ಅಂಕಿಅಂಶ ಇಲ್ಲದೇ ಸಭೆಗೆ ಏಕೆ ಬರುತ್ತೀರಿ?: ಅಧಿಕಾರಿಗಳಿಗೆ ಕೃಷ್ಣಬೈರೇಗೌಡ ಪ್ರ
ಬೆಂಗಳೂರು: ‘ನಿಮ್ಮದೇ ಇಲಾಖೆಯ ಪ್ರಗತಿಯ ಬಗ್ಗೆ ಪ್ರಾಥಮಿಕ ಅಂಕಿಅಂಶಗಳೂ ಇಲ್ಲದೆ ಸಭೆಗೆ ಏಕೆ ಬರುತ್ತೀರಿ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಜಿಬಿಎ ಎಲೆಕ್ಟ್ರಿಕಲ್ ಎಂಜಿನಿಯರ್ಗಳ ಸಭೆಯಲ್ಲಿ ಮಾತನಾಡಿ, ‘ಸಂಬಂಧಿತ ಸಚಿವರು ಸಭೆ ಕರೆದಿದ್ದಾರೆ ಎಂದ ಮೇಲೆ ಕನಿಷ್ಠ ಸಿದ್ದತೆಯೂ ಇಲ್ಲದೆ ಬರುವು

ಬೆಂಗಳೂರು: ‘ನಿಮ್ಮದೇ ಇಲಾಖೆಯ ಪ್ರಗತಿಯ ಬಗ್ಗೆ ಪ್ರಾಥಮಿಕ ಅಂಕಿಅಂಶಗಳೂ ಇಲ್ಲದೆ ಸಭೆಗೆ ಏಕೆ ಬರುತ್ತೀರಿ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಜಿಬಿಎ ಎಲೆಕ್ಟ್ರಿಕಲ್ ಎಂಜಿನಿಯರ್ಗಳ ಸಭೆಯಲ್ಲಿ ಮಾತನಾಡಿ, ‘ಸಂಬಂಧಿತ ಸಚಿವರು ಸಭೆ ಕರೆದಿದ್ದಾರೆ ಎಂದ ಮೇಲೆ ಕನಿಷ್ಠ ಸಿದ್ದತೆಯೂ ಇಲ್ಲದೆ ಬರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು. ‘ಐದೂ ಪಾಲಿಕೆಗಳಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಬಿಲ್ ಎಷ್ಟು ಪಾವತಿಸಲಾಗುತ್ತಿದೆ. ಎಲ್ಇಡಿ ದೀಪ ಅಳವಡಿಸಿದ ನಂತರದ ವ್ಯತ್ಯಾಸ ಎಷ್ಟು ಎಂಬ ಅಂಕಿಅಂಶ ನೀಡಬೇಕು. ಸಭೆ ಕರೆದರೆ ಕನಿಷ್ಠ ಸಿದ್ದತೆಯೂ ಇಲ್ಲದೆ ಯಾಕೆ ಬರುತ್ತೀರಿ. ನನ್ನ ಮುಖ ನೋಡಿಕೊಂಡು ಹೋಗಲು ಬಂದಿದ್ದೀರಾ? ಸರ್ಕಾರಿ ನೌಕರಿ ಅಂದರೆ ಕೈ ಬೀಸಿಕೊಂಡು ಬರಬಹುದು, ಹೋಗಬಹುದು ಎಂಬ ಧೋರಣೆ ಬೆಳೆದುಬಿಟ್ಟಿದೆ. ಅಧಿಕಾರಿಗಳ ಇಂಥ ವರ್ತನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು’ ಎಂದರು.ಅಸಮಾಧಾನ: ‘ನಗರದಲ್ಲಿ ಎಲ್ಇಡಿ ಬೀದಿದೀಪ ಅಳವಡಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಶೇ 61.01 ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಆದರೆ, ಯೋಜನೆ ಕುಂಟುತ್ತಾ ಸಾಗಿದೆ’ ಎಂದು ಕೃಷ್ಣಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.