ಸಿನಿ ಸಿಪ್: ಬೆಳ್ಳಿಪರದೆಯ ತುಂಬೆಲ್ಲ ಎಷ್ಟೊಂದು ರಾವಣರು
ನಿತೀಶ್ ತಿವಾರಿ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಎರಡು ಭಾಗಗಳಲ್ಲಿ ‘ರಾಮಾಯಣ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೇ ವರ್ಷಾಂತ್ಯದ ಹೊತ್ತಿಗೆ ಮೊದಲ ಭಾಗ ತೆರೆಕಾಣಲಿದೆ. ಮೊದಲ ಭಾಗದ ಸಿನಿಮಾಗೇ ಅಂದಾಜು ₹900 ಕೋಟಿ ಬಂಡವಾಳ ಹೂಡಿದ್ದಾರೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ನಟ ಯಶ್ ಅವರ ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್, ನಿರ್ಮಾಪಕರಾದ ಜಿತೇಂ
ನಿತೀಶ್ ತಿವಾರಿ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಎರಡು ಭಾಗಗಳಲ್ಲಿ ‘ರಾಮಾಯಣ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೇ ವರ್ಷಾಂತ್ಯದ ಹೊತ್ತಿಗೆ ಮೊದಲ ಭಾಗ ತೆರೆಕಾಣಲಿದೆ. ಮೊದಲ ಭಾಗದ ಸಿನಿಮಾಗೇ ಅಂದಾಜು ₹900 ಕೋಟಿ ಬಂಡವಾಳ ಹೂಡಿದ್ದಾರೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ನಟ ಯಶ್ ಅವರ ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್, ನಿರ್ಮಾಪಕರಾದ ಜಿತೇಂದ್ರ ಕುಲಕರ್ಣಿ ಹಾಗೂ ಚೇತನ್ ದೇವೋಲೇಕರ್ ಈ ಸಿನಿಮಾಗೆ ದೊಡ್ಡ ಮೊತ್ತದ ಹಣ ತೊಡಗಿಸಿರುವುದು ಮಾರುಕಟ್ಟೆ ವಿಸ್ತರಣೆಯ ದೃಷ್ಟಿಯಿಂದ ಮಹತ್ವದ್ದು.ಬ್ರಾಹ್ಮಿ ಮುಹೂರ್ತದಲ್ಲಿ 'ರಾಮಾಯಣ' ಟ್ರೇಲರ್ ಬಿಡುಗಡೆ: ರಾವಣನಾಗಿ ಅಬ್ಬರಿಸಿದ ಯಶ್ರಾಮಾಯಣದಲ್ಲಿ ‘ರಾವಣ’ನದ್ದೇ ಅಬ್ಬರ: ಯಶ್ ದೃಶ್ಯವೈಭವಕ್ಕೆ ಮೆಚ್ಚುಗೆ ಕಳೆದ ವಾರದ ‘ಸಿನಿ ಸಿಪ್’ನಲ್ಲಿ ರಾಮನ ಪಾತ್ರವನ್ನು ಜೀವಿಸಲು ಹಿಂದಿ ನಟ ರಣಬೀರ್ ಕಪೂರ್ ಯಾವ ರೀತಿ ತಯಾರಾಗಿದ್ದರು ಎನ್ನುವುದನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿತ್ತು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾವಣನ ಪಾತ್ರದಲ್ಲಿ ಯಶ್ ವಿಜೃಂಭಿಸಿದ್ದಾರೆ. ಅವರನ್ನು ಮೆಚ್ಚಿಕೊಂಡು ಅಭಿಮಾನಿಗಳು ಅದಾಗಲೇ ರೀಲ್ಸ್ ಮಾಡಲಾರಂಭಿಸಿದ್ದಾರೆ. ಅವರ ಪತ್ನಿ ರಾಧಿಕಾ ಕೂಡ ರಾವಣನ ಪ್ರತಿಮೆಯ ಎದುರು ಫೋಟೊ ತೆಗೆಸಿಕೊಂಡು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಣಬೀರ್ ಮಾಡಿದ ರಾಮನ ಪಾತ್ರಕ್ಕಿಂತ ಯಶ್ ಕಾಣಿಸಿಕೊಂಡಿರುವ ರಾವಣನ ಪಾತ್ರವೇ ಸೂಜಿಗಲ್ಲಿನಂತೆ ಟ್ರೈಲರ್ನಲ್ಲಿ ಕಂಡಿದೆ. ಸೀತಾ ಪಾತ್ರಧಾರಿ ಸಾಯಿ ಪಲ್ಲವಿ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತಗೊಳ್ಳುತ್ತಿವೆ. ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಇಂತಹ ಹಲವು ಆಯಾಮಗಳ ಚರ್ಚೆಯನ್ನು ಹುಟ್ಟುಹಾಕುವುದೇ ಪ್ರಚಾರದ ತಂತ್ರ. ಹೀಗಾಗಿ ಆ ಉದ್ದೇಶದಲ್ಲಿ ಚಿತ್ರತಂಡವು ಯಶಸ್ವಿಯಾಗಿದೆ.ರಾವಣನಾಗಿ ಯಶ್ ನಿಲುವು–ನೋಟ ನಿಮಗೂ ಇಷ್ಟವಾಗಿದ್ದರೆ, ಅದಕ್ಕೆ ಕಾರಣವೇನು ಎಂದು ಬರೆದು ತಿಳಿಸಿ.ರಾವಣನ ಅಬ್ಬರ, ರಾಮನ ತ್ಯಾಗ, ಸೀತೆಯ ಪ್ರೀತಿ... ನಿರೀಕ್ಷೆ ಹೆಚ್ಚಿಸಿದ ಟ್ರೇಲರ್‘ರಾಮಾಯಣ’ ಚಿತ್ರದ ತಾರಾಗಣ: ಯಾರು, ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ?‘ರಾಮಾಯಣ’ಕ್ಕೂ ಕನ್ನಡ ಚಿತ್ರರಂಗಕ್ಕೂ ಬಾದರಾಯಣ ಸಂಬಂಧ. ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ಕಾಲದಿಂದಲೂ ಅದರ ಕಥನಗಳೇ ದ್ರವ್ಯಗಳಾಗಿ ಪದೇಪದೇ ಒದಗಿಬಂದಿವೆ. ಎಲ್ಲ ಸಿನಿಮಾಗಳನ್ನು ಗಮನಿಸಿದಾಗ, ರಾಮನಿಗಿಂತ ರಾವಣನೇ ಬೆಳ್ಳಿತೆರೆಗೆ ಜನಪ್ರಿಯ ಎನ್ನುವ ಸಂಗತಿ ಸ್ಪಷ್ಟವಾಗುತ್ತದೆ.ಕನ್ನಡದ ಮೊದಲ ರಾವಣ‘ಸತಿ ಸುಲೋಚನಾ’ ಸಿನಿಮಾದಲ್ಲಿ ಆರ್. ನಾಗೇಂದ್ರ ರಾವ್ ಅವರು ರಾವಣನ ಪಾತ್ರದಲ್ಲಿ ಅಭಿನಯಿಸಿದ್ದರು. ಎಂ.