ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
‘ಅತಿಥಿ’ ನೇಮಕ: ಪಾರದರ್ಶಕತೆಯ ಕೊರತೆಸರ್ಕಾರಿ ಶಾಲಾಕಾಲೇಜುಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಅಧಿಕಾರ ವನ್ನು ಆಯಾ ಶಾಲಾಕಾಲೇಜಿನ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರಿಗೆ ನೀಡಲಾಗಿದೆ. ಇದು ಸ್ವಜನಪಕ್ಷಪಾತಕ್ಕೆ ಎಡೆಮಾಡಿಕೊಡುತ್ತಿದೆ. ನಿಜವಾದ ಅರ್ಹರು ಅವಕಾಶವಂಚಿತರಾಗುತ್ತಿದ್ದಾರೆ. ಪ್ರಸ್ತುತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿಉಪನ್ಯಾಸಕರ ನೇಮಕಕ್ಕೆ ಕ
‘ಅತಿಥಿ’ ನೇಮಕ: ಪಾರದರ್ಶಕತೆಯ ಕೊರತೆಸರ್ಕಾರಿ ಶಾಲಾಕಾಲೇಜುಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಅಧಿಕಾರ ವನ್ನು ಆಯಾ ಶಾಲಾಕಾಲೇಜಿನ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರಿಗೆ ನೀಡಲಾಗಿದೆ. ಇದು ಸ್ವಜನಪಕ್ಷಪಾತಕ್ಕೆ ಎಡೆಮಾಡಿಕೊಡುತ್ತಿದೆ. ನಿಜವಾದ ಅರ್ಹರು ಅವಕಾಶವಂಚಿತರಾಗುತ್ತಿದ್ದಾರೆ. ಪ್ರಸ್ತುತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿಉಪನ್ಯಾಸಕರ ನೇಮಕಕ್ಕೆ ಕೇಂದ್ರೀಕೃತ ವ್ಯವಸ್ಥೆ ರೂಪಿಸಲಾಗಿದೆ. ಇಲ್ಲಿ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. ಅರ್ಹತೆಯ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಶಾಲಾಕಾಲೇಜುಗಳಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕಿದೆ. ಆಗಷ್ಟೇ ಅರ್ಹರಿಗೆ ಅವಕಾಶ ಸಿಗಲಿದೆ.-ಆರ್.ಕೆ. ಉಮೇಶ್, ಹಾವೇರಿಕಸಾಪ ಅವಧಿ ಮೂರು ವರ್ಷಕ್ಕೆ ಇಳಿಯಲಿನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಕನ್ನಡ ಸಾಹಿತ್ಯ ಪರಿಷತ್ಗೆ ಈಗ 112ನೇ ವರ್ಷದ ಸಂಭ್ರಮ. ಪರಿಷತ್ಗೆ ಚುನಾವಣೆಯೂ ಸಮೀಪಿಸುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಅಭ್ಯರ್ಥಿಗಳ ಹೆಸರುಗಳು ಹರಿದಾಡುತ್ತಿವೆ. ಕಳೆದ11 ವರ್ಷಗಳಲ್ಲಿ ಇಬ್ಬರು ನಿವೃತ್ತ ಅಧಿಕಾರಿಗಳ ಆಡಳಿತವೈಖರಿಯು ಬಹಳಷ್ಟು ಜನರಿಗೆ ಬೇಸರ ತರಿಸಿರುವುದು ನಿಜ. ಒಬ್ಬರು ಮೂರು ವರ್ಷಗಳ ಅವಧಿಯನ್ನು ಐದು ವರ್ಷಕ್ಕೆ ಹಿಗ್ಗಿಸಿಕೊಂಡು ಆಡಳಿತ ನಡೆಸಿದರೆ, ಮತ್ತೊಬ್ಬರು