ಮಾಗಡಿ ಶಾಸಕ ಬಾಲಕೃಷ್ಣಗೆ ಸಚಿವ ಸ್ಥಾನ: ಅನುಭವ, ನಿಷ್ಠೆಗೆ ಸಚಿವ ಸ್ಥಾನದ ಗಿಫ್ಟ್
ರಾಮನಗರ: ‘ನಮ್ಮ ಬಾಲಣ್ಣನ ರಾಜಕೀಯ ಅನುಭವ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಗ್ಗೆ ಅವರಿಗಿರುವ ನಿಷ್ಠೆಯ ಕಾರಣಕ್ಕೆ ಸಚಿವ ಸ್ಥಾನದ ಗೌರವ ಸಿಕ್ಕಿದೆ...’– ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹೆಸರಿದ್ದ ಸಚಿವ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿ ಹೊರ ಬೀಳುತ್ತಿದ್ದಂತೆ ಬಾಲಕೃಷ್ಣ ಆಪ್ತ ವಲಯದ ಕಾಂಗ್ರೆಸ್ ಮುಖಂಡರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವಿದು.ಹೌದು

ರಾಮನಗರ: ‘ನಮ್ಮ ಬಾಲಣ್ಣನ ರಾಜಕೀಯ ಅನುಭವ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಗ್ಗೆ ಅವರಿಗಿರುವ ನಿಷ್ಠೆಯ ಕಾರಣಕ್ಕೆ ಸಚಿವ ಸ್ಥಾನದ ಗೌರವ ಸಿಕ್ಕಿದೆ...’– ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹೆಸರಿದ್ದ ಸಚಿವ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿ ಹೊರ ಬೀಳುತ್ತಿದ್ದಂತೆ ಬಾಲಕೃಷ್ಣ ಆಪ್ತ ವಲಯದ ಕಾಂಗ್ರೆಸ್ ಮುಖಂಡರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವಿದು.ಹೌದು. ಆ ಮುಖಂಡರ ಮಾತಿನಲ್ಲಿ ನಿಜವಿದೆ. 2013ರಲ್ಲೇ ಜೆಡಿಎಸ್ ತೊರೆದು ‘ಕೈ’ ಹಿಡಿದ ಬಾಲಕೃಷ್ಣ ಅವರ ಸಮಕಾಲೀನ ಸಹೋದ್ಯೋಗಿ ರಾಜಕಾರಣಿಗಳು ಎರಡೆರಡು ಸಲ ಸಚಿವರಾದರು. ಬಾಲಕೃಷ್ಣ ಮಾತ್ರ ‘ತೆನೆ’ ಪಕ್ಷಕ್ಕಿದ್ದ ತಮ್ಮ ನಿಷ್ಠೆ ಬದಲಿಸಲಿಲ್ಲ. ಆದರೆ, ಜೆಡಿಎಸ್ ಎರಡು ಸಲ ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನದ ಅದೃಷ್ಟ ಒಲಿಯಲಿಲ್ಲ. ಕಡೆಗೆ 2018ರಲ್ಲಿ ಕಾಂಗ್ರೆಸ್ ಸೇರಿದ ಬಾಲಕೃಷ್ಣ ಸೋಲಿನ ರುಚಿ ಅನುಭವಿಸಿದರು.ಸೋಲಿನಿಂದ ಎದೆಗುಂದದ ಬಾಲಕೃಷ್ಣ 2023ರ ಚುನಾವಣೆಯಲ್ಲಿ ಗೆದ್ದರು. ಕಾಂಗ್ರೆಸ್ನಲ್ಲಿರುವ ಎರಡು ಶಕ್ತಿ ಕೇಂದ್ರಗಳಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪೈಕಿ, ಜಿಲ್ಲೆಯವರೇ ಆದ ಡಿಕೆಶಿ ಆಪ್ತ ವಲಯದಲ್ಲಿ ಬಾಲಕೃಷ್ಣ ಗುರುತಿಸಿಕೊಂಡರು. ಡಿಸಿಎಂ ಸಹೋದರ ಡಿ.