ತಾರಸಿ ತೋಟ: ಚೆಂದದ ಮನೆಯ ಅಂದದ ನೋಟ
ಅಚ್ಚ ಹಸಿರಿನಿಂದ ಕೂಡಿದ ಪೊದೆಯಾಕಾರದ ಗಿಡದ ನಡುವೆ ಕಣ್ಣರಳಿಸಿರುವ ಬೀನ್ಸ್, ಮುಗಿಲು ನೋಡುತ್ತಾ ಮುಗುಳ್ನಗುವ ಕೆಂಪು ಬೆಂಡೆ, ಹರಿವಾಣದಷ್ಟು ವಿಸ್ತಾರವಾಗಿ ಬೆಳೆದಿರುವ ಹರಿವೆ ಸೊಪ್ಪು, ಮಣ್ಣಲ್ಲಿ ಹುದುಗಿರುವ ಮೂಲಂಗಿಯೂ, ಚೋಟು ಮೆಣಸಿಕಾಯಿಯ ಖಾರವೂ ಇಲ್ಲುಂಟು. ಹಾಗಂತಾ ಇದು ದೊಡ್ಡ ತೋಟವೇನಲ್ಲ. ದಾವಣಗೆರೆಯಲ್ಲಿನ ಮನೆಯೊಂದರ ತಾರಸಿಯನ್ನು ಆವರಿಸಿರುವ ಕೈತೋಟವಿದು. ಮನೆ

ಅಚ್ಚ ಹಸಿರಿನಿಂದ ಕೂಡಿದ ಪೊದೆಯಾಕಾರದ ಗಿಡದ ನಡುವೆ ಕಣ್ಣರಳಿಸಿರುವ ಬೀನ್ಸ್, ಮುಗಿಲು ನೋಡುತ್ತಾ ಮುಗುಳ್ನಗುವ ಕೆಂಪು ಬೆಂಡೆ, ಹರಿವಾಣದಷ್ಟು ವಿಸ್ತಾರವಾಗಿ ಬೆಳೆದಿರುವ ಹರಿವೆ ಸೊಪ್ಪು, ಮಣ್ಣಲ್ಲಿ ಹುದುಗಿರುವ ಮೂಲಂಗಿಯೂ, ಚೋಟು ಮೆಣಸಿಕಾಯಿಯ ಖಾರವೂ ಇಲ್ಲುಂಟು. ಹಾಗಂತಾ ಇದು ದೊಡ್ಡ ತೋಟವೇನಲ್ಲ. ದಾವಣಗೆರೆಯಲ್ಲಿನ ಮನೆಯೊಂದರ ತಾರಸಿಯನ್ನು ಆವರಿಸಿರುವ ಕೈತೋಟವಿದು. ಮನೆಯ ಮಾಲೀಕರಿಗೆ ಇದು ಸೊಬಗಿನ ಖನಿಯೂ, ನೆಮ್ಮದಿಯ ತಾಣವೂ ಆಗಿದೆ.ನಗರದ ಆಂಜನೇಯ ಬಡಾವಣೆಯ 14ನೇ ಕ್ರಾಸ್ನಲ್ಲಿರುವ ‘ಆಶಾಪ್ರಿಯ’ ನಿವಾಸದ ಮಹಡಿಯನ್ನು ಹತ್ತುತ್ತಿದ್ದಂತೆಯೇ ಉದ್ಯಾನವೊಂದರ ಒಳಹೊಕ್ಕಂತೆ ಭಾಸವಾಗುತ್ತೆ. ಕಾಂಕ್ರೀಟ್ ಕಾಡಿನ ನಡುವೆ, ಮನೆಯ ಮಹಡಿಯ ಮೇಲೊಂದು ಚೆಂದದ ಕೈತೋಟ ನಿರ್ಮಿಸಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಇದನ್ನು ಸಾಧ್ಯವಾಗಿಸಿರುವುದು ಆಶಾ ತಿಪ್ಪೇಸ್ವಾಮಿ ಅವರ ಅದಮ್ಯ ಆಸಕ್ತಿ, ಪ್ರಕೃತಿಯೆಡೆಗಿನ ಅವರ ಬದ್ಧತೆ, ವಿಷಮುಕ್ತ, ರೋಗಮುಕ್ತ ಆಹಾರದ ಬಗೆಗಿನ ಆಸಕ್ತಿ ಕಾರಣ.20X30 ಅಳತೆಯ ತಾರಸಿಯಲ್ಲಿ ಏನೇನಿದೆ ಎಂದು ಹೇಳುತ್ತಾ ಹೋದರೆ, ಅದು ತರಕಾರಿ ಮಂಡಿಯನ್ನೇ ನೆನಪಿಸುತ್ತದೆ. ತರಕಾರಿ ಸಸ್ಯಗಳೇ ಇಲ್ಲಿನ ಬಹುಪಾಲು ಜಾಗವನ್ನು ಆಕ್ರಮಿಸಿವೆ. ಹಣ್ಣಿನ ಗಿಡಗಳು, ಔಷಧೀಯ ಸಸ್ಯಗಳು, ಹೂವಿನ ಗಿಡಗಳು, ಅಲಂಕಾರಿ ಗಿಡಗಳಿಂದ ತಾರಸಿ ತೋಟವನ್ನು ಪರಿಪೂರ್ಣಗೊಳಿಸಿವೆ.ಮೆಂತ್ಯ ಜೊತೆ ಆರಂಭವಾಗಿ, ಸಬ್ಬಸಿಗೆ, ಪಾಲಕ್, ಹರಿವೆ, ದಂಟಿನ ಜೊತೆ ಸೊಪ್ಪುಗಳ ನಂಟು ಬೆಳೆದಿದೆ. ಒಂದು ಪಾಟ್ನಲ್ಲಂತೂ ಒಂದೇ ಬಳ್ಳಿಯ ಹೂಗಳು ಎಂಬಂತೆ ಎಲ್ಲ ಸೊಪ್ಪುಗಳು ಬೆಸೆದುಕೊಂಡಿದ್ದು ಕಳೆ ಹೆಚ್ಚಿಸಿದೆ. ಅದರ ಪಕ್ಕದಲ್ಲೇ, ತಾನೇನೂ ಕಮ್ಮಿ ಇಲ್ಲ ಎಂಬಂತೆ ತಂತಿಯ ಇಡೀ ಬಲೆಯನ್ನು ಆವರಿಸಿಕೊಂಡು ಸಮೃದ್ಧವಾಗಿ ಬೆಳೆದಿರುವ ಉದ್ದ ಬೀನ್ಸ್ (ತಿಂಗಳ ಹುರುಳಿ) ತನ್ನ ಮೈಮಾಟದಿಂದಲೇ ಗಮನ ಸೆಳೆಯುತ್ತದೆ. ಇದರ ಕೆಳಗಡೆಯ ಪಾಟ್ನಲ್ಲಿ ದಿನಬಳಕೆಯ ಬೀನ್ಸ್ ತನ್ನ ಇರುವಿಕೆಯನ್ನು ತೋರುತ್ತದೆ. ಸ್ಟಾರ್ ಬೀನ್ಸ್ ಸೇರಿದಂತೆ ಐದು ರೀತಿಯ ಹುರುಳಿ ಗಿಡಗಳನ್ನು ಬೆಳೆದಿರುವುದನ್ನು ಆಶಾ ತಿಪ್ಪೇಸ್ವಾಮಿ ಅವರು ಹೆಮ್ಮೆಯಿಂದ ತೋರಿಸುತ್ತಾರೆ.ಹಾಲು ಬೆಂಡೆಕಾಯಿಯ ಜೊತೆ ಕೆಂಪು ಬೆಂಡೆಕಾಯಿ ಈ ತಾರಸಿ ತೋಟದ ವಿಶೇಷತೆಗಳಲ್ಲೊಂದು. ಚಪ್ಪರದ ಅವರೆ, ಎಲೆಬಳ್ಳಿಗಳೂ ದಟ್ಟವಾಗಿ ಚಾಚಿಕೊಂಡಿವೆ. ನೆಲದಡಿ ಬೆಳೆಯುವ ಆಲೂಗಡ್ಡೆ ಸಾಮಾನ್ಯ. ಆದರೆ ಇಲ್ಲಿರುವ ಅಪರೂಪದ ಬಳ್ಳಿಯ ರೂಪದಲ್ಲಿದ್ದು, ವಿಶಿಷ್ಟ ರುಚಿಯನ್ನು ಹೊಂದಿದೆ. ಸಾಮಾನ್ಯ ಬದನೆಯ ಜೊತೆ ವಾಂಗಿಬಾತ್ ಅನ್ನು ಘಮ್ಮೆನಿಸುವ ಉದ್ದದ ಬದನೆಯೂ ಇಲ್ಲಿ ಜಾಗ ಪಡೆದಿದೆ. ಹಾಗಲಕಾಯಿಯ ಹಿಚಗಾಯಿಗಳು ಗಿಳಿ, ಗೊರವಂಕದಂತೆ ತಂತಿಯ ಮೇಲೆ ಗಾಳಿಗೆ ತೂಗುತ್ತಾ ವಯ್ಯಾರ ಮಾಡುತ್ತಿರುವಂತೆ ಭಾಸವಾಗುತ್ತದೆ. ಹಿರೇಕಾಯಿ, ಸೋರೆಕಾಯಿಗಳ ಸಾಂಗತ್ಯವೂ ಕಡಿಮೆಯೇನಿಲ್ಲ. ಔಷಧೀಯ ಸಸ್ಯಗಳಾದ ಒಂದೆಲಗ, ಶುಂಠಿ, ಅರಿಸಿನ, ತುಳಸಿ, ಪುದಿನ ಮನೆಯ ಮಾಲೀಕರ ಆರೋಗ್ಯದ ಗುಟ್ಟನ್ನು ರಟ್ಟು ಮಾಡುತ್ತವೆ.ದುಬಾರಿ ಅಲ್ಲ: ಪಾಟ್ಗಳನ್ನು ತಾರಸಿಯ ಮೇಲೆ ನೇರವಾಗಿ ಇರಿಸಿದರೆ, ನೀರು ಆರ್ಸಿಸಿಗೆ ಇಳಿಯುವ ಸಾಧ್ಯತೆ ಇರುತ್ತದೆ. ಕಬ್ಬಿಣ ಸ್ಟ್ಯಾಂಡ್ ಮೇಲೆ ಅವುಗಳನ್ನು ಇರಿಸಿದರೆ, ಈ ಸಮಸ್ಯೆ ಇರುವುದಿಲ್ಲ. ಗಿಡ ಬೆಳೆಸುವ ಪ್ಲಾಸ್ಟಿಕ್ ಪಾಟ್, ಗ್ರೋ ಬ್ಯಾಗ್ ಎಲ್ಲ ಕಡೆ ಲಭ್ಯ ಇವೆ. ಹಳೆಯ ಪೈಂಟ್ ಡಬ್ಬ, ಪ್ಲಾಸ್ಟಿಕ್ ಟಬ್ಗಳಲ್ಲೂ ನೆಡಬಹುದು. ಬೀಜ, ಗೊಬ್ಬರವನ್ನು ಗಿಡದಲ್ಲೇ ತಯಾರಿಸುವುದರಿಂದ ಅವಲಂಬನೆ ಇರುವುದಿಲ್ಲ. ಇದು ನಿಜ ಅರ್ಥದಲ್ಲಿ ಸ್ವಾವಲಂಬನೆಯ ಕೈತೋಟ.ಆಸಕ್ತರಿಗೆ ಪ್ರೇರಣೆಯ ತಾಣ: ಕೆವಿಕೆಯ ಬಸವನಗೌಡ ಅವರು ತಾರಸಿ ತೋಟದ ಪರಿಕಲ್ಪನೆಯನ್ನು ನಗರದಲ್ಲಿ ಹೆಚ್ಚು ಪ್ರಚುರಪಡಿಸಿದರು. ಆಶಾ–ತಿಪ್ಪೇಸ್ವಾಮಿ ದಂಪತಿ ಕೋವಿಡ್ ಸಮಯದಲ್ಲಿ ಹವ್ಯಾಸಕ್ಕೆಂದು ಶುರುಮಾಡಿದ ತಾರಸಿತೋಟವು ಅವರ ಉತ್ಸಾಹ ಹಾಗೂ ಅಚ್ಚುಕಟ್ಟಾದ ನಿರ್ವಹಣೆಯಿಂದ ಆಸಕ್ತರ ಗಮನ ಸೆಳೆದಿದೆ. ಕೆವಿಕೆ ವಿದ್ಯಾರ್ಥಿಗಳು, ಬಿಎಸ್ಸಿ ತೋಟಗಾರಿಕೆ ಹಾಗೂ ಕೃಷಿ ಅಧ್ಯಯನ ಮಾಡುವವರು, ‘ದೇಸಿ’ ಕೋರ್ಸ್ನ ಆಸಕ್ತರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ನಿಯಮಿತವಾಗಿ ಆಶಾ ಅವರ ಮನೆಗೆ ಭೇಟಿ ನೀಡಿ ತಾರಸಿ ತೋಟವನ್ನು ಕಣ್ತುಂಬಿಕೊಳ್ಳುತ್ತಾರೆ. ಈ ವೇಳೆ ಅಲ್ಲೊಂದು ಪುಟ್ಟ ಕೃಷಿ ತರಗತಿಯೇ ನಡೆಯುತ್ತದೆ. ತಾರಸಿಯಲ್ಲಿ ಮರಗಳೂ ಇವೆ!ತಾರಸಿ ತೋಟವೆಂದರೆ ಸಣ್ಣಪುಟ್ಟ ತರಕಾರಿ, ಹೂವಿನ ಗಿಡಗಳು ಎಂಬ ಭಾವನೆ ನಿಜವಲ್ಲ. ದೊಡ್ಡ ಮರವಾಗಿ ಬೆಳೆಯುವ ಸಾಮರ್ಥ್ಯದ ಬೆಟ್ಟದ ನೆಲ್ಲಿಕಾಯಿ, ನುಗ್ಗೆ, ದಾಳಿಂಬೆಯಂತಹ ತಳಿಗಳು ಗ್ರೋ ಬ್ಯಾಗ್ನ ಸೀಮಿತ ಜಾಗದಲ್ಲಿ ತಳವೂರಿವೆ. ನುಗ್ಗೆಯಂತೂ ಮುಗಿಲೆತ್ತರಕ್ಕೆ ಚಾಚಿಕೊಂಡಿದೆ.ಇವು ದೊಡ್ಡದಾಗಿ ಬೆಳೆಯದಂತೆ ರೆಂಬೆಗಳನ್ನು ಆಗಾಗ ಸವರುತ್ತಿರಬೇಕು. ಬೇರಿಗೂ ಕತ್ತರಿ ಹಾಕಬೇಕು. ಆಗ ತಾವಿರುವ ಅಲ್ಪ ಜಾಗದಲ್ಲೇ ಹೊಂದಿಕೊಂಡು ಬೆಳೆಯಲು ಶುರು ಮಾಡುತ್ತವೆ. ಇಲ್ಲಿರುವ ‘ಆ್ಯಪಲ್ ಬಾರೆ ಮರ’ ತನ್ನ ದೊಡ್ಡ ಕಾಯಿಗಳಿಂದ ಗಮನ ಸೆಳೆಯುತ್ತದೆ. ಪಾಲಿನೇಷನ್ ಉದ್ದೇಶಕ್ಕೆಂದೇ ಸಾಸಿವೆ ಬೆಳೆದಿರುವ ಆಶಾ ತಿಪ್ಪೇಸ್ವಾಮಿ, ಅನುಭವದಿಂದ ದೊರತೆ ಕೃಷಿ ಜ್ಞಾನವನ್ನು ಇಲ್ಲಿ ಧಾರೆ ಎರೆದಿದ್ದಾರೆ.‘ಇಳುವರಿ ಇಲ್ಲಿ ಮುಖ್ಯವಲ್ಲ’ಆಶಾ ಅವರ ತಾರಸಿ ತೋಟವನ್ನು ಮನೆಯ ಬಳಕೆಯ ಸೀಮಿತ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಒಂದೇ ಬಾರಿಗೆ ಕಿಲೋಗಟ್ಟಲೆ ತರಕಾರಿ ಇಲ್ಲಿ ಸಿಗುವುದಿಲ್ಲ. ವಾರ ಕಾಯ್ದರೆ ಮನೆಯಲ್ಲಿ ಪಲ್ಯ ಮಾಡಲು ಸಾಕಾಗುವಷ್ಟು ಯಾವುದಾದರೂ ಒಂದು ತರಕಾರಿ ಸಿಗುತ್ತದೆ. ಹೀಗೆ ಒಂದೊಂದು ದಿನ ಒಂದೊಂದು ತರಕಾರಿಯ ರುಚಿಯನ್ನು ಸವಿಯಬಹುದು. ಇಲ್ಲಿ ಇಳುವರಿ ಮುಖ್ಯವಲ್ಲ. ಕೀಟನಾಶಕ ಮುಕ್ತ, ರಾಸಾಯನಿಕ ಗೊಬ್ಬರ ಮುಕ್ತವಾದ ನೈಸರ್ಗಿಕವಾಗಿ ಆಹಾರದ ಬೆಳೆಗಳನ್ನು ಬೆಳೆಯುವುದಷ್ಟೇ ಮುಖ್ಯ ಎನ್ನುತ್ತಾರೆ ಮನೆ ಮಾಲೀಕರು.ಒಂದು ಗಿಡ ಕಾಯಿ ನೀಡಲು ಆರಂಭಿಸುತ್ತಿದ್ದಂತೆಯೇ ಮತ್ತೊಂದು ಪಾಟ್ನಲ್ಲಿ ಅದರ ಸಣ್ಣ ಸಸಿಯೊಂದು ಸಿದ್ಧವಾಗಿರುತ್ತದೆ. ತುಂಬಾ ಚೆನ್ನಾಗಿ ಬಲಿತಿರುವ ಕಾಯಿಯನ್ನು ಗಿಡದಲ್ಲೇ ಬೀಜಕ್ಕಾಗಿ ಉಳಿಸುವ ರೂಢಿ ಮಾಡಲಾಗಿದೆ. ಹೀಗಾಗಿ ಮಾರುಕಟ್ಟೆಯಿಂದ ಬೀಜ ತರಬೇಕಾದ ಸ್ಥಿತಿ ಎದುರಾಗಿಲ್ಲ. ಸೊಪ್ಪು ಬೆಳೆಯಲೂ ಇದೇ ಪದ್ಧತಿ ಅನುಸರಿಸಲಾಗುತ್ತಿದೆ. ತೇವಾಂಶ ನೋಡಿಕೊಂಡು ಆಗಾಗ್ಗೆ ನೀರುಣಿಸಲಾಗುತ್ತದೆ.ಎಲೆ, ಜೈವಿಕ, ಎರೆಹುಳು ಗೊಬ್ಬರಇಲ್ಲಿ ರಾಸಾಯನಿಕ ಗೊಬ್ಬರದ ವಾಸನೆಯೂ ಸಿಗುವುದಿಲ್ಲ. ರಾಸಾಯನಿಕ ಗೊಬ್ಬರ ಹಾಕುವುದಾದರೆ, ಅದನ್ನು ಹಾಕಿ ಬೆಳೆಯುವ ತರಹೇವಾರಿ ತರಕಾರಿ, ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದನ್ನೇ ಇಲ್ಲೂ ಅನುಸರಿಸಿದರೆ ತಾರಸಿ ತೋಟ ಮಾಡುವುದರಲ್ಲಿ ಅರ್ಥವಿಲ್ಲ ಎಂಬುದು ಆಶಾ ಅವರ ಖಂಡಿತ ವಾದ.