ವಿ. ಸುಬ್ಬಯ್ಯ ನಾಯ್ಡು ಅವರು ಇಂದ್ರಜಿತು ಪಾತ್ರಕ್ಕೆ ಜೀವ ತುಂಬಿದ್ದರೆ, ರಾಮನ ಪಾತ್ರಧಾರಿ ಯಾರು ಎನ್ನುವುದನ್ನು ಬಹುತೇಕರು ನೆನಪಿಟ್ಟುಕೊಳ್ಳಲೇ ಇಲ್ಲ. ಯಾಕೆಂದರೆ, ಆ ಪಾತ್ರದಲ್ಲಿ ನಟಿಸಿದ್ದ ಡಿ.ಎನ್. ಮೂರ್ತಿ ರಾವ್ ಆಮೇಲೆ ಒಂದೂ ಸಿನಿಮಾದಲ್ಲಿ ಅಭಿನಯಿಸಲಿಲ್ಲ. ಗುಬ್ಬಿ ವೀರಣ್ಣನವರ ಕಂಪನಿ ನಾಟಕಗಳಲ್ಲಿ ದೊಡ್ಡ ಹೆಸರಾಗಿದ್ದ ಮೂರ್ತಿ ರಾವ್ ಅವರಿಗೆ ಬೆಳ್ಳಿತೆರೆ ಅದೇಕೋ ಒಲಿಯಲಿಲ್ಲ.ನಾಗೇಂದ್ರ ರಾವ್ ಆ ಸಿನಿಮಾದ ಗೀತೆಗಳಿಗೆ ಸ್ವರ ಸಂಯೋಜನೆಯನ್ನೂ ಮಾಡಿದ್ದರು. ನಿರ್ಮಾಣ ಉಸ್ತುವಾರಿಯಲ್ಲಿ ಕೂಡ ತೊಡಗಿಕೊಂಡಿದ್ದರು. ಕೇವಲ ₹40 ಸಾವಿರಕ್ಕೆ ತಯಾರಾಗಿದ್ದ ಸಿನಿಮಾ ‘ಸತಿ ಸುಲೋಚನಾ’.ಭಾರತೀಯ ಚಿತ್ರರಂಗವು 1950ರ ದಶಕದಲ್ಲಿ ಪೌರಾಣಿಕ ಚಿತ್ರಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿತ್ತು. 1958ರಲ್ಲಿ ತೆಲುಗಿನಲ್ಲಿ ಎಂ.ಎ. ವೇಣು ನಿರ್ಮಾಣದ ‘ಸಂಪೂರ್ಣ ರಾಮಾಯಣಂ’ ಸಿನಿಮಾ ತೆರೆಕಂಡಿತು. ಕೆ. ಸೋಮು ನಿರ್ದೇಶನದ ಈ ಸಿನಿಮಾದಲ್ಲಿ ಎನ್.ಟಿ. ರಾಮರಾವ್ ರಾಮನಾಗಿಯೂ, ಪದ್ಮಿನಿ ಸೀತೆಯ ಪಾತ್ರದಲ್ಲಿಯೂ ಅಭಿನಯಿಸಿದ್ದರು. ತಮಿಳು ನಟ ಟಿ.ಕೆ. ಭಗವತಿ ಅದರಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದರು.ಸಿನಿ ಸಿಪ್: ರಾಜ್ಕುಮಾರ್ ಯೋಗದಿಂದ ಆಲಿಯಾ ವ್ಯಾಯಾಮದವರೆಗೆ...ಸಿನಿ ಸಿಪ್: ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹೇಗಿತ್ತು?ಎರಡು ಸಲ ರಾವಣನಾದ ರಾಜ್ಕುಮಾರ್‘ಸಂಪೂರ್ಣ ರಾಮಾಯಣಂ’ ಸ್ಫೂರ್ತಿಯಿಂದ ಕನ್ನಡದಲ್ಲಿ ಅಂತಹ ಸಿನಿಮಾ ಮಾಡುವ ಬಯಕೆಗಳೇನೋ ರೆಕ್ಕೆ–ಪುಕ್ಕ ಮೂಡಿಸಿಕೊಂಡವು. ಆಗ ಡಬ್ಬಿಂಗ್ ಚಾಲ್ತಿಯಲ್ಲಿ ಇದ್ದುದರಿಂದ ಮೂಲ ಸಿನಿಮಾ ಡಬ್ ಆಗಿ ಕನ್ನಡಕ್ಕೆ ಬಂತಷ್ಟೆ. ಅದೇ ಸಂದರ್ಭದಲ್ಲಿ ಎ.ವಿ. ಮೇಯಪ್ಪನ್ ಅವರು ‘ಭೂಕೈಲಾಸ’ ಸಿನಿಮಾವನ್ನು ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ತಯಾರಿಸಲು ಮುಂದಾದರು. ತೆಲುಗಿನಲ್ಲಿ ಎನ್.ಟಿ.ಆರ್. ರಾವಣನ ಪಾತ್ರಧಾರಿ. ಕನ್ನಡದಲ್ಲಿ ರಾಜ್ಕುಮಾರ್ ಅವರಿಗೆ ಆ ಪಾತ್ರ ಒಲಿಯಿತು. ರಾಮನ ಪಾತ್ರವೇ ಇಲ್ಲದ ಆ ಸಿನಿಮಾ ಗೋಕರ್ಣ ಕ್ಷೇತ್ರದ ಸ್ಥಳ ಪುರಾಣವನ್ನು ಆಧರಿಸಿತ್ತು. ಆತ್ಮಲಿಂಗವನ್ನು ರಾವಣ ತರುವುದು ಕಥೆಯ ಹೂರಣ.ಮೈಸೂರಿನ ‘ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ಯು ಆಡುತ್ತಿದ್ದ ಅದೇ ಹೆಸರಿನ ನಾಟಕವನ್ನು ಸಿನಿಮಾಗೆ ಒಗ್ಗಿಸಿ ‘ಭೂಕೈಲಾಸ’ ತಯಾರಿಸಲಾಯಿತು. ತೆಲುಗಿನಲ್ಲಿ ‘ಭೂಕೈಲಾಸ್’ ಎಂಬ ಹೆಸರಿಟ್ಟರು.ರಾಜ್ಕುಮಾರ್ ರಾವಣನಾಗಿ, ಕಲ್ಯಾಣಕುಮಾರ್ ನಾರದನಾಗಿ, ಅಶ್ವತ್ಥ್ ಅವರು ಶಿವನಾಗಿ, ಬಿ. ಸರೋಜಾದೇವಿ ಪಾರ್ವತಿಯಾಗಿ ನಟಿಸಿದ ಚಿತ್ರದಲ್ಲಿ ಜಮುನಾ ಮಂಡೋದರಿಯಾಗಿ ಅಭಿನಯಿಸಿದರು. ಕೆ. ಶಂಕರ್ ನಿರ್ದೇಶಿಸಿದ ಈ ಸಿನಿಮಾದ ಅವಧಿಯು ನಿರೀಕ್ಷಿತ ಮಟ್ಟಕ್ಕೆ ಇರಲಿಲ್ಲ. ಟಿಕೆಟ್ಗೆ ಹಣ ಕೊಟ್ಟು ನೋಡುವ ಜನ ತಕರಾರು ತೆಗೆದರೆ ಕಷ್ಟ ಎಂದು ಯೋಚಿಸಿದಾಗ, ಚಿತ್ರತಂಡಕ್ಕೆ ಒಂದು ಉಪಾಯ ಹೊಳೆಯಿತು. ರಾಮನ ಪಾತ್ರ ಇಲ್ಲದೇ ಇದ್ದರೂ ಆತನ ಕುರಿತು ಒಂದು ಸುದೀರ್ಘ ಗೀತೆಯನ್ನು ಸಿನಿಮಾದಲ್ಲಿ ಅಳವಡಿಸಿದೆ ಹೇಗೆ ಎಂದು ಆಲೋಚಿಸಿದರು.ತೆಲುಗಿನಲ್ಲಿ ಹಾಡುಗಳನ್ನು ನರಸರಾಜು ಬರೆಯುತ್ತಿದ್ದರು. ಅವರು ಒಂದೇ ಹಾಡಿನಲ್ಲಿ ರಾಮಾಯಣದ ಅಷ್ಟೂ ಹೂರಣವನ್ನು ತರುವುದು ಸಾಧ್ಯವೇ ಇಲ್ಲ ಎಂದು ಕೈಯಾಡಿಸಿಬಿಟ್ಟರು. ಆದರೆ, ಕನ್ನಡದಲ್ಲಿ ಸಾಹಿತ್ಯ ಬರೆಯುತ್ತಿದ್ದ ಕು.ರಾ. ಸೀತಾರಾಮ ಶಾಸ್ತ್ರಿಗಳು ಆ ಸವಾಲನ್ನು ಸ್ವೀಕರಿಸಿ, ‘ರಾಮನ ಅವತಾರ ರಘುಕುಲ ಸೋಮನ ಅವತಾರ’ ಗೀತೆಯನ್ನು ಬರೆದರು. ಆರೂವರೆ ನಿಮಿಷದ ಈ ಹಾಡಿನಲ್ಲಿ ರೂಪಕಗಳ ಮೂಲಕವೇ ರಾಮಾಯಣದ ಸಾರವನ್ನು ಅವರು ತುಂಬಿಟ್ಟರು. ಆರ್. ಸುದರ್ಶನಂ, ಆರ್. ಗೋವರ್ಧನ್ ಸ್ವರ ಸಂಯೋಜನೆ ಮಾಡಿರುವ ಈ ಗೀತೆಯನ್ನು ಶೀರ್ಕಾಳಿ ಗೋವಿಂದರಾವ್ ಅವರು ಮನೋಜ್ಞವಾಗಿ ಹಾಡಿದ್ದಾರೆ. ‘ಪರಸತಿ ಬಯಕೆಯ ಸಂಹಾರ’ ಎಂದು ಹಾಡಿನ ಕೊನೆಯಲ್ಲಿ ಬರುವ ಸಾಲು ಲಂಕಾದಹನದ ಮೂಲಕಾರಣವನ್ನು ಸೊಗಸಾಗಿ ಬಣ್ಣಿಸುತ್ತದೆ. ಇವತ್ತಿಗೂ ಈ ಹಾಡು ರಾಮನವಮಿಯ ದಿನ ಹಳ್ಳಿಗಳಲ್ಲಿ ಅನುರಣಿಸುತ್ತದೆ. ನಾರದನ ಪಾತ್ರದ ಮೂಲಕ ಆ ಹಾಡನ್ನು ಹಾಡಿಸಿ, ಮುಂದೆ ಇಡೀ ರಾಮಾಯಣದ ಸಿನಿಮಾ ಮಾಡುವ ಉತ್ಸಾಹವನ್ನು ಆ ಚಿತ್ರತಂಡ ವ್ಯಕ್ತಪಡಿಸಿತ್ತು.‘ಭೂಕೈಲಾಸ’ ತೆರೆಕಂಡು ಎರಡು ವರ್ಷಗಳ ನಂತರ ‘ದಶಾವತಾರ’ ಸಿನಿಮಾ ಬಂತು. ಆ ಸಿನಿಮಾದಲ್ಲಿ ಕೂಡ ರಾಜ್ಕುಮಾರ್ ರಾವಣನ ಪಾತ್ರದಲ್ಲಿ ನಟಿಸಿದರು. ಹನ್ನೊಂದು ತಲೆಗಳನ್ನು ಹೊತ್ತ ಗೆಟಪ್ನಲ್ಲಿ ಒಂದು ದೃಶ್ಯದಲ್ಲಿ ಅವರು ಅಭಿನಯಿಸಿದ್ದರು. ಅಷ್ಟೂ ತಲೆಗಳನ್ನು ಹೊತ್ತು ನಿಂತು ಒಂದೇ ಟೇಕ್ನಲ್ಲಿ ದೃಶ್ಯವನ್ನು ಅಚ್ಚುಕಟ್ಟಾಗಿ ಮುಗಿಸಿದರಾದರೂ, ಭಾರ ಹೊತ್ತಿದ್ದರಿಂದ ಕಣ್ಣಿಗೆ ಕತ್ತಲೆ ಕವಿದು, ತಲೆ ಸುತ್ತಿಬಂದಂತಾಗಿ ಕುಸಿದಿದ್ದರು. ಕೆಲವೇ ನಿಮಿಷಗಳಲ್ಲಿ ಅವರು ಚೇತರಿಸಿಕೊಂಡು, ಮತ್ತೆ ಕೆಲಸದಲ್ಲಿ ನಿರತರಾಗಿದ್ದುದು ಅವರ ವೃತ್ತಿಪರತೆಗೆ ಸಾಕ್ಷಿ.ಸಿನಿ ಸಿಪ್: ಲೀಲಾವತಿಯ ಜಿಡ್ಡು ಚರ್ಮ; ಜಗ್ಗೇಶ್ ವಿದೇಶದಿಂದ ತಂದ ಲೋಷನ್ಸಿನಿ ಸಿಪ್: ‘ಕಣ್ಣಪ್ಪ’ನ ಕಾರಣಕ್ಕೆ ‘ರಾಜ್ಕುಮಾರ್’ ಆದ ಮುತ್ತುರಾಜ್ಜಿ.ವಿ. ಅಯ್ಯರ್ ಚಿತ್ರಕಥೆ ಬರೆದಿದ್ದ ‘ದಶಾವತಾರ’ ಸಿನಿಮಾವನ್ನು ಪಿ.ಜಿ. ಮೋಹನ್ ನಿರ್ದೇಶಿಸಿದ್ದರು. ಆ ಸಿನಿಮಾದಲ್ಲಿ ಒಬ್ಬರೇ ಕಲಾವಿದರು ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ರಾವಣನಾಗಿ ಅಷ್ಟೇ ಅಲ್ಲದೆ ಹಿರಣ್ಯಕಶಿಪು, ಶಿಶುಪಾಲನ ಪಾತ್ರದಲ್ಲಿ ರಾಜ್ಕುಮಾರ್ ಅಭಿನಯಿಸಿದ್ದರು. ಕಂಸ, ಹನುಮಂತ ಹಾಗೂ ಸೋಮಕಾಸುರನಾಗಿ ಉದಯ್ಕುಮಾರ್ ನಟಿಸಿದ್ದರು. ಆದವಾನಿ ಲಕ್ಷ್ಮೀದೇವಿ ಅವರು ಸೀತೆ, ರುಕ್ಮಿಣಿ, ಲಕ್ಷ್ಮಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ಕಯಾದು, ದ್ರೌಪದಿ, ಮಂಡೋದರಿ, ಲೀಲಾವತಿ, ರಾಧೆ, ಮೋಹಿನಿಯಾಗಿ ರಾಜಶ್ರೀ ಅಭಿನಯಿಸಿದ್ದರು. ಬಿ.