71ರಲ್ಲೂ ನೇಗಿಲು ಹಿಡಿವ ತುಳಸಿ ಗೌಡ: ಸಮಾಜದ ಮನೋಭಾವ ಬದಲಿಸಿದ ರೈತ ಮಹಿಳೆ
ಬೀರಣ್ಣ ನಾಯಕ ಮೊಗಟಾಮಳೆಗಾಲದ ಮೋಡಗಳು ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ಹಡವ ಗ್ರಾಮದ ಮೇಲೆ ನೆರಳು ಹರಡಿವೆ. ಗದ್ದೆಯ ಮಣ್ಣು ಮಳೆಗೆ ಮೆತ್ತಗಾಗಿದೆ. ಕೆಸರಿನ ನಡುವೆ ನೇಗಿಲು ನಿಧಾನವಾಗಿ ಭೂಮಿಯನ್ನು ಸೀಳುತ್ತ ಸಾಗುತ್ತಿದೆ. ನೇಗಿಲಿನ ಹಿಡಿಯನ್ನು ಗಟ್ಟಿಯಾಗಿ ಹಿಡಿದಿರುವುದು ಪುರುಷನಲ್ಲ. ಎಪ್ಪತ್ತೊಂದು ವರ್ಷದ ತುಳಸಿ ಗೌಡ!ನೇಗಿಲು ಎಳೆದ ಗೆರಗಳ ನಡುವೆ ಅವರ ಹೆಜ್ಜೆಗಳ

ಬೀರಣ್ಣ ನಾಯಕ ಮೊಗಟಾಮಳೆಗಾಲದ ಮೋಡಗಳು ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ಹಡವ ಗ್ರಾಮದ ಮೇಲೆ ನೆರಳು ಹರಡಿವೆ. ಗದ್ದೆಯ ಮಣ್ಣು ಮಳೆಗೆ ಮೆತ್ತಗಾಗಿದೆ. ಕೆಸರಿನ ನಡುವೆ ನೇಗಿಲು ನಿಧಾನವಾಗಿ ಭೂಮಿಯನ್ನು ಸೀಳುತ್ತ ಸಾಗುತ್ತಿದೆ. ನೇಗಿಲಿನ ಹಿಡಿಯನ್ನು ಗಟ್ಟಿಯಾಗಿ ಹಿಡಿದಿರುವುದು ಪುರುಷನಲ್ಲ. ಎಪ್ಪತ್ತೊಂದು ವರ್ಷದ ತುಳಸಿ ಗೌಡ!ನೇಗಿಲು ಎಳೆದ ಗೆರಗಳ ನಡುವೆ ಅವರ ಹೆಜ್ಜೆಗಳು ಒಂದೊಂದಾಗಿ ಮೂಡುತ್ತವೆ. ಎತ್ತುಗಳ ಹೆಜ್ಜೆಗೆ ಹೆಜ್ಜೆ ಹಾಕುತ್ತ ಸಾಗುವ ಅವರ ಆತ್ಮವಿಶ್ವಾಸವನ್ನು ನೋಡಿದರೆ, ಉಳುಮೆ ಎಂಬುದು ಗಂಡಸರಿಗಷ್ಟೇ ಮೀಸಲು ಎನ್ನುವ ಕಲ್ಪನೆ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತದೆ.ಇಂದು ಅವರನ್ನು ನೋಡಿ ಯಾರೂ ಅಚ್ಚರಿಪಡುವುದಿಲ್ಲ. ಆದರೆ ನಾಲ್ಕು ದಶಕಗಳ ಹಿಂದೆ ಇದೇ ದೃಶ್ಯವನ್ನು ಕಂಡವರು ಮೂಗು ಮುರಿದಿದ್ದರು. ‘ಹೆಂಗಸು ನೇಗಿಲು ಹಿಡಿಯುತ್ತಾಳಾ?’ ಎಂದು ಪ್ರಶ್ನಿಸಿದ್ದರು. ಇಂದು ಅದೇ ಜನರು ‘ತುಳಸಿಯಂಥವರು ಬೇಕು’ ಎಂದು ಕೊಂಡಾಡುತ್ತಿದ್ದಾರೆ.