ಎಂ.ವಿ. ಶಶಿಭೂಷಣ ರಾಜು ಅವರ ಕಥೆ ‘ವೃತ್ತ’
ಅವಳ ಕಣ್ಣಿಂದ ಕಣ್ಣೀರು ಪಟ ಪಟ ಉದುರಿದವು. ತನಗೆ ಮಕ್ಕಳಾಗಲಿಲ್ಲ ಎಂದು ಎರಡನೇ ಮದುವೆ ಮಾಡಿಕೊಂಡು ಹೊಸಿಲ ಬಳಿ ನಿಂತಿದ್ದ ತನ್ನ ಗಂಡ ಮತ್ತು ಗಂಡನ ಹೊಸ ಹೆಂಡತಿಗೆ ಆರತಿ ಎತ್ತಿ ಒಳ ಕರೆದುಕೊಳ್ಳಬೇಕಾಗಿತ್ತು. ಸೆರಗಿನಿಂದ ಕಣ್ಣೀರನ್ನು ಒರೆಸಿಕೊಂಡು, ಆರತಿ ಎತ್ತಿ, ಕೆಂಪುನೀರನ್ನು ಹೊರಗೆ ಎಸೆಯಲು ಬಂದಳು. ಅದನ್ನು ಯಾರೂ ತುಳಿಯದ ಸ್ಥಳದಲ್ಲಿ ಹಾಕುವುದು ವಾಡಿಕೆ. ಎ

ಅವಳ ಕಣ್ಣಿಂದ ಕಣ್ಣೀರು ಪಟ ಪಟ ಉದುರಿದವು. ತನಗೆ ಮಕ್ಕಳಾಗಲಿಲ್ಲ ಎಂದು ಎರಡನೇ ಮದುವೆ ಮಾಡಿಕೊಂಡು ಹೊಸಿಲ ಬಳಿ ನಿಂತಿದ್ದ ತನ್ನ ಗಂಡ ಮತ್ತು ಗಂಡನ ಹೊಸ ಹೆಂಡತಿಗೆ ಆರತಿ ಎತ್ತಿ ಒಳ ಕರೆದುಕೊಳ್ಳಬೇಕಾಗಿತ್ತು. ಸೆರಗಿನಿಂದ ಕಣ್ಣೀರನ್ನು ಒರೆಸಿಕೊಂಡು, ಆರತಿ ಎತ್ತಿ, ಕೆಂಪುನೀರನ್ನು ಹೊರಗೆ ಎಸೆಯಲು ಬಂದಳು. ಅದನ್ನು ಯಾರೂ ತುಳಿಯದ ಸ್ಥಳದಲ್ಲಿ ಹಾಕುವುದು ವಾಡಿಕೆ. ಎಲ್ಲರೂ ತುಳಿಯುವ ಕಡೆ ಹಾಕಲೇ? ಗಂಡನನ್ನು ಕಸಿದುಕೊಂಡ ಅವಳು ಹಾಳಾಗಲಿ ಎಂದುಕೊಂಡಳು; ಆದರೆ ಅವಳೂ ಹೆಣ್ಣಲ್ಲವೇ, ಇದರಲ್ಲಿ ಅವಳ ತಪ್ಪೇನಿದೆ? ಪಾಪ, ಯಾವ ಕಷ್ಟದಿಂದ ಎರಡನೇ ಮದುವೆಗೆ ಒಪ್ಪಿಕೊಂಡಳೋ ಏನೋ ಎಂದುಕೊಂಡು ಯಾರೂ ತುಳಿಯದ ಕಡೆ ಕೆಂಪು ನೀರನ್ನು ಚೆಲ್ಲಿ ಒಳಬಂದಳು.ರತ್ನಕ್ಕ ಖಾಲಿ ತಟ್ಟೆ ಹಿಡಿದು ಒಳಬಂದಾಗ, ನೆಂಟರೆಲ್ಲಾ ಮನೆಯಲ್ಲಿ ಹಾಸ್ಯ ಮಾಡುತ್ತಾ, ಜೋರಾಗಿ ಕಿರುಚುತ್ತಾ ಮಾತನಾಡುತ್ತಿದ್ದರು. ಒಂದು ಹೆಣ್ಣಿಗಾದ ಅನ್ಯಾಯ ಯಾರ ಮನಸಿಗೇನೂ ಘಾಸಿಮಾಡಿರಲಿಲ್ಲ. ರತ್ನಕ್ಕನನ್ನು ಯಾರೂ ಗಮನಿಸುವ ಗೋಜಿಗೇ ಹೋಗಲಿಲ್ಲ. ರತ್ನಕ್ಕನ ಮನೆಯವರು ಮುನಿಸಿಕೊಂಡು ಮದುವೆಗೆ ಬಂದಿರಲಿಲ್ಲ. ‘ಇದು ನಿನ್ನ ಮನೆ, ಆ ಹೊಸಹೆಣ್ಣಿಗೆ ಯಾವುದೇ ಅಧಿಕಾರ ಬಿಟ್ಟುಕೊಡಬೇಡ’ ಎಂತೆಲ್ಲಾ ಅಪ್ಪ–ಅಮ್ಮ ಮದುವೆಗೆ ಕರೆಯಲು ಹೋದಾಗ ಹೇಳಿದ್ದರು. ‘ಯಾವ ಮುಖ ಇಟ್ಟುಕೊಂಡು ಮದುವೆಗೆ ಕರೆಯಲು ಬಂದೆ’ ಎಂದು ಅಣ್ಣ ಮೂದಲಿಸಿದ್ದರು. ‘ಅವನ ಮೇಲೆ ಕೇಸ್ ಹಾಕೋಣ, ಕೋರ್ಟಿಗೆ ಹೋಗೋಣ’ ಎಂದೆಲ್ಲ ಹಾರಾಡಿದ್ದರು. ‘ನಿನಗೂ ಮಕ್ಕಳಾಗದಿದ್ದರೆ ನಿನ್ನ ಯೋಚನೆ ಹೇಗಿರುತ್ತಿತ್ತು’ ಎಂದುಕೊಂಡಳು ಮನಸಿನಲಿ. ಆದರೆ ‘ಹಾಗೇನೂ ಬೇಡ, ಅವರು ಒಳ್ಳೆಯವರು, ನನಗೇನೂ ಅನ್ಯಾಯ ಮಾಡುವುದಿಲ್ಲ’ ಎಂದಿದ್ದಳು. ‘ನಿನ್ನನ್ನು ಇನ್ನು ಹೆಚ್ಚು ಓದಿಸಬೇಕಾಗಿತ್ತು’ ಎಂದು ಗೊಣಗಿದ್ದರು ಅಪ್ಪ.