ಎಸ್. ರಂಗಾ ಅವರ ವಿಕ್ರಮ್ ಪ್ರೊಡಕ್ಷನ್ಸ್ ಸಂಸ್ಥೆಯ ಸಾಹಸ ಇದಾಗಿತ್ತು.ದೇವರಾಜ್ ವರಸೆ2008ರಲ್ಲಿ ‘ಪ್ರಚಂಡ ರಾವಣ’ ಸಿನಿಮಾ ಕನ್ನಡದಲ್ಲಿ ತೆರೆಕಂಡಿತು. ಶ್ರೀನಿವಾಸ ಪ್ರಸಾದ್ ನಿರ್ದೇಶಿಸಿದ್ದ ಈ ಸಿನಿಮಾಗೆ ಲೋಕೇಶ್ ಎಂಬವರು ಬಂಡವಾಳ ಹೂಡಿದ್ದರು. ಸುಧಾರಾಣಿ ಮಂಡೋದರಿಯಾಗಿ ನಟಿಸಿದ್ದರು. ಅಮರ್ನಾಥ್, ಭರತ್ ಭಾಗವತರ್ ಪಾತ್ರವರ್ಗದಲ್ಲಿದ್ದ ಈ ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದವು. ಅದರಲ್ಲೂ ರಾವಣನ ಪಾತ್ರಕ್ಕೆ ಸಮರ್ಥ ರೀತಿಯಲ್ಲಿ ಜೀವ ತುಂಬಿದ್ದ ದೇವರಾಜ್ ಅವರನ್ನು ಜನರು ಮೆಚ್ಚಿಕೊಂಡಿದ್ದರು. ಜನಪ್ರಿಯ ಚೌಕಟ್ಟಿನ ಸಿನಿಮಾಗಳ ಕಾಲಕ್ಕೆ ಹೊರತೇ ಆಗಿದ್ದ ಈ ಪ್ರಯೋಗವು ನಿರೀಕ್ಷಿತ ಯಶಸ್ಸನ್ನು ಕಾಣಲಿಲ್ಲ.ಕಿರುತೆರೆಯ ಮೈಲುಗಲ್ಲು1987ರಲ್ಲಿ ‘ರಾಮಾಯಣ’ ಹಿಂದಿ ಧಾರಾವಾಹಿ ಪ್ರಸಾರವಾಯಿತು. ಆಗ ರಾವಣನ ಪಾತ್ರದಲ್ಲಿ ಅರವಿಂದ್ ತ್ರಿವೇದಿ ನಟಿಸಿದ್ದರು. ರಾವಣನ ಪಾತ್ರದ ಧಾರ್ಷ್ಟ್ಯ, ಜ್ಞಾನಾಭಿವ್ಯಕ್ತಿ, ಹಟಮಾರಿತನ ಎಲ್ಲವನ್ನೂ ಅವರು ಅನುಭವಿದಂತೆ ನಟಿಸಿದ್ದರು. ತಾಂತ್ರಿಕವಾಗಿ ಹಲವು ಅನುಕೂಲಗಳು ಇದ್ದ ಸಂದರ್ಭದಲ್ಲಿ ರಮಾನಂದ ಸಾಗರ್ ಅವರು ಅರವಿಂದ್ ತ್ರಿವೇದಿ ಅವರಿಂದ ಗಟ್ಟಿ ಅಭಿನಯ ತೆಗೆಸಿದರು. ಹೀಗಾಗಿ ರಾಮಾಯಣದ ಯಾವುದೇ ಪಾತ್ರವನ್ನು ಈಗ ಆ ಹೆಸರಿನ ಜನಪ್ರಿಯ ಧಾರಾವಾಹಿಯ ತಾರಾಬಳಗದೊಟ್ಟಿಗೆ ಹೋಲಿಸುವುದು ಸಾಮಾನ್ಯವಾಗಿಬಿಟ್ಟಿದೆ.ಗುಜರಾತಿ ಸಿನಿಮಾಗಳಲ್ಲಿ ಅಭಿನಯಿಸುತ್ತ, ರಾಜಕಾರಣದಲ್ಲೂ ಒಂದು ಕಾಲನ್ನಿಟ್ಟಿದ್ದ ಅರವಿಂದ್ ತ್ರಿವೇದಿ 2021ರಲ್ಲಿ ನಿಧನರಾದರು. ಈಗ ಅವರು ಇದ್ದಿದ್ದರೆ ಇಷ್ಟೆಲ್ಲ ರಾವಣರಲ್ಲಿ ಅವರಿಗೆ ಯಾರು ಇಷ್ಟ ಎಂದು ಕೇಳಬಹುದಿತ್ತು.