ಇದು ಕೇವಲ ಒಬ್ಬ ಮಹಿಳೆಯ ಕಥೆಯಲ್ಲ; ಸಮಾಜದ ಮನೋಭಾವವನ್ನೇ ಬದಲಿಸಿದ ರೈತ ಮಹಿಳೆಯ ಬದುಕಿನ ಪಯಣ.ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಗೌಡ ಸಮುದಾಯದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ತುಳಸಿ ಗೌಡರಿಗೆ ಕೃಷಿ ಹೊಸದೇನಲ್ಲ. ಬಾಲ್ಯದಿಂದಲೇ ಗದ್ದೆ, ಮಣ್ಣು, ಮಳೆ, ಬೀಜ, ನೆಲದ ಪರಿಮಳ ಅವರ ಬದುಕಿನ ಭಾಗವಾಗಿತ್ತು. ಬಳಿಕ ಅಂಕೋಲಾ ತಾಲ್ಲೂಕಿನ ಶೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡವ ಗ್ರಾಮಕ್ಕೆ ಮದುವೆಯಾಗಿ ಬಂದರೂ ಪರಿಸ್ಥಿತಿ ಬದಲಾಗಲಿಲ್ಲ. ಅಲ್ಲಿಯೂ ಸಾಮಾನ್ಯ ರೈತ ಕುಟುಂಬವೇ.ಬೆಳೆ ಬೆಳೆಯುವುದೇ ಬದುಕು. ಭೂಮಿಯೇ ಜೀವನ. ಆದರೆ ಜೀವನ ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಗಂಡ ಅಕಾಲದಲ್ಲಿ ನಿಧನರಾದರು. ಮಕ್ಕಳು ಇನ್ನೂ ಚಿಕ್ಕವರು. ಮನೆಯ ಹೊಣೆಗಾರಿಕೆ ಸಂಪೂರ್ಣವಾಗಿ ತುಳಸಿ ಅವರ ಹೆಗಲಿಗೆ ಬಂತು. ಗದ್ದೆ ಕೈಬಿಡುವ ಪರಿಸ್ಥಿತಿ ಇರಲಿಲ್ಲ. ಕೂಲಿ ಕಾರ್ಮಿಕರನ್ನು ಯಾವಾಗಲೂ ಅವಲಂಬಿಸುವ ಶಕ್ತಿಯೂ ಇರಲಿಲ್ಲ.ಆಗ ಅವರು ಒಂದು ನಿರ್ಧಾರ ತೆಗೆದುಕೊಂಡರು. ಪುರುಷರು ಮಾಡುವ ಕೆಲಸವನ್ನು ತಾನೇ ಮಾಡಬೇಕು. ನೇಗಿಲು ಹಿಡಿದು ಉಳುಮೆ ಮಾಡಿದರು. ಬೀಜದ ಆಯ್ಕೆ, ಬಿತ್ತನೆ, ಸಸಿ ಕೀಳುವುದು, ನಾಟಿ, ಕೊಯ್ಲು, ಭತ್ತ ಸಂಗ್ರಹ–ಹೀಗೆ ಕೃಷಿಯ ಎಲ್ಲ ಹಂತಗಳಲ್ಲೂ ತಾವೇ ಮುಂಚೂಣಿಗೆ ಬಂದರು. ಮಳೆಗಾಲದ ಕೃಷಿಯಷ್ಟೇ ಅಲ್ಲ, ಹಿಂಗಾರು ಕೃಷಿಯಲ್ಲಿಯೂ ಮಾದರಿ ರೈತ ಮಹಿಳೆಯಾಗಿ ಗುರುತಿಸಿಕೊಂಡರು. ಜೊತೆಗೆ ದನಕರುಗಳ ಸಾಕಣೆ, ಕೋಳಿ ಸಾಕಣೆ, ತರಕಾರಿ ಬೆಳೆಯುವ ಕೆಲಸಗಳನ್ನೂ ಸಮರ್ಥವಾಗಿ ನಿಭಾಯಿಸಿದರು.