ಕೆ. ಸುರೇಶ್ ಅವರಿಗೂ ಹತ್ತಿರವಾದರು. ಸಿದ್ದರಾಮಯ್ಯ ಅವಧಿಯಲ್ಲೂ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಅವರಿಗೆ ಸಿಕ್ಕಿದ್ದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವಷ್ಟೆ.ಮುಖ್ಯಮಂತ್ರಿ ಬದಲಾವಣೆ, ಒಕ್ಕಲಿಗ ನಾಯಕತ್ವ ಸೇರಿದಂತೆ ಹಲವು ವಿಷಯಗಳಲ್ಲಿ ಶಿವಕುಮಾರ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಡಿಕೆ ಸಹೋದರರಿಗೆ ಬಾಲಕೃಷ್ಣ ನಿಷ್ಠೆ ತೋರುತ್ತಾ ಬಂದವರು. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೂ ಅನುದಾನದ ಪ್ರೋತ್ಸಾಹ ಸಿಕ್ಕಿತು. ಇಷ್ಟಾದರೂ, ಸಚಿವ ಸ್ಥಾನದ ಅದೃಷ್ಟವಿಲ್ಲದ ಅನುಭವಿ ರಾಜಕಾರಣಿಗೆ ಕಡೆಗೂ ಮುಖ್ಯಮಂತ್ರಿ ಶಿವಕುಮಾರ್ ಸರ್ಕಾರದಲ್ಲಿ ಸಚಿವ ಸ್ಥಾನದ ಭಾಗ್ಯ ಸಿಕ್ಕಿದೆ. ಇದರ ಹಿಂದೆ ಶಿವನಿಷ್ಠೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿರುವುದನ್ನು ಯಾರೂ ಅಲ್ಲಗಳೆಯಲಾರರು.ಹಲವು ಲೆಕ್ಕಾಚಾರ:‘ಜೆಡಿಎಸ್ ಭದ್ರಕೋಟೆಯಾಗಿದ್ದ ಜಿಲ್ಲೆಯ ನಾಲ್ಕು ಕ್ಷೇತ್ರಗಳೂ ಇದೀಗ ‘ಕೈ’ವಶವಾಗಿವೆ. ಸದ್ಯ ಎರಡು ವರ್ಷದ ಅವಧಿಗೆ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್, ಮುಂದಿನ 2028ರ ಚುನಾವಣೆಯಲ್ಲೂ ಪಕ್ಷವನ್ನು ಗೆಲುವಿನ ದಡಕ್ಕೆ ತಂದು ಸಿ.ಎಂ ಆಗುವ ಗುರಿ ಹೊಂದಿದ್ದಾರೆ. ಅವರ ಈ ಕನಸಿಗೆ ನೀರೆರೆಯಬೇಕಾದರೆ ಮುಂದೆಯೂ ಜಿಲ್ಲೆಯು ಅವರ ಕೈ ಬಲಪಡಿಸಬೇಕಿದೆ. ಅದೇ ಲೆಕ್ಕಾಚಾರದಲ್ಲಿ ಜಿಲ್ಲೆಯ ಅನುಭವಿ ಮತ್ತು ತಮಗೆ ನಿಷ್ಠನಾಗಿರುವ ಬಾಲಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಡಿಕೆಶಿ ಮಣೆ ಹಾಕಿದ್ದಾರೆ. ಇದರ ಹಿಂದೆ ಡಿ.ಕೆ. ಸುರೇಶ್ ಅವರ ಪಾತ್ರವೂ ಇದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ಜಿಲ್ಲೆಯಲ್ಲಿರುವ ನಾಲ್ವರು ಶಾಸಕರ ಪೈಕಿ ರಾಮನಗರದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮೊದಲ ಸಲ ಗೆದಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂದು ಗೆದ್ದಿರುವ ಸಿ.