ಪರಿಷತ್ತಿನ ಬೈಲಾವನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿ ಗೊಂದಲ ಸೃಷ್ಟಿಸಿ ದರು. ಹಾಗಾಗಿ, ಕಸಾಪ ಘನತೆಗೆ ಧಕ್ಕೆ ತರದಂತೆ ನೋಡಿಕೊಳ್ಳುವ, ಕನ್ನಡ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಯ ಆಯ್ಕೆ ಸ್ವಾಗತಾರ್ಹ. ಎಲ್ಲಕ್ಕಿಂತ ಮುಖ್ಯವಾಗಿ ಈಗಿರುವ ಅಧ್ಯಕ್ಷರ ಐದು ವರ್ಷದ ಅಧಿಕಾರಾವಧಿಯನ್ನು ಕುಗ್ಗಿಸಿ, ಮೊದಲಿನಂತೆ ಮೂರು ವರ್ಷಕ್ಕೆ ನಿಗದಿಪಡಿಸಬೇಕಿದೆ. ಅಧ್ಯಕ್ಷ ಗಾದಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕಿದೆ.-ಎಚ್.ಕೆ. ಕೊಟ್ರಪ್ಪ, ಹರಿಹರಕಾವೇರಿ ಹಕ್ಕು ಮಂಡನೆ: ಸರ್ಕಾರ ವಿಫಲಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಯಾವಾಗಲೂ ಗೊಂದಲಗಳು ಏಕೆ ಸೃಷ್ಟಿಆಗುತ್ತವೆ ಎಂಬುದು ಅರ್ಥವಾಗುವುದಿಲ್ಲ. ಕರ್ನಾಟಕಕ್ಕೆ ನ್ಯಾಯವಾಗಿ ಸಿಗಬೇಕಾದ ಪಾಲು ದೊರಕುತ್ತಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಮುಂದೆ ರಾಜ್ಯದ ಹಕ್ಕನ್ನು ಸಮರ್ಥನೆ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಹಾಗೆ ನೋಡಿದರೆ ನಮ್ಮಲ್ಲಿ ಸಮರ್ಥ ವಕೀಲರ ಕೊರತೆ ಇಲ್ಲ. ನಾಡಿನಲ್ಲಿಯೇ ಹುಟ್ಟಿ ಹರಿಯುವ ಕಾವೇರಿಯ ನ್ಯಾಯವಾದ ಪಾಲನ್ನುದಕ್ಕಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದು ದುರದೃಷ್ಟಕರ. ಮಳೆ ಕೊರತೆಯ ವರ್ಷ ಗಳಲ್ಲಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ಸಂಕಷ್ಟ ಸೂತ್ರ ಇಲ್ಲ. ಈ ಬಗ್ಗೆ ಸರ್ಕಾರವು ಸುಪ್ರೀಂ ಕೋರ್ಟ್ನ ಮೊರೆ ಹೋಗಬೇಕಿದೆ.-ಜಿ.ಪಿ. ದಯಾನಂದ, ಬೆಂಗಳೂರುಕೆಪಿಎಸ್ಸಿ ಸುಧಾರಣೆಗೆ ಇಚ್ಛಾಶಕ್ತಿ ಬೇಕುಕೆಪಿಎಸ್ಸಿಯಿಂದ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಯುಪಿಎಸ್ಸಿ ಮಾದರಿ ಅನುಸರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಪರೀಕ್ಷೆ ನಿರ್ವಹಣೆಯ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗೆ ವಹಿಸುವುದು ಸರಿಯಾದ ನಿರ್ಧಾರ. ನೇಮಕಾತಿ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳ ಕಾರ್ಯವೈಖರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಿರಂತರ ನಿಗಾವಹಿಸಬೇಕಿದೆ. ಆಯೋಗವು ತನ್ನಕಳೆದುಹೋದ ವಿಶ್ವಾಸಾರ್ಹತೆಯನ್ನು ಮತ್ತೆ ಗಳಿಸಲು ಇದು ಸಕಾಲ. ಸುಧಾರಣೆ ಗಳು ಬರೀ ಪ್ರಕಟಣೆಗಳಾಗಿ ಉಳಿಯದೆ, ಪ್ರಾಮಾಣಿಕವಾಗಿ ಜಾರಿಯಾಗಬೇಕಿದೆ.