ಭಾರತದಲ್ಲಿ ನೋಟು ಮುದ್ರಣಕ್ಕೆ ಆಗುವ ವೆಚ್ಚವೆಷ್ಟು?- ಸರ್ಕಾರ ಹೆಚ್ಚು ಹಣ ಮುದ್ರಿಸಿದರೆ ಏನಾಗುತ್ತದೆ?
ನಾವು ಪ್ರತಿದಿನ ಬಳಸುವ 10, 100 ಅಥವಾ 500 ರೂ. ನೋಟುಗಳನ್ನು(Indian Currency)ತಯಾರಿಸಲು ಸರ್ಕಾರಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಅದರ ಮುದ್ರಣ ವೆಚ್ಚ ಕಡಿಮೆ ಇದ್ದರೂ ತಯಾರಿಸಿದ ನೋಟುಗಳ ಮೌಲ್ಯ ಹೆಚ್ಚಿರುತ್ತದೆ. ಹಾಗಿದ್ದರೆ ಸರ್ಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬೇಕಾದಷ್ಟು ಹಣ ಮುದ್ರಿಸಿ ದೇಶದ ಎಲ್ಲರನ್ನೂ ಶ್ರೀಮಂತರನ

ನಾವು ಪ್ರತಿದಿನ ಬಳಸುವ 10, 100 ಅಥವಾ 500 ರೂ. ನೋಟುಗಳನ್ನು(Indian Currency)ತಯಾರಿಸಲು ಸರ್ಕಾರಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಅದರ ಮುದ್ರಣ ವೆಚ್ಚ ಕಡಿಮೆ ಇದ್ದರೂ ತಯಾರಿಸಿದ ನೋಟುಗಳ ಮೌಲ್ಯ ಹೆಚ್ಚಿರುತ್ತದೆ. ಹಾಗಿದ್ದರೆ ಸರ್ಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬೇಕಾದಷ್ಟು ಹಣ ಮುದ್ರಿಸಿ ದೇಶದ ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡಬಹುದಲ್ಲವೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಇದರ ಹಿಂದೆ ಆರ್ಥಿಕತೆಯ ಹಲವು ಮಹತ್ವದ ನಿಯಮಗಳಿವೆ. ನೋಟು ಮುದ್ರಿಸುವುದರಿಂದ ಹಿಡಿದು, ಎಷ್ಟು ಹಣ ಮುದ್ರಿಸಬೇಕು ಎಂಬ ನಿರ್ಧಾರ ಹಾಗೂ ಹೆಚ್ಚು ಹಣ ಮುದ್ರಿಸಿದರೆ ಆಗುವ ಪರಿಣಾಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತದಲ್ಲಿ ನೋಟುಗಳು ಎಲ್ಲಿ ಮುದ್ರಣವಾಗುತ್ತವೆ? ಭಾರತದಲ್ಲಿ ಚಲಾವಣೆಯಲ್ಲಿರುವ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇಲ್ವಿಚಾರಣೆಯಲ್ಲಿ ನಾಲ್ಕು ಪ್ರಮುಖ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತದೆ. ಇವು ನಾಸಿಕ್ಕ್ (ಮಹಾರಾಷ್ಟ್ರ), ದೇವಾಸ್ (ಮಧ್ಯಪ್ರದೇಶ), ಮೈಸೂರು (ಕರ್ನಾಟಕ) ಮತ್ತು ಸಾಲ್ಬೋನಿ (ಪಶ್ಚಿಮ ಬಂಗಾಳ)ದಲ್ಲಿವೆ. ಯಾವ ಮುಖಬೆಲೆಯ ಎಷ್ಟು ನೋಟುಗಳನ್ನು ಮುದ್ರಿಸಬೇಕು ಎಂಬುದನ್ನು RBI ಆರ್ಥಿಕ ಬೆಳವಣಿಗೆ, ಹಣದ ಬೇಡಿಕೆ, ಹಣದುಬ್ಬರ, ಡಿಜಿಟಲ್ ಪಾವತಿಗಳ ಬಳಕೆ ಹಾಗೂ ಹಳೆಯ ನೋಟುಗಳ ಬದಲಾವಣೆಯ ಅಗತ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತದೆ. ಒಂದು ನೋಟು ಮುದ್ರಿಸಲು ಎಷ್ಟು ವೆಚ್ಚವಾಗುತ್ತದೆ? ಒಂದು ನೋಟಿನ ಮುಖಬೆಲೆ ಎಷ್ಟೇ ಇದ್ದರೂ, ಅದನ್ನು ಮುದ್ರಿಸಲು ಅಷ್ಟೇ ವೆಚ್ಚವಾಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಲಭ್ಯಪಡಿಸಿರುವ ಮಾಹಿತಿಯ ಪ್ರಕಾರ, ವಿಶೇಷ ಕಾಗದ, ಭದ್ರತಾ ದಾರ (Security Thread), ವಾಟರ್ಮಾರ್ಕ್, ಮೈಕ್ರೋ ಪ್ರಿಂಟಿಂಗ್, ಬಣ್ಣ ಬದಲಾಯಿಸುವ ಮಸಿ ಸೇರಿದಂತೆ ಹಲವು ಭದ್ರತಾ ತಂತ್ರಜ್ಞಾನಗಳನ್ನು ಬಳಸುವುದರಿಂದ ಈ ವೆಚ್ಚ ಉಂಟಾಗುತ್ತದೆ. ಆದರೆ, ಒಂದು ನೋಟಿನ ನಿಜವಾದ ಮೌಲ್ಯವನ್ನು ಅದರ ಮುದ್ರಣ ವೆಚ್ಚ ನಿರ್ಧರಿಸುವುದಿಲ್ಲ; ದೇಶದ ಆರ್ಥಿಕ ಸ್ಥಿರತೆ, ಭಾರತೀಯ ರಿಸರ್ವ್ ಬ್ಯಾಂಕ್ ಮೇಲಿನ ವಿಶ್ವಾಸ ಮತ್ತು ಸರ್ಕಾರದ ಹಣಕಾಸು ವ್ಯವಸ್ಥೆಯೇ ಅದರ ಮೌಲ್ಯವನ್ನು ನಿರ್ಧರಿಸುತ್ತದೆ. ದೇಶದಲ್ಲಿ ಬಳಕೆಯಾಗುವ ಪ್ರತೀ ನೋಟಿಗೆ ಖರ್ಚಾಗುವುದನ್ನು ತಿಳಿಸುವ ಪಟ್ಟಿ ಇಲ್ಲಿದೆ. ನೋಟುಗಳು ಖರ್ಚು ₹10 ನೋಟು – ₹0.96 ₹20 ನೋಟು – ₹0.95 ₹50 ನೋಟು – ₹1.13 ₹100 ನೋಟು – ₹1.77 ₹200 ನೋಟು – ₹2.37 ₹500 ನೋಟು – ₹2.29 ಸರ್ಕಾರ ಬೇಕಾದಷ್ಟು ಹಣ ಮುದ್ರಿಸದಿರುವುದೇಕೆ? ಸರ್ಕಾರ ಬೇಕಾದಷ್ಟು ಹಣ ಮುದ್ರಿಸಿದರೆ ದೇಶದ ಎಲ್ಲರೂ ಶ್ರೀಮಂತರಾಗುತ್ತಾರೆ ಎಂಬ ಕಲ್ಪನೆ ಕೇಳಲು ಸುಲಭವಾಗಿದ್ದರೂ, ಅದು ಆರ್ಥಿಕವಾಗಿ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ವಸ್ತುಗಳ ಪ್ರಮಾಣ ಹೆಚ್ಚಾಗದೆ, ಹಣ ಮಾತ್ರ ಹೆಚ್ಚಾದರೆ ಅದೇ ವಸ್ತುವಿಗೆ ಹೆಚ್ಚು ಹಣ ನೀಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದನ್ನೇ ಹಣದುಬ್ಬರ (Inflation) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಇಂದು 50 ರೂ. ಸಿಗುವ ವಸ್ತು ಹೆಚ್ಚು ಹಣ ಚಲಾವಣೆಯಾದರೆ 100 ರೂ. ಅಥವಾ 150 ರೂ. ಆಗಬಹುದು. ಅಂದರೆ ಜನರ ಕೈಯಲ್ಲಿ ಹೆಚ್ಚು ಹಣ ಇದ್ದರೂ ಅದರ ಖರೀದಿ ಶಕ್ತಿ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ RBI ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮಾತ್ರ ನೋಟುಗಳನ್ನು ಮುದ್ರಿಸುತ್ತದೆ. ಇದನ್ನೂ ಓದಿ: ಪ್ರತಿಭಟನೆ ನಿಯಂತ್ರಿಸಲು ಪೊಲೀಸರಿಗೆ ಲಾಠಿಚಾರ್ಜ್ಗೆ ಅನುಮತಿ ಬೇಕೇ? ಕಾನೂನು ಏನು ಹೇಳುತ್ತದೆ? ಮತ್ತೆ ಚರ್ಚೆಗೆ ಬಂದ ಅಧಿಕಾರದ ಮಿತಿ ಹೆಚ್ಚು ಹಣ ಮುದ್ರಿಸಿದರೆ ಏನಾಗಬಹುದು? ಅಗತ್ಯಕ್ಕಿಂತ ಹೆಚ್ಚು ಹಣ ಮುದ್ರಿಸಿದರೆ ರೂಪಾಯಿಯ ಮೌಲ್ಯ ಕುಸಿಯಬಹುದು. ಬೆಲೆ ಏರಿಕೆ ನಿಯಂತ್ರಣ ತಪ್ಪಬಹುದು, ಉಳಿತಾಯದ ಮೌಲ್ಯ ಕಡಿಮೆಯಾಗಬಹುದು ಮತ್ತು ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗಬಹುದು. ಜಿಂಬಾಬ್ವೆ ಮತ್ತು ವೆನೆಜುವೆಲಾದಂತಹ ದೇಶಗಳಲ್ಲಿ ನಿಯಂತ್ರಣವಿಲ್ಲದೆ ಹಣ ಮುದ್ರಿಸಿದ್ದರಿಂದ ಅತಿಹೆಚ್ಚಿನ ಹಣದುಬ್ಬರ (Hyperinflation) ಉಂಟಾಗಿ ಕರೆನ್ಸಿಯ ಮೌಲ್ಯವೇ ಕುಸಿದ ಉದಾಹರಣೆಗಳಿವೆ. ಆ ಕಾರಣದಿಂದಲೇ ವಿಶ್ವದ ಬಹುತೇಕ ದೇಶಗಳ ಕೇಂದ್ರ ಬ್ಯಾಂಕ್ಗಳು ಹಣದ ಮುದ್ರಣವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತವೆ. ಹಳೆಯ ನೋಟುಗಳಿಗೆ ಏನಾಗುತ್ತದೆ? ಚಲಾವಣೆಯಲ್ಲಿ ಹಾಳಾಗಿರುವ, ಹರಿದ ಅಥವಾ ಮಸುಕಾದ ನೋಟುಗಳನ್ನು ಬ್ಯಾಂಕ್ಗಳು RBIಗೆ ಕಳುಹಿಸುತ್ತವೆ. ಅವುಗಳನ್ನು ಪರಿಶೀಲಿಸಿ ಬಳಕೆಗೆ ಯೋಗ್ಯವಲ್ಲವೆಂದು ಕಂಡರೆ ವಿಶೇಷ ಯಂತ್ರಗಳ ಮೂಲಕ ನಾಶಪಡಿಸಲಾಗುತ್ತದೆ. ನಂತರ ದೇಶದ ಅಗತ್ಯಕ್ಕೆ ಅನುಗುಣವಾಗಿ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಡಲಾಗುತ್ತದೆ. RBIಯ “ಕ್ಲೀನ್ ನೋಟ್ ಪಾಲಿಸಿ”ಯ ಉದ್ದೇಶ ಜನರಿಗೆ ಉತ್ತಮ ಗುಣಮಟ್ಟದ ನೋಟುಗಳನ್ನು ಲಭ್ಯವಾಗುವಂತೆ ಮಾಡುವುದು. 2025-26ರಲ್ಲಿ ನೋಟು ಮುದ್ರಣ ವೆಚ್ಚವೆಷ್ಟು? RBI 2025-26ರ ವಾರ್ಷಿಕ ವರದಿ ಪ್ರಕಾರ, ದೇಶದಲ್ಲಿ ಚಲಾವಣೆಯಲ್ಲಿರುವ ಹಣದ ಮೌಲ್ಯ ಹೆಚ್ಚಾದರೂ, ನೋಟು ಮುದ್ರಣಕ್ಕಾಗಿ ಮಾಡಿದ ಒಟ್ಟು ವೆಚ್ಚವು ಹಿಂದಿನ ಹಣಕಾಸು ವರ್ಷದ ಹೋಲಿಕೆಯಲ್ಲಿ ಸುಮಾರು 23.5% ಇಳಿಕೆಯಾಗಿದ್ದು 4,875.2 ಕೋಟಿ ರೂ.ಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ, ಆ ವರ್ಷ ಕಡಿಮೆ ಪ್ರಮಾಣದಲ್ಲಿ ಹೊಸ ನೋಟುಗಳ ಬೇಡಿಕೆ (indent) ನೀಡಲಾಗಿತ್ತು. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