ಮೊದಲಿಗೆ ಈ ದೃಶ್ಯವನ್ನು ಕಂಡ ಹಲವರು ವ್ಯಂಗ್ಯವಾಡಿದರು. ‘ಇದು ಹೆಂಗಸರ ಕೆಲಸವಲ್ಲ’ ಎಂದು ಕುಹಕ ಮಾತುಗಳಾಡಿದರು. ಆದರೆ ತುಳಸಿ ಗೌಡ ಅವುಗಳಿಗೆ ಉತ್ತರ ಕೊಟ್ಟದ್ದು ಮಾತಿನಿಂದಲ್ಲ; ದುಡಿಮೆಯಿಂದ.ಒಂದು ಬೆಳೆ, ಮತ್ತೊಂದು ಬೆಳೆ, ವರ್ಷದಿಂದ ವರ್ಷಕ್ಕೆ ಅವರ ಸಾಧನೆ ಎಲ್ಲರನ್ನೂ ಸುಮ್ಮನಾಗಿಸಿತು.ಜೀವನದ ದೊಡ್ಡ ಆಘಾತ ಇನ್ನೂ ಎದುರಿಸಬೇಕಿತ್ತು. ಪತಿಯ ನಂತರ ಮಗನನ್ನೂ ಕಳೆದುಕೊಂಡರು. ಆ ನೋವು ಅವರನ್ನು ಕೆಲವು ದಿನ ಖಿನ್ನತೆಗೂ ತಳ್ಳಿತು. ಆದರೆ ಅಲ್ಲಿ ನಿಂತುಬಿಡಲಿಲ್ಲ. ಕಣ್ಣೀರು ಒರೆಸಿಕೊಂಡು ಮತ್ತೆ ಗದ್ದೆಯತ್ತ ನಡೆದರು. ಭೂಮಿಯನ್ನೇ ತಮ್ಮ ನೋವಿನ ಸಂಗಾತಿಯನ್ನಾಗಿಸಿಕೊಂಡರು. ದುಡಿಮೆಯನ್ನೇ ಔಷಧವನ್ನಾಗಿಸಿಕೊಂಡರು.ಅವರ ಸರಳ ಬದುಕು ಇಂದಿಗೂ ಬದಲಾಗಿಲ್ಲ. ಇದ್ದುದರಲ್ಲೇ ಸಂತೃಪ್ತಿಪಟ್ಟು ಬದುಕುವ ಅವರು ಶ್ರೀಮಂತಿಕೆಯನ್ನು ಹುಡುಕಲಿಲ್ಲ. ಕೃಷಿಯೇ ಅವರ ಸಂಪತ್ತು, ಸ್ವಾಭಿಮಾನವೇ ಅವರ ಆಸ್ತಿ.ತಮ್ಮ ಗದ್ದೆ ಕೆಲಸ ಮಾತ್ರವಲ್ಲ, ಊರಿನ ಯಾವುದೇ ರೈತರಿಗೆ ಸಹಾಯ ಬೇಕಾದರೂ ಮೊದಲಿಗರಾಗಿ ಧಾವಿಸುವ ಗುಣ ಅವರದು. ಯಾರಿಗಾದರೂ ಸಸಿ ನೆಡಲು ಜನ ಬೇಕಾದರೂ, ಕೊಯ್ಲಿಗೆ ಕೈ ಬೇಕಾದರೂ, ಕೃಷಿ ಕೆಲಸದಲ್ಲಿ ನೆರವು ಬೇಕಾದರೂ ತುಳಸಿ ಗೌಡ ಹಿಂದೆ ಸರಿಯುವುದಿಲ್ಲ.ಅವರ ಪಾಲಿಗೆ ಕೃಷಿ ಉದ್ಯೋಗವಲ್ಲ; ಪರಸ್ಪರ ಸಹಕಾರದ ಬದುಕು. ತುಳಸಿ ಗೌಡರ ಮಾತುಗಳು ಇಂದಿನ ಯುವಕರಿಗೂ, ಮಹಿಳೆಯರಿಗೂ ದಾರಿದೀಪವಾಗಿವೆ. ‘ಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳಬಾರದು. ಭೂಮಿತಾಯಿ ಯಾರಿಗೂ ಮೋಸ ಮಾಡುವುದಿಲ್ಲ. ಬೇರೆಯವರ ಕುಹುಕ ಮಾತಿಗೆ ಬೆಲೆ ಕೊಡಬಾರದು. ನಮ್ಮ ಕೆಲಸ ನಾವು ಮಾಡಬೇಕು’ ಎನ್ನುವುದು ಅವರ ಜೀವನದ ತತ್ವ.