ಮಲೆನಾಡಲ್ಲಿ ಮಳೆ ಕೊಂಚ ಇಳಿಮುಖ
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಸೋಮವಾರ ಮಳೆಯ ಅಬ್ಬರ ಕೊಂಚ ಕಡಿಮೆ ಆಗಿದೆ. ಜಿಲ್ಲೆಯ ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಸರಾಸರಿ 3.7 ಸೆಂ.ಮೀ ಮಳೆ ಸುರಿದಿದೆ.ಹೊಸನಗರ ತಾಲ್ಲೂಕು ವಾರಾಹಿ ಜಲಾನಯನ ಪ್ರದೇಶ ವ್ಯಾಪ್ತಿಯ ಸಾವೇಹಕ್ಲಿನಲ್ಲಿ ಅತಿಹೆಚ್ಚು (17.6 ಸೆಂ.ಮೀ) ಮಳೆ ದಾಖಲಾಗಿದೆ. ಮಾಣಿಯಲ್ಲಿ 16.8 ಸೆಂ.ಮೀ, ಹುಲಿಕಲ್ನಲ್ಲಿ 15.4, ಮಾಸ್ತಿಕಟ್ಟ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಸೋಮವಾರ ಮಳೆಯ ಅಬ್ಬರ ಕೊಂಚ ಕಡಿಮೆ ಆಗಿದೆ. ಜಿಲ್ಲೆಯ ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಸರಾಸರಿ 3.7 ಸೆಂ.ಮೀ ಮಳೆ ಸುರಿದಿದೆ.ಹೊಸನಗರ ತಾಲ್ಲೂಕು ವಾರಾಹಿ ಜಲಾನಯನ ಪ್ರದೇಶ ವ್ಯಾಪ್ತಿಯ ಸಾವೇಹಕ್ಲಿನಲ್ಲಿ ಅತಿಹೆಚ್ಚು (17.6 ಸೆಂ.ಮೀ) ಮಳೆ ದಾಖಲಾಗಿದೆ. ಮಾಣಿಯಲ್ಲಿ 16.8 ಸೆಂ.ಮೀ, ಹುಲಿಕಲ್ನಲ್ಲಿ 15.4, ಮಾಸ್ತಿಕಟ್ಟೆ ಯಲ್ಲಿ 13.9, ಯಡೂರಿನಲ್ಲಿ 13.3 ಸೆಂ.ಮೀ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 7.6 ಸೆಂ.ಮೀ ಮಳೆ ಸುರಿದಿದೆ. ಜಲಾಶಯಗಳಿಗೆ ಭರ್ಜರಿ ನೀರು: ಶಿಕಾರಿಪುರದಲ್ಲಿ ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಂಜನಾಪುರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಲ್ಲಿ ಒಂದೇ ದಿನ ತಲಾ 3 ಅಡಿ ನೀರು ಏರಿದೆ. ಭದ್ರಾ ಜಲಾಶಯಕ್ಕೆ ಒಳಹರಿವು 36,103 ಕ್ಯುಸೆಕ್ ಇದ್ದು, 186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 163.6 ಅಡಿ ನೀರು ಸಂಗ್ರಹವಾಗಿದೆ. 1,819 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಈಗ 1,784.70 ಅಡಿ ನೀರಿದೆ. ದಾವಣಗೆರೆ ವರದಿ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಭಾನುವಾರ ಇಡೀ ರಾತ್ರಿ ಉತ್ತಮ ಮಳೆ ಸುರಿದಿದೆ. ಕಡರನಾಯ್ಕನಹಳ್ಳಿಯಲ್ಲಿ ರಸ್ತೆಯೊಂದು ಮುಳುಗಡೆಯಾಗಿದ್ದು, ಹೊಲ, ಗದ್ದೆಗಳು ಜಲಾವೃತವಾಗಿವೆ. ಚಿತ್ರದುರ್ಗ ವರದಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಧಾರಾಕಾರ ಮಳೆಯಾಗಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು, ಸಂಜೆ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.ರೈಲ್ವೆ ಕೆಳ ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಜಲಾವೃತಗೊಂಡಿದ್ದವು. ಹೊಳಲ್ಕೆರೆ, ಹೊಸದುರ್ಗ ಭಾಗದಲ್ಲೂ ಉತ್ತಮ ಮಳೆ ಸುರಿಯಿತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.