ಹೊಸ ಹೆಣ್ಣು ರಮಣಿಯನ್ನು ಮೊದಲರಾತ್ರಿಗಾಗಿ ಸಿಂಗರಿಸಲು ಒಳ ಕರೆದೊಯ್ದಿದ್ದರು. ಗಂಡ ಬಂದವರ ಜೊತೆ ಮಾತನಾಡುತ್ತಾ ಕುಳಿತಿದ್ದ. ರತ್ನಕ್ಕನಿಗೆ ಚಕ್ಕನೆ, ಅವರ ಈ ರಾತ್ರಿ ತಮ್ಮ ಕೋಣೆಯಲ್ಲಿ ನಡೆಯಬಹುದೇ ಎಂದು ಆತಂಕ, ದುಃಖ ಎರಡೂ ಆಗಿ, ತನ್ನ ರೂಮಿಗೆ ಓಡಿದಳು. ರೂಮಿಗೆ ಹೋಗಿ ಬಾಗಿಲಿಕ್ಕಿ ಚಿಲುಕ ಹಾಕಿ ಕೂತಳು. ಗಂಟೆ ಕಳೆಯಿತು, ಯಾರೂ ಬಾಗಿಲನ್ನು ಬಡಿಯಲಿಲ್ಲ, ಊಟಕ್ಕೂ ಕರೆಯಲಿಲ್ಲ. ಅವಳ ಇರುವಿಕೆಯನ್ನು ಎಲ್ಲರೂ ಮರೆತಿದ್ದರು. ಊಟವನ್ನು ಹೊರಗಡೆಯಿಂದ ತರಿಸಿದ್ದರಿಂದ, ಅವಳ ಸಹಾಯ ಯಾರಿಗೂ ಬೇಕಾಗೂ ಇರಲಿಲ್ಲ. ಬಹುತೇಕ ರಾತ್ರಿ ಅವಳಿಗೆ ನಿದ್ರೆ ಹತ್ತಲಿಲ್ಲ.ರಂಗನಾಗಿದ್ದವ ಮದುವೆ ವಯಸ್ಸಿಗೆ ಬಂದು ರಂಗಣ್ಣನಾದ ಮೇಲೆ, ಎರಡು ಮೂರು ಹುಡುಗಿಯರನ್ನು ನೋಡಿ ಎಲ್ಲೂ ಮದುವೆಗೆ ಸರಿಹೊಂದಿರಲಿಲ್ಲ. ನೂರು ಎಕರೆ ಜಮೀನಿನ ಒಡೆಯನಾಗಿದ್ದ ರಂಗಣ್ಣನಿಗೆ ಒಳ್ಳೆಯ ಜೋಡಿಯನ್ನು ಹುಡುಕಬೇಕೆಂದು ಮದುವೆ ಬ್ರೋಕರ್ ಮಂಜಣ್ಣನಿಗೆ, ರಂಗಣ್ಣನ ತಾಯಿ ಯಶೋದಮ್ಮ ತಾಕೀತು ಮಾಡಿದ್ದರು. ಹುಡುಗಿಗೆ ಮಕ್ಕಳ ಭಾಗ್ಯವಿದೆಯೇ ಎಂದು ಮೊದಲೇ ಜಾತಕ ನೋಡಿ ಹುಡುಗಿಯನ್ನು ತೋರಿಸಬೇಕು ಎಂದೆಲ್ಲಾ ಹೇಳಿದ್ದರು. ಒಬ್ಬನೇ ಮಗನಾಗಿದ್ದ ರಂಗಣ್ಣನಿಂದ ವಂಶ ಬೆಳೆಯಬೇಕು, ಇಷ್ಟು ಆಸ್ತಿ ನೋಡಿಕೊಳ್ಳಳು ಸಂತಾನ ಬೇಕು ಎಂದು ನಿಯಮ ಹಾಕಿದ್ದರು. ಎಲ್ಲಕ್ಕೂ ತಲೆ ಆಡಿಸಿದ್ದ ಮಂಜಣ್ಣ, ಮಧುಗಿರಿಯ, ರಾಮನಹಳ್ಳಿಯ ಮಾದಣ್ಣನ ಮಗಳು ರತ್ನಕ್ಕನ ಚಿತ್ರ ಹಿಡಿದು ಬಂದಿದ್ದ. ಮಾದಣ್ಣ ಹಳ್ಳಿಯಲ್ಲಿ ದೊಡ್ಡ ಕುಳ, ಅಪಾರ ಸ್ಥಿರಾಸ್ತಿ ಪೂರ್ವಿಕರ ಕಾಲದಿಂದಲೂ ಬಂದಿತ್ತು. ಒಳ್ಳೆಯ ಕಡೆ ಸಂಬಂಧ ತೋರಿಸಿದರೆ ಲಕ್ಷ ರೂಪಾಯಿ ಕೊಡುವುದಾಗಿ ಮಂಜಣ್ಣನಿಗೆ ಆಸೆ ತೋರಿಸಿದ್ದರು. ರತ್ನಕ್ಕ ಚೆನ್ನಾಗಿ ತಿಂದು ಉಂಡು ಮೈತುಂಬಿಕೊಂಡು ಮುದ್ದಾಗಿದ್ದಳು. ನೋಡಿದ ಹುಡುಗ ತಿರಸ್ಕರಿಸುವ ಸಾಧ್ಯತೆ ಇರಲಿಲ್ಲ. ಆದರೆ ರತ್ನಕ್ಕ ಬರೀ ಏಳನೇ ತರಗತಿಯವರಿಗೆ ಓದಿದ್ದರಿಂದ ಸ್ವಲ್ಪ ಆತಂಕ ಇತ್ತು. ಹುಡುಗಿಯ ಅಂದ, ಅವಳ ಅಪ್ಪನ ಆಸ್ತಿ ಕಂಡ ರಂಗಣ್ಣ ಹುಡುಗಿಯನ್ನು ಒಪ್ಪಿಕೊಂಡ. ಮಂಜಣ್ಣ ಹುಡುಗಿಯ ಜಾತಕದ ಗುಣಗಾನ ಮಾಡಿ, ಹುಡುಗಿಯ ಜಾತಕದಲ್ಲಿ ಎಂಟು ಮಕ್ಕಳ ಭಾಗ್ಯ ಇದೆ ಎಂದು ಘೋಷಿಸಿ ಎಲ್ಲರನ್ನು ಸಂತೋಷದಲ್ಲಿ ಮುಳುಗಿಸಿಬಿಟ್ಟ. ರತ್ನಕ್ಕನ ಅಪ್ಪ ಅದ್ದೂರಿಯಿಂದ ಮಗಳ ಮದುವೆ ಮಾಡಿಕೊಟ್ಟ.ಮದುವೆಯಾಗಿ ಒಂದು ವರುಷವಾಯಿತು, ಎರಡು ವರುಷವಾಯಿತು, ಮಕ್ಕಳ ಭಾಗ್ಯ ಕಾಣಲಿಲ್ಲ. ರಂಗಣ್ಣನ ಅಮ್ಮನ ಆಣತಿಯಂತೆ ಎಲ್ಲಾ ಆಸ್ಪತ್ರೆ, ಗುಡಿ, ಗೋಪುರ, ಸ್ವಾಮೀಜಿಗಳನ್ನು ಕಂಡು ಬಂದಾಯಿತು. ಯಾವುದೇ ಪ್ರಯೋಜನವಾಗಲಿಲ್ಲ.