ಪುಟ್ಟರಂಗಶೆಟ್ಟಿಗೆ ಕೊನೆಗೂ ಒಲಿದ ಸಚಿವ ಪಟ್ಟ
ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಎರಡನೇ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ. ಸೋಮವಾರ ಸಂಜೆ ಬೆಂಗಳೂರಿನ ಲೋಕಭವನದ ಆವರಣದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಜಿಲ್ಲೆಗೆ ಪ್ರಾತಿನಿಧ್ಯ: 2023ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಎರಡನೇ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ. ಸೋಮವಾರ ಸಂಜೆ ಬೆಂಗಳೂರಿನ ಲೋಕಭವನದ ಆವರಣದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಜಿಲ್ಲೆಗೆ ಪ್ರಾತಿನಿಧ್ಯ: 2023ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಗೆದ್ದ ಯಾರೊಬ್ಬರಿಗೂ ಸಚಿವ ಸ್ಥಾನವಾಗಲಿ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವಾಗಲಿ ದಕ್ಕಿರಲಿಲ್ಲ. ಮೂರು ವರ್ಷಗಳ ಬಳಿಕ ಕೊನೆಗೂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆತಿದೆ.ಲೆಕ್ಕಾಚಾರ: ಮೂರು ದಶಕಗಳಿಗೂ ಹೆಚ್ಚಿನ ರಾಜಕೀಯ ಅನುಭವ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆ, ಜಾತಿ (ಉಪ್ಪಾರ) ಲೆಕ್ಕಾಚಾರ, ವೈಯಕ್ತಿಕ ವರ್ಚಸ್ಸು, ಪಕ್ಷ ನಿಷ್ಠೆ ಸಹಿತ ಹಲವು ವಿಚಾರಗಳನ್ನು ಅಳೆದು ತೂಗಿರುವ ಹೈಕಮಾಂಡ್ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ.ನೇರ, ನಡೆ ನುಡಿಯ ವ್ಯಕ್ತಿತ್ವದಿಂದಲೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಸಭೆ, ಸಮಾರಂಭ, ಧಾರ್ಮಿಕ ಉತ್ಸವ, ಸಾವು, ನೋವು ಸಹಿತ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ವರ್ಚಸ್ಸು ಹೊಂದಿದ್ದಾರೆ. ರಾಜಕೀಯ ಪ್ರವೇಶದ ಆರಂಭದ ದಿನಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿ ಉಳಿಯುವ ಮೂಲಕ ಪಕ್ಷ ನಿಷ್ಠೆ ತೋರಿದ್ದು, ಎರಡೆರಡು ಬಾರಿ ಸಚಿವ ಸ್ಥಾನ ಸಿಗಲು ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.ರಾಜಕೀಯ ಹಾದಿ: ಚಾಮರಾಜನಗರ ತಾಲ್ಲೂಕಿನ ಗೌಡಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಪುಟ್ಟರಂಗಶೆಟ್ಟಿ ಬಳಿಕ ಉಪ ಪ್ರಧಾನರಾಗಿ, ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಚಾಮರಾಜನಗರ ಜಿಲ್ಲಾ ಎಪಿಎಂಸಿ ಅಧ್ಯಕ್ಷರಾಗಿ, ಯಳಂದೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ನಾಲ್ಕು ಬಾರಿ ಶಾಸಕ: 2008ರಿಂದ 2023ರವರೆಗೆ ಸತತ ನಾಲ್ಕು ಬಾರಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, 2018ರಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಎಂಎಸ್ಐಎಲ್ ನಿಗಮದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ.ವೈಯಕ್ತಿಕ ಜೀವನ: ಸಿ.ಪುಟ್ಟರಂಗಶೆಟ್ಟಿ ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ 1954, ನ.30ರಂದು ಚಾಮಶೆಟ್ಟಿ ಹಾಗೂ ನಂಜಮ್ಮ ದಂಪತಿಯ ಪುತ್ರರಾಗಿ ಜನಿಸಿದರು. 10 ಮಕ್ಕಳ ಪೈಕಿ ಪುಟ್ಟರಂಗಶೆಟ್ಟಿಯವರು 6ನೆಯವರು. ಉಪ್ಪಿನಮೋಳೆ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಯಳಂದೂರು ಪಟ್ಟಣದಲ್ಲಿ ಪ್ರೌಢ ಶಿಕ್ಷಣ, ಕೊಳ್ಳೇಗಾಲದ ಮಹದೇಶ್ವರ ಕಾಲೇಜಿನಲ್ಲಿ ಪಿಯುಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಪತ್ನಿ ವೆಂಕಟಮ್ಮ ಇಬ್ಬರು ಪುತ್ರರು (ಒಬ್ಬ ಪುತ್ರ ಚಾಮರಾಜ ನಿಧನ), ಇಬ್ಬರು ಪುತ್ರಿಯರು ಇದ್ದಾರೆ.ಸರ್ಕಾರಿ ನೌಕರಿ: ಪದವಿ ಪಡೆದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡ ಪುಟ್ಟರಂಗಶೆಟ್ಟಿ ಎರಡು ವರ್ಷ ದಾವಣಗೆರೆ ಜಿಲ್ಲೆಯ ಎಪಿಎಂಸಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದ್ದಾರೆ. ಬಳಿಕ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಉಪ್ಪಿನಮೋಳೆಗೆ ಬಂದು ಕೃಷಿಯಲ್ಲಿ ತೊಡಗಿಕೊಂಡರು. ನ್ಯಾಯಬೆಲೆ ಅಂಗಡಿಯನ್ನೂ ಆರಂಭಿಸಿದ್ದರು.ಉದ್ಯಮದಲ್ಲೂ ಯಶಸ್ಸು: ರಾಜಕೀಯ ಹೊರತಾಗಿ ಉದ್ಯಮದಲ್ಲೂ ಯಶಸ್ಸು ಸಾಧಿಸಿದ್ದು, ಪ್ರಸ್ತುತ ಕರಿಕಲ್ಲು ಗಣಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಕರಿ ಕಲ್ಲು ಕ್ವಾರಿಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತ, ಕ್ವಾರಿ ವ್ಯವಸ್ಥಾಪಕರಾಗಿ ಬಳಿಕ ಗಣಿ ಉದ್ಯಮಿಯ ಹಂತಕ್ಕೆ ಬೆಳೆದಿದ್ದಾರೆ. ಉಪ್ಪಾರ ಜಾತಿಯ ಪ್ರಬಲ ನಾಯಕ ಉಪ್ಪಾರ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಪುಟ್ಟರಂಗಶೆಟ್ಟಿ ಸಮುದಾಯದ ಏಕೈಕ ಶಾಸಕರೂ ಹೌದು. ರಾಜ್ಯದೆಲ್ಲೆಡೆ ಚದುರಿಹೋಗಿರುವ ಉಪ್ಪಾರ ಸಮುದಾಯವನ್ನು ಸಂಘಟಿಸಿ ಸಮುದಾಯದ ಪ್ರಬಲ ನಾಯಕರಾಗಿ ಬೆಳೆದಿರುವ ಪುಟ್ಟರಂಗಶೆಟ್ಟಿ 3 ದಶಕಗಳಿಂದ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾಗಿ ದುಡಿದಿದ್ದಾರೆ. ಯಳಂದೂರು ತಾಲ್ಲೂಕು ಉಪ್ಪಾರ ಸಮಾಜದ ಗಡಿಮನೆಯ ಯಜಮಾನರಾಗಿ ಇಂದಿಗೂ ಕಾರ್ಯ ನಿರ್ವಹಿಸುವ ಮೂಲಕ ಮೂಲ ಬೇರುಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.ಬೆಂಗಳೂರಿನ ಲೋಕಭವನದ ಆವರಣದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಶಾಸಕ ಪುಟ್ಟರಂಗಶೆಟ್ಟಿ ಅವರೊಂದಿಗೆ ಕುಟುಂಬ ಸದಸ್ಯರು ಫೋಟೊ ಕ್ಲಿಕ್ಕಿಸಿಕೊಂಡರು.