ಹಳ್ಳಿಯ ಹಿಂಸೆಯೇ ಕತೆಗಾರರ ಜೀವಕೇಂದ್ರ: ಪ್ರೊ.ನಟರಾಜ್ ಹುಳಿಯಾರ್
ಬೆಂಗಳೂರು: 'ಅಲ್ಲಿ ಕತೆಗಾರ, ಕವಿ, ವಿಮರ್ಶಕ ಮೊಗಳ್ಳಿ ಗಣೇಶ್ ಅವರ ನೆನಪೊಂದು ನೆಪವಾಗಿತ್ತು. ಆ ನೆಪದಲ್ಲೇ ಕನ್ನಡ ಸಾಹಿತ್ಯ, ಗ್ರಾಮ ಸಮಾಜ, ಸಂಸ್ಕೃತಿಯ ಸಮಕಾಲೀನ ಆಗುಹೋಗುಗಳ ಕುರಿತ ಕಟುವಾದ ಅವಲೋಕನವು ಮೂಡಿತ್ತು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ವಿಭಾಗವು 'ಮೊಗಳ್ಳಿ ಗಣೇಶ್ ಅವರ ಸಾಹಿತ್ಯ' ಕುರಿತು ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಏರ

ಬೆಂಗಳೂರು: 'ಅಲ್ಲಿ ಕತೆಗಾರ, ಕವಿ, ವಿಮರ್ಶಕ ಮೊಗಳ್ಳಿ ಗಣೇಶ್ ಅವರ ನೆನಪೊಂದು ನೆಪವಾಗಿತ್ತು. ಆ ನೆಪದಲ್ಲೇ ಕನ್ನಡ ಸಾಹಿತ್ಯ, ಗ್ರಾಮ ಸಮಾಜ, ಸಂಸ್ಕೃತಿಯ ಸಮಕಾಲೀನ ಆಗುಹೋಗುಗಳ ಕುರಿತ ಕಟುವಾದ ಅವಲೋಕನವು ಮೂಡಿತ್ತು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ವಿಭಾಗವು 'ಮೊಗಳ್ಳಿ ಗಣೇಶ್ ಅವರ ಸಾಹಿತ್ಯ' ಕುರಿತು ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವು ಇಂಥ ಸನ್ನಿವೇಶಕ್ಕೆ ಸಾಕ್ಷಿಯಾಯಿತು.ದೇಶದ ಹಳ್ಳಿಗಳಲ್ಲಿ ಜಾತಿ ಪದ್ಧತಿ ಕೊಡುವ ಅಸಾಧ್ಯ ಹಿಂಸೆಯ ಮೂಲಕವೇ ಕತೆಗಳು-ಕತೆಗಾರರು ಬೆಳೆಯುವ ಕುರಿತು ಸಂಕಿರಣ ಬೆಳಕು ಚೆಲ್ಲಿತು. ಯುವ ಓದುಗರು, ಸಂಶೋಧಕರಿಗೆ ಮೊಗಳ್ಳಿಯವರ ಅಭಿವ್ಯಕ್ತಿ ಮಾದರಿಗಳನ್ನು ಹಿರಿಯರು ಪರಿಚಯಿಸಿದರು.ಸಂಕಿರಣವನ್ನು ಉದ್ಘಾಟಿಸಿದ ಪ್ರೊ. ನಟರಾಜ್ ಹುಳಿಯಾರ್ ಅವರ 'ಕಥಾನಂತರ' ಕೃತಿಯನ್ನು ಕೆಲವು ವರ್ಷಗಳ ಹಿಂದೆ ಬಿಡುಗಡೆ ಮಾಡಿ ಮೊಗಳ್ಳಿ ಗಣೇಶ್ ಅವರು ಆಡಿದ ಮಾತುಗಳ ವಿಡಿಯೋ ತುಣುಕಿನ ಪ್ರದರ್ಶನದಿಂದಲೇ ವಿಚಾರ ಸಂಕಿರಣಕ್ಕೆ ಚಾಲನೆ ದೊರಕಿದ್ದು ವಿಶೇಷವಾಗಿತ್ತು.ನಂತರ ಮಾತನಾಡಿದ ಪ್ರೊ.ನಟರಾಜ್, ಗಣೇಶ್ ಅವರೊಂದಿಗೆ ತಮ್ಮ ಒಡನಾಟವನ್ನು ಸ್ಮರಿಸುತ್ತಲೇ ಅವರ ಬದುಕು- ಬರೆಹಗಳನ್ನು ವಿಶ್ಲೇಷಿಸಿದರು. ತಾವಿಬ್ಬರೂ ಕತೆಗಾರರಾಗಿ ಬೆಳೆದ ಬಗೆಯನ್ನೂ ಸ್ಮರಿಸಿದರು.ವೇದಿಕೆಯ ಒಂದು ಕಡೆ ಪ್ರದರ್ಶಿಸಿದ್ದ ಎಚ್.ನರಸಿಂಹಯ್ಯ ಮತ್ತು ಮತ್ತೊಂದೆಡೆ ಇದ್ದ ಗಣೇಶ್ ಅವರ ಭಾವಚಿತ್ರಗಳ ಕಡೆಗೆ ಗಮನ ಸೆಳೆದ ಅವರು, 'ಇಬ್ಬರೂ ಸ್ವಯಂ ಆಗಿ ರೂಪುಗೊಂಡವರು. ತಮ್ಮದೇ ದಾರಿಗಳನ್ನು ರೂಪಿಸಿಕೊಂಡವರು' ಎಂದು ಬಣ್ಣಿಸಿದರು.