ಅಜಿಂಕ್ಯ ಎಂಬ ಸಮಚಿತ್ತದ ಬೆಳಕು
ಬೆಂಗಳೂರು: ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆ ದಿನ ಭಾರತ ತಂಡದ ಎಲ್ಲ ಆಟಗಾರರು ತಲೆತಗ್ಗಿಸಿಕೊಂಡು ಪೆವಿಲಿಯನ್ ಸೇರಿದ್ದರು. ಆಸ್ಟ್ರೇಲಿಯಾ ಎದುರಿನ ಟೆಸ್ಟ್ನಲ್ಲಿ ಹೀನಾಯ ಸೋಲಿನ ನಂತರ ನಾಯಕ ವಿರಾಟ್ ಕೊಹ್ಲಿ ಅವರು ‘ಪಿತೃತ್ವ ರಜೆ’ ತೆಗೆದುಕೊಂಡು ತವರಿಗೆ ಮರಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರ ಆಕ್ರೋಶ ಸುನಾಮಿಯಾಗಿತ್ತು!ಅವತ್ತು ನಡೆದಿದ್ದ ಟೆಸ್ಟ

ಬೆಂಗಳೂರು: ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆ ದಿನ ಭಾರತ ತಂಡದ ಎಲ್ಲ ಆಟಗಾರರು ತಲೆತಗ್ಗಿಸಿಕೊಂಡು ಪೆವಿಲಿಯನ್ ಸೇರಿದ್ದರು. ಆಸ್ಟ್ರೇಲಿಯಾ ಎದುರಿನ ಟೆಸ್ಟ್ನಲ್ಲಿ ಹೀನಾಯ ಸೋಲಿನ ನಂತರ ನಾಯಕ ವಿರಾಟ್ ಕೊಹ್ಲಿ ಅವರು ‘ಪಿತೃತ್ವ ರಜೆ’ ತೆಗೆದುಕೊಂಡು ತವರಿಗೆ ಮರಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರ ಆಕ್ರೋಶ ಸುನಾಮಿಯಾಗಿತ್ತು!ಅವತ್ತು ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ತಂಡವು ಎರಡನೇ ಇನಿಂಗ್ಸ್ನಲ್ಲಿ ಕೇವಲ 36 ರನ್ಗಳಿಗೆ ಕುಸಿದಿತ್ತು. ಅತ್ಯಂತ ಕಳಪೆ ಬ್ಯಾಟಿಂಗ್ ದಾಖಲೆಯನ್ನು ಮಾಡಿತ್ತು. ಅದರಿಂದಾಗಿ ಸರಣಿಯ ಉಳಿದ 3 ಪಂದ್ಯಗಳಲ್ಲಿ ಭಾರತ ಗೆಲ್ಲುವುದು ದೂರದ ಮಾತು ಎಂಬ ವ್ಯಂಗ್ಯಗಳು ಸಾಲುಗಟ್ಟಿದ್ದವು. ಅಂತಹ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಹೊಣೆ ಅಜಿಂಕ್ಯ ರಹಾನೆಯ ಹೆಗಲೇರಿತ್ತು. ಆದರೆ ಅವರು ನಿರೀಕ್ಷೆಗೂ ಮೀರಿದ ಐತಿಹಾಸಿಕ ಸರಣಿ ಜಯದ ಸಾಧನೆಯನ್ನು ಮಾಡಿದರು. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅಜಿಂಕ್ಯ ಶತಕ ಗಳಿಸುವ ಮೂಲಕ ತಂಡದ ಉಳಿದ ಆಟಗಾರರಲ್ಲಿ ಹೊಸ ಹುರುಪು ತುಂಬಿದರು. ಆ ಪಂದ್ಯದಲ್ಲಿ ಜಯಿಸಿದ ಭಾರತ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. ಇನ್ನುಳಿದ ಎರಡು ಟೆಸ್ಟ್ಗಳಲ್ಲಿ ಒಂದು ರೋಚಕ ಡ್ರಾ ಮತ್ತೊಂದು ಅದ್ಭುತ ಗೆಲುವು ಸಾಧಿಸಿದ ಭಾರತ 2–1ರಿಂದ ಸರಣಿ ಜಯಿಸಿತು. ಆ ಸರಣಿಯಲ್ಲಿ ಅಜಿಂಕ್ಯ ತೋರಿದ ನಾಯಕತ್ವದ ಗುಣಗಳು ಕ್ರಿಕೆಟ್ ಪುಸ್ತಕದ ಭಾಗವಾಗಿ ಯುವಪೀಳಿಗೆಗೆ ಪ್ರೇರಣೆಯಾಗಲು ಅರ್ಹವಾಗಿವೆ. ಆಸ್ಟ್ರೇಲಿಯಾ ಪಿಚ್ಗಳಲ್ಲಿ ಬೌನ್ಸರ್ಗಳಿಗೆ ಪೆಟ್ಟು ತಿಂದ ಬ್ಯಾಟರ್ಗಳ ಮನೋಬಲ ಕುಸಿಯದಂತೆ ನೋಡಿಕೊಂಡರು. ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಟಿ. ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಅನುಭವಿಗಳಲ್ಲದ ಬೌಲರ್ಗಳನ್ನು ಸಮಯೋಚಿತವಾಗಿ ನಿಯೋಜನೆ ಮಾಡಿದ್ದ ಅವರ ಚಾಕಚಕ್ಯತೆ ಅಮೋಘವಾಗಿತ್ತು.ಮುಂಬೈಗೆ ಮರಳಿದ ಅಜಿಂಕ್ಯ ಅವರ ನಿವಾಸವಿರುವ ಅಪಾರ್ಟ್ಮೆಂಟ್ನಲ್ಲಿ ಹಬ್ಬದ ವಾತಾವರಣ. ಕಾಂಗರೂ ವಿನ್ಯಾಸದ ಕೇಕ್ ಸಿದ್ಧವಾಗಿತ್ತು. ಪತ್ನಿ, ಮಗುವಿನೊಂದಿಗೆ ಅಜಿಂಕ್ಯ ತಮ್ಮ ಎಂದಿನ ಶಾಂತಚಿತ್ತದ ಮುಖಭಾವ, ಮುಗುಳ್ನಗೆಯೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡರು. ಆದರೂ ಈ ಸರಣಿಯ ನಂತರ ಅವರಿಗೆ ಸಿಕ್ಕ ಅವಕಾಶಗಳು ಕಡಿಮೆ. ಕೇವಲ 16 ಟೆಸ್ಟ್ಗಳಲ್ಲಿ ಮಾತ್ರ ಅವರು ಆಡಿದರು. ಅದರಲ್ಲಿ ನಾಲ್ಕು ಅರ್ಧಶತಕ, ಒಂದು ಸತಕ ದಾಖಲಿಸಿದ್ದರು. 2023ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಅವರ 89 ರನ್ಗಳ ಇನಿಂಗ್ಸ್ ಸ್ಮರಣೀಯವಾಗಿತ್ತು. ಆದರೂ ಅದರ ನಂತರ ಅವರನ್ನು ಆಯ್ಕೆದಾರರು ಪರಿಗಣಿಸಲೇ ಇಲ್ಲ. ಮಧ್ಯಮಕ್ರಮಾಂಕದ ಬ್ಯಾಟರ್ ಮತ್ತು ಚುರುಕಿನ ಫೀಲ್ಡರ್ ಆಗಿ ತಂಡದ ಗೆಲುವುಗಳಿಗೆ ಹಲವು ಬಾರಿ ಕಾಣಿಕೆ ನೀಡಿದ್ದಾರೆ. ಗೆದ್ದಾಗ, ಶತಕ ಹೊಡೆದಾಗ, ವಿಕೆಟ್ ಪಡೆದಾಗ ಮುಗಿಲೆತ್ತರಕ್ಕೆ ಹಾರಿ ಸಂಭ್ರಮಿಸುವ ಜಾಯಮಾನ ಅವರದ್ದಲ್ಲ. ಸೋತಾಗ ಕುಗ್ಗಿ ನೆಲಕಚ್ಚುವ ವ್ಯಕ್ತಿತ್ವವೂ ಅವರಿಗಿಲ್ಲ. ಯಾವಾಗಲೂ ಸಮಚಿತ್ತದ ಭಾವ ಭಂಗಿ ಅವರದ್ದು. 2013ರಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ಅಜಿಂಕ್ಯ ಅವರ ಹಲವು ಇನಿಂಗ್ಸ್ಗಳು ಸ್ಮರಣೀಯವಾಗಿದೆ. ಅದರಲ್ಲೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪಿಚ್ಗಳಲ್ಲಿಯೇ ಅವರು ಹೆಚ್ಚು ರನ್ ಗಳಿಸಿರುವುದು ವಿಶೇಷ. ಆದರೆ ಮಹೇಂದ್ರಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್. ಅಶ್ವಿನ್ ಅವರ ಜನಪ್ರಿಯತೆಯ ಅಬ್ಬರದಲ್ಲಿ ಅಜಿಂಕ್ಯ ತೆರೆಮರೆಯಲ್ಲಿಯೇ ಉಳಿದುಬಿಟ್ಟರು. ಐಪಿಎಲ್ನಲ್ಲಿಯೂ ಮಿಂಚಿದರು. ದೇಶಿ ಕ್ರಿಕೆಟ್ನಲ್ಲಿ ಸಿಕ್ಕ ಅವಕಾಶಗಳಲ್ಲಿಯೂ ಅಜಿಂಕ್ಯ ತಮ್ಮ ಪೂರ್ಣ ಸಾಮರ್ಥ್ಯ ಮೆರೆದರು. 2023-24ರ ಋತುವಿನಲ್ಲಿ ಅಜಿಂಕ್ಯ ನಾಯಕತ್ವದಲ್ಲಿ ಮುಂಬೈ ರಣಜಿ ಕಿರೀಟ ಧರಿಸಿತು. ಶಾಂತಸ್ವಭಾವಿಯಾದರೂ ನಿಷ್ಠುರ ನಾಯಕನಾಗಿಯೂ ಅಜಿಂಕ್ಯ ಗಮನ ಸೆಳೆದಿದ್ದರು. ದುಲೀಪ್ ಟ್ರೋಫಿಯ ಪಂದ್ಯದಲ್ಲಿ ಪಶ್ಚಿಮ ವಲಯದ ನಾಯಕರಾಗಿದ್ದ ಅಜಿಂಕ್ಯ ತಮ್ಮ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಅಶಿಸ್ತಿನ ವರ್ತನೆಯನ್ನು ಖಂಡಿಸಿದ್ದರು. ಯಶಸ್ವಿಯನ್ನು ಮೈದಾನದಿಂದ ಹೊರಗೂ ಕಳಿಸಿದ್ದರು. ದಿಟ್ಟ ನಾಯಕತ್ವದ ಗುಣಗಳಿರುವ ಸಭ್ಯ ಆಟಗಾರನಾಗಿದ್ದ ಅಜಿಂಕ್ಯ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಮನ್ನಣೆ ಸಿಕ್ಕಿತೆ ಹಾಗೂ ತಕ್ಕ ಅವಕಾಶಗಳು ದೊರೆತವೇ ಎಂಬ ಪ್ರಶ್ನೆಗಳು ಸದಾಕಾಲ ಕ್ರಿಕೆಟ್ ಪ್ರಿಯರ ಮನದಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತವೆ. ಮೆಲ್ಬರ್ನ್ ಟೆಸ್ಟ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಅಜಿಂಕ್ಯ ರಹಾನೆಆಸ್ಟ್ರೇಲಿಯಾ ಎದುರಿನ ಸರಣಿ ಗೆದ್ದು ಬಂದಾಗ ಅಜಿಂಕ್ಯ ರಹಾನೆ ಅವರಿಗೆ ತಮ್ಮ ವಸತಿ ಸಮುಚ್ಚಯದಲ್ಲಿ ಅದ್ದೂರಿ ಸ್ವಾಗತ ದೊರೆತಿತ್ತು ಅಪ್ಪನ ದಿಟ್ಟ ನಿರ್ಧಾರ ಅಮ್ಮನ ಬೇಬಿ ಸಿಟಿಂಗ್ ಅಹಮದ್ ನಗರ ಜಿಲ್ಲೆಯ ಆಶ್ವಿ ಖುರ್ದ್ ಎಂಬ ಗ್ರಾಮದಲ್ಲಿ ಜನಿಸಿದವರು ಅಜಿಂಕ್ಯ ರಹಾನೆ. ತಂದೆ ಮಧುಕರ್ ಅವರಿಗೆ ಮಗನನ್ನು ಕ್ರಿಕೆಟಿಗನನ್ನಾಗಿ ರೂಪಿಸುವ ಆಸೆ. ಅದಕ್ಕಾಗಿ ಒಂದು ಸಾಧಾರಣ ಕ್ಲಬ್ಗೆ ತರಬೇತಿಗಾಗಿ ಸೇರಿಸಿದರು. ಅದಕ್ಕಾಗಿ ಕುಟುಂಬವನ್ನು ಡೊಂಬಿವಿಲಿಗೆ ಸ್ಥಳಾಂತರಿಸಿದರು. ಆದರೆ ಅಲ್ಲಿಂದ ಕ್ರಿಕೆಟ್ ಅಕಾಡೆಮಿಗೆ 7 ವರ್ಷ ವಯಸ್ಸಿನ ಅಜಿಂಕ್ಯ ಅವರು ಲೋಕಲ್ ಟ್ರೈನ್ ಮೂಲಕ ಪ್ರಯಾಣಿಸಬೇಕಿತ್ತು. ಅಜಿಂಕ್ಯ ಒಬ್ಬರೇ ಪ್ರಯಾಣ ಮಾಡುವುದನ್ನು ಕಲಿಯಲಿ ಎಂದು ಮಧುಕರ್ ದಿಟ್ಟ ನಿರ್ಧಾರ ಮಾಡಿ ಹಾಗೇಯೆ ರೂಢಿಸಿದರು. ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೇ ಇದ್ದರೂ ಕ್ರಿಕೆಟ್ ಕಲಿಕೆಗೆ ಅಡ್ಡಿಯಾಗದಂತೆ ನೋಡಿಕೊಂಡರು. ಅಜಿಂಕ್ಯ ಅವರ ತಾಯಿ ಸುಜಾತಾ ಅವರು ಬೇಬಿ ಸಿಟಿಂಗ್ ಮಾಡಿಕೊಂಡು ಅಕ್ಕಪಕ್ಕದ ಮನೆಯ ಮಕ್ಕಳ ಆರೈಕೆ ಮಾಡಿ ಅಲ್ಪಸ್ವಲ್ಪ ಹಣ ಗಳಿಸುತ್ತಿದ್ದರು. ‘ನಾನು ಇವತ್ತು ಏನೇ ಇದ್ದರೂ ಅಪ್ಪ ಅಮ್ಮನ ತ್ಯಾಗ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ. ಏಳು