ಶಾಸಕ ಸ್ಥಾನಕ್ಕೆ ರಾಜೀನಾಮೆ ಸುಳ್ಳು: ಬಿ.ಆರ್.ಪಾಟೀಲ ಸ್ಪಷ್ಟನೆ
ಕಲಬುರಗಿ: ‘ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು’ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ಸ್ಪಷ್ಟಪಡಿಸಿದ್ದಾರೆ.‘ಈ ಕುರಿತ ಸುದ್ದಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾದ ಬಗೆಗೆ ಗಮನಕ್ಕೆ ಬಂದಿದೆ. ಅದು ಸುಳ್ಳು ಹಾಗೂ ದಾರಿತಪ್ಪಿಸುವ ಸುದ್ದಿ. ಕರ್ನಾಟ
ಕಲಬುರಗಿ: ‘ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು’ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ಸ್ಪಷ್ಟಪಡಿಸಿದ್ದಾರೆ.‘ಈ ಕುರಿತ ಸುದ್ದಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾದ ಬಗೆಗೆ ಗಮನಕ್ಕೆ ಬಂದಿದೆ. ಅದು ಸುಳ್ಳು ಹಾಗೂ ದಾರಿತಪ್ಪಿಸುವ ಸುದ್ದಿ. ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರವೇ ನಾನು ಜೂನ್ 5ರಂದು ರಾಜೀನಾಮೆ ನೀಡಿದ್ದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಬಿ.ಆರ್.ಪಾಟೀಲ ಬರೆದುಕೊಂಡಿದ್ದಾರೆ.‘ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಶಾಸಕ ಸ್ಥಾನವು ನನಗೆ ದೊರೆತಿರುವ ಹುದ್ದೆಯಲ್ಲ; ಅದು ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಜವಾಬ್ದಾರಿಯ ಸಂಕೇತ. ಆ ಜನಾದೇಶಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ನನ್ನನ್ನು ಗೆಲ್ಲಿಸಿದ ಜನರ ಆಶಯಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆ. ಸಚಿವ ಸ್ಥಾನ ಇರಲಿ, ಇಲ್ಲದಿರಲಿ, ನಾನು ನನ್ನ ಕ್ಷೇತ್ರದ ಜನರ ಸೇವೆಗೆ ಸದಾ ಬದ್ಧನಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.‘ಸಚಿವ ಸ್ಥಾನ ದೊರಕದಿರುವುದು ನನಗೂ ಸಹಜವಾಗಿ ನೋವು ಮತ್ತು ಅಸಮಾಧಾನ ಉಂಟುಮಾಡಿದೆ. ಆದರೆ, ಐದು ದಶಕಗಳ ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಹುದ್ದೆಗಿಂತ ಪಕ್ಷ, ವೈಯಕ್ತಿಕ ಹಿತಾಸಕ್ತಿಗಿಂತ ತತ್ವ ಮತ್ತು ಸಿದ್ಧಾಂತಗಳೇ ನನಗೆ ಮುಖ್ಯವಾದುದು. ಪಕ್ಷದ ಮೇಲಿನ ನನ್ನ ನಿಷ್ಠೆ ಅಚಲ. ಸಮಾಜವಾದಿ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಪರವಾದ ನನ್ನ ಬದ್ಧತೆ ಎಂದಿಗೂ ಬದಲಾಗುವುದಿಲ್ಲ. ಆದ್ದರಿಂದ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ ಎಂಬ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು’ ಎಂದು ಕೋರಿದ್ದಾರೆ.