ವಿದೇಶಿ ವಿದ್ಯಾರ್ಥಿಗಳಿಗೆ ನೀಡುವ ವೀಸಾಗೆ 1 ಲಕ್ಷ ಡಾಲರ್ ಶುಲ್ಕ: ಅಮೆರಿಕ ಚಿಂತನೆ
ವಾಷಿಂಗ್ಟನ್: ಅಮೆರಿಕದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ಅಲ್ಲೇ ಉದ್ಯೋಗ ಮಾಡಲು ಬಯಸುವ ವಿದೇಶಿ ವಿದ್ಯಾರ್ಥಿಗಳಿಗೆ ನೀಡಲಾಗುವ ವೀಸಾಗಳಿಗೆ 1 ಲಕ್ಷ ಡಾಲರ್ (ಅಂದಾಜು ₹95 ಲಕ್ಷ) ಶುಲ್ಕ ವಿಧಿಸಲು ಅಮೆರಿಕ ಸರ್ಕಾರ ಯೋಜಿಸುತ್ತಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.ಎಚ್1–ಬಿ ವೀಸಾಗಳ ಮೇಲೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವವನ್ನು ಅಮೆರಿಕ
ವಾಷಿಂಗ್ಟನ್: ಅಮೆರಿಕದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ಅಲ್ಲೇ ಉದ್ಯೋಗ ಮಾಡಲು ಬಯಸುವ ವಿದೇಶಿ ವಿದ್ಯಾರ್ಥಿಗಳಿಗೆ ನೀಡಲಾಗುವ ವೀಸಾಗಳಿಗೆ 1 ಲಕ್ಷ ಡಾಲರ್ (ಅಂದಾಜು ₹95 ಲಕ್ಷ) ಶುಲ್ಕ ವಿಧಿಸಲು ಅಮೆರಿಕ ಸರ್ಕಾರ ಯೋಜಿಸುತ್ತಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.ಎಚ್1–ಬಿ ವೀಸಾಗಳ ಮೇಲೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವವನ್ನು ಅಮೆರಿಕದ ನ್ಯಾಯಾಲಯವೊಂದು ರದ್ದುಗೊಳಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಆಡಳಿತವು ಈ ಕ್ರಮದ ಬಗ್ಗೆ ಚಿಂತನೆ ನಡೆಸಿದೆ.‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಾರ, ಅಮೆರಿಕದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೀಡಲಾಗುವ ಎಫ್–1 ವೀಸಾಗಳ ವಿಸ್ತರಣೆಯಾಗಿರುವ ‘ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್’ (ಒಪಿಟಿ) ವೀಸಾಗಳ ಮೇಲೆ ಈ ಹೆಚ್ಚಿನ ಶುಲ್ಕವನ್ನು ವಿಧಿಸುವ ಕುರಿತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಪರಿಶೀಲನೆ ನಡೆಸುತ್ತಿದೆ.ಒಪಿಟಿ ಎಂದರೆ, ಶೈಕ್ಷಣಿಕ ಪದವಿಗೆ ಮುನ್ನ ಅಥವಾ ಶೈಕ್ಷಣಿಕ ಪದವಿಯ ನಂತರ ಕೆಲಸ ಮಾಡುವ ಮೂಲಕ ಗಳಿಸುವ ಅನುಭವ. ಒಪಿಟಿ ಕಾರ್ಯಕ್ರಮವು ವಿದೇಶಿ ಪದವೀಧರರಿಗೆ ತಮ್ಮ ಅಧ್ಯಯನಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ, ವಿದ್ಯಾರ್ಥಿ ವೀಸಾಗಳ ಮೇಲೆಯೇ ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತದೆ.2024ರ ಅಂಕಿ–ಅಂಶದ ಪ್ರಕಾರ ಸುಮಾರು 4.19 ಲಕ್ಷ ವಿದೇಶಿಯರು ಒಪಿಟಿ ಅಡಿಯಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು.‘ಅಧಿಕೃತ ಘೋಷಣೆ ಹೊರಬೀಳುವವರೆಗೆ ಯಾವುದೇ ನೀತಿಯನ್ನು ಅಂತಿಮವೆಂದು ಪರಿಗಣಿಸಬಾರದು. ನಮ್ಮ ಕಾನೂನುಬದ್ಧ ವಲಸೆ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡಲು ಹೊಸ ನೀತಿಗಳನ್ನು ಹೇಗೆ ಜಾರಿಗೊಳಿಸಬಹುದು ಎಂಬುದರ ಕುರಿತು ನಾವು ಯಾವಾಗಲೂ ಚರ್ಚಿಸುತ್ತಿರುತ್ತೇವೆ’ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.ಎಚ್1–ಬಿ ವೀಸಾಗಳ ಮೇಲೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ನಿರ್ಧಾರವನ್ನು ಅಮೆರಿಕದ ವಿಶ್ವವಿದ್ಯಾಲಯಗಳಿಂದ ನೇರವಾಗಿ ಹೆಚ್ಚಿನ ನೇಮಕಾತಿಗಳನ್ನು ನಡೆಸುವ ತಂತ್ರಜ್ಞಾನ ಕಂಪನಿಗಳು ವಿರೋಧಿಸಿದ್ದವು.