ಪಿ. ಯೋಗೇಶ್ವರ್ ಅವರ ಹೆಸರು ಕೇಳಿ ಬಂದಿರಲೇ ಇಲ್ಲ. ಉಳಿದಂತೆ ವಿಧಾನ ಪರಿಷತ್ ಸದಸ್ಯರ ಪೈಕಿ ಹಿರಿಯರಾಗಿರುವ ಡಿಕೆ ಸಹೋದರರ ಸಂಬಂಧಿ ಎಸ್. ರವಿ, ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ಪುಟ್ಟಣ್ಣನ ಹೆಸರು ಪರಿಗಣಿಸುವ ಸ್ಥಿತಿಯಲ್ಲಿ ಡಿಕೆಶಿ ಇರಲಿಲ್ಲ. ಹಾಗಾಗಿ, ಆಪ್ತ ವಲಯದಲ್ಲಿದ್ದು ತಮ್ಮ ಪರವಾಗಿ ಬ್ಯಾಟಿಂಗ್ ಮಾಡುವ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಕೊಡಲೇಬೇಕಾಗಿತ್ತು. ಅವರಿಗೆ ಅರ್ಹತೆಯೂ ಇತ್ತು’ ಎಂದು ಅಭಿಪ್ರಾಯಪಟ್ಟರು.‘ಶಿವಕುಮಾರ್ ಅವರು ಮಹತ್ವಕಾಂಕ್ಷೆಯೊಂದಿಗೆ ಬಿಡದಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ಇರುವುದು ಮಾಗಡಿ ಕ್ಷೇತ್ರದ ವ್ಯಾಪ್ತಿಯಲ್ಲೇ. ಯೋಜನೆ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೊಡೆ ತಟ್ಟಿ ನಿಂತಿದ್ದಾರೆ. 500 ದಿನಗಳಿಂದ ಯೋಜನೆ ವಿರುದ್ಧ ಹೋರಾಡುತ್ತಿರುವ ರೈತರ ಹೋರಾಟಕ್ಕೆ ಬಲ ತುಂಬಿ, ಚುನಾವಣೆವರೆಗೆ ಅದರ ಕಾವು ಕಾಯ್ದುಕೊಳ್ಳಲು ತಂತ್ರ ಹೆಣೆದಿದ್ದಾರೆ. ಜೊತೆಗೆ ಹಲವು ಸಂಘಟನೆಗಳು ಸಹ ಹೋರಾಟಕ್ಕೆ ಬೆಂಬಲ ನೀಡಿವೆ. ಇವೆಲ್ಲವನ್ನು ನಿಭಾಯಿಸಿ ಟೌನ್ಶಿಪ್ ಅನುಷ್ಠಾನಗೊಳಿಸಲು ಬಾಲಕೃಷ್ಣ ಅವರಿಗೆ ಮತ್ತಷ್ಟು ಶಕ್ತಿ ತುಂಬುವುದು ಮುಖ್ಯಮಂತ್ರಿಗೆ ಅನಿವಾರ್ಯವಾಗಿತ್ತು’ ಎಂದು ವಿಶ್ಲೇಷಿಸಿದರು.ಅಪ್ಪ–ಮಗ ಸಚಿವರಾದ ದಾಖಲೆಮಾಗಡಿ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದ ಬಾಲಕೃಷ್ಣ ಸಚಿವ ಸ್ಥಾನ ಸ್ವೀಕರಿಸುವುದರೊಂದಿಗೆ ಅಪ್ಪನ ಹಾದಿಯಲ್ಲಿ ಮಗನೂ ಸಚಿವನಾದ ಹೊಸ ದಾಖಲೆಯನ್ನು ಕ್ಷೇತ್ರದಲ್ಲಿ ನಿರ್ಮಿಸಿದ್ದಾರೆ. ಬಾಲಕೃಷ್ಣ ಅವರಿಗೆ ರಾಜಕಾರಣ ಹೊಸದೇನಲ್ಲ. ಅವರ ತಂದೆ ಎಚ್.ಜಿ. ಚನ್ನಪ್ಪ ಅವರು 3 ಸಲ ಶಾಸಕರಾಗಿ ಕ್ಷೇತ್ರ ಪ್ರತಿನಿಧಿಸಿದ್ದರು. 1972ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ವಿಧಾನಸೌಧ ಪ್ರವೇಶಿದ ಚನ್ನಪ್ಪ ಅವರು, 1983ರಲ್ಲಿ ಕಾಂಗ್ರೆಸ್ನಿಂದ ಗೆದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ 1985ರ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಬಂದು ಗೆದ್ದ ಅವರು ಎಸ್.