‘ಎಲ್ಇಡಿ ಬಲ್ಬ್ ಅಳವಡಿಸಲು 2025ರ ಮೇ 7, 15ರಂದು ಕಾರ್ಯಾದೇಶ ನೀಡಲಾಗಿದೆ. ಯೋಜನೆಯಂತೆ ನಗರದಾದ್ಯಂತ ಒಟ್ಟು 3,02,919 ಎಲ್ಇಡಿ ದೀಪಗಳನ್ನು ಅಳವಡಿಸಬೇಕಿತ್ತು, ಆದರೆ, ಪ್ರಸ್ತುತ 2,67,270 ದೀಪಗಳನ್ನು ಮಾತ್ರ ಅಳವಡಿಸಲಾಗಿದೆ’ ಎಂದರು. ‘24,677 ಸಿಸಿಎಂಎಸ್ ಪ್ಯಾನಲ್ ಅಳವಡಿಸಬೇಕಿತ್ತು, ಆದರೆ, ಈವರೆಗೆ 7,567 ಪ್ಯಾನಲ್ ಮಾತ್ರ ಅಳವಡಿಸಲಾಗಿದೆ. ಬಾಕಿ ಕೆಲಸ ಕುಂಟುತ್ತಾ ಸಾಗಲು ಕಾರಣವೇನು’ ಎಂದು ಪ್ರಶ್ನಿಸಿದರು.‘ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲವೆಂಬ ನಿರಂತರ ದೂರುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ವಿದ್ಯುತ್ ಉಳಿಸುವ ಇಂಧನ ದಕ್ಷತೆ ಯೋಜನೆಯ ಸಲುವಾಗಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೆ, ಅಧಿಕಾರಿಗಳು ಸೂಕ್ತ ಸಮಯಕ್ಕೆ ಯೋಜನೆಯನ್ನು ಪೂರ್ಣಗೊಳಿಸದೆ ಬೋಗಸ್ ಅಂಕಿ ಅಂಶಗಳನ್ನು ನೀಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು. ‘ಸಿಸಿಎಂಎಸ್ ಪ್ಯಾನಲ್ ಅಳವಡಿಸಲು ಆ.3ರಿಂದ ಎರಡು ತಿಂಗಳ ಕಾಲಾವಕಾಶ ನೀಡಲಾಗುವುದು. ಆ ವೇಳೆ ಎಲ್ಲವೂ ಮುಗಿಯಬೇಕು’ ಎಂದು ತಾಕೀತು ಮಾಡಿದರು. ಗುತ್ತಿಗೆದಾರರಿಗೆ ದಂಡ: ‘ಸಹಾಯ’ ಪೋರ್ಟಲ್ನಲ್ಲಿ ಸ್ವೀಕೃತವಾಗುವ ದೂರುಗಳ ಪೈಕಿ ಶೇ 34ರಷ್ಟು ಕಾರ್ಯನಿರ್ವಹಿಸದ ಬೀದಿ ದೀಪಗಳ ಕುರಿತ ದೂರುಗಳು ದಾಖಲಾಗುತ್ತಿವೆ. ದೂರು ನೀಡಿದ 48 ಗಂಟೆಗಳ ಒಳಗಾಗಿ ಸಮಸ್ಯೆ ಪರಿಹರಿಸಬೇಕು. ಸ್ಪಂದಿಸದಿದ್ದಲ್ಲಿ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ದೀಪಗಳ ಸಂಖ್ಯೆ ಮತ್ತು ವಿಳಂಬವಾದ ದಿನಗಳ ಆಧಾರದ ಮೇಲೆ ದಂಡದ ಮೊತ್ತ ಲೆಕ್ಕಹಾಕಬೇಕು’ ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.‘ವಾಹನ ತೆರವು: ವೇಳಾಪಟ್ಟಿ ತಯಾರಿಸಿ’ಬೆಂಗಳೂರು: ‘ಐದೂ ನಗರ ಪಾಲಿಕೆಗಳಲ್ಲಿ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗಿರುವ ವಾಹನಗಳ ತೆರವು ಕಾರ್ಯಕ್ಕೆ ಸಮಗ್ರ ಕ್ರಿಯಾಯೋಜನೆ ರೂಪಿಸಬೇಕು. ಕಾರ್ಯಾಚರಣೆ ವೇಳಾಪಟ್ಟಿಯನ್ನು ಪಾಲಿಕೆವಾರು ಸಿದ್ಧಪಡಿಸಬೇಕು’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಮಂಗಳವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿ, ‘ಅಧಿಕಾರಿಗಳ ಕಾರ್ಯಕ್ಷಮತೆ ಮೇಲೆ, ಹಿರಿಯ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು. ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಬೇಕು’ ಎಂದರು.‘ಪೊಲೀಸ್ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈವರೆಗೆ ಗುರುತಿಸಿರುವ, ದಂಡ ಪಾವತಿಸಿ ಬಿಡುಗಡೆ ಮಾಡಿರುವ ಹಾಗೂ ಟೋಯಿಂಗ್ ಮಾಡಿರುವ ವಾಹನಗಳ ನಿಖರ ಮಾಹಿತಿ ಸಲ್ಲಿಸಬೇಕು. ನೋಟಿಸ್ ನೀಡಿ ಟೋಯಿಂಗ್ ಮಾಡಿದ ನಂತರ 15 ದಿನ ಕಳೆದ ವಾಹನಗಳನ್ನು ಹರಾಜು ಮಾಡಲು ಪತ್ರಿಕಾ ಪ್ರಕಟಣೆ ನೀಡಬೇಕು’ ಎಂದು ಪಾಲಿಕೆ ಆಯುಕ್ತರಿಗೆ ಅವರು ನಿರ್ದೇಶನ ನೀಡಿದರು.‘ವಾಹನಗಳ ತೆರವು ಕಾರ್ಯಕ್ಕೆ ಪ್ರತಿ ಸಂಚಾರ ಪೊಲೀಸ್ ಠಾಣೆಯಿಂದ ಇಬ್ಬರು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ವಾಹನಗಳಿಗೆ ನೋಟಿಸ್ ಅಂಟಿಸುವ ಕಾರ್ಯದಲ್ಲಿ ವಾರ್ಡ್ ಅಧಿಕಾರಿಗಳೊಂದಿಗೆ ಮಾರ್ಷಲ್ ಸಹ ನಿಯೋಜಿಸಬೇಕು’ ಎಂದರು.ಮರು ಅತಿಕ್ರಮಣ ದಂಡ ವಿಧಿಸಿ: ‘ನಗರದಲ್ಲಿ 773 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಮತ್ತೆಅತಿಕ್ರಮಿಸುವವರ ವಿರುದ್ಧಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅಗತ್ಯಕ್ಕಿಂತ ಹೆಚ್ಚು ಅಗಲವಿರುವ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸುಂದರೀಕರಣ, ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕು’ಎಂದರು.ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಮಾತನಾಡಿ, ‘ನಗರದಲ್ಲಿ ಪೊಲೀಸ್ ಇಲಾಖೆಯಿಂದ 2,533 ಹಾಗೂ ನಾಗರಿಕರಿಂದ 4,043 ಸೇರಿ ಒಟ್ಟು 6,576 ಬಿಟ್ಟುಹೋದ ವಾಹನ ಗುರುತಿಸಲಾಗಿದೆ. ಈ ಪೈಕಿ 1,605 ವಾಹನಗಳಿಗೆ ನೋಟಿಸ್ ಅಂಟಿಸಲಾಗಿದೆ. 263 ವಾಹನಗಳನ್ನು ಟೋಯಿಂಗ್ ಮಾಡಲಾಗಿದೆ. ವಾಹನಗಳ ಮಾಲೀಕರು ₹2.16 ಲಕ್ಷ ದಂಡ ಪಾವತಿಸಿ ವಾಹನಗಳನ್ನು ಬಿಡುಗಡೆ ಮಾಡಿಕೊಂಡಿದ್ದಾರೆ’ ಎಂದರು.ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್.ರಮೇಶ್, ಡಾ.ಕೆ.ವಿ.ರಾಜೇಂದ್ರ, ಜಿ.ಜಗದೀಶ್ ಪಾಲ್ಗೊಂಡಿದ್ದರು.