ಬಿಎಂಟಿಸಿ ಬಸ್ಸುಗಳಲ್ಲಿ ಬರಲಿದೆ ಆಡಿಯೋ ಜಾಹೀರಾತು
– ಆರ್ಥಿಕ ಸಂಕಷ್ಟದಿಂದ ಹೊರ ಬರಲು ಹೊಸ ದಾರಿ ಬೆಂಗಳೂರು: ತನ್ನ ಟಿಕೆಟ್ಯೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) 300 ಬಸ್ಗಳಲ್ಲಿ ಶ್ರಾವ್ಯ (ಆಡಿಯೋ) ಜಾಹೀರಾತುಗಳನ್ನು ಪ್ರಾರಂಬಿಸಲು ಮುಂದಾಗಿದೆ. ಸಂಸ್ಥೆಯು ಟೆಂಡರ್ ಆಹ್ವಾನಿಸಿದ್ದು, ಬೆಂಗಳೂರು (Bengaluru)ನಗರದಲ್ಲಿ ಸಂಚರಿಸುವ 300 ನಾನ್ ಎಸಿ ಬಸ್ಗಳಲ್ಲಿ

– ಆರ್ಥಿಕ ಸಂಕಷ್ಟದಿಂದ ಹೊರ ಬರಲು ಹೊಸ ದಾರಿ ಬೆಂಗಳೂರು: ತನ್ನ ಟಿಕೆಟ್ಯೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) 300 ಬಸ್ಗಳಲ್ಲಿ ಶ್ರಾವ್ಯ (ಆಡಿಯೋ) ಜಾಹೀರಾತುಗಳನ್ನು ಪ್ರಾರಂಬಿಸಲು ಮುಂದಾಗಿದೆ. ಸಂಸ್ಥೆಯು ಟೆಂಡರ್ ಆಹ್ವಾನಿಸಿದ್ದು, ಬೆಂಗಳೂರು (Bengaluru)ನಗರದಲ್ಲಿ ಸಂಚರಿಸುವ 300 ನಾನ್ ಎಸಿ ಬಸ್ಗಳಲ್ಲಿ ಮೂರು ವರ್ಷಗಳ ಅವಧಿಗೆ ‘ಇನ್-ಬಸ್ ಆಡಿಯೋ ಜಾಹೀರಾತು ವ್ಯವಸ್ಥೆ’ಯನ್ನು ಅಳವಡಿಸಲು, ನಿರ್ವಹಿಸಲು ಹಾಗೂ ಚಾಲನೆ ಮಾಡಲು ಹಾಗೂ ಸಂಪೂರ್ಣ ಹಕ್ಕನ್ನು ನೀಡಲು ಉದ್ದೇಶಿಸಿದೆ. ಈ ಅವಧಿಯನ್ನು ಬಳಿಕ ಇನ್ನ ಮೂರು ವರ್ಷಗಳಿಗೆ ವಿಸ್ತರಿಸುವ ಅವಕಾಶವೂ ಇದೆ. ಮೊದಲ ಹಂತದಲ್ಲಿ ಈ ವ್ಯವಸ್ಥೆಯನ್ನು ಸಾಮಾನ್ಯ, ಎಕ್ಸ್ಪ್ರೆಸ್ ಹಾಗೂ ರಾತ್ರಿ ಸೇವೆಯ ಬಸ್ಗಳಲ್ಲಿ ಅಳವಡಿಸಲಾಗುತ್ತದೆ. ಪ್ರತಿಯೊಂದು ಜಾಹೀರಾತು 10 ಸೆಕೆಂಡುಗಳಿಗೆ ಸೀಮಿತವಾಗಿದ್ದು, ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳು ಐಚ್ಛಿಕವಾಗಿರುತ್ತವೆ. ಜಾಹೀರಾತುಗಳಲ್ಲಿ ಯಾವುದೇ ಆಕ್ಷೇಪಾರ್ಹ, ಅಶ್ಲೀಲ, ರಾಜಕೀಯವಾಗಿ ಪಕ್ಷಪಾತದ ಅಥವಾ ಕೋಮು ಸೂಕ್ಷ್ಮ ವಿಷಯಗಳು ಇರಬಾರದು. ಪ್ರತಿಯೊಂದು ಜಾಹೀರಾತಿಗೂ ಬಿಎಂಟಿಸಿಯಿಂದ ಪೂರ್ವಾನ್ವಯ ಲಿಖಿತ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಈ ಕೇಂದ್ರೀಕೃತ ವ್ಯವಸ್ಥೆಯು ವಾಣಿಜ್ಯ ಆಡಿಯೋ ಜಾಹೀರಾತುಗಳನ್ನು ಬಿಎಂಟಿಸಿಯ ಜಿಪಿಎಸ್ (GPS) ಮತ್ತು ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ (ITS) ನೊಂದಿಗೆ ಸಂಯೋಜಿಸಿ, ಬಸ್ ಇರುವ ಸ್ಥಳಕ್ಕೆ ಅನುಗುಣವಾಗಿ (Location-based) ಜಾಹೀರಾತುಗಳನ್ನು ಬಿತ್ತರಿಸುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ 1.11 ಕೋಟಿ ಜನರು ಮತದಾರರ ಪಟ್ಟಿಯಿಂದ ಔಟ್? ತನ್ನದೇ ಆದ ಅಧಿಕೃತ ಪ್ರಕಟಣೆಗಳು, ಸಾರ್ವಜನಿಕ ಸೇವಾ ಸಂದೇಶಗಳು ಹಾಗೂ ಇತರ ಸಂವಹನಗಳಿಗಾಗಿ ಬಿಎಂಟಿಸಿಯು ಒಟ್ಟು ಪ್ರಸಾರದ ಶೇ. 