ಮನೆ ಕಟ್ಟಲು ಇದು ಸಕಾಲ...
ಮನೆ ಕಟ್ಟಬೇಕೆಂಬುದು ಪ್ರತಿಯೊಬ್ಬರ ಕನಸು. ಅದಕ್ಕೆಂದೇ ಪ್ರತಿಯೊಬ್ಬರೂ ಕಟ್ಟುವ ಮನೆ ‘ಕನಸಿನ ಮನೆ’ ಎಂದೇ ಕರೆಸಿಕೊಳ್ಳುತ್ತದೆ.20X30 ನಿವೇಶನದಲ್ಲಿ ಕಟ್ಟುವ ಪುಟ್ಟ ಮನೆಯಿಂದ ಹಿಡಿದು 40X60 ಅಥವಾ ಅದಕ್ಕಿಂತ ದೊಡ್ಡ ನಿವೇಶನದಲ್ಲಿ ಕಟ್ಟುವ ಮನೆಗೂ ‘ಕನಸಿನ ಮನೆ’ ಎಂದೇ ಹೇಳಲಾಗುತ್ತದೆ. ಪ್ರತಿ ಕುಟುಂಬವೂ ಒಂದು ಸ್ವಂತ ಮನೆಯನ್ನು ಹೊಂದಬೇಕೆಂಬ ಬಯಕೆ ಹೊಂದಿರುವುದೇ ಇದಕ್ಕ

ಮನೆ ಕಟ್ಟಬೇಕೆಂಬುದು ಪ್ರತಿಯೊಬ್ಬರ ಕನಸು. ಅದಕ್ಕೆಂದೇ ಪ್ರತಿಯೊಬ್ಬರೂ ಕಟ್ಟುವ ಮನೆ ‘ಕನಸಿನ ಮನೆ’ ಎಂದೇ ಕರೆಸಿಕೊಳ್ಳುತ್ತದೆ.20X30 ನಿವೇಶನದಲ್ಲಿ ಕಟ್ಟುವ ಪುಟ್ಟ ಮನೆಯಿಂದ ಹಿಡಿದು 40X60 ಅಥವಾ ಅದಕ್ಕಿಂತ ದೊಡ್ಡ ನಿವೇಶನದಲ್ಲಿ ಕಟ್ಟುವ ಮನೆಗೂ ‘ಕನಸಿನ ಮನೆ’ ಎಂದೇ ಹೇಳಲಾಗುತ್ತದೆ. ಪ್ರತಿ ಕುಟುಂಬವೂ ಒಂದು ಸ್ವಂತ ಮನೆಯನ್ನು ಹೊಂದಬೇಕೆಂಬ ಬಯಕೆ ಹೊಂದಿರುವುದೇ ಇದಕ್ಕೆ ಕಾರಣ.ದಶಕಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮ ಅಸ್ತಿತ್ವಕ್ಕೆ ಬಂದ ನಂತರ ನಗರ, ಪಟ್ಟಣಗಳು ಮತ್ತು ನಗರಕ್ಕೆ ಅಂಟಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನಗಳ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಮನೆ ಕಟ್ಬಬೇಕೆಂಬ ಬಡ, ಮಧ್ಯಮ ವರ್ಗದವರ ಕನಸಿನ ನನಸಾಗುವ ಕಾಲ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಆದರೆ, ಮನೆ ಕಟ್ಟುವುದಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡಲು ಈಗೀಗ ಬ್ಯಾಂಕ್ಗಳು ಸಾಲ ಸೌಲಭ್ಯವನ್ನು ನೀಡುವುದರಿಂದ, ಮನೆ ಕಟ್ಟಿಕೊಳ್ಳಲು ಸಾಲ ಪಡೆದರೆ ಆ ಸಾಲದ ಮೇಲಿನ ಬಡ್ಡಿಗೆ ಸಹಾಯಧನ ನೀಡುವ ವ್ಯವಸ್ಥೆ ಕೇಂದ್ರ ಸರ್ಕಾರದಿಂದ ಲಭ್ಯ ಇರುವುದರಿಂದ ಬಡವರು ಸ್ವಂತ ಸೂರಿನ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.ಸ್ಥಿರವಾಗಿದೆ ದರ: ಕೆಲವು ವರ್ಷಗಳಿಂದ ಏರು ಮುಖದಲ್ಲೇ ಇದ್ದ ರಿಯಲ್ ಎಸ್ಟೇಟ್ ಉದ್ಯಮ ಕಳೆದ ಎರಡು ವರ್ಷಗಳಿಂದ ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ ಸ್ಥಿರತೆಯತ್ತ ನಿಂತಿದೆ. ದಿನೇ ದಿನೇ ಹೆಚ್ಚುತ್ತಲೇ ಇದ್ದ ನಿವೇಶನಗಳ ಬೆಲೆ ಇದೀಗ ಸ್ಥಿರವಾಗಿದ್ದು, ಸ್ವಂತ ಮನೆಯನ್ನು ಹೊಂದಬೇಕೆಂಬ ಇಚ್ಛೆ ಉಳ್ಳವರು ನಿವೇಶನ ಖರೀದಿಸಲು ಇದು ಸಕಾಲ.ದಾವಣಗೆರೆ ನಗರದ ಆಸುಪಾಸಿನ ಎರಡರಿಂದ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹೊಸದಾಗಿ ತಲೆ ಎತ್ತಿರುವ ಬಡಾವಣೆಗಳಲ್ಲಿ ಪ್ರತಿ ಚದರಡಿ ಭೂಮಿಗೆ ಅಂದಾಜು 2,000ದ ಆಸುಪಾಸಿನ ದರ ಇದೆ.ರಾಜ್ಯದ ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲೇ ನಿವೇಶನಗಳ ದರ ಅತ್ಯಧಿಕ ಎಂಬ ಮಾತಿದೆ. ಅಲ್ಲದೇ ಬೆಂಗಳೂರಿಗಿಂತಲೂ ಶೀಘ್ರಗತಿಯಲ್ಲಿ ಇಲ್ಲಿನ ನಿವೇಶನಗಳ ದರ ಹೆಚ್ಚುತ್ತಿರುತ್ತದೆ ಎಂದೂ ಹೇಳಲಾಗುತ್ತದೆ. ಆದರೆ, ಅದೃಷ್ಟವಶಾತ್ ಕಳೆದೆರಡು ವರ್ಷಗಳಿಂದ ದರ ಸ್ಥಿರವಾಗಿರುವುದು ಬಡ, ಮಧ್ಯಮ ವರ್ಗದವರಿಗೆ ಆಶಾಕಿರಣವಾಗಿ ಪರಿಣಮಿಸಿದೆ.