-ಎಸ್.ಟಿ. ರಾಮಚಂದ್ರ, ಬೆಂಗಳೂರುಸಚಿವರಿಲ್ಲದೆ ಸೊರಗುತ್ತಿದೆ ಶಿಕ್ಷಣ ಇಲಾಖೆ ಶಾಲೆ ಪ್ರಾರಂಭವಾಗಿ ಎರಡು ತಿಂಗಳಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 94.10ರಷ್ಟು ಫಲಿತಾಂಶ ದಾಖಲಿಸಿ ಸಾಧನೆ ಮಾಡಿರುವ ಶಿಕ್ಷಣ ಇಲಾಖೆಗೆ ಈಗ ದಿಕ್ಕು ತೋಚದಂತಾಗಿದೆ. ಬರೀ ‘ನೀಟ್’ ಅಕ್ರಮದ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಯವರು ಒಕ್ಕೊರಲಿನಿಂದ ಬೆಂಬಲ ಸೂಚಿಸಿ, ವಿದ್ಯಾರ್ಥಿಗಳ ಪರವಾಗಿ ಹೋರಾಡಿದರೆ ಸಾಲದು. ರಾಜ್ಯದ ಶೈಕ್ಷಣಿಕ ಪ್ರಗತಿಯ ವಿಷಯದಲ್ಲಿ ಶಿಕ್ಷಣ ಸಚಿವರನ್ನು ನೇಮಕ ಮಾಡಬೇಕೆಂಬ ವಿವೇಕ ಹೈಕಮಾಂಡ್ಗೆ ಇರಬೇಕಲ್ಲವೆ? ಹಲವು ಸಮಸ್ಯೆಗಳಿಂದ ಸೊರಗುತ್ತಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದು ಮುಖ್ಯ. ಶಿಕ್ಷಣ ಸಚಿವರೇ ಇಲ್ಲದಿರುವಾಗ ಶೈಕ್ಷಣಿಕ ಪ್ರಗತಿ ಸಾಧಿಸುವುದು ಕಷ್ಟಕರ. ಕೂಡಲೇ, ಇಲಾಖೆಗೆ ಸಚಿವರನ್ನು ನೇಮಿಸಿ ಮಕ್ಕಳಿಗೆ ನ್ಯಾಯ ಒದಗಿಸಬೇಕಿದೆ.-ಸುರೇಂದ್ರ ಪೈ, ಭಟ್ಕಳ ಸಂಪುಟ ಕಸರತ್ತು ಮತ್ತು ದೈನೇಸಿ ಸ್ಥಿತಿಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಲು ಹೈಕಮಾಂಡ್ನ ಅನುಮತಿಗಾಗಿ ಹೆಣಗಾಡುತ್ತಿದ್ದಾರೆ. ಇದನ್ನು ನೋಡಿದರೆ ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಎಂಬ ಅನುಮಾನ ಕಾಡದಿರದು. ಹಲವು ಇಲಾಖೆಗಳಿಗೆ ಸಚಿವರೇ ಇಲ್ಲ. ಮಂತ್ರಿಮಂಡಲ ರಚನೆಯ ಹಾವು ಏಣಿ ಆಟ ಮುಗಿಯುವಂತೆ ಕಾಣುತ್ತಿಲ್ಲ. ಎಲ್ಲದಕ್ಕೂ ಹೈಕಮಾಂಡ್ ಮರ್ಜಿಯನ್ನೇ ಕಾಯಬೇಕು ಅಂತಾದರೆ ಮುಖ್ಯಮಂತ್ರಿಗೆ ಇರುವ ಸ್ವಾತಂತ್ರ್ಯವಾದರೂ ಏನು? ಈ ಪ್ರಶ್ನೆ ಕಾಂಗ್ರೆಸ್ಗಷ್ಟೇ ಸೀಮಿತವಲ್ಲ. ಎಲ್ಲ ರಾಷ್ಟ್ರೀಯ ಪಕ್ಷಗಳದ್ದೂ ಇದೇ ದೈನೇಸಿ ಸ್ಥಿತಿ. ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಷ್ಟರಮಟ್ಟಿಗೆ ಇದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.-ಚಾವಲ್ಮನೆ ಸುರೇಶ್ ನಾಯಕ್, ಕೊಪ್ಪ