ದಿನಕ್ಕೆ ಒಂದು ಅಥವಾ ಎರಡು ಗಂಟೆ ತೋಟದಲ್ಲಿ ಸುತ್ತಾಡುತ್ತಾ, ಗಿಡದಲ್ಲಿ ಹಣ್ಣಾದ ಎಲೆಗಳನ್ನು ಕಿತ್ತು ಬುಡಕ್ಕೆ ಹಾಕುತ್ತಾರೆ. ದಿನ ಕಳೆದಂತೆ ಗಿಡದ ಬುಡದಲ್ಲೇ ಉತ್ತಮ ಗೊಬ್ಬರ ರೂಪುಗೊಳ್ಳುತ್ತದೆ. ಹೆಚ್ಚು ಎಲೆಗಳಿದ್ದರೆ, ಅದನ್ನು ಗುಡಿಸಿ ಎಸೆಯದೇ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ನೆಲದಲ್ಲಿ ಎರೆಹುಳುಗಳನ್ನು ಪ್ರತ್ಯೇಕವಾಗಿ ಬೆಳೆಸಿ, ಗಿಡದ ಬುಡಕ್ಕೆ ಹಾಕಲಾಗುತ್ತದೆ. ಎರೆಹುಳುವಿನ ಕಾರಣದಿಂದ ಪಾಟ್ನಲ್ಲಿರುವ ಮಣ್ಣು ಸ್ಪಂಜಿನಂತಾಗುತ್ತದೆ. ಜೊತೆಗೆ ಜೈವಿಕ ಶಿಲೀಂಧ್ರನಾಶಕ ಟ್ರೈಕೊಡರ್ಮಾ ಹಾಗೂ ದ್ರವ ರೂಪದ ಬಯೊ ಫರ್ಟಿಲೈಸರ್ ಅನ್ನು ಅಲ್ಪ ಪ್ರಮಾಣದಲ್ಲಿ ಬಳಸಲಾಗುತ್ತದೆ.ಬಣ್ಣಬಣ್ಣದ ಇನ್ಸೆಕ್ಟ್ ಟ್ರ್ಯಾಪ್ ಬ್ಯಾಗ್ ಮತ್ತು ‘ಮೋಹಕ ಬಲೆ’ ಎಂಬ ಉಪಕರಣವನ್ನು ಬಳಸಿ, ಕಾಯಿಕೊರಕ ಕೀಟಗಳನ್ನು ಯಶಸ್ವಿಯಾಗಿ ಹತೋಟಿಗೆ ತರಲಾಗಿದೆ. ಮೂರು ವರ್ಷಕ್ಕೊಮ್ಮೆ ಮಣ್ಣು ಬದಲಿಸಿದರೆ ತೋಟ ಹೊಸ ಚೈತನ್ಯ ಪಡೆಯುತ್ತದೆ ಎನ್ನುತ್ತಾರೆ ಆಶಾ ತಿಪ್ಪೇಸ್ವಾಮಿ-ಆಶಾ ತಿಪ್ಪೇಸ್ವಾಮಿ, ತಾರಸಿ ತೋಟದ ಮಾಲೀಕರುತಾರಸಿ ತೋಟದಲ್ಲಿ ನಿತ್ಯವೂ ಚಟುವಟಿಕೆಯಿಂದ ಇರಬಹುದು. ಇದು ಉತ್ತಮ ದೇಹಾರೋಗ್ಯಕ್ಕೆ ಪೂರಕ. ವಿಷಮುಕ್ತ, ರೋಗಮುಕ್ತ ತರಕಾರಿ, ಹಣ್ಣು, ಸೊಪ್ಪು ಸಿಗುವುದರಿಂದ ಆರೋಗ್ಯಪೂರ್ಣ ಆಹಾರವನ್ನು ಸೇವಿಸಬಹುದು. ಇಲ್ಲಿನ ಹಸಿರನ್ನು ಅನುಭವಿಸುವುದರಿಂದ ಮನಸ್ಸಿನ ನೆಮ್ಮದಿ ದ್ವಿಗುಣವಾಗುವುದರದಲ್ಲಿ ಸಂಶಯವಿಲ್ಲ. ಆಶಾ ತಿಪ್ಪೇಸ್ವಾಮಿ ಅವರ ಸಂಪರ್ಕ ಸಂಖ್ಯೆ: 81399 78773ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260731-43-531145691