ಸಿನಿಮಾಗೆ ಪಬ್ಲಿಕ್ ಎಕ್ಸಾಮ್ ಮುಖ್ಯ: ನಿರ್ದೇಶಕ ಸಂತೋಷ್ ಆನಂದರಾಮ್
‘Mr &Mrs ರಾಮಾಚಾರಿ’, ‘ರಾಜಕುಮಾರ’ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾ ಬಿಡುಗಡೆಯಾಗಿ ಎರಡೂವರೆ ವರ್ಷ ಉರುಳಿದೆ. ಈ ಸಂದರ್ಭದಲ್ಲೇ ತಮ್ಮ ಹೊಸ ಪ್ರಾಜೆಕ್ಟ್ಸ್, ಚಿತ್ರರಂಗದ ಈಗಿನ ಸ್ಥಿತಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.ನೀವು ಗಮನಿಸಿದಂತೆ ಸದ್ಯದ ಕನ್ನಡ ಚಿತ್ರರಂಗದ ಸ್ಥಿತಿ...ವ್ಯಾಪಾರ–ವಹಿವಾಟಿನ ದೃಷ್ಟಿಯಿಂದ ಸದ್ಯ ಕನ್ನಡ ಚಿತ

‘Mr &Mrs ರಾಮಾಚಾರಿ’, ‘ರಾಜಕುಮಾರ’ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾ ಬಿಡುಗಡೆಯಾಗಿ ಎರಡೂವರೆ ವರ್ಷ ಉರುಳಿದೆ. ಈ ಸಂದರ್ಭದಲ್ಲೇ ತಮ್ಮ ಹೊಸ ಪ್ರಾಜೆಕ್ಟ್ಸ್, ಚಿತ್ರರಂಗದ ಈಗಿನ ಸ್ಥಿತಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.ನೀವು ಗಮನಿಸಿದಂತೆ ಸದ್ಯದ ಕನ್ನಡ ಚಿತ್ರರಂಗದ ಸ್ಥಿತಿ...ವ್ಯಾಪಾರ–ವಹಿವಾಟಿನ ದೃಷ್ಟಿಯಿಂದ ಸದ್ಯ ಕನ್ನಡ ಚಿತ್ರರಂಗದ ವೇಗ ಕಡಿಮೆಯಾಗಿದೆ ವಿನಃ ಕ್ರಿಯಾಶೀಲತೆ ಅಥವಾ ಕಥೆಗಳಿಗೆ ಕೊರತೆಯಾಗಿಲ್ಲ. ಕಳೆದ ಒಂದೂವರೆ ವರ್ಷದಿಂದ ಸೂಕ್ಷ್ಮವಾಗಿ ಗಮನಿಸಿದರೆ, ಚಿತ್ರಮಂದಿರದ ಹೊರತಾದ ವಹಿವಾಟು ಈಗ ಬಹಳ ಮುಖ್ಯವಾಗುತ್ತಿದೆ. ಒಳ್ಳೆಯ ಸಿನಿಮಾಗಳಿಗೆ ಚಿತ್ರಮಂದಿರದ ವಹಿವಾಟು ಇನ್ನೂ ಚೆನ್ನಾಗಿಯೇ ಇದೆ. ಜನ ಅವುಗಳಿಗೆ ಮನ್ನಣೆ ನೀಡುತ್ತಿದ್ದಾರೆ. ಕನ್ನಡಿಗರು ಉತ್ತಮ ಚಿತ್ರಗಳಿಗೆ ಆದ್ಯತೆ ನೀಡುವುದನ್ನು ನಿಲ್ಲಿಸಿಲ್ಲ.ಈ ವ್ಯಾಪಾರ–ವಹಿವಾಟಿನ ಇಳಿಕೆ ಕೇವಲ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ; ಭಾರತದ ಎಲ್ಲ ಚಿತ್ರರಂಗಗಳ ಮೇಲೂ ಇದು ಪರಿಣಾಮ ಬೀರಿದೆ. ಪರಭಾಷಾ ಚಿತ್ರಗಳು ಹಾಗೂ ಸ್ಟಾರ್ ನಟರ ಸಿನಿಮಾಗಳಿಗೆ ಈ ಹಿಂದೆ ಒಟಿಟಿ ವೇದಿಕೆಗಳು ನೀಡುತ್ತಿದ್ದ ಹಣ ಶೇ 35–40ರಷ್ಟು ಇಳಿಕೆಯಾಗಿದೆ. ಕನ್ನಡ ಸಿನಿಮಾಗಳ ಆಯ್ಕೆಯಲ್ಲೂ ಈಗ ಅವರು ಬಹಳ ನಿಖರವಾಗಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಒಪ್ಪಿಗೆ ಪಡೆದ ನಂತರವೇ ಅದನ್ನು ಖರೀದಿಸುವ ಪ್ರವೃತ್ತಿ ಎಲ್ಲ ಭಾಷೆಗಳಲ್ಲೂ ಹೆಚ್ಚಾಗಿದೆ. ಸ್ಟಾರ್ ಸಿನಿಮಾಗಳ ವಿಷಯದಲ್ಲೂ ಬಾಕ್ಸ್ ಆಫೀಸ್ ಗಳಿಕೆಯನ್ನು ಮಾನದಂಡವಾಗಿಟ್ಟುಕೊಳ್ಳುತ್ತಿದ್ದಾರೆ.ಇಂದಿಗೂ ಚಿತ್ರಮಂದಿರದಲ್ಲಿ ಯಶಸ್ಸು ಕಂಡ ಸಿನಿಮಾವನ್ನೇ ಒಟಿಟಿ ವೇದಿಕೆಗಳು ಪಡೆಯುತ್ತಿವೆ. ಈ ‘ಪಬ್ಲಿಕ್ ಎಕ್ಸಾಮ್’ ಪಾಸ್ ಆಗುವುದು ಈಗ ಅತ್ಯಂತ ಮುಖ್ಯವಾಗಿದೆ.ಒಟಿಟಿಯ ಬೆಳವಣಿಗೆಯಿಂದಾಗಿ ಸ್ಯಾಟಲೈಟ್ ಹಕ್ಕುಗಳ ಮಾರಾಟ ಹಾಗೂ ಮೌಲ್ಯವೂ ಇಳಿಕೆಯಾಗಿದೆ. ನಾಲ್ಕು ವಾರಗಳಲ್ಲೇ ಒಟಿಟಿಯಲ್ಲಿ ಸಿನಿಮಾ ನೋಡಿದವನು ಮತ್ತೆ ಟಿವಿಯಲ್ಲಿ ಅದನ್ನು ನೋಡುತ್ತಾನೆಯೇ ಎಂಬ ಚರ್ಚೆಯೂ ಆರಂಭವಾಗಿದೆ. ಇದೊಂದು ವ್ಯವಸ್ಥೆಯ ಸ್ಲೋಡೌನ್. ಕನ್ನಡದಲ್ಲಿ ಇದು ಎದ್ದು ಕಾಣಲು ಹಲವು ಕಾರಣಗಳಿವೆ. ನಮ್ಮಲ್ಲಿ ನಾಯಕರ ಕೊರತೆ ಇದೆ; ಇರುವ ನಾಯಕರ ಅನುಪಸ್ಥಿತಿಯೂ ಇದಕ್ಕೆ ಕಾರಣ. ಎಲ್ಲಾ ಸಿನಿಮಾಗಳೂ ಕೇವಲ ಕಾಂಟೆಂಟ್ನಿಂದ ಗೆಲ್ಲುವುದಿಲ್ಲ. ಕೆಲವೊಮ್ಮೆ ಆ ಕಾಂಟೆಂಟ್ಗೆ ಸರಿಯಾದ ಮುಖಗಳೂ ಮುಖ್ಯವಾಗುತ್ತವೆ. ಸಿನಿಮಾವನ್ನು ವಿಜೃಂಭಣೆಯಿಂದ ತೋರಿಸಬೇಕೆಂದರೆ ನಿರ್ಮಾಪಕರು ಅದರ ಮರುಗಳಿಕೆಯ ಮಾರ್ಗಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ.ಹಿಂದೆ ಚಿತ್ರಮಂದಿರಯೇತರ ಗಳಿಕೆ ಉತ್ತಮವಾಗಿತ್ತು. ಈಗ ಅದು ಇಳಿಕೆಯಾಗಿದೆ. ಇದು ಷೇರು ಮಾರುಕಟ್ಟೆಯಂತೆಯೇ ಏರಿಳಿತ ಇರುವ ಕ್ಷೇತ್ರ. ಮತ್ತೆ ಏಳಲಿದೆ.