ಎನ್.ಟಿ.ಆರ್, ರಾಜ್ಕುಮಾರ್, ದೇವರಾಜ್, ಅರವಿಂದ್ ತ್ರಿವೇದಿ ಇವರಲ್ಲಿ ನಿಮಗೆ ರಾವಣನ ಪಾತ್ರದಲ್ಲಿ ಯಾರು ಮೆಚ್ಚಾಗುತ್ತಾರೆ? ಬರೆದು, ತಿಳಿಸಿ.ಹೊಸಕಾಲದ ರಾವಣರು2023ರಲ್ಲಿ ತೆರೆಕಂಡ ‘ಆದಿಪುರುಷ್’ ಹಿಂದಿ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದರು. ಅವರ ನಟನಾ ಕೌಶಲಕ್ಕಿಂತ ಹೆಚ್ಚಾಗಿ ವಿಲಕ್ಷಣವಾಗಿದ್ದ ಅವರ ಪಾತ್ರದ ವೇಷ–ಭೂಷಣಗಳೇ ಚರ್ಚೆಗೆ ಒಳಗಾಗಿದ್ದವು.ಸೀತಾಪಹರಣ ಪ್ರಕರಣವನ್ನು ಆಧುನಿಕತೆಗೆ ಒಗ್ಗಿಸಿ ಮಣಿರತ್ನಂ 2010ರಲ್ಲಿ ‘ರಾವಣನ್’ ಸಿನಿಮಾ ನಿರ್ದೇಶಿಸಿದರು. ತಮಿಳಿನಲ್ಲಿ ರಾವಣನ ಗುಣವನ್ನು ಹೋಲುವ ಪಾತ್ರದಲ್ಲಿ ವಿಕ್ರಮ್ ನಟಿಸಿದರೆ, ಹಿಂದಿಯಲ್ಲಿ ಅಭಿಷೇಕ್ ಬಚ್ಚನ್ ಅದಕ್ಕೆ ಜೀವ ತುಂಬಿದ್ದರು. ಐಶ್ವರ್ಯಾ ರೈ ಸೀತೆಯನ್ನು ಹೋಲುವ ಪಾತ್ರದಲ್ಲಿ ಅಭಿನಯಿಸಿದ್ದರು.‘ಶ್ರೀ ರಾಮ ಪಟ್ಟಾಭಿಷೇಕಂ’ ತೆಲುಗು ಸಿನಿಮಾದಲ್ಲಿ ಎನ್.ಟಿ.ಆರ್ ಅವರು ರಾಮ, ರಾವಣ ಎರಡೂ ಪಾತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು.ಎಷ್ಟೆಲ್ಲ ಜನರು ಅಭಿನಯಿಸಿರುವ ರಾವಣನ ಪಾತ್ರದಲ್ಲಿ ಈಗ ಯಶ್ ನಟಿಸಿದ್ದಾರೆ. ಹೊಸಕಾಲದ ತಂತ್ರಜ್ಞಾನದ ಅನುಕೂಲಗಳನ್ನೆಲ್ಲ ಬಳಸಿಕೊಂಡು ತಯಾರಾಗುವ ಈ ಸಿನಿಮಾ ರಾವಣನ ಪಾತ್ರದ ವಿಷಯದಲ್ಲಿ ಮೈಲುಗಲ್ಲಾಗುತ್ತದೆ ಎಂದು ನಿಮಗೆ ಅನಿಸುತ್ತದೆಯೇ? ನಮಗೆ ಬರೆದು, ತಿಳಿಸಿ.ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...ಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...ಸಿನಿ ಸಿಪ್: ಶಿವಾಜಿ ಒಲ್ಲದ ‘ಕಸ್ತೂರಿ ನಿವಾಸ’ ಗೆಲ್ಲಿಸಿದ ರಾಜ್ ಅಭಿನಯಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?