ಜಿಜ್ಞಾಸೆ: ವೇದಗಳು ಮನುಷ್ಯನ ರಚನೆಗಳಲ್ಲ!
‘ವೇದ’, ‘ವೇದ’ – ಎಂದು ಹೇಳುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಆದರೆ ‘ವೇದ ಎಂದರೇನು’ – ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರವನ್ನು ಕೊಡುವುದು ಕಷ್ಟವಾಗುತ್ತದೆ. ಏಕೆಂದರೆ ನಮ್ಮ ಹಿಂದಿನವರು ವೇದಕ್ಕೆ ಹಲವು ಆಯಾಮಗಳಲ್ಲಿ ಅರ್ಥವನ್ನು ಮಾಡಿದ್ದಾರೆ. ಹೀಗಾಗಿ ಮೊದಲಿಗೆ ‘ವೇದ ಎಂದರೇನು’ – ಎಂಬುದನ್ನು ಸ್ವಲ್ಪವಾದರೂ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ.ವ

‘ವೇದ’, ‘ವೇದ’ – ಎಂದು ಹೇಳುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಆದರೆ ‘ವೇದ ಎಂದರೇನು’ – ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರವನ್ನು ಕೊಡುವುದು ಕಷ್ಟವಾಗುತ್ತದೆ. ಏಕೆಂದರೆ ನಮ್ಮ ಹಿಂದಿನವರು ವೇದಕ್ಕೆ ಹಲವು ಆಯಾಮಗಳಲ್ಲಿ ಅರ್ಥವನ್ನು ಮಾಡಿದ್ದಾರೆ. ಹೀಗಾಗಿ ಮೊದಲಿಗೆ ‘ವೇದ ಎಂದರೇನು’ – ಎಂಬುದನ್ನು ಸ್ವಲ್ಪವಾದರೂ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ.ವೇದಗಳ ಬಗ್ಗೆ ಪರಿಚಯ ಮಾಡಿಕೊಡುತ್ತ ಸಾ. ಕೃ. ರಾಮಚಂದ್ರರಾವ್ ಅವರು ಹೇಳಿರುವ ಈ ಮಾತುಗಳು ಇಲ್ಲಿ ಉಲ್ಲೇಖಾರ್ಹವಾಗಿವೆ:‘ವೇದವನ್ನು ಕುರಿತಂತೆ ಆಲೋಚನೆ ಮಾಡುವ ಜನರಲ್ಲಿ ಎರಡು ತೆರನಾದವರಿದ್ದಾರೆ. ವೇದವೆಂದರೆ ಯಾವುದೋ ಓಬಿರಾಯನ ಕಾಲದ ಅಡುಗೂಲಜ್ಜಿ ಕಥೆ, ಅದರಲ್ಲಿ ಸ್ವಾರಸ್ಯವೇನಿರದು; ಈಗಿನ ಕಾಲಕ್ಕಂತೂ ಅದರ ಪ್ರಸಕ್ತಿ ಏನೇನೂ ಇರದು ಎನ್ನುವವರೊಂದು ತೆರ. ವೇದವು ಪರಮಸತ್ಯ; ಅದರಲ್ಲಿ ಎಲ್ಲವೂ ಇದೆ. ನಮ್ಮ ವಿಜ್ಞಾನವಾಗಲೀ ಸಂಶೋಧನೆಗಳಾಗಲೀ ತಾಂತ್ರಿಕ ಜ್ಞಾನವಾಗಲೀ ಕಲೆಯಾಗಲೀ ಉದ್ಯಮವಾಗಲೀ – ಏನನ್ನಾದರೂ ವೇದಕಾಲದ ಋಷಿಗಳು ತಿಳಿದಿದ್ದರು ಎಂದು ನಂಬುವವರಿನ್ನೊಂದು ತೆರ.’ಹೀಗೆಂದು, ಈ ನಂಬಿದ ಜನರೂ, ನಂಬದ ಜನರೂ ವೇದವನ್ನು ಸರಿಯಾಗಿ ತಿಳಿದವರು ಎಂದು ಹೇಳಲಾಗದು. ರಾಯರ ಮಾತುಗಳನ್ನೇ ಕೇಳಿ:‘ಎರಡೂ ತೆರದ ಜನರು ವೇದವನ್ನು ನೋಡದವರು, ವೇದದ ನೇರವಾದ ಪರಿಚಯವನ್ನು ಪಡೆದುಕೊಳ್ಳದವರು, ವೇದವೆಂದರೆ ಏನೆಂದು ತಿಳಿಯದವರು. ನಮ್ಮ ಕಾಲದಲ್ಲಿ ಮಾತ್ರವಲ್ಲ, ಯಾವ ಕಾಲದಲ್ಲಾಗಲಿ ವೇದವನ್ನು ಬಲ್ಲವರ ಸಂಖ್ಯೆ ಕಡಮೆಯೇ.... ಈಗ ವೇದವೆಂದರೇನು ಎಂದು ಯಾರನ್ನಾದರೂ ಕೇಳಿದರೆ ಸಮರ್ಪಕವೆನಿಸುವ ಉತ್ತರವನ್ನು ನೀಡಲಾರರು. ಏನಾದರೊಂದು ಉತ್ತರ ಹೇಳಿದರೂ, ಎಲ್ಲರೂ ಒಂದೇ ಉತ್ತರವನ್ನಂತೂ ಕೊಡುವುದಿಲ್ಲ. ವೇದವನ್ನು ಅಷ್ಟಿಷ್ಟು ಓದಿದವರು ಕೂಡ ವೇದವೆಂದರೆ ಇದೇ, ಇಷ್ಟೇ ಎಂದು ಹೇಳಲಾರರು. ವೇದದ ಸ್ವರೂಪದಲ್ಲೇ ಇರುವ ವಿವರ ಇದು. ವೇದವೆಂದರೆ ಮುಖ್ಯವಾಗಿ ಒಂದು ಕಲ್ಪನೆ. ಪ್ರಮಾಣಭೂತವಾದದ್ದು, ಪವಿತ್ರವೆನಿಸಿದ್ದು, ಮನನೀಯವಾದದ್ದು ಎಂಬಷ್ಟು ಭಾಗ ಕಲ್ಪನೆಯಲ್ಲಿ ಹಾಸುಹೊಕ್ಕಾಗಿ ಬರುತ್ತದೆ. ‘ಅನಂತಾ ವೈ ವೇದಾಃ – ಎಂದರೆ ವೇದಗಳಿಗೆ ಕೊನೆ ಮೊದಲಿಲ್ಲ ಎಂಬ ಮಾತಿದೆ. ಕ್ರೈಸ್ತರಿಗೆ ಬೈಬಲ್ ಇರುವಂತೆ, ಮುಸಲ್ಮಾನರಿಗೆ ಕುರಾನ್ ಇರುವಂತೆ ನಮಗೆ ವೇದ ಎಂದು ಹೇಳಲಾಗದು. ಬೈಬಲ್–ಕುರಾನ್ಗಳ ಸ್ವರೂಪಕ್ಕೂ ವೇದದ ಸ್ವರೂಪಕ್ಕೂ ತುಂಬ ಅಂತರವಿದೆ. ವೇದದ ಪ್ರಮಾಣ ವೇದವೆಂಬ ಗ್ರಂಥವನ್ನವಲಂಬಿಸಿಲ್ಲ; ಗ್ರಂಥ ಗೌಣವಾದದ್ದು.’ಮೇಲಿನ ಮಾತುಗಳು ಚೆನ್ನಾಗಿ ಮನದಟ್ಟಾದರೆ ಆಗ ವೇದ ಎಂದರೇನು ಎಂಬುದಕ್ಕೆ ಸ್ವಲ್ಪ ಉತ್ತರ ಸಿಕ್ಕಂತಾಗುತ್ತದೆ.