ಅಸಮಾಧಾನ ಶಮನಕ್ಕೆ ಸಂಧಾನ |ಎಂ. ಕೃಷ್ಣಪ್ಪ ನಿವಾಸಕ್ಕೆ ಡಿಕೆಶಿ, ಸುರ್ಜೆವಾಲ ಭೇಟಿ – ಕ್ಲೋಸ್ ಡೋರ್ ಮೀಟಿಂಗ್
ಬೆಂಗಳೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ವಿಜಯನಗರ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ (M Krishnnappa) ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ (Priyakrishna) ಅವರನ್ನು ಮನವೊಲಿಸಲಾಗಿದೆ. ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ(Randeep Surjewala) ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK S

ಬೆಂಗಳೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ವಿಜಯನಗರ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ (M Krishnnappa) ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ (Priyakrishna) ಅವರನ್ನು ಮನವೊಲಿಸಲಾಗಿದೆ. ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ(Randeep Surjewala) ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ವಿಜಯನಗರದಲ್ಲಿರುವ ಕೃಷ್ಣಪ್ಪ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಸಂಧಾನ ಸಭೆ ನಡೆಸಿದ್ದಾರೆ. ಈ ಭೇಟಿಯ ವೇಳೆ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಸಚಿವರಾದ ಜಮೀರ್ ಅಹಮದ್ ಖಾನ್, ಹೆಚ್.ಸಿ. ಬಾಲಕೃಷ್ಣ, ಚಲುವರಾಯಸ್ವಾಮಿ, ಶಾಸಕ ರಂಗನಾಥ್ ಹಾಗೂ ಎಂಎಲ್ಸಿ ವಿನಯ್ ಕಾರ್ತಿಕ್ ಜೊತೆಯಲ್ಲಿದ್ದರು. ವಿಜಯನಗರ ನಿವಾಸದಲ್ಲಿ ಶಾಸಕ ಎಂ. ಕೃಷ್ಣಪ್ಪ ಮತ್ತು ಶಾಸಕ ಪ್ರಿಯಾಕೃಷ್ಣ ಅವರೊಂದಿಗೆ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ಬಾಗಿಲು ಮುಚ್ಚಿ ಸುದೀರ್ಘ ಚರ್ಚೆ ನಡೆಸಿದರು. ಸಚಿವರನ್ನು ಹೊರಗಿಟ್ಟು ನಡೆಸಿದ ಈ ರಹಸ್ಯ ಸಭೆಯಲ್ಲಿ, ಶಾಸಕರ ಅಸಮಾಧಾನ ಮತ್ತು ಕಾರ್ಯಕರ್ತರ ಆಕ್ರೋಶದ ಕುರಿತು ಕೂಲಂಕಷವಾಗಿ ಚರ್ಚಿಸಲಾಯಿತು. ಸಭೆಯ ಬಳಿಕ ಹೈಕಮಾಂಡ್ ನಾಯಕರು ಮತ್ತು ಡಿಸಿಎಂ ಹೊರಬಂದರು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಒಂದು ಕುಟುಂಬ ಇದ್ದಂತೆ. ಎಂ. ಕೃಷ್ಣಪ್ಪ ಅವರು ನಮ್ಮ ಕುಟುಂಬದ ಹಿರಿಯ ಸದಸ್ಯರು ಮತ್ತು ಪಕ್ಷದಿಂದ ಎಐಸಿಸಿ ಸದಸ್ಯರಾಗಿದ್ದವರು. ಪ್ರಿಯಾಕೃಷ್ಣ ಅವರು ಪಕ್ಷದ ಭರವಸೆಯ ಯುವ ನಾಯಕ. ಕುಟುಂಬದಲ್ಲಿ ನ್ಯಾಯಯುತ ಬೇಡಿಕೆಗಳು ಇದ್ದೇ ಇರುತ್ತವೆ. ಅವರ ಅಸಮಾಧಾನ ಮತ್ತು ಸಮಸ್ಯೆಗಳನ್ನು ಆಲಿಸಿದ್ದೇವೆ. ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಸೇರಿ ಮಾತನಾಡಿದ್ದೇವೆ. ಎಲ್ಲವೂ ಶೀಘ್ರದಲ್ಲೇ ಸರಿಹೋಗಲಿದೆ. ಬಿಜೆಪಿಯವರು ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಸಂಧಾನ ಸಭೆಯ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಂ. ಕೃಷ್ಣಪ್ಪ, ಸಚಿವರನ್ನು ಮಾಡದ ವಿಚಾರದಲ್ಲಿ ತಪ್ಪಾಗಿದೆ. ದನ್ನು ಸರಿಪಡಿಸಿಕೊಡುವುದಾಗಿ ನಾಯಕರು ಭರವಸೆ ನೀಡಿದ್ದಾರೆ. ಹೇಗೆ ಸರಿಪಡಿಸುತ್ತಾರೆ ಎಂಬುದು ಗೊತ್ತಿಲ್ಲ, ಆದರೆ ನಮಗೆ ಬೆಸ್ಟ್ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದಿದ್ದಾರೆ. ಕಾರ್ಯಕರ್ತರಿಗೂ ಇದನ್ನೇ ಹೇಳುತ್ತೇನೆ, ಸ್ವಲ್ಪ ಕಾಲಾವಕಾಶ ಕಾಯೋಣ ಎಂದು ತಿಳಿಸಿದರು. ಇದನ್ನೂ ಓದಿ: ಹಣಕ್ಕೆ ಮಂತ್ರಿ ಸ್ಥಾನ ಮಾರಾಟ – ಹೈಕಮಾಂಡ್ಗೆ ತಿಮ್ಮಾಪೂರ ನಿಂದನೆ, ಆಡಿಯೋ ವೈರಲ್ ಸಚಿವ ಸ್ಥಾನದ ಹೊರತಾಗಿ ಬೇರೆ ಹುದ್ದೆಗಳನ್ನು ನೀಡಿದರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ, ಇಲ್ಲ, ಬೇರೆ ಯಾವುದೇ ಹುದ್ದೆಗೆ ಒಪ್ಪಿಗೆಯಿಲ್ಲ. ಸಚಿವ ಸ್ಥಾನವೇ ನಮಗೆ ಬೇಕು ಎಂದು ಕೃಷ್ಣಪ್ಪ ಸ್ಪಷ್ಟಪಡಿಸಿದರು. ಮನೆ ಕ್ಲೀನ್ ಮಾಡಿಕೊಳ್ಳಲಿ ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ನಾವಿಲ್ಲಿ ಕಾರ್ಯತಂತ್ರ ರೂಪಿಸಲು ಮತ್ತು ಹಿರಿಯ ಶಾಸಕರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಬಂದಿದ್ದೆವು. ಕೃಷ್ಣಪ್ಪ ಅವರು ಪಕ್ಷದ ನಿಷ್ಠಾವಂತ ನಾಯಕರು, ಅವರಿಗೆ ಪರಿಸ್ಥಿತಿಯನ್ನು ಅರ್ಥೈಸುವ ಅಗತ್ಯವಿತ್ತು ಎಂದರು. ಬಿಜೆಪಿಯ ಶಾಸಕರ ಅಸಮಾಧಾನದ ಕುರಿತಾದ ಹೇಳಿಕೆಗಳಿಗೆ ತಿರುಗೇಟು ನೀಡಿದ ಅವರು, ವಿಜಯೇಂದ್ರ ಅವರು ಮೊದಲು ತಮ್ಮ ಪಕ್ಷದ ಬಗ್ಗೆ ಮಾತನಾಡಲಿ. ಅವರ ಮನೆ ಮೊದಲು ಕ್ಲೀನ್ ಮಾಡಿಕೊಳ್ಳಲಿ. ಇತ್ತೀಚೆಗೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಏನಾಯಿತು ಎಂದು ಎಲ್ಲರೂ ನೋಡಿದ್ದಾರೆ. ನಮ್ಮಲ್ಲಿ ಯಾರಿಗೂ ಕೋಪವಿಲ್ಲ, ಎಲ್ಲವೂ ಸರಿಯಾಗಿದೆ ಎಂದು ತಿರುಗೇಟು ನೀಡಿದರು. ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಈ ಭೇಟಿಯ ನಂತರ ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿದ್ದ ಆಕ್ರೋಶ ಸದ್ಯಕ್ಕೆ ಶಮನಗೊಂಡಂತಾಗಿದೆ.