10 ರಷ್ಟು ಸಮಯವನ್ನು ಕಾಯ್ದಿರಿಸಿಕೊಳ್ಳಲಿದೆ. ಟೆಂಡರ್ ಪಡೆದ ಕಂಪನಿಯು ಬಿಎಂಟಿಸಿಗೆ ಮಾಸಿಕ ಪರವಾನಗಿ ಶುಲ್ಕವನ್ನು ಪಾವತಿಸಬೇಕಿದ್ದು, ಎರಡನೇ ವರ್ಷದಿಂದ ಪ್ರತಿ ವರ್ಷ ಶೇ. 5 ರಷ್ಟು ಶುಲ್ಕ ಹೆಚ್ಚಳವಾಗಲಿದೆ. ಬಿಡ್ಗಳನ್ನು ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 2 ರಂದು ತಾಂತ್ರಿಕ ಬಿಡ್ಗಳನ್ನು ತೆರೆಯಲಾಗುವುದು ಮತ್ತು ಆರ್ಥಿಕ ಬಿಡ್ಗಳನ್ನು ತೆರೆಯುವ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಟೆಂಡರ್ ದಾಖಲೆಯಲ್ಲಿ ತಿಳಿಸಲಾಗಿದೆ. ಒಟ್ಟು 6,955 ಬಸ್ಗಳನ್ನೊಳಗೊಂಡ ಬಿಎಂಟಿಸಿಯು ದಿನಂಪ್ರತಿ 6,272 ಸೇವೆಗಳನ್ನು ನೀಡುತ್ತಿದ್ದು, 67,841 ಟ್ರಿಪ್ಗಳಲ್ಲಿ 12.28 ಲಕ್ಷ ಕಿಲೋಮೀಟರ್ಗಳಷ್ಟು ಚಲಿಸುತ್ತದೆ. ಪ್ರಸ್ತುತ 7.19 ಕೋಟಿ ರೂ. ದಿನನಿತ್ಯದ ಸಂಚಾರ ಆದಾಯ ಹೊಂದಿರುವ ಸಂಸ್ಥೆಯು, ಬಸ್ಗಳ ಮೇಲೆ ಸಂಪೂರ್ಣ ಜಾಹೀರಾತು (Bus Wrap) ಅಳವಡಿಕೆ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆ ಸೇರಿದಂತೆ ಇತರ ಆದಾಯದ ಮೂಲಗಳನ್ನು ಅನ್ವೇಷಿಸುತ್ತಿದೆ. ಹೊಸ ಮಾರ್ಗಗಳನ್ನು ಸಕ್ರಿಯವಾಗಿ ಸೇರಿಸಿದ ನಂತರ ಬಿಎಂಟಿಸಿಯ ಸಂಚಾರ ಆದಾಯವು 2024-25 ರಲ್ಲಿ . 2,039 ಕೋಟಿ ರೂ.ನಿಂದ 2025-26 ರಲ್ಲಿ 2,677.51 ಕೋಟಿ ರೂ.ಗೆ ಏರಿಕೆಯಾಗಿದೆ. ವಾಣಿಜ್ಯ ಆದಾಯವು 345 ಕೋಟಿ ರೂ.ನಿಂದ 240 ಕೋಟಿ ರೂ.ಗೆ ಕುಸಿದ ಕಾರಣ, ಟಿಕೆಟ್ಯೇತರ ಆದಾಯವು 729 ಕೋಟಿ ರೂ.ನಿಂದ 708 ಕೋಟಿ ರೂ.ಗೆ ಇಕೆಯಾಗಿದೆ. ಡೀಸೆಲ್ ಬೆಲೆ ಏರಿಕೆ ಮತ್ತು ನೌಕರರ ವೇತನ ಹೆಚ್ಚಳವನ್ನು ಉಲ್ಲೇಖಿಸಿ ಬಿಎಂಟಿಸಿಯು ಜೂನ್ನಲ್ಲಿ ಶೇ. 40 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾಪಿಸಿತ್ತು. ಸಂಸ್ಥೆಯು ಕಳೆದ 12 ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರ ದರ ಹೆಚ್ಚಳ ಮಾಡಿದೆ. 2014 ರಲ್ಲಿ ಮೊದಲ ಬಾರಿ, 2025ರ ಜನವರಿಯಲ್ಲಿ ಎರಡನೇ ಬಾರಿಗೆ ಟಿಕೆಟ್ ದರವನ್ನು ಏರಿಕೆ ಮಾಡಿತ್ತು.