ಬಿಡದಿ ಟೌನ್ಶಿಪ್: ಮುಂದುವರಿದ ಹೋರಾಟ; JDS ಪಾದಯಾತ್ರೆಗೆ ಬೆಂಬಲ, ಅಣಕು ಶವಯಾತ್ರೆ
ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ವಿರೋಧಿಸಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಹೋರಾಟ ನಡೆಸುತ್ತಿರುವ ರೈತರು, ಬುಧವಾರ ಜಿಬಿಐಟಿಯ ಅಣಕು ಶವಯಾತ್ರೆ ನಡೆಸಿದರು.ಅಣಕು ಶವಕ್ಕೆ ಜಿಬಿಐಟಿ ಹೆಸರು ಅಂಟಿಸಿದ ರೈತರು ಯೋಜನೆ ವಿರುದ್ದ ಆಕ್ರೋಶ ಹೊರ ಹಾಕಿದರು. ‘ನಮ್ಮ ಭೂಮಿ, ನಮ್ಮ ಹಕ್ಕು’, ‘ಜೀವ ಬಿಟ್ಟೆವು, ಭೂಮಿ ಕೊಡುವುದಿಲ್ಲ’ ಎಂದು ಘೋಷಣೆಗಳನ

ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ವಿರೋಧಿಸಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಹೋರಾಟ ನಡೆಸುತ್ತಿರುವ ರೈತರು, ಬುಧವಾರ ಜಿಬಿಐಟಿಯ ಅಣಕು ಶವಯಾತ್ರೆ ನಡೆಸಿದರು.ಅಣಕು ಶವಕ್ಕೆ ಜಿಬಿಐಟಿ ಹೆಸರು ಅಂಟಿಸಿದ ರೈತರು ಯೋಜನೆ ವಿರುದ್ದ ಆಕ್ರೋಶ ಹೊರ ಹಾಕಿದರು. ‘ನಮ್ಮ ಭೂಮಿ, ನಮ್ಮ ಹಕ್ಕು’, ‘ಜೀವ ಬಿಟ್ಟೆವು, ಭೂಮಿ ಕೊಡುವುದಿಲ್ಲ’ ಎಂದು ಘೋಷಣೆಗಳನ್ನು ಕೂಗಿದರು. ಮಹಿಳೆಯರು ಶವಕ್ಕೆ ಪೊರಕೆಯಿಂದ ಹೊಡೆದರು. ಅನತಿ ದೂರದವರೆಗೆ ತಮಟೆ ಬಡಿಯುತ್ತಾ ಶವ ಹೊತ್ತು ಮೆರವಣಿಗೆ ಮಾಡಿದ ರೈತರು, ರಸ್ತೆಯಲ್ಲೇ ಪೆಟ್ರೋಲ್ ಸುರಿದು ಸುಟ್ಟು ಹಾಕಿದರು.ಈ ವೇಳೆ ಮಾತನಾಡಿದ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಮಿತಿಯ ಮಂಡಲಹಳ್ಳಿ ನಾಗರಾಜ್, ‘ಟೌನ್ಶಿಪ್ ವಿರೋಧಿಸಿ ರೈತರು ಕಳೆದ 520 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ದಿನದಿಂದ ದಿನಕ್ಕೆ ರಾಜ್ಯದಾದ್ಯಂತ ಬೆಂಬಲ ಹೆಚ್ಚಾಗುತ್ತಿದೆ. ಆದರೂ ಸರ್ಕಾರ ರೈತ ವಿರೋಧಿ ಟೌನ್ಶಿಪ್ ಯೋಜನೆ ಜಾರಿಗೆ ಪಟ್ಟು ಹಿಡಿದಿರುವುದು ಸರಿಯಲ್ಲ’ ಎಂದರು.‘ಯೋಜನೆ ವಿರೋಧಿಸಿ ಆ. 9ರಿಂದ 11ರವರೆಗೆ ಜೆಡಿಎಸ್ ಪಕ್ಷವು ಬೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಾವು ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳುತ್ತೇವೆ. ಪಕ್ಷ ಆರಂಭದಿಂದಲೂ ಹೋರಾಟ ಬೆಂಬಲಿಸುತ್ತಾ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದೆ. ನಮಗೆ ರಾಜಕೀಯಕ್ಕಿಂತ ಭೂಮಿ ಉಳಿಸಿಕೊಳ್ಳುವುದೇ ಮುಖ್ಯ. ಒಂದು ವೇಳೆ ಜೆಡಿಎಸ್ ಪಾದಯಾತ್ರೆ ಮಾಡದೇ ಇದ್ದಿದ್ದರೆ ಸಮಿತಿ ವತಿಯಿಂದಲೇ ಹಮ್ಮಿಕೊಳ್ಳುವ ಆಲೋಚನೆ ಇತ್ತು’ ಎಂದು ಹೇಳಿದರು.