ರತ್ನಕ್ಕನಿಗೆ ದಿನೇ ದಿನೇ ಅತ್ತೆಯ ಮಾತಿನ ತಿವಿತ, ಸಿಡಿಮಿಡಿ ಶುರುವಾಯಿತು. ರತ್ನಕ್ಕ ಮೌನಕ್ಕೆ ಹೆಚ್ಚು ಹೆಚ್ಚು ಶರಣಾದಳು. ಅತ್ತೆ ಮಾವ, ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೂ ಮಕ್ಕಳಾಗಲಿಲ್ಲ ಎನ್ನುವ ಒಂದೇ ಕಾರಣದಿಂದ ಕಾಟ ಕೊಡುತ್ತಿದ್ದುದ್ದು ರತ್ನಕ್ಕನಿಗೆ ಅಚ್ಚರಿಗೆ ಕಾರಣವಿತ್ತು. ಮಕ್ಕಳಾಗದಿರುವುದಕ್ಕೆ ನನ್ನದೇನು ತಪ್ಪಿದೆ ಎಂದುಕೊಂಡಳು. ದೇವರೇ ನೀನೇ ಕಾಪಾಡು ಎಂದುಕೊಂಡಳು. ರಂಗಣ್ಣ ಅಷ್ಟೇನೂ ಕಾಟ ಕೊಡದಿದ್ದರೂ ಅಮ್ಮ, ಅಪ್ಪನ ಮುಂದೆ ಹೆಂಡತಿಗೆ ಮುನಿಸು ತೋರುತ್ತಿದ್ದ. ಹೆಂಡತಿಯ ಕಡೆಯಾಗಿಬಿಟ್ಟ ಎಂದು ಅಮ್ಮ ಎಂದುಕೊಳ್ಳಬಾರದು ಎಂದು ಅಮ್ಮನ ತಾಳಕ್ಕೆ ಕುಣಿಯುತ್ತಿದ್ದ.ಇನ್ನೂ ಎರಡೂ ವರುಷ ಮಕ್ಕಳಾಗದಿದ್ದಾಗ, ರಂಗಣ್ಣನ ಅಮ್ಮ ಮಗನಿಗೆ ಎರಡನೇ ಮದುವೆ ಮಾಡಬೇಕೆಂದು ವರಾತ ಶುರುಮಾಡಿದರು. ರತ್ನಕ್ಕನ ಮೌನ ಇನ್ನೂ ಹೆಚ್ಚಾಯಿತು, ಮೌನವೇ ಪ್ರತಿಭಟನೆಯ ಬಗೆ ಎಂದುಕೊಂಡಳು. ಅಮ್ಮನ ಅಬ್ಬರ, ಹೆಂಡತಿಯ ಮೌನದ ನಡುವೆ ರಂಗಣ್ಣ ನಲುಗತೊಡಗಿದ. ಕಡೆಗೆ ಅಮ್ಮನ ಅಬ್ಬರದಲ್ಲಿ ಕೊಚ್ಚಿಹೋದ. ರತ್ನಕ್ಕ ತನ್ನ ತಂದೆ, ತಾಯಿ, ಅಣ್ಣನಿಗೆ ಆಣೆ ಹಾಕಿ ಪೊಲೀಸ್ ಠಾಣೆ ಮೆಟ್ಟಲು ಹತ್ತದಂತೆ ನೋಡಿಕೊಂಡಳು. ರಂಗಣ್ಣ ಹೆಂಡತಿಯ ಒಳ್ಳೆಯತನಕ್ಕೆ ಮಾರುಹೋದರೂ ಅಮ್ಮನ ಕಣ್ಣೀರಿಗೆ ಶರಣಾದ.ಬೆಳಿಗ್ಗೆ ಮನೆಗೆ ಬಂದ ನೆಂಟರೆಲ್ಲಾ ಹೊರಟುಹೋದರು. ಮನೆಯಲ್ಲಿ ಮೌನ ನೆಲಸಿದಮೇಲೆ, ರತ್ನಕ್ಕ ತನ್ನ ಕೋಣೆಯಿಂದ ಹೊರಬಂದು, ಕೆಳಗಿಳಿದು ಅಡುಗೆ ಮನೆಗೆ ಬಂದಳು. ದಿನಾ ತಾನೇ ಅಡುಗೆಮಾಡಿ, ಎಲ್ಲರ ನಾಲಿಗೆ ರತ್ನಕ್ಕನ ರುಚಿಗೆ ಒಗ್ಗಿಹೋಗಿತ್ತು. ಆದರೆ ಯಾರೂ ರತ್ನಕ್ಕನ ಕೋಣೆಯ ಬಾಗಿಲು ಬಡಿದು ಹೊರ ಕರೆಯುವ ಧೈರ್ಯ ತೋರಲಿಲ್ಲ.ರತ್ನಕ್ಕ ಎಂದಿನಂತೆ ಅಡುಗೆಗೆ ಸಿದ್ಧಮಾಡುತ್ತಿದ್ದಾಗ, ರಮಣಿ ಅಡುಗೆಮನೆಗೆ ಬಂದು ನಿಂತಳು. ರತ್ನಕ್ಕ ಅವಳನ್ನು ಸರಿಯಾಗಿ ನೋಡೇ ಇರಲಿಲ್ಲ. ಈಗ ನೋಡಿದಳು, ಪರವಾಗಿಲ್ಲ ಚನ್ನಾಗಿಯೇ ಇದ್ದಾಳೆ ಎಂದುಕೊಂಡಳು. ರಮಣಿ ‘ಅಕ್ಕ ನಾನು ಅಡುಗೆಗೆ ಸಹಾಯ ಮಾಡಲೇ’ ಎಂದಳು. ರತ್ನಕ್ಕ ಸರಿ ಎಂಬಂತೆ ಈರುಳ್ಳಿ, ಮೆಣಸಿನಕಾಯಿ ಕತ್ತರಿಸಲು ಅವಳಿಗೆ ಕೊಟ್ಟಳು. ಏನು ಮಾಡುತ್ತಾ ಇದೀರಿ ಅಕ್ಕ ಎಂದಳು. ‘ಲೇಟಾಗಿದೆ ಉಪ್ಪಿಟ್ಟು ಮಾಡೋಣ ಎಂದು’ ಎಂದು ರವೆ ಉರಿಯತೊಡಗಿದಳು.ಹೀಗೆ ದಿನಗಳು ಕಳೆದಂತೆ ರತ್ನಕ್ಕ, ರಮಣಿ ಮನೆಗೆಲಸಗಳನ್ನು ಇಬ್ಬರೂ ಸೇರಿ ಮಾಡತೊಡಗಿದರು. ರತ್ನಕ್ಕ ಅಷ್ಟೇನೂ ಮಾತನಾಡುತ್ತಿರಲಿಲ್ಲ, ರಮಣಿ ಮಾತು ನಿಲ್ಲಿಸುತ್ತಿರಲಿಲ್ಲ. ರಂಗಣ್ಣ ಕೂಡ ರತ್ನಕ್ಕನಿಗೆ ಯಾವುದೇ ಸುಖ ಕಡಿಮೆ ಮಾಡಲಿಲ್ಲ.ರಂಗಣ್ಣನ ಹೊಸ ಹೆಂಡತಿ ಮನೆಗೆ ಬಂದು ಒಂದು ವರುಷವಾದರೂ ಮುಟ್ಟು ನಿಲ್ಲುವ ಸೂಚನೆ ಕಾಣಲಿಲ್ಲ. ‘ಇವಳೂ ದೊಡ್ಡವಳ ಹಾದಿ ಹಿಡಿದಳೇ’ ಎಂದು ರಂಗಣ್ಣನ ಅಮ್ಮ ಗೊಣಗಿಕೊಂಡರು. ‘ಇವನಲ್ಲೇ ಏನಾದರು ಐಬು ಇರಬಹದೇ’ ಎಂದು ರಂಗಣ್ಣನ ಅಪ್ಪ ಅನುಮಾನ ಪಟ್ಟರು. ‘ನಮ್ಮ ವಂಶದಲ್ಲಿ ಹಿಂದೆ ಈಗಾಲಿಲ್ಲ, ಮಕ್ಕಳು ಆಗುತ್ತವೆ’ ಎಂದು ಸಮಾಧಾನಗೊಂಡರು. ಹೀಗೆ ಹಲ ತಿಂಗಳು ಕಳೆದಮೇಲೆ, ಒಂದು ದಿನ ಎಲ್ಲರೂ ಊಟ ಮಾಡುತ್ತಿದ್ದಾಗ ರತ್ನಕ್ಕ ಗಂಡನಿಗೆ ಅನ್ನ ಬಡಿಸುತ್ತಿದ್ದವಳು ಕುಸಿತು ಕೂತಳು. ಎಲ್ಲರೂ ಏನಾಯಿತು ಎಂದು ಎದ್ದು ಸುತ್ತ ಸೇರಿದರು. ರತ್ನಕ್ಕ ತಲೆ ತಿರುಗುದಂತಾಗಿ ಡೈನಿಂಗ್ ಟೇಬಲ್ಲಿನ ಕೊನೆಯನ್ನು ಹಿಡಿದು ಕುಳಿತಳು. ರಂಗಣ್ಣ ಊರಿನ ನರ್ಸ್ ರಾಜಮ್ಮನಿಗೆ ಫೋನ್ ಮಾಡಿ ಬೇಗ ಬರಬೇಕೆಂದು ತಾಕೀತು ಮಾಡಿದ. ರಾಜಮ್ಮ ರತ್ನಕ್ಕನ ಕೈ, ಕಣ್ಣು, ನಾಲಿಗೆ ಎಲ್ಲ ಪರೀಕ್ಷಿಸಿ, ರತ್ನಕ್ಕ ಗರ್ಭಿಣಿ ಎಂದು ಪ್ರಕಟಿಸಿದಳು. ಎಲ್ಲರ ಮುಖದಲ್ಲಿ ಖುಷಿ ಅರಳಿತು. ರಂಗಣ್ಣನ ಅಮ್ಮ ಕುಣಿದಾಡಿಬಿಟ್ಟರು. ರತ್ನಕ್ಕನ ಬಳಿಸಾರಿ ಮುದ್ದಾಡಿಬಿಟ್ಟರು. ‘ನನ್ನ ಕ್ಷಮಿಸೆ ತಾಯಿ’ ಎಂದರು.ನವಮಾಸಗಳು ತುಂಬಿ ರತ್ನಕ್ಕ ಗಂಡು ಮಗು ಹೆತ್ತಳು. ಎಲ್ಲರ ಸಂತೋಷಕ್ಕೆ ಪಾರವೇ ಇರಲಿಲ್ಲ. ರಂಗಣ್ಣ ಅಪ್ಪ–ಅಮ್ಮನನ್ನು ರತ್ನಕ್ಕನ ಮನೆಗೆ ಹೋಗಿ, ಅವರ ಕ್ಷಮಾಪಣೆ ಕೇಳಿ, ಮನವೊಲಿಸಿ ಮನೆಗೆ ಬಂದು ತಾಯಿ, ಮಗುವನ್ನು ನೋಡಿ ಹೋಗಿ ಎಂದನು. ಮಗಳಿಗೆ ಗಂಡು ಮಗುವಾಯಿತೆಂದು ಎಲ್ಲ ಮರೆತು ಮಗಳ ಮನೆಗೆ ಬರಲು ಒಪ್ಪಿದರು. ಒಂದು ದಿನ ಬಂದು ತಾಯಿ ಮಗುವನ್ನು ನೋಡಿಕೊಂಡು ಹೋದರು. ಮುಂದೆ ಮೂರು ವರುಷಗಳಲ್ಲಿ ರತ್ನಕ್ಕನಿಗೆ ಹೆಣ್ಣು ಮಗುವಾಯಿತು. ಮನೆಯಲ್ಲಿ ಇನ್ನೂ ಸಂಭ್ರಮ ಮೂಡಿತು.ಈ ಮಧ್ಯೆ, ಇನ್ನು ಈ ಮನೆಯಲ್ಲಿ ತನ್ನ ಮೌಲ್ಯ ಕಡಿಮೆಯಾಯಿತೆಂದು ರಮಣಿ ಭಯಗೊಂಡಿದ್ದಲ್ಲದೆ, ಬೇಸರಗೊಂಡಳು. ಗಂಡ ಬೇರೆ ರತ್ನಕ್ಕನ ರೂಮಿನಲ್ಲಿ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲಾರಂಬಿಸಿದ. ತಾನು ದಿನೇ ದಿನೇ ಅಡುಗೆಮನೆಗೆ ಸೀಮಿತ ಆಗುತ್ತಿರುವುದನ್ನು ರಮಣಿ ಗಮನಿಸಿಕೊಂಡಳು. ಇನ್ನು ಈ ಮನೆಯಲ್ಲಿ ತನಗೆ ಸಹಾಯಕಿ ಸ್ಥಾನವೇ ಎಂದುಕೊಂಡಳು. ಯಾವೆಲ್ಲ ಆಸೆ ಇಟ್ಟುಕೊಂಡು ಬಂದಿದ್ದಳೋ ಅದೆಲ್ಲಾ ಮಾಯವಾಗತೊಡಗಿತ್ತು. ಮಕ್ಕಳಾದರೆ ದೊಡ್ಡಮನೆಗೆ ನೀನೆ ರಾಣಿ ಎಂದು ಅಪ್ಪ ಅಮ್ಮ ಅವಳ ಮನವೊಲಿಸಿದ್ದರು. ರತ್ನಕ್ಕ ಮಾತನಾಡತೊಡಗಿದರೆ, ರಮಣಿ ಮೌನಿಯಾಗತೊಡಗಿದಳು. ರಂಗಣ್ಣ ಆಗೀಗ ಅವಳ ರೂಮಿಗೆ ಇಣುಕುತ್ತಿದ್ದ.