ಮೇಲುಕೋಟೆಯಲ್ಲಿ ವೈಭವದ ಕೃಷ್ಣರಾಜಮುಡಿ ಕಿರೀಟಧಾರಣಾ ಮಹೋತ್ಸವ
ಮೇಲುಕೋಟೆ: ಆಷಾಢ ಜಾತ್ರೆಯ ಕೃಷ್ಣರಾಜಮುಡಿ ಕಿರೀಟಧಾರಣಾ ಮಹೋತ್ಸವ ಸೋಮವಾರ ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು. ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿಯ ದರ್ಶನ ಪಡೆದ ಸಾವಿರಾರು ಭಕ್ತರು ಧನ್ಯತಾಭಾವ ಮೆರೆದರು.ಕೃಷ್ಣರಾಜಮುಡಿ ಬ್ರಹ್ಮೋತ್ಸವದ 4ನೇ ದಿನವಾದ ಸೋಮವಾರ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವನಾರಾಯಣನಿಗೆ ರಾತ್ರಿ 8.30ರ ವೇ

ಮೇಲುಕೋಟೆ: ಆಷಾಢ ಜಾತ್ರೆಯ ಕೃಷ್ಣರಾಜಮುಡಿ ಕಿರೀಟಧಾರಣಾ ಮಹೋತ್ಸವ ಸೋಮವಾರ ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು. ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿಯ ದರ್ಶನ ಪಡೆದ ಸಾವಿರಾರು ಭಕ್ತರು ಧನ್ಯತಾಭಾವ ಮೆರೆದರು.ಕೃಷ್ಣರಾಜಮುಡಿ ಬ್ರಹ್ಮೋತ್ಸವದ 4ನೇ ದಿನವಾದ ಸೋಮವಾರ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವನಾರಾಯಣನಿಗೆ ರಾತ್ರಿ 8.30ರ ವೇಳೆಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ತೊಡಿಸಿ ಅಲಂಕಾರ ಮಾಡಲಾಯಿತು. ಗರುಡದೇವನ ಮೆರವಣಿಗೆ ನಂತರ ಮಹಾಮಂಗಳಾರತಿ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ವೇದಾಂತದೇಶಿಕರ ಸನ್ನಿಧಿಯಲ್ಲಿ ಆರಂಭವಾದ ಈ ಉತ್ಸವ ಚತುರ್ವೀದಿಗಳಲ್ಲಿ ನೆರವೇರಿದ ನಂತರ ರಾತ್ರಿ 10ಕ್ಕೆ ಮುಕ್ತಾಯವಾಯಿತು.ಕಿರೀಟ ಪರಿಶೀಲನೆ:ಮಂಡ್ಯ ಜಿಲ್ಲಾ ಖಜಾನೆಯಿಂದ ಪೊಲೀಸ್ ಬಂದೋಬಸ್ತ್ನಲ್ಲಿ ಮೇಲುಕೋಟೆಗೆ ತಂದ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪಟ್ಟಣದ ಹೊರವಲಯದಲ್ಲಿರುವ ಆಂಜನೇಯಸ್ವಾಮಿ ಸನ್ನಿಧಿಯಲ್ಲಿರಿಸಿ ಪೂಜೆ ನೆರವೇರಿಸಿ ಭದ್ರತಾ ಅಧಿಕಾರಿಗಳಿಗೆ ಗೌರವ ಸಮರ್ಪಿಸಲಾಯಿತು.ನಂತರ ಆ ಪೆಟ್ಟಿಗೆಯನ್ನು ಪಲ್ಲಕ್ಕಿಯಲ್ಲಿರಿಸಿ ಶ್ವೇತಛತ್ರಿ, ದೀವಟಿಗೆ, ಮಂಗಳವಾದ್ಯದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ತರಲಾಯಿತು. ಪೆಟ್ಟಿಗೆಯ ಮೊಹರನ್ನು ಪರಿಶೀಲಿಸಿ, ಕೃಷ್ಣರಾಜಮುಡಿ ಮತ್ತು ಗಂಡಭೇರುಂಡ ಪದಕಗಳನ್ನು ಜಿಲ್ಲಾಧಿಕಾರಿ ಕುಮಾರ, ಉಪವಿಭಾಗಧಿಕಾರಿ ಶ್ರೀನಿವಾಸ್, ಎಡಿಸಿ ಶಿವಾನಂದಮೂರ್ತಿ, ಇಒ ಶೀಲಾ ಪರಿಶೀಲನೆ ಮಾಡಿದರು. ದೇವಾಲಯದ ಸ್ಥಾನಿಕರು, ಅರ್ಚಕ ಪರಿಚಾರಕರು ಹಾಗೂ ಕಾವಲುಗಾರರ ಜಂಟಿವಶಕ್ಕೆ ನೀಡಲಾಯಿತು.ಈ ವೇಳೆ ಮೊದಲನೇ ಸ್ಥಾನಿಕರಾದ ರಾಮಪ್ರಿಯ ಶ್ರೀನಿವಾಸ ನರಸಿಂಹನ್, ತಿರುನಾರಾಯಣ ಅಯ್ಯಂಗಾರ್, ಪಾರ್ಥ ಸಾರಥಿ, ಆರ್ಚಕರಾದ ವರದರಾಜ ಭಟ್ಟರ್, ಮುಕುಂದನ್, ಶ್ರೀರಾಮನ್, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್, ರಾಮಪ್ರಿಯ ಇದ್ದರು. ನಾಗವಲ್ಲಿ ಮಹೋತ್ಸವ:ಕೃಷ್ಣರಾಜಮುಡಿ ಉತ್ಸವಕ್ಕೂ ಮುನ್ನ ದೇವಾಲಯದಲ್ಲಿ ನಾಗವಲ್ಲಿ ಮತ್ತು ನರಾಂದಾಳಿಕಾರೋಹಣ ನೆರವೇರಿತು. ನಂತರ ಕಲ್ಯಾಣನಾಯಕಿ ಮತ್ತು ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕೃತ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನೆರವೇರಿತು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ದೇವಾಲಯದ ರಾಜಗೋಪುರ ಹಾಗೂ ದೇಶಿಕರ ಸನ್ನಿಧಿಗೆ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಿದ್ದರು. ಉತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಲ್ ಇನ್ಸ್ಪೆಕ್ಟರ್ ಆನಂದೇಗೌಡ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.