ದಾವಣಗೆರೆ ಸುತ್ತಮುತ್ತ ಭೂಮಿಯ ಬೆಲೆಯೂ ಹೆಚ್ಚಿದ್ದು, ಅದನ್ನು ಖರೀದಿಸಿ, ಕೃಷಿಯೇತರ ಜಮೀನಾಗಿ ಪರಿವರ್ತಿಸಿ, ಸಂಬಂಧಿತ ಪ್ರಾಧಿಕಾರಗಳ ಅಗತ್ಯ ಅನುಮತಿಯನ್ನು ಪಡೆದು, ಸುಸಜ್ಜಿತ ಬಡಾವಣೆ ಸಿದ್ಧಪಡಿಸಿ ಜನವಸತಿ ಯೋಗ್ಯ ಸ್ಥಳವನ್ನಾಗಿಸಲು ಇರುವ ಖರ್ಚು– ವೆಚ್ಚದ ಪ್ರಮಾಣವೂ ಹೆಚ್ಚಿರುವುದೇ ದರ ಹೆಚ್ಚುವುದಕ್ಕೆ ಕಾರಣ. ಅದರ ಜೊತೆಗೆ ಆಯಾ ಪರಿಸರ, ಸಮರ್ಪಕ ಸಂಪರ್ಕ ಜಾಲ, ನಗರ ಮಧ್ಯಭಾಗದಿಂದ ಇರುವ ಅಂತರ, ಈಗಾಗಲೇ ಅಸ್ತಿತ್ವದಲ್ಲಿರುವ ರಸ್ತೆ ಸಂಪರ್ಕವೂ ನಿವೇಶನಗಳ ದರವನ್ನು ನಿಗದಿಪಡಿಸುತ್ತವೆ ಎಂದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ನಿವಾಸಿ ಎ.ಎಂ. ಆನಂದ್ ಹೇಳುತ್ತಾರೆ.ಮೊದಲಾದರೆ, ಇಂದು ಹೇಳಿದ್ದ ದರ ನಾಳೆಗೆ ಸಿಗುತ್ತಿರಲಿಲ್ಲ ಎಂಬ ಪರಿಸ್ಥಿತಿ ಇತ್ತು. ಆ ರೀತಿ ದರ ಏರುಗತಿಯಲ್ಲಿತ್ತು. ಸೂಕ್ತ ನಿವೇಶನಕ್ಕೆ ಹೆಚ್ಚು ದರ ಸಿಕ್ಕರೆ ಮಾತ್ರ ಬಡಾವಣೆ ಸಿದ್ಧಪಡಿಸಿದವರೂ, ಹೂಡಿಕೆ ಉದ್ದೇಶದಿಂದ ನಿವೇಶನ ಖರೀದಿಸಿದವರೂ ಮಾರಾಟ ಮಾಡಲು ಮನಸ್ಸು ಮಾಡುತ್ತಿದ್ದರು. ಹೂಡಿಕೆದಾರರ ನಿರಾಸಕ್ತಿ, ಜಾಗತಿಕ ಆರ್ಥಿಕ ಸ್ಥಿತಿಗತಿಯಿಂದಾಗಿ ಈಗ ಚೌಕಾಶಿ ಮಾಡಲು ಅವಕಾಶ ಇದೆ. ಉದಾಹರಣೆಗೆ ಪ್ರತಿ ಚದರ ಅಡಿಗೆ ₹ 2,300 ಅಥವಾ ₹ 2,400 ಹೇಳುವವರು ಮಾತುಕತೆ ವೇಳೆ ₹ 300ರಿಂದ ₹ 400 ಕಡಿಮೆ ಮಾಡಿ ಮಾರಾಟಕ್ಕೆ ಒಪ್ಪಿಕೊಳ್ಳುತ್ತಿದ್ದಾರೆ. ಹಾಗಾಗಿ, ಬಡವರು, ಮಧ್ಯಮ ವರ್ಗದವರು ನಿವೇಶನ ಖರೀದಿಸಲು ಇದು ಸಕಾಲ ಎಂದು ಅವರು ಅಭಿಪ್ರಾಯಪಡುತ್ತಾರೆ.ಈಗಲ್ಲದಿದ್ದರೆ ಯಾವಾಗ?: ಈಗಾಗಲೇ ನಿವೇಶನ ಖರೀದಿಸಿರುವವರಿಗೂ, ಹೊಸದಾಗಿ ನಿವೇಶನ ಖರೀದಿಸುವವರಿಗೂ ಮನೆ ಕಟ್ಟಿಕೊಳ್ಳಲು ಇದು ಅತ್ಯಂತ ಅನುಕೂಲಕರ ಸಮಯವಾಗಿದೆ. ದರ ಸ್ಥಿರವಾಗಿ ಇರುವಾಗಲೇ ನಿವೇಶನ ಖರೀದಿಸುವುದು ಸೂಕ್ತ. ಅಲ್ಲದೆ, ಮನೆ ಕಟ್ಟಿಕೊಳ್ಳಲು ಅಗತ್ಯವಿರುವ ಎಂ.