ಮಕ್ಕಳು ಬೆಳೆಯತೊಡಗಿದರು. ಈ ದೊಡ್ಡ ಆಸ್ತಿಗೆಲ್ಲಾ ನಿನ್ನ ಮಗನೇ ಒಡೆಯ ಎಂದು ಎಲ್ಲರೂ ಹೇಳುತ್ತಿದ್ದರೆ ರತ್ನಕ್ಕನ ಎದೆ ತುಂಬಿಬರುತ್ತಿತ್ತು. ಮಗನ ಅಧಿಕಾರಸ್ಥ ಜೀವನವನ್ನು ಊಹಿಸಿಕೊಂಡು ಅಪರೂಪದ ರತ್ನದಂತೆ ಮಗನನ್ನು ನೋಡಿ ಕೊಳ್ಳತೊಡಗಿದಳು. ಮಗನೇ ರಾಜನಾಗಬೇಕು ಬೇರೆಯವರಿಗೆ ಅಣುವಿನಷ್ಟು ಜಾಗವೂ ಸಿಗಬಾರದು ಎಂದುಕೊಳ್ಳುತ್ತಿದ್ದ ದೃತರಾಷ್ಟ್ರನಂತೆ ಅವಳ ಮನಸು ಯೋಚನೆ ಮಾಡತೊಡಗಿತು. ಮಗನ ಬಿಟ್ಟು ಬೇರೆಯವರು ಮನೆಯ ಒಡೆಯನಾಗುವುದನ್ನು ಊಹಿಸಿಕೊಳ್ಳಲಾದಳು. ಎಲ್ಲ ಆಸ್ತಿ ಮಗನಿಗೇ ಸಿಗಬೇಕು, ಮಗಳನ್ನು ದೊಡ್ಡ ಮನೆಗೆ ಕೊಡಬೇಕು ಎಂದುಕೊಳ್ಳತೊಡಗಿದಳು.ಬೆಳೆಯುತ್ತಿದ್ದ ಮಗನ ಮೇಲೆ ಎಲ್ಲರೂ ಮಮಕಾರವನ್ನು ಸುರಿಸುತ್ತಿದ್ದರು. ರಾಜಕುಮಾರಂತೆ ಪೋಷಿಸುತ್ತಿದ್ದರು. ಮಗನಿಗೆ ಐದು ವರುಷ, ಮಗಳಿಗೆ ಎರಡು ವರುಷಗಳಾಯಿತು.ಹೀಗಿರಲು, ರಂಗಣ್ಣನ ಎರಡನೇ ಹೆಂಡತಿ ರಮಣಿಗೆ ಮುಟ್ಟು ನಿಂತಿತು. ರಮಣಿ ಕುಣಿದಾಡಿಬಿಟ್ಟಳು. ವಿಷಯ ತಿಳಿದು ಮನೆಯವರೆಲ್ಲರಿಗೂ ಹರುಷವಾಯಿತು. ರತ್ನಕ್ಕ ಮಾತ್ರ ಗಾಬರಿಗೊಂಡಳು, ಮುಖ ಕಪ್ಪಿಟ್ಟಿತು. ಇನ್ನು ರಮಣಿಗೂ ಮನೆಯಲ್ಲಿ ತನ್ನಷ್ಟೇ ಪ್ರಾಮುಖ್ಯತೆ ಸಿಗುತ್ತದೆ ಎಂದುಕೊಂಡು ಬೇಸರವಾಯಿತು. ಒಂದು ವೇಳೆ ಗಂಡು ಮಗುವಾದರೆ ಆಸ್ತಿ ಎರಡು ಪಾಲಾಗುತ್ತದೆ ಎಂದು ವ್ಯಥೆ ಆಯಿತು. ದೇವರೇ ರಮಣಿಗೆ ಹೆಣ್ಣು ಮಗುವಾಗಲಿ ಎಂದುಕೊಂಡಳು.ರಮಣಿಗೆ ಆರು ತಿಂಗಳು ತುಂಬುತ್ತಿರುವಾಗ ರತ್ನಕ್ಕನ ಚಿಕ್ಕಮ್ಮ ಪೂರ್ಣಕ್ಕ ಮನೆಗೆ ಬಂದಿಳಿದರು. ಪೂರ್ಣಕ್ಕ ಮಿಡ್ ವೈಫ್ ಕೆಲಸಮಾಡಿ ನಿವೃತ್ತಿ ಹೊಂದಿ ಈ ಊರು ಆ ಊರು ತಿರುಗುತ್ತಾ ಕಾಲ ಕಳೆಯುತ್ತಿದ್ದಳು, ಗಂಡ ಯಾವಾಗಲೋ ತೀರಿಹೋಗಿದ್ದು ಮಕ್ಕಳೂ ಇರಲಿಲ್ಲ. ಸ್ವಲ್ಪ ದಿನ ಅಕ್ಕನ ಮನೆ, ಇನ್ನೊಬ್ಬ ತಂಗಿಯ ಮನೆ, ಸ್ವಲ್ಪ ಅಕ್ಕ ತಂಗಿಯರ ಮಕ್ಕಳ ಮನೆ ಹೀಗೆ ತಂಗುತ್ತಿದ್ದಳು. ತಂಗಿದ ಮನೆಯಲ್ಲಿ ಯಾರಿಗಾದರೂ ಸಣ್ಣ ಪುಟ್ಟ ಕಾಯಿಲೆಗಳಾದರೆ ಸೂಕ್ತ ಔಷಧಿ ಕೊಟ್ಟು ಕಾಯಿಲೆ ಗುಣ ಪಡಿಸುತ್ತಿದ್ದಳು. ಆದ್ದರಿಂದ ಪೂರ್ಣಕ್ಕ ಮನೆಗೆ ಬಂದರೆ ಯಾರೂ ಹೊರೆ ಎಂದು ಅಂದುಕೊಳ್ಳುತ್ತಿರಲಿಲ್ಲ. ಪೂರ್ಣಕ್ಕನ ಇನ್ನೊಂದು ವಿಶೇಷ ಕೈಚಳಕವೆಂದರೆ, ಯಾರಿಗಾದರೂ ಹೊಟ್ಟೆ ತೆಗೆಯಬೇಕೆಂದರೆ ಔಷಧಿ ಕೊಡುವುದು. ಮಗು ಬೇಡವಾದರೆ, ಗರ್ಭಿಣಿಯರು ಪೂರ್ಣಕ್ಕನನ್ನು ಸಂಪರ್ಕಿಸುತ್ತಿದ್ದರು.ಪೂರ್ಣಕ್ಕ ಮನೆಗೆ ಬಂದಾಗ ಹೆಚ್ಚು ಸಂತೋಷವಾಗಿದ್ದು ರಮಣಿಗೆ. ಇಂತಹ ಸಮಯದಲ್ಲಿ ನರ್ಸ್ ಒಬ್ಬರು ಮನೆಯಲ್ಲಿ ಇದ್ದರೆ ಒಂದು ಧೈರ್ಯ ಎಂದುಕೊಂಡಳು. ತನಗಿಂತ ಮಗುವು ಆರೋಗ್ಯವಾಗಿದ್ದರೆ ಸಾಕು ಎಂದುಕೊಂಡಳು.