‘ವೇದ’ ಎಂಬುದನ್ನು ಸರಳವಾಗಿ ಹೇಳುವುದಾದರೆ ‘ತಿಳಿವಳಿಕೆ’, ‘ಅರಿವು’ ಎನ್ನಬಹುದು; ‘ತಿಳಿಯುವುದು’, ‘ವಿಚಾರಮಾಡುವುದು’ ಎಂದೂ ಹೇಳಬಹುದು. ವೇದವನ್ನು ಅಪೌರುಷೇಯ – ಎಂದು ಪರಿಗಣಿಸಲಾಗುತ್ತದೆ; ವೇದವು ಅಪೌರುಷೇಯವಾದುದು – ಎನ್ನುವುದು ಪರಂಪರೆಯ ನಂಬಿಕೆ. ವೇದ ಎಂದರೇನು ಎಂದು ತಿಳಿದುಕೊಳ್ಳಲು ಈ ಒಕ್ಕಣೆಯ ಜಾಡು ಕೂಡ ಮುಖ್ಯವಾಗುತ್ತದೆ.‘ಅಪೌರುಷೇಯ’ ಎಂದರೆ ಏನು? ‘ಪುರುಷಕೃತವಲ್ಲದ್ದು’ ಎಂದು ಅರ್ಥ; ಮನುಷ್ಯನಿಂದ ಆದದ್ದು ಅಲ್ಲ. ಇದರ ಅರ್ಥ, ಡಿವಿಜಿ ಅವರ ಮಾತುಗಳಲ್ಲಿಯೇ ಹೇಳುವುದಾರೆ, ‘ವೇದವು ಪುರುಷಮುಖದಿಂದ ಬಂದದ್ದೇ. ಆದರೆ ಅದರ ಮೂಲಪ್ರೇರಣೆ ಅಥವಾ ಮೂಲಚೋದನೆ ಪುರುಷಬುದ್ಧಿಯಿಂದ ಆದದ್ದಲ್ಲ.’ ವೇದ ಎಂದರೆ ‘ಜ್ಞಾನ’. ಆ ಜ್ಞಾನವು ಮನುಷ್ಯ ಮಾಡಿದ್ದಲ್ಲ ಎನ್ನುವುದು ಇಲ್ಲಿ ನಿಲುವು. ಡಿವಿಜಿ ಅವರ ಮಾತುಗಳನ್ನೇ ಇಲ್ಲಿ ಉಲ್ಲೇಖಿಸಬಹುದು:‘ಜ್ಞಾನವೆಂಬುದು ಸ್ವತಸ್ಸಿದ್ಧವಸ್ತು. ಅದು ಜೀವನದ ಒಳಗಡೆ ಇದ್ದುಕೊಂಡು ಸಹಜವಾಗಿ ಕೆಲಸಮಾಡತಕ್ಕ ಶಕ್ತಿಯೇ ಹೊರತು ಹೊರಗಡೆಯಿಂದ ಇತರರು ನಮ್ಮ ಜೀವನದ ಒಳಗಡೆಗೆ ತಳ್ಳಿ ತುಂಬಿದ್ದಲ್ಲ. ಜ್ಞಾನವು ದೀಪದ ಬತ್ತಿಯೊಳಗಣ ಎಣ್ಣೆಯಂತೆ; ಗುರು, ಶಾಸ್ತ್ರ ಮೊದಲಾದವು ಹೊರಗಣ ಬೆಂಕಿಯ ಕಡ್ಡಿಯಂತೆ. ಬತ್ತಿಯಲ್ಲಿ ಜಿಡ್ಡಿಲ್ಲದಿದ್ದಾಗ ಬೆಂಕಿಯ ಕಡ್ಡಿಯಿಂದ ದೀಪ ಹೊತ್ತದು. ಮೊದಲು ಬೇಕಾದದ್ದು ಅಂತಸ್ಸಾಮಗ್ರಿ. ಆಮೇಲಿನದು ಬಾಹ್ಯೋಪಕರಣ. ಜ್ಞಾನಕ್ಕೆ ಮೊದಲು ಬೇಕಾದದ್ದು ನೈಜವಾದ ಅಂತಶ್ಚೈತನ್ಯ. ಚೈತನ್ಯವು ಹೊರಗಿನಿಂದ ಬರುವುದಾಗದೆ ಸ್ವಯಂಭೂತವೇ ಆಗಿರುವ ಕಾರಣದಿಂದ ಅದು ಅಪೌರುಷೇಯ. ನಮ್ಮ ಪ್ರಪಂಚದಲ್ಲಿಯ ಎಲ್ಲಾ ಮಹಾವಿಭೂತಿಗಳೂ ಒಂದರ್ಥದಲ್ಲಿ ಅಪೌರುಷೇಯಗಳೇ. ಒಳ್ಳೆಯ ಕಾವ್ಯ, ಒಳ್ಳೆಯ ಸಂಗೀತ, ಒಳ್ಳೆಯ ಚಿತ್ರ – ಈ ಕಲಾಕೃತಿಗಳು ಮನುಷ್ಯನ ತಿಣುಕಾಟದಿಂದ ಸಿದ್ಧವಾಗತಕ್ಕವಲ್ಲ. ಹಾಗೆ ಸಿದ್ಧವಾಗುವ ಹಾಗಿದ್ದರೆ ನಮ್ಮಲ್ಲಿ ನೂರುಮಂದಿ ವಾಲ್ಮೀಕಿಗಳೂ ನೂರುಮಂದಿ ಷೇಕ್ಸ್ಪಿಯರುಗಳೂ ಇದ್ದಿರಬೇಕಾಗಿತ್ತು. ಒಂದು ಕಲಾಕೃತಿಯಿಂದ ನಮ್ಮ ಅಂತರಂಗದಲ್ಲಿ ರಸಾವಿರ್ಭಾವವಾಗಬೇಕಾದರೆ ಆ ಕೃತಿಯಲ್ಲಿ ಒಂದು ವಿಶೇಷ ಶಕ್ತಿ ಇರಬೇಕು. ಆ ಶಕ್ತಿಯನ್ನು ತನ್ನ ಕೃತಿಯೊಳಗೆ ತರುವುದು ಹೇಗೆ? ತುಂಬುವುದು ಹೇಗೆ? – ಎಂಬ ರಹಸ್ಯವನ್ನು ಕಲೆಗಾರನಿಗೆ ಯಾವ ಗುರುವೂ ಕಲಿಸಲಾರ, ಯಾವ ಗ್ರಂಥವೂ ತಿಳಿಸಲಾರದು... ಇನ್ನು ಋಷಿಗಳಿಗಾದ ದಿವ್ಯದರ್ಶನವನ್ನು ಅವರು ತಮ್ಮ ಸ್ವಂತ ಬುದ್ಧಿಸಾಹಸದ ಫಲವೆಂದು ಹೇಳಿಕೊಳ್ಳಬಹುದೆ?... ಆ ದಿವ್ಯದರ್ಶನವನ್ನು ಅವರು ಆಶ್ಚರ್ಯಾನಂದದ ಮಾತುಗಳಲ್ಲಿ ವರ್ಣಿಸಿದರು. ಹೀಗೆ ಅವರ ಕೈಕೆಲಸವೇನೂ ಇಲ್ಲದೆ ತಾನಾಗಿ ಅವರಿಗೆ ದೊರೆತದ್ದು ತತ್ತ್ವಜ್ಞಾನ. ಹೀಗೆ ಅದು ಅಪೌರುಷೇಯ.’ಜಿಜ್ಞಾಸೆ: ತತ್ತ್ವಚಿಂತನೆಯ ಮೂಲವೇ ವೇದವೇದ ಎಂಬ ಗ್ರಂಥಭಾಗ ಇರುವುದು ಮಂತ್ರಗಳ ರೂಪದಲ್ಲಿ. ‘ಮಂತ್ರ’ ಎಂದರೆ ಮನನ ಮಾಡುವುದು, ಮನನಕ್ಕೆ ಕಾರಣವಾಗುವುದು, ಮನನಕ್ಕೆ ಆಧಾರವಾಗಿರುವುದು ಎಂಬು ತಿಳಿದುಕೊಳ್ಳಬಹುದು. ಮನಸ್ಸಿನಲ್ಲಿ ಏಕಾಗ್ರತೆಯಿಂದ ಚಿಂತನೆ ನಡೆಸುವುದೇ ‘ಮನನ’. ಹೀಗೆ ಮಂತ್ರಗಳನ್ನು ಮನನ ಮಾಡಿದಾಗ ನಮಗೆ ಅದರಲ್ಲಿರುವ ಅರಿವು ಸಾಕ್ಷಾತ್ಕಾರವಾಗುತ್ತದೆ ಎಂಬುದು ಈ ಪ್ರಕ್ರಿಯೆಯಲ್ಲಿರುವ ತಾತ್ಪರ್ಯ. ವೇದಗಳಲ್ಲಿ ಸಂಹಿತಾ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ – ಎಂಬ ವಿಭಾಗವೂ ಉಂಟು. ಜೊತೆಗೆ ವೇದರಾಶಿಯನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದೂ ವಿಭಾಗಿಸಲಾಗಿದೆ. ಇವುಗಳ ಬಗ್ಗೆ ಮುಂದೆ ಇನ್ನಷ್ಟು ವಿವರಗಳನ್ನು ತಿಳಿಯೋಣ.ಜಿಜ್ಞಾಸೆ: ಫಿಲಾಸಫಿ ಎಂದರೆ ಪ್ರಶ್ನೆಗಳು!ಜಿಜ್ಞಾಸೆ: ಜೀವನಕ್ಕೆ ಫಿಲಾಸಫಿ ಏಕೆ ಬೇಕು?