ಆರ್ಟ್ ಆಫ್ ಲಿವಿಂಗ್ | ಜಮೀನು ಒತ್ತುವರಿ ಆರೋಪ: SIT ಆದೇಶಕ್ಕೆ ಹೈಕೋರ್ಟ್ ತಡೆ
ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ಗೆ ಸೇರಿದ ‘ವೇದ ವಿಜ್ಞಾನ ಮಹಾ ವಿದ್ಯಾಪೀಠ ಟ್ರಸ್ಟ್’ (ವಿವಿಎಂವಿಪಿಟಿ) ವಿರುದ್ಧದ ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ಸರ್ಕಾರದ ಆದೇಶ ಪ್ರಶ್ನಿಸಿ ವಿವಿಎಂವಿಪಿಟಿ ಅಧಿಕೃತ ಪ್ರತಿನಿಧಿ ಕೆ.ಪ್ರಸ

ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ಗೆ ಸೇರಿದ ‘ವೇದ ವಿಜ್ಞಾನ ಮಹಾ ವಿದ್ಯಾಪೀಠ ಟ್ರಸ್ಟ್’ (ವಿವಿಎಂವಿಪಿಟಿ) ವಿರುದ್ಧದ ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ಸರ್ಕಾರದ ಆದೇಶ ಪ್ರಶ್ನಿಸಿ ವಿವಿಎಂವಿಪಿಟಿ ಅಧಿಕೃತ ಪ್ರತಿನಿಧಿ ಕೆ.ಪ್ರಸಾದ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಶ್ರೀರಂಗ ಅವರು, ‘ಜಮೀನಿಗೆ ಸಂಬಂಧಿಸಿದಂತೆ ಪೋಡಿ ಮತ್ತು ದುರಸ್ತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಅದು ಪ್ರತಿವಾದಿ ಅಧಿಕಾರಿಗಳ ಪರಿಶೀಲನೆಯಲ್ಲಿದೆ. ಅರ್ಜಿದಾರರು ಒತ್ತುವರಿ ಮಾಡಿದ್ದಾರೆಯೇ ಎಂಬುದರ ಕುರಿತು ಸರ್ಕಾರದ ಮುಂದೆ ಯಾವುದೇ ವರದಿ ಇಲ್ಲ. ಅಲ್ಲದೆ, ಅರ್ಜಿದಾರರ ಉಪಸ್ಥಿತಿಯಲ್ಲಿ ಜಂಟಿ ಸಮೀಕ್ಷೆಯನ್ನು ನಡೆಸದೆ, ಅಲ್ಲಿ ಒತ್ತುವರಿ ನಡೆದಿದೆ ಎಂಬ ತೀರ್ಮಾನಕ್ಕೆ ಬರಲು ಪ್ರತಿವಾದಿ ಅಧಿಕಾರಿಗಳಿಗೆ ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು, ಎಸ್ಐಟಿ ಆದೇಶಕ್ಕೆ ಸಂಬಂಧಿಸಿದ ಕಾರಣಗಳನ್ನು ಉಲ್ಲೇಖಿಸಿ ‘ಒತ್ತುವರಿಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಟ್ರಸ್ಟ್ ಭೂ ಒತ್ತುವರಿ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸುವುದಕ್ಕೂ ಮೊದಲಿಗೆ ಸಕ್ಷಮ ಪ್ರಾಧಿಕಾರದಡಿಯ ಕಡ್ಡಾಯ ನಿಯಮಗಳ ಪ್ರಕಾರ ಜಂಟಿ ಸಮೀಕ್ಷೆ ನಡೆಸಿಲ್ಲ. ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಅಡಿ ನಿಯಮದಂತೆ ಆದೇಶ ಹೊರಡಿಸಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರದ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಿ ಆದೇಶಿಸಿತು.ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಹಾಗೂ ಪ್ರಾದೇಶಿಕ ಆಯುಕ್ತ ಸೇರಿದಂತೆ ಒಟ್ಟು 12 ಜನ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದೆ.ಆರೋಪ: ಶ್ರೀಶ್ರೀ ರವಿಶಂಕರ್ ಗುರೂಜಿ ನೇತೃತ್ವದ ‘ಆರ್ಟ್ ಆಫ್ ಲಿವಿಂಗ್‘ ಅಡಿಯಲ್ಲಿ ವಿವಿಎಂವಿಪಿಟಿ ಯನ್ನು 1981ರಲ್ಲಿ ಸ್ಥಾಪಿಸಲಾಗಿದೆ. ‘ಆರ್ಟ್ ಆಫ್ ಲಿವಿಂಗ್ ಮತ್ತು ಇದರ ಸಂಬಂಧಿತ ಸಂಸ್ಥೆಗಳು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿವೆ. ಭೂ ದಾಖಲೆ ಸಹಾಯಕ ನಿರ್ದೇಶಕರ ಸಮೀಕ್ಷೆ ಪ್ರಕಾರ 290 ಎಕರೆ ಗೋಮಾಳವನ್ನು 2025ರ ಅಕ್ಟೋಬರ್ನಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ’ ಎಂಬ ಆರೋಪಗಳ ಕುರಿತಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ 2026ರ ಜುಲೈ 17ರಂದು ಆದೇಶಿಸಿತ್ತು.ಕೋರಿಕೆ: ‘ಸರ್ಕಾರ ಎಸ್ಐಟಿ ರಚನೆ ಮಾಡಿರುವುದು ಸಂವಿಧಾನಬಾಹಿರ, ಏಕಪಕ್ಷೀಯ, ಕಾನೂನುಬಾಹಿರ ಮತ್ತು ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲಿಲ್ಲದ ಆದೇಶವಾಗಿದೆ. ಹಾಗಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 195 ಮತ್ತು ಕರ್ನಾಟಕ ಭೂ ಒತ್ತುವರಿ ನಿಷೇಧ ಕಾಯ್ದೆ–2011ರ ಕಲಂ 8ರ ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸುವ ಅಧಿಕಾರ ಪ್ರತಿವಾದಿಗಳಿಗೆ ಇಲ್ಲವೆಂದು ಘೋಷಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ಸುಮನಾ ರಂಗನಾಥ್ ವಕಾಲತ್ತು ವಹಿಸಿದ್ದಾರೆ.