ಬಿಜೆಪಿ ಅಧ್ಯಕ್ಷರಿಗೆ ಮುಖಭಂಗ
ನವದೆಹಲಿ: ಬಿಜೆಪಿ ಭದ್ರಕೋಟೆಯಾದ ಬಿಹಾರದ ಬಾಂಕೀಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ತವರಲ್ಲೇ ಪಕ್ಷ ಮುಖಭಂಗ ಅನುಭವಿಸಿದೆ.ಹಿಂದಿ ಸೀಮೆಯ ಬಿಹಾರ, ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಸೋಮವಾರ ನಡೆಯಿ

ನವದೆಹಲಿ: ಬಿಜೆಪಿ ಭದ್ರಕೋಟೆಯಾದ ಬಿಹಾರದ ಬಾಂಕೀಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ತವರಲ್ಲೇ ಪಕ್ಷ ಮುಖಭಂಗ ಅನುಭವಿಸಿದೆ.ಹಿಂದಿ ಸೀಮೆಯ ಬಿಹಾರ, ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಸೋಮವಾರ ನಡೆಯಿತು. ಗುಜರಾತ್ನ ಮಂಜಲ್ಪುರ ಕ್ಷೇತ್ರವನ್ನು ಬಿಜೆಪಿ ಹಾಗೂ ಮಧ್ಯಪ್ರದೇಶದ ದತಿಯಾ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿವೆ. ‘ನೀಟ್’ ಪರೀಕ್ಷಾ ಸುಧಾರಣೆಗಾಗಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದ ‘ಜೆನ್–ಝೀ’ ಆಂದೋಲನದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.ಬಾಂಕೀಪುರ ಉಪಚುನಾವಣೆಯಲ್ಲಿ ಪ್ರಶಾಂತ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಿಜೆಪಿ ಅಭ್ಯರ್ಥಿ ನೀರಜ್ ಸಿನ್ಹಾ ಅವರನ್ನು 19,324 ಮತಗಳಿಂದ ಸೋಲಿಸಿದರು. ಈ ಕ್ಷೇತ್ರವು 1995ರಿಂದ ಬಿಜೆಪಿ ತೆಕ್ಕೆಯಲ್ಲಿತ್ತು.ನಿತಿನ್ ನವೀನ್ ಈ ಕ್ಷೇತ್ರದ ಶಾಸಕರಾಗಿದ್ದರು. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಬಡ್ತಿ ಪಡೆದು 2026ರ ಏಪ್ರಿಲ್ನಲ್ಲಿ ರಾಜ್ಯಸಭಾ ಸದಸ್ಯರಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1995ರಿಂದ ನವೀನ್ ಕಿಶೋರ್ ಸಿನ್ಹಾ (ನಿತಿನ್ ತಂದೆ) ಮತ್ತು ನಿತಿನ್ ನವೀನ್ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಾಯಸ್ಥ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿರುವ ಈ ಕ್ಷೇತ್ರವು ಬಿಜೆಪಿ ಪಾಲಿಗೆ ಭದ್ರಕೋಟೆಯಾಗಿತ್ತು.ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಸ್ಪರ್ಧಿಸಿರಲಿಲ್ಲ. ಅವರ ಪಕ್ಷದ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದರು. ಪ್ರಶಾಂತ್ ಕಿಶೋರ್ ಅವರು ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕಣಕ್ಕೆ ಇಳಿದಿದ್ದರು. ಆದಾಗ್ಯೂ, ನಿತಿನ್ ನವೀನ್ ಮತ್ತು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ ಆಡಳಿತಾರೂಢ ಎನ್ಡಿಎ ನಾಯಕರು ಮತದಾರರನ್ನು ಓಲೈಸಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದರು.ಪ್ರಶಾಂತ್ ಕಿಶೋರ್ ಅವರ ಗೆಲುವು ನಿತಿನ್ ನವೀನ್ ಮತ್ತು ಬಿಹಾರದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ದೊಡ್ಡ ಹಿನ್ನಡೆ. ಸಾಮ್ರಾಟ್ ನೇತೃತ್ವದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಮಲ ಪಾಳಯ ಸೋತಿದೆ.ಮಂಜಲ್ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಗೋವಿಂದಭಾಯಿ ಪಟೇಲ್ ಅವರು ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿ ಮತ್ತು ಮಾಜಿ ಸಚಿವ ಭಿಖಾಭಾಯಿ ರಬಾರಿ ಅವರನ್ನು 30,630 ಮತಗಳಿಂದ ಸೋಲಿಸಿದರು. ಪಟೇಲ್ 55,481 ಮತಗಳನ್ನು ಹಾಗೂ ರಬಾರಿ 24,851 ಮತಗಳನ್ನು ಪಡೆದರು. ಕೇಸರಿ ಭದ್ರಕೋಟೆಯಲ್ಲಿ ಪಟೇಲ್ ಮತ್ತು ರಬಾರಿ ಮಾತ್ರ ಅಭ್ಯರ್ಥಿಗಳಾಗಿದ್ದರು. ಈ ಗೆಲುವಿನೊಂದಿಗೆ, 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಯ ಬಲ 162ಕ್ಕೆ ಏರಿದೆ. ಕಾಂಗ್ರೆಸ್ 12 ಶಾಸಕರನ್ನು ಹೊಂದಿದೆ.ದತಿಯಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘನಶ್ಯಾಮ್ ಸಿಂಗ್ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಆಶುತೋಷ್ ತಿವಾರಿ ಅವರನ್ನು 6,016 ಮತಗಳಿಂದ ಸೋಲಿಸಿದರು. ಆಜಾದ್ ಸಮಾಜ ಪಕ್ಷದ ಅಭ್ಯರ್ಥಿ ದಾಮೋದರ್ ಯಾದವ್ 22,527 ಮತಗಳನ್ನು ಗಳಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260804-51-1369811636