ಹಿಂದೆ ಇತರೆ ಗಳಿಕೆಯ ಯೋಚನೆ ಹೆಚ್ಚು ಇರಲಿಲ್ಲವಲ್ಲ?ಆ ಸಂದರ್ಭದಲ್ಲಿ ಸಿನಿಮಾದ ಬಜೆಟ್, ಕಲಾವಿದರ ಸಂಭಾವನೆ ಸೇರಿದಂತೆ ಎಲ್ಲವೂ ನಿಯಂತ್ರಣದಲ್ಲಿದ್ದವು. ಆಗ ಜನರು ಸಿನಿಮಾ ನೋಡುವ ದೃಷ್ಟಿಕೋನವೂ ಭಿನ್ನವಾಗಿತ್ತು. ಕಥೆಯನ್ನು ಸರಳವಾಗಿ ಹೇಳಿದರೂ ನೋಡುತ್ತಿದ್ದರು. ಆದರೆ ಈಗ ಸಣ್ಣ ಕಥೆಯಾದರೂ ದೃಶ್ಯವೈಭವವಿಲ್ಲದೆ ಜನ ಒಪ್ಪುವುದಿಲ್ಲ. ಅದನ್ನು ಸಾಧಿಸಲು ಹೆಚ್ಚು ಸಮಯ, ಹೆಚ್ಚಿನ ಬಜೆಟ್ ಮತ್ತು ಹೆಚ್ಚಿನ ಸಂಪನ್ಮೂಲಗಳು ಬೇಕಾಗುತ್ತವೆ.ಜನರು ಬಯಸುವ ಸಿನಿಮಾ ನೀಡುವುದು ನಮ್ಮ ಕೆಲಸ. ಆದರೆ ಅದರ ಜೊತೆಗೆ ಲೆಕ್ಕಾಚಾರವನ್ನೂ ತಲೆಯಲ್ಲಿಟ್ಟುಕೊಳ್ಳಲೇಬೇಕು. ಈ ಸಿದ್ಧತೆಯಲ್ಲೇ ಈಗ ಎಲ್ಲ ಸಿನಿಮಾ ಕರ್ತೃಗಳೂ ಇದ್ದಾರೆ.ಚಿತ್ರಮಂದಿರದ ಹೊರತಾದ ಭರ್ಜರಿ ಗಳಿಕೆಯಿಂದಾಗಿ ಈ ಹಿಂದೆ ಎರಡು ದಿನಗಳಲ್ಲಿ ಮುಗಿಯಬೇಕಿದ್ದ ಚಿತ್ರೀಕರಣ ನಾಲ್ಕು ದಿನಗಳಿಗೆ ವಿಸ್ತರಿಸಿತು; ₹10 ಕೋಟಿಯ ಸಿನಿಮಾ ₹20 ಕೋಟಿಗೆ ತಲುಪಿತು. ಈಗ ಮತ್ತೆ ಕಾಗದದ ಮೇಲಿರುವುದನ್ನು ಅಚ್ಚುಕಟ್ಟಾಗಿ ಪರದೆಗೆ ತರುವುದೇ ಸಾಕು ಎನ್ನುವ ಮನಃಸ್ಥಿತಿಗೆ ಎಲ್ಲರೂ ಮರಳುತ್ತಿದ್ದಾರೆ.ಈ ವಿಷಯಗಳು ನಿರ್ದೇಶಕನ ಮೇಲೆ ಬೀರುವ ಪರಿಣಾಮವೇನು?ಒಬ್ಬ ನಿರ್ದೇಶಕ ತನ್ನ ಕನಸನ್ನು ಪರದೆ ಮೇಲೆ ತರಲು ಹಣ ಬೇಕು. ನಿರ್ಮಾಪಕರು ಆ ಹಣವನ್ನು ಹೇಗೆ ಮರುಗಳಿಕೆ ಮಾಡಬಹುದು ಎಂಬುದನ್ನು ಯೋಚಿಸುತ್ತಾರೆ. ಈ ವಿಷಯದಲ್ಲಿ ನಿರ್ದೇಶಕರು ಅಥವಾ ನಿರ್ಮಾಪಕರನ್ನಷ್ಟೇ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಕಲಾವಿದರ ಹೊಣೆಗಾರಿಕೆಯೂ ಇದೆ.ಇದು ಒಂದು ಉದ್ಯಮವಾದ್ದರಿಂದ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು. ಕ್ರಿಯೇಟಿವಿಟಿ ಮತ್ತು ಖರ್ಚಿನ ವಿಚಾರದಲ್ಲಿ ನಿರ್ದೇಶಕ–ನಿರ್ಮಾಪಕ–ನಟರ ನಡುವೆ ಸಮಾನ ಮನಃಸ್ಥಿತಿ ಇದ್ದಾಗ ಉತ್ತಮ ಸಿನಿಮಾ ಮೂಡುತ್ತದೆ. ಶೇಕಡಾವಾರು ಹಂಚಿಕೆ ಅಥವಾ ಲಾಭ–ನಷ್ಟದ ವಿಚಾರದಲ್ಲಿ ನಿರ್ಮಾಪಕರ ಜೊತೆ ಕೈಜೋಡಿಸಿದರೆ ಒಳ್ಳೆಯದು.