ಸ್ಯಾಂಡ್, ಮರಳು, ಜಲ್ಲಿ, ಸಿಮೆಂಟ್, ಉಕ್ಕು, ಇಟ್ಟಿಗೆ ಮತ್ತೂ ಕೂಲಿ ದರಗಳೂ ಸ್ಥಿರವಾಗಿದ್ದು, ಮನೆ ಕಟ್ಟುವವರು ಶ್ರಾವಣ ಮಾಸದಲ್ಲಿ ಬರುವ ಶುಭ ದಿನಗಳಂದು ಅಡಿಪಾಯ ಹಾಕಿಕೊಳ್ಳಲು ಇದು ಸೂಕ್ತ ಕಾಲವೇ ಆಗಿದೆ. ಲೆಕ್ಕಾಚಾರದೊಂದಿಗೆ ಹಣ ಹೊಂದಿಸುವವರಿಗೆ ಮನೆ ಕಟ್ಟಿಕೊಳ್ಳಲು ಸೂಕ್ತ ಸಮಯ ಈಗಲ್ಲದಿದ್ದರೆ ಇನ್ಯಾವಾಗ? ಎಂಬಂತಿದೆ ಎಂದು ತಜ್ಞರು ಹೇಳುತ್ತಾರೆ.‘ಮನೆ ಕಟ್ಟಿ ನೋಡು– ಮದುವೆ ಮಾಡಿ ನೋಡು’ ಎಂಬ ಗಾದೆಯೇ ಹೇಳುವಂತೆ ಮನೆ ಕಟ್ಟುವುದು ಎಂದರೆ ಅತ್ಯಂತ ತ್ರಾಸದಾಯಕ ಕೆಲಸ ಎಂದು ಅರ್ಥೈಸಿಕೊಂಡವರು, ಬಿಡುವಿನ ಸಮಯ ಇಲ್ಲದ ಕೆಲವರು ಸಿದ್ಧ ಮನೆ ಖರೀದಿಸುವ ಮನಸ್ಸು ಮಾಡುತ್ತಾರೆ. ಇನ್ನು ಕೆಲವರು, ತಾವೇ ಮುಂದೆ ನಿಂತು, ಉಸ್ತುವಾರಿ ವಹಿಸುತ್ತ ತಮಗೆ ಅಭಿರುಚಿಗೆ ಅಗತ್ಯವಾದ ವಿನ್ಯಾಸದೊಂದಿಗೆ ಮನೆ ನಿರ್ಮಿಸಿಕೊಳ್ಳುವ ಇರಾದೆಯನ್ನೂ ಹೊಂದಿರುತ್ತಾರೆ.ವಾಸಕ್ಕೆ ಸಿದ್ಧವಿರುವ, ಖರೀದಿಸಿ ಗೃಹಪ್ರವೇಶದ ಪೂಜೆ, ಹೋಮ ಮಾಡಿ, ಅಭಿಷೇಕ ನೆರವೇರಿಸಿ ವಾಸವಿರಲು ಅನುಕೂಲಕರವಾದ ಹೊಚ್ಚಹೊಸ ಮನೆಗಳೂ ದಾವಣಗೆರೆಯಲ್ಲಿ ಸಾಕಷ್ಟು ಲಭ್ಯವಿದ್ದು, ಅವುಗಳ ದರವೂ ಸ್ಥಿರವಾಗಿದೆ. ಅವುಗಳನ್ನೂ ಖರೀದಿಸಲು ಮುಂದಾಗಬಹುದು ಎಂಬುದು ಮನೆ ಕಟ್ಟಿ ಮಾರಾಟ ಮಾಡುವ ಉದ್ಯಮದಲ್ಲಿ ಇರುವವರ ಸಲಹೆಯಾಗಿದೆ.ದಾವಣಗೆರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಲೇಔಟ್ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260731-43-124288927