಚಿವ ರಾಜ್ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಪ್ರಸ್ತಾಪವನ್ನು ಸಲ್ಲಿಸಿದ್ದಾರೆ.ಈ ಕುರಿತು ಮಾತನಾಡಿದ ಸಚಿವ ರಾಜ್ಮೋಹನ್, 'ತಮಿಳುನಾಡ

ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಾರಕ್ಕೊಮ್ಮೆ 'ಚಿಕನ್ ಬಿರಿಯಾನಿ' ನೀಡುವ ಪ್ರಸ್ತಾಪವೊಂದನ್ನು ರಾಜ್ಯ ಸರ್ಕಾರದ ಮುಂದಿದೆ. ಶಾಲಾ ಶಿಕ್ಷಣ ಸಚಿವ ರಾಜ್ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಪ್ರಸ್ತಾಪವನ್ನು ಸಲ್ಲಿಸಿದ್ದಾರೆ.ಈ ಕುರಿತು ಮಾತನಾಡಿದ ಸಚಿವ ರಾಜ್ಮೋಹನ್, 'ತಮಿಳುನಾಡಿನ ಪ್ರತಿಯೊಂದು ರಾಜಕೀಯ ಅವಧಿಯಲ್ಲಿಯೂ ಶಾಲಾ ಪೌಷ್ಟಿಕಾಂಶ ಆಹಾರ ಯೋಜನೆಗೆ ಹೊಸ ಆಯಾಮ ನೀಡಲಾಗಿದೆ. ಕೆ. ಕಾಮರಾಜ್ ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪರಿಚಯಿಸಿದ್ದರು. ಕರುಣಾನಿಧಿ ಅವರು ಅದಕ್ಕೆ ಮೊಟ್ಟೆಯನ್ನು ಸೇರಿಸಿದರು. ಎಂ.ಜಿ.ಆರ್ ಅವರು ಅದನ್ನು 'ಪೌಷ್ಟಿಕ ಆಹಾರ ಯೋಜನೆ'ಯಾಗಿ ರೂಪಾಂತರಿಸಿದ್ದರು. ಬಳಿಕ ಜಯಲಲಿತಾ ಅವರು ವಾರಪೂರ್ತಿ ಮೊಟ್ಟೆ ವಿತರಿಸುವ ವ್ಯವಸ್ಥೆ ಮಾಡಿದ್ದರು. ಅದೇ ಹಾದಿಯಲ್ಲಿ, ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಬೇಕೆಂಬ ಆಶಯ ನನ್ನದು' ಎಂದು ತಿಳಿಸಿದ್ದಾರೆ.ಈ ಪ್ರಸ್ತಾಪವು ಪ್ರಸ್ತುತ ಮುಖ್ಯಮಂತ್ರಿ ವಿಜಯ್ ಅವರ ಪರಿಶೀಲನೆಯಲ್ಲಿದ್ದು, ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.ಬಿಸಿಯೂಟ ಯೋಜನೆ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಯೋಜನೆಗಳ ಅನುಷ್ಠಾನದಲ್ಲಿ ತಮಿಳುನಾಡು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. 1950ರ ದಶಕದಲ್ಲಿ ಕೆ. ಕಾಮರಾಜ್ ಅವರು ಆರಂಭಿಸಿದ ಈ ಬಿಸಿಯೂಟ ಯೋಜನೆ ದೇಶದ ಯಶಸ್ವಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿ ಬೆಳೆದಿದೆ. ಆ ಬಳಿಕ ಬಂದ ಸರ್ಕಾರಗಳು ಈ ಯೋಜನೆಯನ್ನು ಇನ್ನಷ್ಟು ಸುಧಾರಿಸುತ್ತಾ ಬಂದಿವೆ.2022ರ ಸೆಪ್ಟೆಂಬರ್ನಲ್ಲಿ ಅಂದಿನ ಡಿಎಂಕೆ ಸರ್ಕಾರವು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ನೀಡಲು 'ಮುಖ್ಯಮಂತ್ರಿ ಉಪಹಾರ ಯೋಜನೆ'ಯನ್ನು ಪ್ರಾರಂಭಿಸಿತು. ನಂತರ ಇದನ್ನು 'ಪೆರುಂತಲೈವರ್ ಕಾಮರಾಜ್ ಉಪಹಾರ ಯೋಜನೆ' ಎಂದು ಮರುನಾಮಕರಣ ಮಾಡಲಾಯಿತು. ಬಿಸಿಯೂಟ ಯೋಜನೆಯೊಂದಿಗೆ ಈ ಕಾರ್ಯಕ್ರಮವೂ ಸೇರಿ, ಮಕ್ಕಳಿಗೆ ಶಾಲೆಯಲ್ಲಿ ಎರಡು ಬಾರಿ ಪೌಷ್ಟಿಕ ಆಹಾರ ಸಿಗುವಂತಾಯಿತು. ಈಗ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ, ಇದು ಶಾಲಾ ಊಟದ ಯೋಜನೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ.ಬೆಳಗಿನ ಉಪಹಾರದ ಮೆನು ಪರಿಷ್ಕರಣೆಇಷ್ಟೇ ಅಲ್ಲದೆ, ಪ್ರಸ್ತುತ ಇರುವ ಶಾಲಾ ಬೆಳಗಿನ ಉಪಹಾರದ ಮೆನುವನ್ನು ಬದಲಾಯಿಸುವ ಯೋಜನೆಯಿದೆ ಎಂದೂ ಸಚಿವರು ತಿಳಿಸಿದ್ದಾರೆ. ಪ್ರತಿ ವಿದ್ಯಾರ್ಥಿಗೆ ₹15 ವೆಚ್ಚದಲ್ಲಿ, ನೀಡುತ್ತಿರುವ ರವಾ/ ಗೋಧಿ ಉಪ್ಪಿಟ್ಟಿನ ಬದಲಿಗೆ ಮಕ್ಕಳಿಗೆ ಇಷ್ಟವಾಗುವ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಯೋಜನೆ ರೂಪಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.