ಪಶ್ಚಿಮ ಘಟ್ಟ | ಹಳಿ ದುರಸ್ತಿ ಕಾರ್ಯ ಪೂರ್ಣ: ರೈಲು ಸಂಚಾರ ಪುನಾರಂಭ
ಮಂಗಳೂರು: ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟದಲ್ಲಿ ಯಡಕುಮರಿ ಮತ್ತು ಸಿರಿಬಾಗಿಲು ನಿಲ್ದಾಣಗಳ ನಡುವೆ ಕುಸಿದ ಗುಡ್ಡದ ಮಣ್ಣು ತೆರವು ಕಾರ್ಯ ಸೋಮವಾರ ಪೂರ್ಣಗೊಂಡಿದೆ. ಸಕಲೇಶಪುರ– ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವೆ ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನಾರಂಭಗೊಂಡಿದೆ. ಮಣ್ಣು ತೆರವುಗೊಳಿಸಿದ ಬಳಿಕ ಮಂಗಳೂರು ಸೆಂಟ್ರಲ್– ವಿಜಯಪುರ ಎಕ್ಸ್ಪ್ರೆಸ್ (ಸಂ
ಮಂಗಳೂರು: ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟದಲ್ಲಿ ಯಡಕುಮರಿ ಮತ್ತು ಸಿರಿಬಾಗಿಲು ನಿಲ್ದಾಣಗಳ ನಡುವೆ ಕುಸಿದ ಗುಡ್ಡದ ಮಣ್ಣು ತೆರವು ಕಾರ್ಯ ಸೋಮವಾರ ಪೂರ್ಣಗೊಂಡಿದೆ. ಸಕಲೇಶಪುರ– ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವೆ ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನಾರಂಭಗೊಂಡಿದೆ. ಮಣ್ಣು ತೆರವುಗೊಳಿಸಿದ ಬಳಿಕ ಮಂಗಳೂರು ಸೆಂಟ್ರಲ್– ವಿಜಯಪುರ ಎಕ್ಸ್ಪ್ರೆಸ್ (ಸಂಖ್ಯೆ 17378 ) ರೈಲು ಪಶ್ಚಿಮ ಘಟ್ಟದ ಹಳಿಯಲ್ಲಿ ಸಾಗಿತು. ‘ಹಳಿಗಳ ಮೇಲೆ ಬಿದ್ದಿದ್ದ ಗುಡ್ಡದ ಮಣ್ಣಿನ ತೆರವು ಕಾರ್ಯ ಸೋಮವಾರ ಸಂಜೆ 7.25ರ ಸುಮಾರಿಗೆ ಪೂರ್ಣಗೊಂಡಿದ್ದು, ಈ ಹಳಿಯು ರೈಲುಗಳ ಸಂಚಾರಕ್ಕೆ ಯೋಗ್ಯವಾಗಿದೆ’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಹಳಿ ಮೇಲೆ ಬಿದ್ದ ಮಣ್ಣು ತೆರವುಗೊಳಿಸಿ, ದುರಸ್ತಿ ಕಾರ್ಯ ಕೈಗೊಂಡ ಬಳಿಕ ರೈಲು ಸಂಪರ್ಕವನ್ನು ಯಶಸ್ವಿಯಾಗಿ ಮರುಸ್ಥಾಪಿಸಲಾಗಿದೆ. ಆದರೆ, ಈ ಹಳಿಯ ಸಂಪೂರ್ಣ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಇಲ್ಲಿನ ಹಳಿಗಳಲ್ಲಿ ಸಂಚರಿಸುವ ರೈಲುಗಳಿಗೆ ಗಂಟೆಗೆ ಗರಿಷ್ಠ 10 ಕಿ.ಮೀ ವೇಗದ ಮಿತಿಯನ್ನು ವಿಧಿಸಲಾಗಿದೆ. ಸಿಬ್ಬಂದಿ ಪಶ್ಚಿಮ ಘಟ್ಟದ ಮೂಲಕ ಹಾದುಹೋಗುವ ಹಳಿಯಲ್ಲಿ ಅತ್ಯಂತ ಜಾಗರೂಕತೆಯಿಂದ ರೈಲನ್ನು ಚಲಾಯಿಸಲಿದ್ದಾರೆ.‘ಭೂಕುಸಿತ ಸಂಭವಿಸಿದ್ದ ಜಾಗದಲ್ಲಿ ಮರುನಿರ್ಮಾಣ ಕಾಮಗಾರಿಗಳು ಇನ್ನೂ ನಡೆಯುತ್ತಿವೆ. ರೈಲುಗಳ ಸಂಚಾರ ಮುಂಚಿನ ಸ್ಥಿತಿಗೆ ಮರಳುವವರೆಗೆ, ಸಣ್ಣಪುಟ್ಟ ವಿಳಂಬಗಳು ಉಂಟಾಗುವ ಸಾಧ್ಯತೆ ಇವೆ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