ಸಕಲೇಶಪುರ| ಮಳೆ ಬಂದರೆ ಹೊಳೆಯಾಗುವ ಹೆದ್ದಾರಿ; ವಾಹನ, ಪಾದಚಾರಿಗಳ ಪರದಾಟ
ಸಕಲೇಶಪುರ: ಮಲೆನಾಡಿನ ಹೆಬ್ಬಾಗಿಲು ಪಟ್ಟಣದ ಹೃದಯಭಾಗದಲ್ಲೇ ಹಾದು ಹೋಗಿರುವ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ತಗ್ಗು ಪ್ರದೇಶದಲ್ಲಿ ಕೆರೆಯಂತೆ ನೀರು ನಿಲ್ಲುವುದರಿಂದ ವಾಹನಗಳ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ.ಹೇಮಾವತಿ ಸೇತುವೆಯಿಂದ ನಾಡಪ್ರಭು ಕೆಂಪೇಗೌಡ ಪ್ರತಿಮೆಯವರೆಗೂ ಹೆದ್ದಾರಿಯ ಎರಡೂ

ಸಕಲೇಶಪುರ: ಮಲೆನಾಡಿನ ಹೆಬ್ಬಾಗಿಲು ಪಟ್ಟಣದ ಹೃದಯಭಾಗದಲ್ಲೇ ಹಾದು ಹೋಗಿರುವ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ತಗ್ಗು ಪ್ರದೇಶದಲ್ಲಿ ಕೆರೆಯಂತೆ ನೀರು ನಿಲ್ಲುವುದರಿಂದ ವಾಹನಗಳ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ.ಹೇಮಾವತಿ ಸೇತುವೆಯಿಂದ ನಾಡಪ್ರಭು ಕೆಂಪೇಗೌಡ ಪ್ರತಿಮೆಯವರೆಗೂ ಹೆದ್ದಾರಿಯ ಎರಡೂ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಯಲ್ಲಿ ತುಂಬಿರುವ ಮಣ್ಣು, ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿಲ್ಲ. ಇದರಿಂದ ಮಳೆಗಾಲದಲ್ಲಿ ಈ ರಸ್ತೆ ಸಾರ್ವಜನಿಕರ ಪಾಲಿಗೆ ಸಂಕಷ್ಟದ ಹಾದಿಯಾಗುತ್ತದೆ.ನಿತ್ಯ ಸಾವಿರಾರು ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸುವ ಈ ಪ್ರಮುಖ ರಸ್ತೆಯ ಸ್ಥಿತಿ ಹಲವು ವರ್ಷಗಳಿಂದಲೂ ಹೀಗೆಯೇ ಇದೆ. ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ವಾಹನಗಳ ಸಂಚಾರದ ವೇಳೆ ರಸ್ತೆಯ ಪಕ್ಕದ 10 ಅಡಿ ದೂರದವರೆಗೆ ನೀರು ಕಾರಂಜಿಯಂತೆ ಚಿಮ್ಮುತ್ತದೆ. ಇದರಿಂದ ರಸ್ತೆ ಬದಿಯಲ್ಲಿ ನಡೆದು ಹೋಗುವ ಪಾದಚಾರಿಗಳಿಗೆ ಮಳೆನೀರು, ಕೊಚ್ಚೆ, ಕೆಸರಿನ ಅಭಿಷೇಕ ಆಗುತ್ತದೆ ಎಂಬುದು ಸಾರ್ವಜನಿಕರು ಆರೋಪ.ಸಾಧಾರಣ ಮಳೆಗೂ ಹೆದ್ದಾರಿಯ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹ ಆಗುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ವೈಜ್ಞಾನಿಕ ಚರಂಡಿ ಮಾರ್ಗಗಳಿಲ್ಲ. ಇರುವ ಚರಂಡಿಗಳನ್ನೂ ಕೆಲವರು ಮುಚ್ಚಿ ರಸ್ತೆ, ಮನೆಗೆ ದಾರಿ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನೆ ಮಾಡುವ ಜವಾಬ್ದಾರಿ ಇರುವಂತಹ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಕಂಡೂ ಕಾಣದಂತೆ ಇದ್ದಾರೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡಬೇಕಾಗಿದೆ ಎನ್ನುತ್ತಾರೆ ಚಾಲಕರು.ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಗುಂಡಿಗಳು ಕಣ್ಣಿಗೆ ಕಾಣದೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇದರಿಂದ ಸಂಚಾರ ದಟ್ಟಣೆಯೂ ಹೆಚ್ಚಿದೆ. ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.ಸಾಗರ್ ಜಾನೇಕೆರೆ, ಮಲೆನಾಡು ರಕ್ಷಣಾ ಸೇನೆ ರಾಜ್ಯ ಘಟಕದ ಅಧ್ಯಕ್ಷರಾಷ್ಟ್ರೀಯ ಹೆದ್ದಾರಿಯ ಪಟ್ಟಣದ ವ್ಯಾಪ್ತಿಯಲ್ಲಿ ಕನಿಷ್ಠ ಚರಂಡಿ ವ್ಯವಸ್ಥೆ ಮಾಡುವ ಸೌಜನ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗಾಗಲಿ, ಪುರಸಭೆ ಆಡಳಿತಕ್ಕಾಗಲಿ ಇಲ್ಲದಿರುವುದು ದುರಂತ ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260803-36-1924682771