ಸಂಪಾದಕೀಯ | ಸಂಪುಟ ವಿಸ್ತರಣೆ ತರಲಿ ಪ್ರೇರಣೆ: ಚುರುಕಾಗಲಿ ಇನ್ನಾದರೂ ಆಡಳಿತ
ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕಳೆದ ಒಂದು ವರ್ಷದ ಅವಧಿ, ನಾಯಕತ್ವ ಬದಲಾವಣೆಯ ಜಂಜಾಟದಲ್ಲಿ ಹಾಗೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ತರುವಾಯದ ಎರಡು ತಿಂಗಳು ಸಂಪುಟ ವಿಸ್ತರಣೆಯ ಗೊಂದಲದಲ್ಲಿ ಕಳೆದುಹೋಗಿದೆ. ‘ಪೂರ್ಣ ಸಂಪುಟ ಇಲ್ಲ’ ಎಂಬ ಸಬೂಬು ಹೇಳಿಕೊಂಡು ತಿರುಗಾಡಬಹುದಾದ ಅವಕಾಶವಾದರೂ ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಇತ್ತು. ಈಗ ಸಚಿವ ಸಂಪುಟದ 33 ಸ್ಥಾನಗಳು

ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕಳೆದ ಒಂದು ವರ್ಷದ ಅವಧಿ, ನಾಯಕತ್ವ ಬದಲಾವಣೆಯ ಜಂಜಾಟದಲ್ಲಿ ಹಾಗೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ತರುವಾಯದ ಎರಡು ತಿಂಗಳು ಸಂಪುಟ ವಿಸ್ತರಣೆಯ ಗೊಂದಲದಲ್ಲಿ ಕಳೆದುಹೋಗಿದೆ. ‘ಪೂರ್ಣ ಸಂಪುಟ ಇಲ್ಲ’ ಎಂಬ ಸಬೂಬು ಹೇಳಿಕೊಂಡು ತಿರುಗಾಡಬಹುದಾದ ಅವಕಾಶವಾದರೂ ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಇತ್ತು. ಈಗ ಸಚಿವ ಸಂಪುಟದ 33 ಸ್ಥಾನಗಳು ಭರ್ತಿಯಾಗಿವೆ. ಸರ್ಕಾರದ ನಾಯಕನ ಉತ್ಸಾಹಕ್ಕೆ ತಕ್ಕಂತೆ ಆಡಳಿತಕ್ಕೆ ಸಂಚಲನ ತರಬಹುದಾದ ಸಚಿವರ ತಂಡ ಸಜ್ಜುಗೊಂಡಿದೆ. 2028ರಲ್ಲಿ ನಡೆಯಬೇಕಿರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಮುಂದಾಲೋಚನೆಯಲ್ಲಿ ಸಂಪುಟ ವಿಸ್ತರಣೆಯ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ತಮ್ಮ ಮತಬ್ಯಾಂಕ್ ಎಂದು ಕಾಂಗ್ರೆಸ್ ನಾಯಕರು ಭಾವಿಸಿಕೊಂಡಿರುವ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯಕ್ಕೆ ಸಂಪುಟ ವಿಸ್ತರಣೆಯಲ್ಲಿ ಆದ್ಯತೆ ನೀಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಈ ನಿರ್ಣಯವು ಹೊರಬಿದ್ದಂತೆ ತೋರುತ್ತದೆ. ಆಯಾ ಜಾತಿಗಳು ಹೊಂದಿರುವ ಜನಸಂಖ್ಯೆಗೆ ಅನುಗುಣವಾಗಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಯತ್ನವನ್ನು ಪಕ್ಷದಹೈಕಮಾಂಡ್ ನಡೆಸಿದೆ. ಈ ಲೆಕ್ಕಾಚಾರದಲ್ಲಿಯೇ ಪರಿಶಿಷ್ಟ ಜಾತಿ/ ಪಂಗಡದವರಿಗೆ 10, ಹಿಂದುಳಿದ ವರ್ಗದವರಿಗೆ 7, ಮುಸ್ಲಿಮರಿಗೆ 3 ಸಚಿವ ಸ್ಥಾನವನ್ನು ನೀಡಲಾಗಿದೆ. ಅಲಕ್ಷಿತ ಸಮುದಾಯಗಳನ್ನು ಒಳಗೊಳ್ಳುವ ಸೂಕ್ಷ್ಮತೆಯನ್ನು ತೋರುವ ಮೂಲಕ ಸಾಮಾಜಿಕ ನ್ಯಾಯದ ಕಳಕಳಿಯೇ ಸರ್ಕಾರದ ತಳಹದಿ ಎಂದು ಬಿಂಬಿಸಿಕೊಳ್ಳುವ ನಡೆ ಇದರ ಹಿಂದೆ ಇದೆ. ಹಾಗಿದ್ದೂ, ಕೆಲವು ಸಮುದಾಯಗಳಿಗೆ, ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಿಳೆಯರಿಗೆ ಪ್ರಾತಿನಿಧ್ಯವನ್ನೇ ನೀಡದಿರುವುದು ದೊಡ್ಡ ಪ್ರಮಾದ. ಎರಡು ದಶಕದ ಹಿಂದೆ, ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ನೀಡುವಲ್ಲಿ ಕರ್ನಾಟಕ ಮಾದರಿಯೊಂದನ್ನು ಹಾಕಿಕೊಂಡಿತ್ತು. ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿತಂದ ಹೆಗ್ಗಳಿಕೆಯೂ ರಾಜ್ಯಕ್ಕಿತ್ತು. ಅಂತಹ ಉನ್ನತ ಪರಂಪರೆ ಹೊಂದಿರುವ ರಾಜ್ಯದಲ್ಲಿ, ಮಹಿಳೆಯರನ್ನು ಹೀಗೆ ಕಡೆಗಣಿಸುತ್ತಿರುವುದು ಪ್ರಗತಿಪರ ರಾಜ್ಯಕ್ಕೆ ಶೋಭೆಯಲ್ಲ. ಮಹಿಳಾ ಪ್ರಾತಿನಿಧ್ಯವಿಲ್ಲದೆ ರಾಜ್ಯ ಸಚಿವ ಸಂಪುಟ ಪೂರ್ಣಗೊಳ್ಳುವುದಿಲ್ಲ. ತಾಂತ್ರಿಕ ಕಾರಣದಿಂದಾಗಿ ಕೊನೆಗಳಿಗೆಯಲ್ಲಿ ಮಹಿಳೆಯೊಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಆಗಲಿಲ್ಲ ಎಂದು ಮುಖ್ಯಮಂತ್ರಿ ಸಮರ್ಥನೆ ನೀಡಿದ್ದಾರೆ. ಅಂತಹ ಪ್ರಮಾದ ಆಗದಂತೆ ವಹಿಸಬೇಕಾದ ಎಚ್ಚರ ನಾಯಕರಲ್ಲಿ ಕಾಣಿಸುತ್ತಿಲ್ಲ.ಶಾಲಾ–ಕಾಲೇಜುಗಳು ಆರಂಭವಾಗಿದ್ದು, ವೈದ್ಯಕೀಯ ಕಾಲೇಜುಗಳ ಪ್ರವೇಶವೂ ಆರಂಭವಾಗಿದೆ. ಹೀಗಿರುವಾಗ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರು ಇಲ್ಲದಿರುವುದು ಸರಿಯಲ್ಲ. ವಿದ್ಯಾರ್ಥಿನಿಲಯಗಳು, ವಸತಿ ಶಾಲೆಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕಾದ ಸಮಾಜ ಕಲ್ಯಾಣ, ಹಿಂದುಳಿದ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಇಲಾಖೆಗಳಿಗೆ ಸಚಿವರಿಲ್ಲದೇ ಇರುವುದು ದೊಡ್ಡ ಕೊರತೆ. ಕೃಷಿ ಚಟುವಟಿಕೆಗೆ ಚುರುಕುಗೊಂಡಿದ್ದು ಆ ಇಲಾಖೆಯನ್ನೂ ಮುಖ್ಯಮಂತ್ರಿಯೇ ನೋಡಿಕೊಳ್ಳಬೇಕಿದೆ. ಸಂಪುಟ ವಿಸ್ತರಣೆಗೆ ಎರಡು ತಿಂಗಳು ತೆಗೆದುಕೊಂಡಂತೆ ಖಾತೆ ಹಂಚಿಕೆ ಪ್ರಕ್ರಿಯೆಯೂ ವಿಳಂಬವಾಗದಂತೆ ಮುಖ್ಯಮಂತ್ರಿ ಎಚ್ಚರವಹಿಸಬೇಕಾದ ಜರೂರಿದೆ. ಬರಪೀಡಿತ ಜಿಲ್ಲೆಗಳಲ್ಲಿ ಮಳೆ ಇಲ್ಲದಿದ್ದರೆ, ಕೆಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಸಮಸ್ಯೆಗಳನ್ನು ತಂದೊಡ್ಡಿದೆ. ವಿಬಿ–ಜಿ ರಾಮ್ ಜಿ ಯೋಜನೆ ಅನುಷ್ಠಾನ ಕುರಿತ ಗೊಂದಲ ಉದ್ಯೋಗ ಸೃಷ್ಟಿಸುವಲ್ಲಿ ಅಡಚಣೆಯಾಗಿ ಪರಿಣಮಿಸಿದೆ. ಪೂರ್ಣ ಸಂಪುಟ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ, ಜವಾಬ್ದಾರಿ ವಹಿಸಿದ ಜಿಲ್ಲೆಗಳಿಗೆ ತಕ್ಷಣವೇ ಧಾವಿಸಿ ಜನರ ಅಳಲು ಆಲಿಸುವಂತೆ ತಾಕೀತು ಮಾಡಿದ್ದಾರೆ. ಜನರೆಲ್ಲ ಸಂಕಷ್ಟದಲ್ಲಿರುವಾಗ ಮಂತ್ರಿಗಳು ಸಂಭ್ರಮಾಚರಣೆ ಮಾಡಿಕೊಳ್ಳುವ ಸಮಯ ಇದಲ್ಲ. ತಕ್ಷಣವೇ ಕಾರ್ಯೋನ್ಮುಖರಾಗಬೇಕಾದ ಹೊಣೆ ಸಚಿವರ ಮೇಲಿದೆ. ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರವನ್ನು ವಿರೋಧಿಸಿಯೇ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ನಡೆಸಿಲ್ಲ. 2028ರ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಬೇಕಿದ್ದು, ಇನ್ನು 20 ತಿಂಗಳು ಮಾತ್ರ ಸಾಧನೆ ತೋರಲು ಅವಕಾಶ ಇದೆ. ಈ ಅವಧಿಯಲ್ಲಿ ಸಚಿವರು ನಡೆದುಕೊಳ್ಳಬಹುದಾದ ರೀತಿ–ರಿವಾಜುಗಳು ಆಡಳಿತದ ವರ್ಚಸ್ಸನ್ನು ಹೆಚ್ಚಿಸಲು ಸಾಧ್ಯ. ಯಾರೋ ಒಂದಿಬ್ಬರು ಸಚಿವರು ಕ್ರಿಯಾಶೀಲರಾಗಿದ್ದ ಮಾತ್ರಕ್ಕೆ ಸರ್ಕಾರ ಹಳಿಗೆ ಬರುವುದಿಲ್ಲ. ಜನಸೇವೆಯ ಕಳಕಳಿಯಿಂದ ಎಲ್ಲರೂ ಒಂದುಗೂಡಿ ಮುನ್ನಡೆದರಷ್ಟೇ ಜನರಿಗೆ ಒಳಿತಾದೀತು. ಇನ್ನುಳಿದ ಅವಧಿಯಲ್ಲಿ ಅಂತಹ ನಿಸ್ಪೃಹತೆ, ಕರ್ತವ್ಯನಿಷ್ಠೆಯಿಂದ ಕೆಲಸ ಮಾಡುವ ಉತ್ತರದಾಯಿತ್ವ ಸಚಿವರ ಮೇಲಿದೆ.