ಪಿಎಂ–ಕಿಸಾನ್: 5 ವರ್ಷ ವಿಸ್ತರಣೆ
ನವದೆಹಲಿ: ರೈತರಿಗೆ ವಾರ್ಷಿಕ ₹6 ಸಾವಿರ ಆರ್ಥಿಕ ನೆರವು ಒದಗಿಸುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ–ಕಿಸಾನ್) ಯೋಜನೆಯನ್ನು 2030–31ರ ಆರ್ಥಿಕ ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ. ಈ ಅವಧಿಯಲ್ಲಿ ಯೋಜನೆಗಾಗಿ ಸರ್ಕಾರವು ₹3.15 ಲಕ್ಷ ಕೋಟಿ ವೆಚ್ಚ ಮಾಡಲಿದೆ. ‘ರೈತರಿಗೆ ಹಣಕಾಸು ನೆರವು ನೀಡ

ನವದೆಹಲಿ: ರೈತರಿಗೆ ವಾರ್ಷಿಕ ₹6 ಸಾವಿರ ಆರ್ಥಿಕ ನೆರವು ಒದಗಿಸುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ–ಕಿಸಾನ್) ಯೋಜನೆಯನ್ನು 2030–31ರ ಆರ್ಥಿಕ ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ. ಈ ಅವಧಿಯಲ್ಲಿ ಯೋಜನೆಗಾಗಿ ಸರ್ಕಾರವು ₹3.15 ಲಕ್ಷ ಕೋಟಿ ವೆಚ್ಚ ಮಾಡಲಿದೆ. ‘ರೈತರಿಗೆ ಹಣಕಾಸು ನೆರವು ನೀಡುವ ಈ ಯೋಜನೆಯನ್ನು ಐದು ವರ್ಷ ವಿಸ್ತರಿಸುವ (2026–27ರಿಂದ 2030–31ರವರೆಗೆ) ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಅನುಮೋದನೆ ನೀಡಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ.ಯೋಜನೆಯ ವಿಸ್ತರಣೆಯಿಂದ ಕೃಷಿ ಉತ್ಪಾದನೆ ಹೆಚ್ಚಲಿದ್ದು, ಗ್ರಾಮೀಣ ಆರ್ಥಿಕತೆಯು ಸದೃಢಗೊಳ್ಳಲಿದೆ ಎಂದು ಹೇಳಿದ್ದಾರೆ. 2019ರ ಫೆಬ್ರುವರಿಯಲ್ಲಿ ಪಿಎಂ–ಕಿಸಾನ್ ಯೋಜನೆಯನ್ನು ಆರಂಭಿಸಲಾಯಿತು. ಪ್ರತಿ ಅರ್ಹ ಫಲಾನುಭವಿಗೆ ವಾರ್ಷಿಕ ₹6 ಸಾವಿರ ನೀಡಲಾಗುತ್ತದೆ. ಈ ಹಣವನ್ನು ಫಲಾನುಭವಿಗಳ ಖಾತೆಗೆ ಮೂರು ಸಮಾನ ಕಂತುಗಳಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತದೆ.ಯೋಜನೆಯ ಅಡಿ ಇಲ್ಲಿಯವರೆಗೆ 23 ಕಂತುಗಳ ಮೂಲಕ ₹4.47 ಲಕ್ಷ ಕೋಟಿಯನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಪೈಕಿ ₹1.06 ಲಕ್ಷ ಕೋಟಿ ಮೊತ್ತವನ್ನು ಮಹಿಳಾ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಪ್ರತಿ ನಾಲ್ವರು ಫಲಾನುಭವಿಗಳಲ್ಲಿ ಒಬ್ಬರು ಮಹಿಳೆ ಇದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.