ಮುಂದಿನ ಪೀಳಿಗೆಗೂ ಅವರ ಸಂದೇಶ ಸ್ಪಷ್ಟ. ‘ಯಾರೂ ಕೃಷಿಯಿಂದ ದೂರವಾಗಬಾರದು. ಈ ಕಸುಬು ನಮಗೆ ಅನ್ನ ಕೊಡುವ ಪವಿತ್ರ ಉದ್ಯೋಗ’.ಹಾಲಕ್ಕಿ ಸಮಾಜ ಈಗಾಗಲೇ ಅನೇಕ ಸಾಧಕರನ್ನು ಈ ನಾಡಿಗೆ ಕೊಟ್ಟಿದೆ. ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ, ಪದ್ಮಶ್ರೀ ತುಳಸಿ ಗೋವಿಂದ ಗೌಡ, ಬೆಳಂಬಾರದ ಪಾರ್ಶ್ವವಾಯು ಚಿಕಿತ್ಸೆಯಂತಹ ಅನೇಕ ಕೊಡುಗೆಗಳಿಂದ ಈ ಸಮುದಾಯ ತನ್ನದೇ ಆದ ಗುರುತು ಮೂಡಿಸಿದೆ. ಅದೇ ಸಾಲಿನಲ್ಲಿ ಗದ್ದೆಯ ಮೂಲಕ ಗೌರವ ಗಳಿಸಿದ ಹೆಸರು ತುಳಸಿ ಗೌಡರದು.ಅವರ ಕೃಷಿ ಪ್ರೀತಿ, ಪುರುಷರು ಮಾಡುವ ಕೆಲಸವನ್ನು ಮಹಿಳೆಯರೂ ಸಮರ್ಥವಾಗಿ ಮಾಡಬಲ್ಲರು ಎಂಬ ಆತ್ಮವಿಶ್ವಾಸ ಇಂದು ಅನೇಕ ಮಹಿಳೆಯರಲ್ಲಿ ಹೊಸ ಧೈರ್ಯ ತುಂಬಿದೆ. ಅವರ ಪ್ರೇರಣೆಯಿಂದ ಹಲವಾರು ಮಹಿಳೆಯರು ಗಂಡಸರ ಕೆಲಸ ಎಂದು ಕರೆಯುತ್ತಿದ್ದ ಕೃಷಿ ಕಾರ್ಯಗಳಲ್ಲಿ ಈಗ ಮುಂಚೂಣಿಗೆ ಬರುತ್ತಿದ್ದಾರೆ.ಸಾಮಾಜಿಕ ಕಾರ್ಯಕರ್ತ ಹಾಗೂ ಛಾಯಾಗ್ರಾಹಕ ಪ್ರಮೋದ ಗೌಡ ಬೆಳ್ಸೆ ಅವರ ಮಾತಿನಲ್ಲಿ, ‘ತುಳಸಿಯಂತಹ ರೈತ ಮಹಿಳೆಯ ಕೃಷಿ ಬದುಕು ಮಾದರಿ. ಇಂತಹ ಸಾಧಕರನ್ನು ಸರ್ಕಾರ ಗುರುತಿಸಿ ಗೌರವಿಸುವುದು ನೈತಿಕ ಹೊಣೆಗಾರಿಕೆ’.ಗದ್ದೆಯಲ್ಲಿ ನೇಗಿಲು ಹಿಡಿದ ಆ ದಿನ ತುಳಸಿ ಗೌಡ ತಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಟ ಆರಂಭಿಸಿದ್ದರು. ಇಂದು ಅದೇ ನೇಗಿಲು ಅನೇಕ ಮಹಿಳೆಯರ ಆತ್ಮವಿಶ್ವಾಸವನ್ನು ಉಳುಮೆ ಮಾಡುತ್ತಿದೆ. ***ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260802-51-813585827