ಪೂರ್ಣಕ್ಕ ರತ್ನಕ್ಕನ ಮಕ್ಕಳನ್ನು ಆಡಿಸಿಕೊಂಡು, ಅವರಿಗೆ ಸ್ನಾನ ಮಾಡಿಸುವುದು, ಊಟ ಮಾಡಿಸುವುದು ಹೀಗೆ ರತ್ನಕ್ಕನಿಗೆ ಪೂರ್ತಿ ವಿರಾಮ ನೀಡಿದಳು. ಅಡುಗೆಯಲ್ಲೂ ಸಹಾಯ ಮಾಡುತ್ತಿದ್ದಳು. ಇದರ ಜೊತೆ ರಮಣಿಗೆ ಅಗತ್ಯವಾದ ಅಡುಗೆ ಮಾಡಿ, ವಿಟಮಿನ್ ಮಾತ್ರಗಳನ್ನು ತರಿಸಿಕೊಟ್ಟು ಮಗು ಆರೋಗ್ಯವಾಗಿ ಹುಟ್ಟಲು ಎಲ್ಲ ಸಹಾಯ ಮಾಡತೊಡಗಿದಳು. ಮನೆಯವರಿಗೆ ಅವಳ ಕಾಳಜಿ ಕಂಡು ಖುಷಿಯಾಯಿತು.ಒಂದು ಸಂಜೆ ರತ್ನಕ್ಕನ ಜೊತೆ ಅವಳ ಕೋಣೆಯಲ್ಲಿ ಮಾತನಾಡುತ್ತಿದ್ದಾಗ ರಮಣಿಯ ಕುರಿತು ಮಾತುಬಂತು. ‘ಮಕ್ಕಳೇ ಇಲ್ಲದ ಮನೆಯಲ್ಲಿ ಮಕ್ಕಳ ಗುಂಪೇ ಇರುತ್ತದೆ ಇನ್ನು ಮೇಲೆ’ ಎಂದಳು ಪೂರ್ಣಕ್ಕ. ‘ಅದೇ ಚಿಂತೆಯಾಗಿದೆ ನನಗೆ’ ಎಂದಳು ರತ್ನಕ್ಕ ಮುಖ ಕಳೆಗುಂದಿಸಿಕೊಂಡು. ‘ಅದ್ಯಾಕೇ ಏನಾಯಿತು’. ‘ಏನಿಲ್ಲ ಚಿಕ್ಕಮ್ಮ, ಇರೋ ಆಸ್ತಿಗೆಲ್ಲಾ ನನ್ನ ಮಗನೇ ಯಜಮಾನ ಅಂದುಕೊಂಡರೆ, ಈಗ ಇವಳ ಮಗ ಬೇರೆ ಬರುತ್ತಿದ್ದಾನೆ’. ‘ಮಗನೋ,ಮಗಳೋ ಗೊತ್ತಿಲ್ಲ ಅಲ್ವಾ ಈಗಲೇ ಯಾಕೆ ತಲೆ ಕೆಡಿಸಿಕೊಂಡು ಕೂತಿದ್ದೀಯಾ’ ‘ಅಲ್ಲ ಚಿಕ್ಮಮ್ಮ ಗಂಡು ಮಗು ಆದರೆ..’ ‘ಹೊಟ್ಟೆಗೆ ಏನಾದರೂ ಕೊಡಲೇ..’ ‘ಬೇಡ ಚಿಕ್ಕಮ್ಮ ಆಗಲೇ 6–7 ತಿಂಗಳಾಯಿತು, ತಾಯಿಗೇ ಅಪಾಯ’. ‘ಸರಿ ನೋಡೋಣ ಈಗಲೇ ಯಾಕೆ ತಲೆಕೆಡಿಸಿಕೊಳ್ತಿ’ ಎಂದಳು ಪೂರ್ಣಕ್ಕ.ರಮಣಿಗೆ ತಿಂಗಳು ತುಂಬಿದವು. ಒಂದು ದಿನ ಎಲ್ಲರೂ ಮಾತನಾಡುತ್ತ ಕುಳಿತಿದ್ದಾಗ, ಅಡುಗೆ ಮನೆಯಿಂದ ನೀರು ಕುಡಿಯುತ್ತಾ ಹೊರಗೆ ಬಂದ ರಮಣಿ ಇದ್ದಕ್ಕಿದ್ದ ಹಾಗೆ ಕೈಯಲ್ಲಿ ಇದ್ದ ಗ್ಲಾಸನ್ನು ಕೆಳಗೆ ಎಸೆದು ಹೊಟ್ಟೆ ಹಿಡಿದುಕೊಂಡು ಕೆಳಗೆ ಗಕ್ಕನೆ ಕುಳಿತಳು. ಅವಳಿಗೆ ವಾಟರ್ ಬ್ರೇಕ್ ಆಗಿತ್ತು ಪೂರ್ಣಕ್ಕ ಹಠಾತ್ತನೆ ಹತ್ತಿರ ಹೋಗಿ ಕೆಳಗೆ ಕೂರಿಸಿದಳು. ಪ್ರಸವ ವೇದನೆ ಶುರುವಾಗಿತ್ತು. ರತ್ನಕ್ಕನ ಸಹಾಯದಿಂದ ರಮಣಿಯನ್ನು ಅಲ್ಲೇ ಇದ್ದ ಕೋಣೆಗೆ ಕರೆದುಕೊಂಡುಹೋದಳು. ಮನೆಯಲ್ಲಿ ರಂಗಣ್ಣ ಇರಲಿಲ್ಲ. ರಂಗಣ್ಣ ಅಪ್ಪ, ಅಮ್ಮ ಯಾರದೋ ಮನೆಗೆ ಹೋಗಿದ್ದರು.ರಮಣಿ ಪೂರ್ಣಕ್ಕನ ಸಹಾಯದಿಂದ ಮಗುವಿಗೆ ಜನ್ಮ ಕೊಟ್ಟಳು. ಮಗು ಕಿಟಾರನೆ ಕಿರುಚಿದಾಗ ಕಣ್ಣು ತೆರೆದ ರಮಣಿ, ಸ್ವಲ್ಪ ಸಮಯದಲ್ಲಿ ಮೂರ್ಛೆ ಹೋದಳು. ‘ಚಿಕ್ಕಮ್ಮ ಯಾವ ಮಗು’ ‘ಗಂಡು ಮಗು ಕಣೇ’ ಎಂದು ಪಿಸುಗುಟ್ಟಿದಳು ಪೂರ್ಣಕ್ಕ. ‘ಹೌದಾ’. ‘ಹೌದು, ನೋಡು ಈಗ ಒಂದೇ ಉಪಾಯ ಇದರ ಕತ್ತು ಹಿಸುಕಿಬಿಡೋಣ’ ‘ಚಿಕ್ಕಮ್ಮ, ಏನ್ ಹೇಳ್ತಾ ಇದೀರಾ, ತಪ್ಪಲ್ವಾ’ ‘ತಪ್ಪೇ ಆದರೆ ನಿನ್ನ ಮಗನಿಗೆ ಅರ್ಧ ಅಸ್ತಿ ಸಿಗೋಲ್ಲ, ಅದೇ ಅಲ್ಲ ರಮಣಿಗೆ ಇನ್ನು ಮಕ್ಕಳಾಗಬಹುದು, ನಿನ್ನ ಮಗನಿಗೆ ಎಷ್ಟು ಸಿಗುತ್ತೋ ಏನೋ’, ‘ನೀನು ಹೂ ಅಂದರೆ, ಈ ಮಗುವೂ ಇರುವುದಿಲ್ಲ, ಮುಂದೆ ಇವಳಿಗೆ ಮಕ್ಕಳಾಗದಂತೆ ಮಾಡುತ್ತೇನೆ. ಯೋಚಿಸಿ ನೋಡು, ಹೇಳು‘ ಎಂದಳು. ರತ್ನಕ್ಕ ‘ನಿಧಾನವಾಗಿ ಸರಿ ಎಂಬಂತೆ ತಲೆ ಆಡಿಸಿದಳು’.