ಗಣೇಶ್ ಅವರನ್ನು ವಿಮರ್ಶಾ ವಲಯ ನಿರ್ಲಕ್ಷ್ಯ ಮಾಡಿದ ಕುರಿತು ಪ್ರಸ್ತಾಪಿಸಿ, 'ನಿಜವಾದ ಮೆಚ್ಚುಗೆಗೆ ಬಾಯಿ ಇಲ್ಲ. ಫೇಸ್ ಬುಕ್ ನಲ್ಲಿ ತೆಗಳಲು ಬೆರಳುಗಳು ಕಾತರಗೊಂಡಿರುತ್ತವೆ' ಎಂದು ವಿಷಾದಿಸಿದರು.'ಜೀತಕ್ಕೆ ಸಿಕ್ಕಿಬೀಳುವುದರಿಂದ ತಪ್ಪಿಸಿಕೊಂಡು ಮೈಸೂರಿಗೆ ಓಡಿ ಹೋದ ಗಣೇಶ್ ಅವರನ್ನು ಪ್ರೊ.ರಾಮದಾಸ್, ಎಂ.ನಂಜುಡಸ್ವಾಮಿ, ಲಂಕೇಶ್,, ರಾಜಪ್ಪ ದಳವಾಯಿ ಅಂಥವರು ಉತ್ತೇಜಿಸದೇ ಇದ್ದಿದ್ದರೆ ಬೆಳೆಯಲು ಆಗುತ್ತಿರಲಿಲ್ಲ. ಇದು ಕನ್ನಡ ಸಾಹಿತ್ಯದ ಜಾತ್ಯತೀತ ನಡೆ. ಇದನ್ನು ನಾವು ಕಲಿಯಬೇಕು. ನಗರವು ಅವರಿಗೆ ಹಳ್ಳಿಯ ಹಿಂಸೆಯನ್ನು ನೋಡುವ ಬಗೆಯನ್ನು ಕಲಿಸಿತು' ಎಂದು ಪ್ರತಿಪಾದಿಸಿದರು. 'ಅರೇಬಿಯನ್ ನೈಟ್ಸ್' ಕೃತಿಯಲ್ಲಿ, ಸಾವನ್ನು ಮುಂದೂಡಲು ಶೆಹಜಾದೆಯು ಸಾವಿರದೊಂದು ಕತೆ ಹೇಳುತ್ತಾಳೆ. ಹಲವು ಬಾರಿ ಸಾವನ್ನು ಎದುರಿಸಿದ್ದ ಗಣೇಶ್ ಅವರು ಸಾವಿಗೆ ಮುನ್ನವೂ ಕತೆ ಬರೆಯುತ್ತಲೇ ಇದ್ದರು. ಕತೆ ಅವರನ್ನು ಬೆಳೆಸಿತು. ಅದನ್ನು ಗಣೇಶ್ ಕೂಡ ಬೆಳೆಸಿದರು' ಎಂದರು.ಪ್ರಾಸ್ತಾವಿಕ ಮಾತನಾಡಿದ ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ಸಿ.ಶಿವಾರೆಡ್ಡಿ, 'ಅನರ್ಹ ಲೇಖಕರಿಗೆ ಪ್ರಶಸ್ತಿಗಳು ದೊರಕುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗಣೇಶ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಒಲವು- ನಿಲುವುಗಳನ್ನು ಹೋಲಿಸಿದ ಅವರು, ದೇಶದ ಜಾತಿ ಪದ್ಧತಿಯ ಕರಾಳ ಮುಖಗಳನ್ನು ಈ ಇಬ್ಬರೂ ಅನಾವರಣಗೊಳಿಸಿದರು. ಗೋವಿನ ಹಾಡು ಕುರಿತ ಇಬ್ಬರ ಲೇಖನಗಳು ಸಾಹಿತ್ಯ, ಸಾಂಸ್ಕೃತಿಕ ಮತ್ತು ವಿಮರ್ಶಾ ವಲಯವನ್ನು ಬೆಚ್ಚಿಬೀಳುವಂತೆ ಮಾಡಿತು' ಎಂದರು.ನ್ಯಾಷನಲ್ ಕಾಲೇಜು ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಎಚ್.ಎನ್.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ವಿ.ವೆಂಕಟಶಿವಾರೆಡ್ಡಿ, ರಾಮಮೋಹನ್, ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಜಿ.ಎಂ.ರವೀಂದ್ರ, ಪ್ರಾಂಶುಪಾಲರಾದ ಸಿ.ವಿಜಯಲಕ್ಷ್ಮಿ, ಪ್ರೊ.ಜಯದೇವಪ್ಪ, ಕೇಶವ ಮಳಗಿ, ಎಂ.ಸಿ.ರವೀಂದ್ರ ಪಾಲ್ಗೊಂಡರು.