ಧರ್ಮಸ್ಥಳ ಪ್ರಕರಣ: ಸರ್ಕಾರಕ್ಕೆ ಶೀಘ್ರ ವರದಿ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಕುರಿತು ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಅಂತಿಮ ವರದಿ ಸಿದ್ದಗೊಳಿಸಿದ್ದು ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿದೆ.‘ಈ ಪ್ರಕರಣದಲ್ಲಿ ನಮ್ಮ ಕೆಲಸ ಮುಗಿದಿದೆ. ತನಿಖೆ ಪೂರ್ಣಗೊಂಡಿದೆ. ಇನ್ನು ಏನೂ ಉಳಿದಿಲ್ಲ ಎಂಬುದಾಗಿ ನ್ಯಾಯಾಲಯಕ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಕುರಿತು ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಅಂತಿಮ ವರದಿ ಸಿದ್ದಗೊಳಿಸಿದ್ದು ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿದೆ.‘ಈ ಪ್ರಕರಣದಲ್ಲಿ ನಮ್ಮ ಕೆಲಸ ಮುಗಿದಿದೆ. ತನಿಖೆ ಪೂರ್ಣಗೊಂಡಿದೆ. ಇನ್ನು ಏನೂ ಉಳಿದಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ’ ಎಂದು ಎಸ್ಐಟಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ತನಿಖೆಯ ಸಂದರ್ಭದಲ್ಲಿ ಕಲೆ ಹಾಕಿದ ಮಾಹಿತಿಗಳ ಆಧಾರದಲ್ಲಿ ಹಲವು ಆಯಾಮಗಳಲ್ಲಿ ಅಂತಿಮ ವರದಿ ಸಿದ್ಧಪಡಿಸಲಾಗಿದೆ. ಈಗಾಗಲೇ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ತನಿಖೆಯ ಪ್ರಮುಖ ಅಂಶಗಳನ್ನು ಬಿಂಬಿಸಲಾಗಿದೆ. ಅಂತಿಮ ವರದಿಯಲ್ಲಿ ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಪೂರಕ ಮಾಹಿತಿಗಳು ಇವೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಲಭಿಸಿದ ಮಾಹಿತಿ, ಡಿಜಿಟಲ್ ವಿಧಿವಿಜ್ಞಾನ ಸಾಕ್ಷ್ಯಗಳು, ಹೆಚ್ಚುವರಿ ಸಾಕ್ಷಿಗಳ ಹೇಳಿಕೆಗಳು, ಆಡಿಯೊ ಮತ್ತು ವಿಡಿಯೊ ರೆಕಾರ್ಡಿಂಗ್, ದಾಖಲೆಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಇತರ ಪೂರಕ ಅಂಶಗಳು ವರದಿಗೆ ಬಲ ತುಂಬಿವೆ ಎಂದು ಅಧಿಕಾರಿ ಹೇಳಿದರು.ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟೆಣ್ಣನವರ, ಟಿ.ಜಯಂತ್ ಮತ್ತು ಸಾಕ್ಷಿ ದೂರುದಾರ ಚಿನ್ನಯ್ಯ ಅವರ ಹೇಳಿಕೆಗಳ ಧ್ವನಿಮುದ್ರಣವೂ ವರದಿಯಲ್ಲಿದೆ. 2023ರ ಭಾರತೀಯ ನಾಗರಿಕ ಸಂಹಿತೆಯ 35(3) ಸೆಕ್ಷನ್ ಅಡಿಯಲ್ಲಿ ನೋಟಿಸ್ ಜಾರಿ ಮಾಡಿ ಈ ಮೂವರಿಂದ ಮಾಹಿತಿ ಪಡೆದು ಕೊಳ್ಳಲಾಗಿತ್ತು. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯಾ ಅವರ ಮಾವ ವಿಠ್ಠಲ ಗೌಡ ತಲೆಮರೆಸಿಕೊಂಡಿದ್ದ ಕಾರಣ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಲಾಗಿದೆ. ‘ಕೊಲೆ ಮಾಡಿ ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಧರ್ಮಸ್ಥಳದ ವಿವಿಧ ಕಡೆಗಳಲ್ಲಿ ಶೋಧ ನಡೆಸಿದ ಸಂದರ್ಭದಲ್ಲಿ ತರೆಬುರುಡೆಯ ತುಂಡುಗಳು, ಎಲುಬು, ಹಲ್ಲು ಸಿಕ್ಕಿದ್ದವು. ಶಿಥಿಲಗೊಂಡಿರುವ ಕಾರಣ ಇವುಗಳನ್ನು ನಾಪತ್ತೆಯಾದವರ ಗುರುತಿನೊಂದಿಗೆ ತಾಳೆ ಮಾಡುವುದು ಕಷ್ಟಸಾಧ್ಯವಾಗಿದೆ. ಅನೇಕ ಅಸ್ಥಿಗಳನ್ನು ಒಟ್ಟಾಗಿ ಕೊಟ್ಟರೆ ಪ್ರತಿಯೊಂದರ ಗುರುತು ಪತ್ತೆ ಮಾಡುವುದು ಸವಾಲಿನ ಕೆಲಸ. ತುಂಬ ಸಮಯ ವ್ಯಯಿಸಿ ತನಿಖೆ ಮಾಡಿದರೂ ಬಹಳ ಅಸ್ಥಿಗಳ ಗುರುತು ಸಿಗುವುದೂ ಕಷ್ಟ. ಆದ್ದರಿಂದ ತನಿಖೆಗೆ ಇತಿಶ್ರೀ ಹಾಡಲು ನಿರ್ಧರಿಸಲಾಗಿದೆ’ ಎಂದು ಈ ಅಧಿಕಾರಿ ವಿವರಿಸಿದರು.