ಹಾಸನ ವರದಿ: ಹಾಸನ ಜಿಲ್ಲೆಯ ನೆರೆಯ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾಗಿದೆ. ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಎರಡೇ ದಿನದಲ್ಲಿ 2.042 ಟಿಎಂಸಿ ಅಡಿ ನೀರು ಹರಿದು ಬಂದಿದೆ. 37.103 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 28.022 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಸೇತುವೆ ಮುಳುಗಡೆಹುಬ್ಬಳ್ಳಿ: ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಮತ್ತು ವಿಜಯನಗರ ಜಿಲ್ಲೆಯ ಕೆಲವಡೆ ಸೋಮವಾರ ಉತ್ತಮ ಮಳೆಯಾಯಿತು. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ, ಕೃಷಿ ನದಿ ಅಬ್ಬರ ಹೆಚ್ಚಿದೆ.ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕು, ಮುಂಡಗೋಡ ಮತ್ತು ದಾಂಡೇಲಿ ಭಾಗದಲ್ಲಿ ವ್ಯಾಪಕ ಮಳೆಯಾಯಿತು. ಮುಂಡಗೋಡ ತಾಲ್ಲೂಕಿನ ಮಳಗಿಯಲ್ಲಿನ ಧರ್ಮಾ ಜಲಾಶಯ ಕೋಡಿ ಬಿದ್ದಿದ್ದು, ಪಕ್ಕದ ಹಾನಗಲ್ ತಾಲ್ಲೂಕಿಗೆ ನೀರು ಹರಿಯುತ್ತಿದೆ.ಮಡಿಕೇರಿಯಲ್ಲಿ ಮಳೆ ಬಿರುಸುಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಎಲ್ಲೆಡೆ ಮಳೆ ತಗ್ಗಿದೆ. ಮಡಿಕೇರಿಯಲ್ಲಿ ಮಾತ್ರ ಆಗಾಗ ಬಿರುಸಿನಿಂದ ಮಳೆ ಸುರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನದಿ, ತೊರೆಗಳು ಇನ್ನೂ ತುಂಬಿ ಹರಿಯುತ್ತಿವೆ. ಕುಶಾಲನಗರದ ಕೊಪ್ಪ ಸೇತುವೆ ಬಳಿ ಕಾವೇರಿ ನೀರಿನ ಪ್ರಮಾಣ ಏರಿಕೆಯಾಗಿದೆ.‘ಕೆಆರ್ಎಸ್ ’ಗೆ 102 ಅಡಿ ನೀರುಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯಕ್ಕೆ 32 ಸಾವಿರ ಕ್ಯುಸೆಕ್ಗೂ ಹೆಚ್ಚು ನೀರು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ ಸೋಮವಾರ ಸಂಜೆ ವೇಳೆಗೆ 102.09 ಅಡಿ (ಗರಿಷ್ಠ 124.80) ತಲುಪಿದೆ.ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಅಪಾರ ಪ್ರಮಾಣದ ನೀರು ಕೆಆರ್ಎಸ್ ಜಲಾಶಯಕ್ಕೆ ಹರಿದು ಬರುತ್ತಿದೆ. ಸದ್ಯ 24.492 (ಗರಿಷ್ಠ 49.452) ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯದಿಂದ ಕುಡಿಯುವ ಉದ್ದೇಶಕ್ಕೆ, ನದಿ ಮತ್ತು ನಾಲೆಗಳ ಮೂಲಕ 1884 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ 122 ಅಡಿಗಳಷ್ಟು ನೀರಿನ ಸಂಗ್ರಹವಿತ್ತು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.