ಮನೆ ಕಟ್ಟದಿದ್ದರೆ ನಿವೇಶನ ವಾಪಸ್: ಸಿ.ಎಂ ಡಿಕೆಶಿ
ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು, ಮಂಡಳಿ, ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ ಐದು ವರ್ಷಗಳ ಒಳಗೆ ಮನೆ ಕಟ್ಟದಿದ್ದರೆ, ಅಂತಹ ನಿವೇಶನಗಳನ್ನು ವಾಪಸ್ ಪಡೆಯುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಹೆಬ್ಬಾಳ ಜಂಕ್ಷನ್ ಬಳಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಶನಿವಾರ ಚಾಲನ

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು, ಮಂಡಳಿ, ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ ಐದು ವರ್ಷಗಳ ಒಳಗೆ ಮನೆ ಕಟ್ಟದಿದ್ದರೆ, ಅಂತಹ ನಿವೇಶನಗಳನ್ನು ವಾಪಸ್ ಪಡೆಯುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಹೆಬ್ಬಾಳ ಜಂಕ್ಷನ್ ಬಳಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.‘ಮನೆ ಕಟ್ಟದೇ ಖಾಲಿ ಇಟ್ಟುಕೊಂಡರೆ ಕಸದ ಸಮಸ್ಯೆ ಎದುರಾಗುತ್ತದೆ. ನಿಗದಿತ ಅವಧಿಯೊಳಗೆ ಮನೆ ಕಟ್ಟಬೇಕು. ಇಲ್ಲದೇ ಇದ್ದರೆ ದುಪ್ಪಟ್ಟು ತೆರಿಗೆ ವಿಧಿಸಲಾಗುವುದು. ಇಲ್ಲವೇ ಅವರು ಕಟ್ಟಿರುವ ಹಣವನ್ನು ಬಡ್ಡಿ ಸಮೇತ ನೀಡಿ, ನಿವೇಶನ ವಾಪಸ್ ಪಡೆಯಲಾಗುವುದು’ ಎಂದು ಎಚ್ಚರಿಸಿದರು.‘ಪ್ರಾಧಿಕಾರಗಳು, ಸೊಸೈಟಿಗಳಿಂದ ನಿವೇಶನ ಪಡೆದ ಮೇಲೆ ಮನೆ ಕಟ್ಟಬೇಕಾಗಿರುವುದು ಅವರ ಕರ್ತವ್ಯ. ನಿವೇಶನಕ್ಕೆ ಕಾಂಪೌಂಡ್ ಕೂಡ ಹಾಕದೆ, ಕಸ ಹಾಕಲು ಅವಕಾಶ ಕೊಟ್ಟರೆ ಹೇಗೆ? ತಮ್ಮ ಜಾಗದಲ್ಲಿ ಅವರು ಕಸ ಹಾಕದೇ ಇದ್ದರೂ, ಜಾಗವನ್ನು ಅವರು ರಕ್ಷಣೆ ಮಾಡಿಕೊಳ್ಳಬೇಕು. ಕೆಲವರು 20, 30, 40 ವರ್ಷವಾದರೂ ಮನೆ ಕಟ್ಟಿಲ್ಲ’ ಎಂದರು.ಮಣ್ಣು ಹೊತ್ತು ಹಾಕಿ ಚಾಲನೆ: ಹೆಬ್ಬಾಳ ಜಂಕ್ಷನ್ ಬಳಿ ಬಿದ್ದಿದ್ದ ಕಟ್ಟಡ ತ್ಯಾಜ್ಯವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬುಟ್ಟಿಗೆ ತುಂಬಿಸಿದರು. ಮುಖ್ಯಮಂತ್ರಿ ಶಿವಕುಮಾರ್ ಅವರು ಬುಟ್ಟಿಯನ್ನು ಹೊತ್ತುಕೊಂಡು ಹೋಗಿ ತ್ಯಾಜ್ಯವನ್ನು ಟ್ರ್ಯಾಕ್ಟರ್ಗೆ ಹಾಕುವ ಮೂಲಕ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ ನೀಡಿದರು.ಅಷ್ಟಕ್ಕೆ ತೃಪ್ತರಾಗದ ಮುಖ್ಯಮಂತ್ರಿ, ತಾವೇ ಬುಟ್ಟಿಗೆ ಮಣ್ಣು ತುಂಬಿಸಿ ಹೊತ್ತು ಹಾಕಿ ಖುಷಿಪಟ್ಟರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್, ಶಾಸಕ ಎಸ್.ಆರ್. ವಿಶ್ವನಾಥ್ ಅವರೂ ಕೈಜೋಡಿಸಿದರು.‘ಅಭಿಯಾನ ಯಶಸ್ವಿಯಾಗಿ ಸಾಗಲಿ’ ಎಂದು ಪ್ರಾರ್ಥನೆ ಮಾಡಿ ಈಡುಗಾಯಿಯನ್ನು ಮುಖ್ಯಮಂತ್ರಿ ಒಡೆದರು. ಇನ್ನೊಂದು ಈಡುಗಾಯಿಯನ್ನು ಶೋಭಾ ಕರಂದ್ಲಾಜೆ ಒಡೆದರು. ಆನಂತರ ಎಲ್ಲರೂ ಪಿಲ್ಲರ್ಗಳಿಗೆ ಬಣ್ಣ ಬಳಿದರು. ಮಣ್ಣು ತೆರವು ಮಾಡುವ ಜೆಸಿಬಿ ವಾಹನಕ್ಕೆ ಹಸಿರು ನಿಶಾನೆ ತೋರಿದರು.