ರಾಜ್ಯಗಳು ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ಹಿಂಪಡೆಯಬಹುದು: ಸುಪ್ರೀಂ ಕೋರ್ಟ್
ನವದೆಹಲಿ: ‘ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ದೆಹಲಿ ಮತ್ತು ಇತರ ರಾಜ್ಯ ಸರ್ಕಾರಗಳು ಮುಕ್ತಾಯಗೊಳಿಸಬಹುದು ಅಥವಾ ಹಿಂಪಡೆಯಬಹುದು’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.ಆದರೆ, ಅಂತಹ ವಿದ್ಯಾರ್ಥಿಗಳು ಘೋರ ಅಪರಾಧಗಳ ಹಿನ್ನೆಲೆ ಹೊಂದಿರಬಾರದು ಎಂಬ ಷರತ್ತನ

ನವದೆಹಲಿ: ‘ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ದೆಹಲಿ ಮತ್ತು ಇತರ ರಾಜ್ಯ ಸರ್ಕಾರಗಳು ಮುಕ್ತಾಯಗೊಳಿಸಬಹುದು ಅಥವಾ ಹಿಂಪಡೆಯಬಹುದು’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.ಆದರೆ, ಅಂತಹ ವಿದ್ಯಾರ್ಥಿಗಳು ಘೋರ ಅಪರಾಧಗಳ ಹಿನ್ನೆಲೆ ಹೊಂದಿರಬಾರದು ಎಂಬ ಷರತ್ತನ್ನು ವಿಧಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠವು, ‘ಅಪರಾಧ ಹಿನ್ನೆಲೆ’ ಎಂಬ ಪದವು ಗಂಭೀರ ಮತ್ತು ಘೋರ ಅಪರಾಧಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿತು.ಅಪರಾಧ ಹಿನ್ನೆಲೆ ಇರುವವರನ್ನು ಹೊರತುಪಡಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧದ ಎಫ್ಐಆರ್ಗಳನ್ನು ಮುಂದುವರಿಸದಿರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.ಗಂಭೀರ ಮತ್ತು ಘೋರ ಅಪರಾಧಗಳ ಹಿನ್ನೆಲೆ ಹೊಂದಿರುವ 2,700ಕ್ಕೂ ಹೆಚ್ಚು ಜನರ ವಿರುದ್ಧದ ಎಫ್ಐಆರ್ಗಳನ್ನು ಹಿಂಪಡೆಯಲಾಗುವುದಿಲ್ಲ ಎಂದು ಹೇಳಿದರು.ಕೆಲವು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಪ್ರತಿಭಟನೆ ವೇಳೆ ವಕೀಲರ ಮಕ್ಕಳ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.‘ಪೊಲೀಸರು ಪ್ರತಿಭಟನಕಾರರ ಮೇಲೆ ನಡೆಸಿದ ಬಲಪ್ರಯೋಗದ ವಿಡಿಯೊ ತುಣುಕುಗಳು ಅತ್ಯಂತ ಆಘಾತಕಾರಿಯಾಗಿವೆ. ನಾವು ನ್ಯಾಯಾಲಯಕ್ಕೆ 300 ವಿಡಿಯೊ ತುಣುಕುಗಳನ್ನು ಸಲ್ಲಿಸಿದ್ದೇವೆ. ಉನ್ನತ ಮಟ್ಟದಿಂದ ನಿರ್ದೇಶನಗಳು ಬಂದಿರುವುದರಿಂದ, ಪೊಲೀಸ್ ಕಮಿಷನರ್ ಇವೆಲ್ಲವನ್ನೂ ಪರಿಶೀಲಿಸಬೇಕು’ ಎಂದು ಹೇಳಿದರು.‘ನೀಟ್–ಯುಜಿ’ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿವಿಧ ಪರೀಕ್ಷೆಗಳಲ್ಲಿನ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ‘ಮಿತಿಮೀರಿ ಬಲಪ್ರಯೋಗ’ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.