ಪ್ರಸವದಲ್ಲೇ ಮಗು ತೀರಿಹೋಯಿತು ಎನ್ನುವ ಸುದ್ದಿ ಕೇಳಿದ ರಮಣಿ ಹುಚ್ಚಿಯಂತಾದಳು. ತನ್ನಲ್ಲೇ ತಾನೇ ಮಾತನಾಡತೊಡಗಿದಳು. ಇದ್ದಕ್ಕಿದ್ದ ಹಾಗೆ ನಗತೊಡಗಿದಳು, ನನ್ನ ಮಗು ಅಳು ಕೇಳಿಸಿತು, ನಗು ಕೇಳಿಸಿತು, ಮಾತು ಕೇಳಿಸಿತು ಎಂದು ಕಿರುಚುತ್ತಾ ಊರೆಲ್ಲಾ ಕಡೆ ತಿರುಗತೊಡಗಿದಳು. ಯಾರಾದರೂ ಮುಟ್ಟಲು ಬಂದರೆ ಕಚ್ಚಲು ಬರುತ್ತಿದ್ದಳು. ಮಾತನಾಡುತ್ತಾ ಮಾತನಾಡುತ್ತಾ ಮಾತೇ ಮುಗಿಯುತು ಎಂಬಂತೆ ಮೌನಿಯಾಗಿಬಿಟ್ಟಳು. ಮತ್ತೆ ಎಂದೂ ಮಾತನಾಡಲಿಲ್ಲ.ಮನೆಯಲ್ಲಿ ಹೆಚ್ಚು ಸಹಾಯ ಮಾಡುತಿದ್ದ ರಮಣಿ ಮನೆಗಿಂತ ಹೊಲದಲ್ಲೇ ಹೆಚ್ಚು ಸಮಯ ವ್ಯಯಮಾಡಲು ಪ್ರಾರಂಭಿಸಿದಳು. ಬೆಳಿಗ್ಗೆ ತಿಂಡಿ ತಿಂದು ಹೊರಟುಹೋಗುತ್ತಿದ್ದಳು, ರಾತ್ರಿ ಬರುತ್ತಿದ್ದಳು. ಯಾರೊಡನೆಯೂ ಬೆರೆಯುತ್ತಿರಲಿಲ್ಲ, ಮಾತನಾಡುತ್ತಿರಲಿಲ್ಲ. ಮಕ್ಕಳು ಮನೆಗೆ ಬಂದಮೇಲೆ ರಂಗಣ್ಣನಿಗೆ ರಮಣಿಯ ಅಗತ್ಯತೆ ಬೀಳಲಿಲ್ಲ, ಅವನು ಹೆಚ್ಚು ಹೆಚ್ಚು ರತ್ನಕ್ಕನ ಜೊತೆ ಕಳೆಯಲಾರಂಬಿಸಿದ. ಆದರೆ ಮಕ್ಕಳಿಬ್ಬರು ಚಿಕ್ಕಮ್ಮನ ಜೊತೆ ಹೊರಗಡೆ ಹೋಗಲು ಹಟಮಾಡುತ್ತಿದ್ದವು. ಬೆಳಿಗ್ಗೆ ಎದ್ದ ನಂತರ ಹೊರಗೆ ಹೊರಡುತ್ತಿದ್ದ ರಮಣಿಯ ಜೊತೆ ಹೋಗಲು ಹಟ ಮಾಡುತ್ತಿದ್ದವು. ಮೊದಲು ಉಪೇಕ್ಷಿಸುತ್ತಿದ್ದ ರಮಣಿ ಮಕ್ಕಳನ್ನು ಜೊತೆ ಕರೆದೊಯ್ಯಲು ಪ್ರಾರಂಭಿಸಿದಳು. ಮಕ್ಕಳಿಗೆ ಹೊರಗಡೆ ಆಟವಾಡಿಸುವುದು, ಮನೆಯಲ್ಲಿ ಊಟ ಮಾಡಿಸುವುದು, ಸ್ನಾನ ಮಾಡಿಸುವುದು ಹೀಗೆ ಮಕ್ಕಳೊಡನೆ ಕಾಲ ಕಳೆಯತೊಡಗಿದಳು. ಮಕ್ಕಳ ಜೊತೆ ಹೆಚ್ಚು ಬೆರೆತಷ್ಟು ಸಂತೋಷವಾಗಿರುತ್ತಿದ್ದಳು. ಮಕ್ಕಳೊಡನೆ ಮಾತನಾಡತೊಡಗಿದಳು. ಅವರಿಗೆ ಕಥೆಗಳನ್ನು ಹೇಳಲಾರಂಬಿಸಿದಳು. ಮಕ್ಕಳನ್ನು ನೋಡಿಕೊಳ್ಳುವುದರಿಂದ ಸಂಪೂರ್ಣ ಮುಕ್ತಿಗೊಂಡ ರತ್ನಕ್ಕ ಖುಷಿಗೊಂಡಳು. ತನ್ನ ಚಿಕ್ಕಮ್ಮನ ಜೊತೆಸೇರಿ ಮನೆ ಯಜಮಾನಿಕೆ ಮಾಡಿಕೊಂಡು, ರಂಗಣ್ಣನ ಆಸ್ತಿಗೆ ತಾನೇ ಒಡತಿಯಂತಾದಳು. ರಾಣಿಯಂತೆ ಮೆರೆಯತೊಡಗಿದಳು.ಮಕ್ಕಳು ಅಮ್ಮನನ್ನು ಮರೆತೇ ಬಿಟ್ಟರು, ಚಿಕ್ಕಮ್ಮನಿಗೆ ಹೆಚ್ಚು ಹತ್ತಿರವಾದರು. ರಮಣಿ ಮಕ್ಕಳ ಸಹವಾಸದಿಂದ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಬಂದಳು. ಹೆಚ್ಚು ಹೆಚ್ಚು ಜನರ ಜೊತೆ ಬೆರೆಯತೊಡಗಿದಳು, ತನಗೆ ಸಾದ್ಯವಷ್ಟು ಸಹಾಯ ಮಾಡತೊಡಗಿದಳು. ಎದೆಯ ಮೂಲೆಯಲ್ಲಿ ಒಂದು ಅನುಕಂಪ, ಭಯ, ಅಪರಾಧಿ ಭಾವ ಇದ್ದ ರತ್ನಕ್ಕ, ರಮಣಿ ಹಣ ಖರ್ಚು ಮಾಡಿದರೂ ಅಡ್ಡಿ ಮಾಡುತ್ತಿರಲಿಲ್ಲ. ಹೀಗೆ ರಮಣಿ ಊರ ಜನಕ್ಕೆ ಹೆಚ್ಚು ಹತ್ತಿರವಾದಳು.