ಬೀದರ್ | ಜುಲೈ ಕೊನೆಯ ವಾರದಲ್ಲಿ ವಾಡಿಕೆಗಿಂತ ಅಧಿಕ ಮಳೆ, ಬೆಳೆಗೆ ಜೀವ ಕಳೆ
ಬೀದರ್: ಮಳೆ ಇಲ್ಲದೇ ಚಿಂತಕ್ರಾಂತರಾಗಿದ್ದ ರೈತರ ಆತಂಕ ಈಗ ಸ್ವಲ್ಪಮಟ್ಟಿಗೆ ದೂರವಾಗಿದೆ.ಜೂನ್ ತಿಂಗಳಂತೆ ಜುಲೈ ಮೂರನೇ ವಾರದ ವರೆಗೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ತಡವಾಗಿ ಬಿತ್ತನೆ ಮಾಡಿದ ರೈತರು ಕೂಡ ಆತಂಕಕ್ಕೆ ಒಳಗಾಗಿದ್ದರು. ಆದರೆ, ಜುಲೈ 24ರಿಂದ ತಿಂಗಳ ಅಂತ್ಯದ ವರೆಗೆ ಸತತವಾಗಿ ಸುರಿದ ಮಳೆ ರೈತರ ಚಿಂತೆಯ ಗೆರೆಗಳನ್ನು ಅಳಿಸಿದೆ. ಜು. 24ರಿಂದ

ಬೀದರ್: ಮಳೆ ಇಲ್ಲದೇ ಚಿಂತಕ್ರಾಂತರಾಗಿದ್ದ ರೈತರ ಆತಂಕ ಈಗ ಸ್ವಲ್ಪಮಟ್ಟಿಗೆ ದೂರವಾಗಿದೆ.ಜೂನ್ ತಿಂಗಳಂತೆ ಜುಲೈ ಮೂರನೇ ವಾರದ ವರೆಗೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ತಡವಾಗಿ ಬಿತ್ತನೆ ಮಾಡಿದ ರೈತರು ಕೂಡ ಆತಂಕಕ್ಕೆ ಒಳಗಾಗಿದ್ದರು. ಆದರೆ, ಜುಲೈ 24ರಿಂದ ತಿಂಗಳ ಅಂತ್ಯದ ವರೆಗೆ ಸತತವಾಗಿ ಸುರಿದ ಮಳೆ ರೈತರ ಚಿಂತೆಯ ಗೆರೆಗಳನ್ನು ಅಳಿಸಿದೆ. ಜು. 24ರಿಂದ 31ರ ವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ 3 ಮಿ.ಮೀ ಅಧಿಕ ಮಳೆ ಸುರಿದಿದೆ.ಬೀದರ್ ಜಿಲ್ಲೆಯಾದ್ಯಂತ ಒಟ್ಟು 4.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಜೂನ್ ಹಾಗೂ ಜುಲೈ ಮೂರನೇ ವಾರದ ವರೆಗೆ ಮಳೆಯಾಗದ ಕಾರಣ ಅನೇಕ ರೈತರು ಬೀಜ, ಗೊಬ್ಬರ ಖರೀದಿಸಿದರೂ ಬಿತ್ತನೆ ಮಾಡಿರಲಿಲ್ಲ. ಕೆಲ ರೈತರು ಮಳೆ ಬರುವ ಆಶಾಭಾವನೆಯಲ್ಲಿ ಬಿತ್ತನೆ ಮಾಡಿದ್ದರು. ಅಂತಿಮವಾಗಿ ವರುಣ ಅವರ ಕೈಹಿಡಿದಿದ್ದಾನೆ.ಜಿಲ್ಲೆಯಾದ್ಯಂತ ಒಟ್ಟು 3.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ಶೇ 87) ಬಿತ್ತನೆ ಆಗಿದೆ. ಈ ಪೈಕಿ 2.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ, 1.12 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆಯಾಗಿದೆ. ಸೋಯಾ, ತೊಗರಿಗೆ ಎಷ್ಟು ಪ್ರಮಾಣದಲ್ಲಿ ಮಳೆಯ ಅಗತ್ಯವಿತ್ತೋ ಅಷ್ಟು ಪ್ರಮಾಣದಲ್ಲಿ ಆಗಿರುವುದರಿಂದ ಎಲ್ಲೆಡೆ ಬೆಳೆಗಳು ನಳನಳಿಸುತ್ತಿದ್ದು, ರೈತರ ಚಿಂತೆಯೂ ದೂರವಾಗಿದೆ.