ಸತತ ಸಿನಿಮಾ ಮಾಡುವವರಿಗೆ ಸುಮ್ಮನೆ ಕುಳಿತುಕೊಳ್ಳುವುದು ಖುಷಿಯೇ? ಇದು ಸಮಯದ ಪರಿಣಾಮ ಅಷ್ಟೇ. ಯಶಸ್ಸು ಕಂಡವರೂ ಇಂದು ಸುಮ್ಮನೆ ಕುಳಿತಿದ್ದಾರೆ. ಒಂದು ರೀತಿಯಲ್ಲಿ ಇದು ಕೋವಿಡ್ ಲಾಕ್ಡೌನ್ ಕಾಲವನ್ನು ನೆನಪಿಸುತ್ತದೆ.ಈ ಹೊತ್ತಿನಲ್ಲಿ ಬಜೆಟ್ ಮತ್ತು ಇತಿಮಿತಿಗಳನ್ನು ಯಾವ ರೀತಿ ನೋಡಬೇಕು?ಒಂದು ಕಥೆಗೆ ಯಾವಾಗಲೂ ಅದರದೇ ಆದ ಪ್ರೇಕ್ಷಕ ವರ್ಗ ಇರುತ್ತದೆ. ಎಲ್ಲ ವರ್ಗದವರನ್ನೂ ಚಿತ್ರಮಂದಿರಕ್ಕೆ ಸೆಳೆಯುವ ಸಿನಿಮಾ ಆಗುವುದು ವಿರಳ. ಆದ್ದರಿಂದ ಹಿಂದಿನ ಸಿನಿಮಾಗಳ ವ್ಯಾಪಾರ, ಆಯ್ಕೆ ಮಾಡಿಕೊಂಡಿರುವ ನಟರ ಮಾರುಕಟ್ಟೆ ಇವೆಲ್ಲವನ್ನೂ ಗಮನಿಸಬೇಕು.ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎನ್ನುವುದು ಸುಳ್ಳು. ಪ್ರತಿ ವಾರವೂ ಆಯಾ ಸಿನಿಮಾಗೆ ಅದರ ಪ್ರೇಕ್ಷಕ ವರ್ಗ ಬರುತ್ತಿದೆ. ದೊಡ್ಡ ಯಶಸ್ಸನ್ನೇ ಮಾನದಂಡವಾಗಿ ಇಟ್ಟುಕೊಂಡು ನೋಡಿದರೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಅನಿಸಬಹುದು. ಆದರೆ ಬಿಡುಗಡೆಯಾದ ಸಿನಿಮಾದ ಬಜೆಟ್ ಮತ್ತು ಅದರ ಕಾಂಟೆಂಟ್ಗೆ ಅನುಗುಣವಾಗಿ ಪ್ರೇಕ್ಷಕರು ಬರುತ್ತಿದ್ದಾರೆ.ನಮಗೆ ಸಿನಿಮಾ ಆರಂಭಿಸಿದ ತಕ್ಷಣವೇ ಮೈಲಿಗಲ್ಲುಗಳು ಬೇಕು ಎನ್ನುವ ಆಸೆ ಇರುತ್ತದೆ. ಅದು ತಪ್ಪಲ್ಲ. ಆದರೆ ಪ್ರತಿಯೊಂದು ಸಿನಿಮಾವೂ ಆ ಮಟ್ಟದ ಯಶಸ್ಸು ಸಾಧಿಸುವುದಿಲ್ಲ.‘ಸು ಫ್ರಮ್ ಸೋ’ ಅದಕ್ಕೆ ಉತ್ತಮ ಉದಾಹರಣೆ. ಆ ತಂಡದಲ್ಲಿ ಎಲ್ಲರೂ ಸಹಕಾರದಿಂದ ಸಿನಿಮಾ ಮಾಡಿದ್ದಾರೆ. ಎಲ್ಲರೂ ಸಂಭಾವನೆ, ಸೌಲಭ್ಯಗಳ ಬಗ್ಗೆ ಮಾತ್ರ ಯೋಚಿಸಿ ಕುಳಿತಿದ್ದರೆ ಅದರ ಖರ್ಚು ನೂರು ಪಟ್ಟು ಹೆಚ್ಚಾಗುತ್ತಿತ್ತು.ಹೊಂಬಾಳೆ ಜೊತೆಗೇ ಎರಡು ಸಿನಿಮಾನಿರ್ದೇಶಕ ಸಂತೋಷ್ ಆನಂದರಾಮ್ ಅವರ ‘ರಾಜಕುಮಾರ’, ‘ಯುವರತ್ನ’, ‘ರಾಘವೇಂದ್ರ ಸ್ಟೋರ್ಸ್’ ಹಾಗೂ ‘ಯುವ’ ಸಿನಿಮಾಗಳನ್ನು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಈಗ ಅವರ ಮುಂದಿನ ಎರಡು ಸಿನಿಮಾಗಳನ್ನೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದ್ದು, ಈ ಮಾಹಿತಿಯನ್ನು ಸ್ವತಃ ಸಂತೋಷ್ ಆನಂದರಾಮ್ ಹಂಚಿಕೊಂಡಿದ್ದಾರೆ.‘ಒಂದು ಸಿನಿಮಾದ ಪ್ರಿಪ್ರೊಡಕ್ಷನ್ ಈಗಾಗಲೇ ಪೂರ್ಣಗೊಂಡಿದೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲ ಪೂರ್ವಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ. ಜನರಲ್ಲಿ ನಿರೀಕ್ಷೆ ಮೂಡಿಸಿದ ಬಳಿಕ ಅದಕ್ಕೆ ಬದ್ಧರಾಗಿರಬೇಕು. ಆದ್ದರಿಂದ ಅಚ್ಚುಕಟ್ಟಾಗಿ ಹಾಗೂ ಶೀಘ್ರದಲ್ಲೇ ಸಿನಿಮಾವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಎಲ್ಲ ಯೋಜನೆಗಳನ್ನು ರೂಪಿಸಿದ್ದೇವೆ’ ಎಂದರು.‘ಇದರ ಜೊತೆಗೆ ಮತ್ತೊಂದು ಕಥೆಯ ಕೆಲಸವೂ ಅಂತಿಮ ಹಂತದಲ್ಲಿದೆ. ಈ ವರ್ಷಾಂತ್ಯದಲ್ಲಿ ಒಂದು ಹೊಸ ಪ್ರಾಜೆಕ್ಟ್ ಘೋಷಣೆಯಾಗಲಿದ್ದು, 2027ರ ಆರಂಭದಲ್ಲೇ ಅದರ ಚಿತ್ರೀಕರಣ ಆರಂಭವಾಗಲಿದೆ.’‘ನನಗೆ ‘ಹೊಂಬಾಳೆ’ ಒಂದು ರೀತಿಯಲ್ಲಿ ಮಾತೃಸಂಸ್ಥೆಯಂತೆ. ನನ್ನ ಕನಸುಗಳಿಗೆ ಜೊತೆ ನಿಂತ ಸಂಸ್ಥೆ ಅದು. ಅವರೊಂದಿಗಿನ ಪಯಣ ಪರಸ್ಪರ ಗೌರವ, ನಂಬಿಕೆ ಮತ್ತು ವಿಶ್ವಾಸದ ಮೇಲೆ ಕಟ್ಟಿಕೊಂಡಿರುವಂತಹದ್ದು. ಅದಕ್ಕಾಗಿಯೇ ಈ ಜೊತೆಯಾಟ ಮುಂದುವರಿಯುತ್ತಿದೆ’ ಎಂದು ಸಂತೋಷ್ ಆನಂದರಾಮ್ ಹೇಳಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260731-51-155793571