ಮೈಸೂರು: ಯುವಜನರ ನೆರವಿಗಾಗಿ ‘ಯುವನಿಧಿ’ ಜಾರಿ
ಮೈಸೂರು: ‘ಶಿಕ್ಷಣ ಪಡೆದು ಕೆಲಸ ಸಿಗುವವರೆಗಿನ ಅವಧಿಯಲ್ಲಿ ಯುವಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಮತ್ತು ಆತ್ಮವಿಶ್ವಾಸ ಕುಗ್ಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಫಲಾನುಭವಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಪ್ರೊ.ಶಿವಕುಮಾರ್ ತಿಳಿಸಿದರು.&n

ಮೈಸೂರು: ‘ಶಿಕ್ಷಣ ಪಡೆದು ಕೆಲಸ ಸಿಗುವವರೆಗಿನ ಅವಧಿಯಲ್ಲಿ ಯುವಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಮತ್ತು ಆತ್ಮವಿಶ್ವಾಸ ಕುಗ್ಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಫಲಾನುಭವಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಪ್ರೊ.ಶಿವಕುಮಾರ್ ತಿಳಿಸಿದರು. ಇಲ್ಲಿನ ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಯುವನಿಧಿ’ ಕಾರ್ಯಕ್ರಮದ ಪ್ರಚಾರ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಬಡವರು, ಶ್ರಮಿಕರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಸ್ವಾವಲಂಬನೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಪ್ರತಿ ಕುಟುಂಬದ ದೈನಂದಿನ ಜೀವನೋಪಾಯಕ್ಕೆ ನೆರವಾಗುವುದು ಇದರ ಮುಖ್ಯ ಉದ್ದೇಶ. ನಿರುದ್ಯೋಗಿ ಯುವಜನತೆಗೆ ಯುವನಿಧಿ ಆಸರೆಯಾಗಿದೆ’ ಎಂದರು. ಉದ್ಯೋಗ ಸಿಗುವುದು ಸುಲಭವಲ್ಲ: ‘ಪ್ರಸ್ತುತ ದಿನಗಳಲ್ಲಿ ಪದವಿ ಮುಗಿಸಿದ ತಕ್ಷಣವೇ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವುದು ಸುಲಭವಲ್ಲ. ಪದವಿ ಅಥವಾ ಡಿಪ್ಲೊಮಾ ಮುಗಿಸಿ ಕೆಲಸದ ಹುಡುಕಾಟದಲ್ಲಿರುವವರಿಗೆ ಮಾಸಿಕ ಭತ್ಯೆ ನೀಡಿ ಅವರ ಭವಿಷ್ಯದ ದಾರಿಗೆ ಆಸರೆಯಾಗಲು ಯುವನಿಧಿ ಸಹಕಾರಿಯಾಗಿದೆ’ ಎಂದು ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಹುಣಸೂರು ಬಸವಣ್ಣ, ‘ಪದವಿ ಪೂರ್ಣಗೊಳಿಸಿ ನಿರುದ್ಯೋಗಿಗಳಾಗಿರುವ ಯುವಕ-ಯುವತಿಯರಿಗೆ ಪ್ರತಿ ತಿಂಗಳು ₹3ಸಾವಿರ, ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಪ್ರತಿ ತಿಂಗಳು ₹1,500 ನಿರುದ್ಯೋಗ ಭತ್ಯೆ ನೀಡಲಾಗುವುದು. ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.‘ಈ ಹಣವು ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ, ತರಬೇತಿ ಪಡೆಯಲು ಹಾಗೂ ಕೆಲಸ ಹುಡುಕಲು ಉದ್ಯೋಗಾಕಾಂಕ್ಷಿಗಳಿಗೆ ಆತ್ಮನಿರ್ಭರತೆಗೆ ಆಸರೆಯಾಗಿದೆ’ ಎಂದು ತಿಳಿಸಿದರು.ಕೌಶಲ ತರಬೇತಿ: ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಸಾ.ಮಾ. ಯೋಗೇಶ್ ಮಾತನಾಡಿ, ‘ಯುವ ನಿಧಿ ಪ್ಲಸ್ ಮೂಲಕ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನ, ಸಿಎನ್ಸಿಮೆಷಿನ್ ತರಬೇತಿಯಂತಹ ಆಧುನಿಕ ಮಾರುಕಟ್ಟೆಗೆ ಅಗತ್ಯವಿರುವ ಕೌಶಲ ತರಬೇತಿಯನ್ನು ಉಚಿತವಾಗಿ ಕೊಡಿಸಲಾಗುವುದು’ ಎಂದರು.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕ ಮಂಜುನಾಥ ಕೆ.ಡಿ., ಕಾಲೇಜಿನ ಪ್ರಾಂಶುಪಾಲ ನರಸಿಂಹಮೂರ್ತಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್, ಲಲಿತಾ ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವೀರೇಂದ್ರ ಪಾಲ್ಗೊಂಡಿದ್ದರು.