ಸೋಯಾ ಮತ್ತು ತೊಗರಿಗೆ ಆರಂಭದಲ್ಲಿ, ಇನ್ನೂ 15ರಿಂದ 20 ದಿನಗಳ ನಂತರ ಅಲ್ಪ ಮಳೆ ಬಂದರೂ ಬೆಳೆ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ.‘ಒಂದು ಸಲ ಸಸಿಗಳು ಬೆಳೆದು ದೊಡ್ಡದಾದರೆ, ಬಳಿಕ ಹೆಚ್ಚಿನ ತೇವಾಂಶ ಇದ್ದರೂ ಅದರಲ್ಲಿ ಬೆಳೆಯುವ ಸಾಮರ್ಥ್ಯ ಸೋಯಾ ಮತ್ತು ತೊಗರಿಗೆ ಇದೆ. ಇನ್ನೂ, ಮಳೆಗಾಲ ಇರುವುದರಿಂದ ಆಗಾಗ ಮಳೆ ಬಂದೇ ಬರುತ್ತದೆ. ಆದಕಾರಣ ಚಿಂತೆಯಿಲ್ಲ’ ಎನ್ನುತ್ತಾರೆ ಬೀದರ್ ತಾಲ್ಲೂಕಿನ ಚಟ್ನಳ್ಳಿಯ ರೈತ ಓಂಕಾರ.ಬಾವಿ, ಕೊಳವೆಬಾವಿಗಳಿಗೂ ನೀರುಇತ್ತೀಚೆಗೆ ಸುರಿದ ಸತತ ಮಳೆ ಕುಡಿಯುವ ನೀರಿನ ಸಮಸ್ಯೆ ಕೂಡ ನೀಗಿಸಿದೆ.ಬೀದರ್ ನಗರ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಬಾವಿ ಮತ್ತು ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಎಲ್ಲೆಲ್ಲಿ ಕೆಂಪು, ಕಪ್ಪು ಮಣ್ಣು ಇದೆಯೋ ಅಂಥ ಕಡೆಗಳಲೆಲ್ಲಾ ಬಾವಿಗಳಲ್ಲಿ ನೀರು ಬಂದಿದೆ. ಆದರೆ, ಸಪಟಾದ ನೆಲದಲ್ಲಿ ಹೆಚ್ಚು ನೀರು ಇಂಗದ ಕಾರಣ ಅಂಥ ಕಡೆಗಳಲ್ಲಿ ಹೆಚ್ಚಿಗೆ ನೀರು ಬಂದಿಲ್ಲ. ಹಳ್ಳ, ಕೊಳ್ಳಗಳಿಗೂ ಅಲ್ಪ ಪ್ರಮಾಣದ ನೀರು ಬಂದಿದೆ. ಆದರೆ, ಕೆರೆ, ಕಟ್ಟೆಗಳು ತುಂಬುವ ರೀತಿಯಲ್ಲಿ ನೀರು ಬಂದಿಲ್ಲ.ಹಿಂಗಾರು ಬೆಳೆ ಬಿತ್ತನೆಗೆ ಸಲಹೆ‘ಜುಲೈ 31ರ ನಂತರ ಸೋಯಾ, ತೊಗರಿ ಬಿತ್ತನೆಗೆ ಪೂರಕವಲ್ಲ. ಬಿತ್ತನೆ ಮಾಡಿದರೂ ಇಳುವರಿ ಕಡಿಮೆ ಬರುತ್ತದೆ. ಆದಕಾರಣ ಹಿಂಗಾರು ಬೆಳೆಗಳಾದ ಹಿಂಗಾರಿ ಜೋಳ, ಕಡಲೆ, ಕುಸುಬಿ ಬಿತ್ತನೆ ಮಾಡುವುದು ಸೂಕ್ತ. ರೈತರು ಅದರ ಬಗ್ಗೆ ಗಮನ ಹರಿಸಬೇಕು. ಆಯಾ ಕಾಲಕ್ಕೆ ತಕ್ಕಂತೆ ಬಿತ್ತನೆ ಮಾಡುವುದು ಬಹಳ ಉತ್ತಮ ಮತ್ತು ವೈಜ್ಞಾನಿಕವಾಗಿಯೂ ಸರಿಯಾದುದು’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260802-33-580079948