ಆರ್. ಬೊಮ್ಮಾಯಿ ಸರ್ಕಾರದಲ್ಲಿ ಕೇವಲ 8 ದಿನ ಮುಜರಾಯಿ ಸಚಿವರಾಗಿದ್ದರು.ತಂದೆಯ ಉತ್ತರಾಧಿಕಾರಿಯಾಗಿ ರಾಜಕಾರಣ ಪ್ರವೇಶಿಸಿದ ಬಾಲಕೃಷ್ಣ ಅವರಿಗೆ ಶಾಸಕ ಸ್ಥಾನ ಒಲಿದಷ್ಟು ಸುಲಭವಾಗಿ ಸಚಿವ ಸ್ಥಾನ ಸಿಗಲಿಲ್ಲ. ಅದಕ್ಕಾಗಿ ಅವರು ರಾಜಕಾರಣದಲ್ಲಿ ಮೂರೂವರೆ ದಶಕ ಕಾಯಬೇಕಾಯಿತು. ಹಲವು ಏಳುಬೀಳುಗಳ ಬಳಿಕ ಇದೀಗ ಸಚಿವ ಸ್ಥಾನದ ಅದೃಷ್ಟ ಸಿಕ್ಕಿದೆ. 2018ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅವರು, ಆ ವರ್ಷದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ. ಮಂಜುನಾಥ್ ವಿರುದ್ಧ ಸೋತರು. 2023ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದರು. ಡಿ.ಕೆ. ಶಿವಕುಮಾರ್ ಬಳಗದಲ್ಲಿ ಗುರುತಿಸಿಕೊಂಡಿದ್ದ ಅವರಿಗೆ ಸಿದ್ದರಾಮಯ್ಯ ಅವಧಿಯಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು.ಮೂರು ಪಕ್ಷದಲ್ಲಿ ಗೆದ್ದ ಹೆಗ್ಗಳಿಕೆತಂದೆಯ ಉತ್ತರಾಧಿಕಾರಿಯಾಗಿ ಬಾಲಕೃಷ್ಣ ಅವರು ರಾಜಕಾರಣ ಪ್ರವೇಶಿಸಿದ್ದು ಬಿಜೆಪಿ ಮೂಲಕ. ತಂದೆಯ ಅಕಾಲಿಕ ನಿಧನದಿಂದಾಗಿ ರಾಜಕೀಯ ಪ್ರವೇಶಿಸಿದ ಬಾಲಕೃಷ್ಣ ಅವರಿಗೆ 1994ರ ಚುನಾವಣೆಯಲ್ಲಿ ಎದುರಾಳಿಯಾಗಿದ್ದು ಕಾಂಗ್ರೆಸ್ನ ಪ್ರಬಲ ರಾಜಕಾರಣಿ ಎಚ್.ಎಂ. ರೇವಣ್ಣ. ಅವರನ್ನು ಎದುರಿಸಲು ಬಾಲಕೃಷ್ಣ ಅವರಿಗೆ ಇದ್ದ ಆಯ್ಕೆ ಜೆಡಿಎಸ್ ಮತ್ತು ಬಿಜೆಪಿ. ಜೆಡಿಎಸ್ನಿಂದ ಟಿಕೆಟ್ ಸಿಗದಿದ್ದಾಗ ಬಿಜೆಪಿ ಗಿಟ್ಟಿಸಿಕೊಂಡ ಅವರು, ಮೊದಲ ಚುನಾವಣೆಯಲ್ಲೇ ರೇವಣ್ಣ ವಿರುದ್ಧ ಗೆಲುವು ಸಾಧಿಸಿದರು. 1999ರ ಚುನಾವಣೆಯಲ್ಲಿ ಅದೇ ರೇವಣ್ಣ ವಿರುದ್ಧ ಪರಾಭವಗೊಂಡ ಬಾಲಕೃಷ್ಣ, ನಂತರ ಜೆಡಿಎಸ್ ಸೇರಿದರು. ಬಳಿಕ 2004, 2008 ಹಾಗೂ 2013ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡರು. ನಂತರ ಜೆಡಿಎಸ್ ತೊರೆದು 2018ರಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಎ. ಮಂಜುನಾಥ್ ವಿರುದ್ಧ ಸೋತರು. ಬಳಿಕ 2023ರ ಚುನಾವಣೆಯಲ್ಲಿ ಮತ್ತೆ ಗೆದ್ದು ಸಚಿವ ಸ್ಥಾನ ಗಿಟ್ಟಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260804-14-1436354962