ವರ್ಷದ ಬಾಲಕ ಸ್ವತಂತ್ರವಾಗಿ ಬದುಕುವುದನ್ನು ಕಲಿಯಲಿ ಎಂಬ ಅಪ್ಪ ಮಾಡಿದ್ದ ತಂತ್ರ ಅಮ್ಮನ ಕಷ್ಟದ ದಿನಗಳನ್ನು ನಾನು ಮರೆತಿಲ್ಲ’ ಎಂದು ಈಚೆಗಷ್ಟೇ ಅಜಿಂಕ್ಯ ಅವರು ‘ಬಿಬಿಸಿ ಸ್ಫೋರ್ಟ್ಸ್’ ಸಂದರ್ಶನದಲ್ಲಿ ಹೇಳಿದ್ದರು. ತಮ್ಮ ಬಾಲ್ಯದ ಗೆಳತಿ ರಾಧಿಕಾ ದೋಪವಂಕರ್ ಅವರನ್ನು ಅಜಿಂಕ್ಯ ಮದುವೆಯಾಗಿದ್ದಾರೆ. ಈ ದಂಪತಿಗೆ ಒಬ್ಬ ಮಗಳು ಮಗ ಇದ್ದಾರೆ. ಎಲ್ಲ ಮಾದರಿಗೂ ಅಜಿಂಕ್ಯ ವಿದಾಯ ಭಾರತ ತಂಡದಲ್ಲಿ ಆಡಿದ್ದ ಅಜಿಂಕ್ಯ ರಹಾನೆ ಅವರು ಎಲ್ಲ ಮಾದರಿಯ ಕ್ರಿಕೆಟ್ಗೂ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಂದೇಶ ಹಾಕಿರುವ ಅವರು ‘ಜೀವನದಲ್ಲಿ ಎಲ್ಲದಕ್ಕೂ ಒಂದು ಆರಂಭ ಮತ್ತು ಒಂದು ಅಂತ್ಯ ಇರುತ್ತದೆ. ಇದು ಸತ್ಯ. ಆ ಸಮಯ ಬಂದಾಗ ಅದಕ್ಕೆ ಗೌರವ ನೀಡಬೇಕು ಮತ್ತು ಮುಂದೆ ಚಲಿಸಬೇಕು. ಬ್ಯಾಟಿಂಗ್ನಲ್ಲಿ ನಾನು ಸದಾ ಟೈಮಿಂಗ್ಗೆ ಹೆಚ್ಚು ಬೆಲೆ ಕೊಟ್ಟಿದ್ದೇನೆ. ಅದರ ಮಹತ್ವವನ್ನು ಚೆನ್ನಾಗಿ ಬಲ್ಲೆ. ಇವತ್ತು ನಾನು ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳುವ ಸಮಯ ಬಂದಿದೆ. ಅದನ್ನೇ ಈಗ ಘೋಷಿಸುತ್ತಿದ್ದೇನೆ’ ಎಂದಿದ್ದಾರೆ. 38 ವರ್ಷದ ರಹಾನೆ ಅವರು ವಿದಾಯ ಹೇಳಿದ ನಂತರ ಹಲವು ದಿಗ್ಗಜ ಕ್ರಿಕೆಟಿಗರು ಅಭಿನಂದಿಸಿದ್ದಾರೆ. ‘ಬ್ಯಾಟಿಂಗ್ನಲ್ಲಿ ನನ್ನ ಅಚ್ಚುಮೆಚ್ಚಿನ ಜೊತೆಗಾರ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ‘ಹೆಮ್ಮೆ ಪಡುವಂತಹ ಮತ್ತು ಸಾರ್ಥಕವಾದ ವೃತ್ತಿಜೀವನ ಅಜಿಂಕ್ಯ ಅವರದ್ದು’ ಎಂದು ಬ್ಯಾಟರ್ ಚೇತೇಶ್ವರ್ ಪೂಜಾರ ಬಣ್ಣಿಸಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಅಜಿಂಕ್ಯ ಸಾಧನೆಯನ್ನು ಗುಣಗಾನ ಮಾಡಿದ್ದಾರೆ.