ʻಗಜʼ ಚಿತ್ರದಲ್ಲಿ ದರ್ಶನ್ ಜೊತೆಗೆ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್ ನಿಧನ
– ‘ಮಹಾಭಾರತ’, ‘ಗಜಿನಿ’, ʻಸೈʼ ಸೇರಿ ಹಲವು ಸಿನಿಮಾಗಳಲ್ಲಿ ಮರೆಯಲಾಗದ ಅಭಿನಯ ಮುಂಬೈ: ಕನ್ನಡದ ʻಗಜʼ, ತಮಿಳಿನ ʻಗಜಿನಿ’, ತೆಲುಗಿನ ʻಸೈʼ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ಜನಮನ ಗೆದ್ದಿದ್ದ ನಟ ಪ್ರದೀಪ್ ರಾವತ್ (Pradeep Rawat) ಅವರು 74ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬ

– ‘ಮಹಾಭಾರತ’, ‘ಗಜಿನಿ’, ʻಸೈʼ ಸೇರಿ ಹಲವು ಸಿನಿಮಾಗಳಲ್ಲಿ ಮರೆಯಲಾಗದ ಅಭಿನಯ ಮುಂಬೈ: ಕನ್ನಡದ ʻಗಜʼ, ತಮಿಳಿನ ʻಗಜಿನಿ’, ತೆಲುಗಿನ ʻಸೈʼ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ಜನಮನ ಗೆದ್ದಿದ್ದ ನಟ ಪ್ರದೀಪ್ ರಾವತ್ (Pradeep Rawat) ಅವರು 74ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಮಾಹಿತಿಯನ್ನ ಸಹನಟ ಯಶ್ಪಾಲ್ ಶರ್ಮಾ (Yashpal Sharma) ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ಪಾಲ್ ಶರ್ಮಾ ಸಂತಾಪ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಭಾವುಕ ಸಂದೇಶ ಹಂಚಿಕೊಂಡಿರುವ ಯಶ್ಪಾಲ್ ಶರ್ಮಾ, ʻನಮ್ಮ ‘ಗಜಿನಿ’, ‘ಲಾಗಾನ್’ ಚಿತ್ರದ ದೇವಾ ಪ್ರದೀಪ್ ರಾವತ್ ಇನ್ನು ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿʼ ಎಂದು ಬರೆದು ಸಂತಾಪ ಸೂಚಿಸಿದ್ದಾರೆ. ವರದಿಗಳ ಪ್ರಕಾರ, ಪ್ರದೀಪ್ ರಾವತ್ ಅವರು ದೀರ್ಘಕಾಲದಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು. ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರು, ನಂತರ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲ್ಪಟ್ಟಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ‘ಮಹಾಭಾರತ’ದಿಂದ ‘ಗಜಿನಿ’ವರೆಗೆ ಅದ್ಭುತ ಸಿನಿ ಪಯಣ ಪ್ರದೀಪ್ ರಾವತ್ ಅವರು ತಮ್ಮ ಅಭಿನಯ ಜೀವನವನ್ನ ಬಿ.ಆರ್. ಚೋಪ್ರಾ ನಿರ್ದೇಶನದ ಜನಪ್ರಿಯ ದೂರದರ್ಶನ ಧಾರಾವಾಹಿ ʻಮಹಾಭಾರತʼ ದಲ್ಲಿ ಅಶ್ವತ್ಥಾಮ ಪಾತ್ರದ ಮೂಲಕ ಆರಂಭಿಸಿದ್ದರು. ಬಳಿಕ ‘ತಹಕಿಕಾತ್’, ‘ಚಂದ್ರಕಾಂತಾ’, ‘ಯುಗ್’, ‘ಗುಲ್ ಸನೋಬರ್’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿದರು. ಬಾಲಿವುಡ್ನಲ್ಲಿ ಅವರು ‘ಐತಬಾರ್’ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿ, ‘ಅಗ್ನಿಪಥ್’, ‘ಪತ್ತರ್ ಕೆ ಫೂಲ್’, ‘ಸಂಗ್ದಿಲ್ ಸನಂ’, ‘ಕೊಯ್ಲಾ’, ‘ಸರ್ಫರೋಶ್’, ‘ಲಾಗಾನ್’ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ 2008ರಲ್ಲಿ ಬಿಡುಗಡೆಯಾದ ಗಜಿನಿ (Ghajini) ತಮಿಳು ಚಿತ್ರದಲ್ಲಿನ ಭಯಾನಕ ಖಳನಾಯಕನ ಪಾತ್ರವು ಅವರಿಗೆ ದೇಶಾದ್ಯಂತ ಜನಪ್ರಿಯತೆ ತಂದುಕೊಟ್ಟಿತು. ಆ ಪಾತ್ರ ಇಂದಿಗೂ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಮಿಂಚಿದ ನಟ ಬಾಲಿವುಡ್ ಮಾತ್ರವಲ್ಲದೆ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿಯೂ ಪ್ರದೀಪ್ ರಾವತ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ವಿಶೇಷವಾಗಿ ಖಳನಾಯಕನ ಪಾತ್ರಗಳಲ್ಲಿ ಅವರ ಗಂಭೀರ ವ್ಯಕ್ತಿತ್ವ ಹಾಗೂ ಪ್ರಭಾವಿ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕನ್ನಡದಲ್ಲಿ ʻಗಜʼ ಸಿನಿಮಾದಲ್ಲಿ ದರ್ಶನ್ ಎದುರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.