ಮಕ್ಕಳನ್ನು ಎಬ್ಬಿಸಿ ಮುಖ ತೊಳಿಸಿ ಹಾಲುಕೊಟ್ಟು, ಸ್ನಾನ ಮಾಡಿಸಿ, ತಿಂಡಿ ಮಾಡಿಸಿ, ಆಟವಾಡಿಸುವುದು, ಊಟ ಮಾಡಿಸುವ ಜೊತೆಗೆ ಮಕ್ಕಳನ್ನು ತನ್ನ ಜೊತೆಯೇ ಮಲಗಿಸಿಕೊಳ್ಳುತ್ತಿದ್ದಳು. ಮಕ್ಕಳನ್ನು ಹೊರಗೆ ಕರೆದೊಯ್ದು ಆಟವಾಡಿಸುತ್ತಿದ್ದಳು.ಖುಷಿ ಖುಷಿಯಾಗಿದ್ದ ಮಕ್ಕಳನ್ನು ಕಂಡು ರತ್ನಕ್ಕ ಸಂತೋಷಗೊಂಡಳು. ಮಕ್ಕಳು ಹೀಗೆ ಖುಷಿಯಿಂದ ಬೆಳೆದು, ಈ ಆಸ್ತಿ ಅನುಭವಿಸಲಿ, ತನಗೆ ಊರೊಗೋಲಾಗಲಿ ಎಂದುಕೊಂಡಳು. ರಮಣಿಯ ಮಗು ಕಿತ್ತುಕೊಂಡಿರುವುದಕ್ಕೆ ತನ್ನ ಮಕ್ಕಳು ಅವಳ ಜೊತೆ ಇರುವುದಕ್ಕೆ ಅಷ್ಟೇನೂ ಬೇಸರ ಇರಲಿಲ್ಲ. ಹೇಗಿದ್ದರೂ ರಮಣಿಗೆ ಮಕ್ಕಳಾಗದು. , ತನ್ನ ಮಕ್ಕಳಿಗೇ ಎಲ್ಲಾ ಆಸ್ತಿ ಎಂದುಕೊಂಡು ಖುಷಿಯ ಕನಸು ಕಾಣತೊಡಗಿದಳು.ಆದರೆ ಚಿಕ್ಕಮ್ಮ ಪೂರ್ಣಕ್ಕ ಸುಮ್ಮನಿರಲಿಲ್ಲ, ‘ರತ್ನ ನೀನು ಹೀಗೇ ಇದ್ದರೆ ಮಕ್ಕಳು ಕೈಬಿಟ್ಟು ಹೋಗುತ್ತಾರೆ. ನೀನು ಬರೀ ಆಸ್ತಿಗೆ ಯಜಮಾನಿ ಆದರೆ ಸಾಲದು ಮಕ್ಕಳು ಮಾತು ಕೇಳುವಂತಿರಬೇಕು. ಅದೂ ಅಲ್ಲದೆ ಮಕ್ಕಳ ಪ್ರೀತಿ ಅವರು ಚಿಕ್ಕವರಿದ್ದಾಗಲೇ ಹೆಚ್ಚು ಸಿಗುವುದು, ಅವರು ದೊಡ್ಡವರಾದಮೇಲೆ ಅವರ ಪಾಡಿಗೆ ಅವರಿರುತ್ತಾರೆ, ನೀನು ಎಳೆದು ಎಳೆದು ಮಾತನಾಡಿಸಬೇಕು’.‘ಚಿಕ್ಕಮ್ಮ ನಿನಗೆ ಗೊತ್ತು ನನಗೆ ಮಕ್ಕಳೇ ಪ್ರಪಂಚ, ಅವರನ್ನು ನೋಡುತ್ತಲೇ ಇರುತ್ತೇನೆ, ರಮಣಿಯ ಜೊತೆಯಿದ್ದರೂ ನನ್ನ ಕಣ್ಣು ಅವರಮೇಲೆ ಇರುತ್ತದೆ, ಅವರು ಕಾಣದಿದ್ದರೆ ನಾನು ಜೀವದಿಂದ ಇರಲು ಸಾಧ್ಯವೇ, ಅವರು ದೂರವಾಗುವುದು ಕನಸಿನಲ್ಲೂ ಸಹಿಸುವುದಿಲ್ಲ. ನೀನು ಹೀಗೆ ಹೇಳಿದಮೇಲೆ, ಯೋಚನೆ ಮಾಡಬೇಕು. ನಾಳೆಯಿಂದ ನೋಡಿ ಮಕ್ಕಳು ನನ್ನ ಜೊತೆಯೇ ಹೆಚ್ಚು ಇರುವಂತೆ ನೋಡಿಕೊಳ್ಳುತ್ತೇನೆ, ಪಾಪ ಎಂದುಕೊಂಡು ರಮಣಿ ಜೊತೆ ಬಿಟ್ಟಿದ್ದೆ’ ಎಂದಳು ರತ್ನಕ್ಕ. ಆದಿನ ರಾತ್ರಿ ಮಕ್ಕಳ ಜೊತೆ ಸಮಯ ಕಳೆಯುವುದರ ಬಗ್ಗೆ ಕನಸುಕಾಣುತ್ತ ಮಲಗಿದಳು.ಬೆಳಿಗ್ಗೆ ಎದ್ದು ನೋಡಿದಾಗ, ರಮಣಿ ಮತ್ತು ಮಕ್ಕಳು ಮನೆಯಲ್ಲಿ ಕಾಣಲಿಲ್ಲ. ಎಲ್ಲ ಕಡೆ ಹುಡುಕಿದರೂ ರಮಣಿ, ಮಕ್ಕಳು ಎಲ್ಲೂ ಕಾಣಲಿಲ್ಲ. ಹೊಲದ ಕಡೆಯಿಂದ ಓಡಿಕೊಂಡು ಬಂದ ಆಳು ಮಾದ, ಹೊಲದ ಭಾವಿಯಲ್ಲಿ ರಮಣಿ ಹಾಗೂ ಮಕ್ಕಳ ಹೆಣಗಳು ತೇಲುತ್ತಿವೆ ಎಂದು ಕಿರುಚಿ, ಕಿರುಚಿ ಹೇಳಿದ.‘ಮಕ್ಕಳಿಲ್ಲದ ನೋವು ನಿನಗೆ ಆಗಬೇಕಲ್ಲವೇ‘ ಎಂದು ರಮಣಿ ನಕ್ಕು ರತ್ನಕ್ಕನ ಕಿವಿಯಲ್ಲಿ ಕೂಗಿದಂತಾಯಿತು, ರತ್ನಕ್ಕ ಅಲ್ಲೇ ಕುಸಿದು ಕುಳಿತಳು. ಎಂ.ವಿ. ಶಶಿಭೂಷಣ ರಾಜು ಅವರ ಕಥೆ ‘ವೃತ್ತ’