ಗಡ್ಕರಿ ವಿರುದ್ಧದ ಜಾಲತಾಣದ ಪೋಸ್ಟ್ಗಳನ್ನು ತೆಗೆದುಹಾಕಲು ಬಾಂಬೆ ಹೈಕೋರ್ಟ್ ಆದೇಶ
ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಸಾಮಾಜಿಕ ಜಾಲತಾಣ ಮತ್ತು ವೆಬ್ಸೈಟ್ಗಳಲ್ಲಿ ಹಾಕಿರುವ ಪೋಸ್ಟ್ಗಳು ‘ನೀಚ, ಅಶ್ಲೀಲ ಮತ್ತು ನಿಂದನಾತ್ಮಕ’ವಾಗಿದ್ದು, ಅವುಗಳನ್ನು ತಕ್ಷಣವೇ ಆನ್ಲೈನ್ನಿಂದ ತೆಗೆದುಹಾಕಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ(ಆ.5) ಆದೇಶ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರ ಏಕಸದಸ್ಯ ಪೀಠವು

ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಸಾಮಾಜಿಕ ಜಾಲತಾಣ ಮತ್ತು ವೆಬ್ಸೈಟ್ಗಳಲ್ಲಿ ಹಾಕಿರುವ ಪೋಸ್ಟ್ಗಳು ‘ನೀಚ, ಅಶ್ಲೀಲ ಮತ್ತು ನಿಂದನಾತ್ಮಕ’ವಾಗಿದ್ದು, ಅವುಗಳನ್ನು ತಕ್ಷಣವೇ ಆನ್ಲೈನ್ನಿಂದ ತೆಗೆದುಹಾಕಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ(ಆ.5) ಆದೇಶ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರ ಏಕಸದಸ್ಯ ಪೀಠವು, ಗಡ್ಕರಿ ವಿರುದ್ಧದ ಜಾಲತಾಣಗಳಲ್ಲಿನ ಪೋಸ್ಟ್ಗಳನ್ನು ತಕ್ಷಣವೇ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳುವಂತೆ ಮೆಟಾ, ಎಕ್ಸ್ ಕಾರ್ಪ್ ಮತ್ತು ಗೂಗಲ್ ಎಲ್ಎಲ್ಸಿಗೆ ನಿರ್ದೇಶಿಸಿದೆ. ಯುವ ಜನರು ಸೇರಿದಂತೆ ಎಲ್ಲರೂ ಜಾಲತಾಣಗಳನ್ನು ಬಳಸುತ್ತಾರೆ, ಹಾಗಾಗಿ ಈ ರೀತಿಯ ಪೋಸ್ಟ್ಗಳು ಆನ್ಲೈನ್ನಲ್ಲಿ ಇರಬಾರದು ಎಂದು ಅದು ಹೇಳಿದೆ.ನಿತಿನ್ ಗಡ್ಕರಿ ಅವರ ವಿರುದ್ಧ ಭವಿಷ್ಯದಲ್ಲಿ ಡೀಪ್ಫೇಕ್ ಅಥವಾ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಲಾದ ವಿಷಯಗಳು ಸೇರಿದಂತೆ ಇಂತಹ ಯಾವುದೇ ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದರೆ, ಸಚಿವರು ನೇರವಾಗಿ ಆನ್ಲೈನ್ ವೇದಿಕೆಗಳನ್ನು ಸಂಪರ್ಕಿಸಬಹುದು ಮತ್ತು ಆ ವೇದಿಕೆಗಳು ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆಗೆ ಒಳಗಾದ ವ್ಯಕ್ತಿಯು ನ್ಯಾಯಾಲಯದ ಮೊರೆ ಹೋಗುವ ಅಗತ್ಯವಿಲ್ಲದೆಯೇ ಅಂತಹ ಪೋಸ್ಟ್ಗಳನ್ನು ತೆಗೆದುಹಾಕಲು ಮೆಟಾ, ಎಕ್ಸ್ ಕಾರ್ಪ್ ಮತ್ತು ಗೂಗಲ್ ಎಲ್ಎಲ್ಸಿಯಂತಹ ಆನ್ಲೈನ್ ವೇದಿಕೆಗಳಲ್ಲಿ ಯಾವುದಾದರೂ ವ್ಯವಸ್ಥೆ ಇದೆಯೇ ಎಂದು ಪೀಠವು ಪ್ರಶ್ನಿಸಿತು. ಅಂತಹ ವಿಷಯವನ್ನು ತೆಗೆದುಹಾಕುವಂತಹ ವ್ಯವಸ್ಥೆಯೊಂದು ಭವಿಷ್ಯದಲ್ಲಿ ಇರಬೇಕು ಎಂದು ನ್ಯಾಯಮೂರ್ತಿ ಡಾಕ್ಟರ್ ಅಭಿಪ್ರಾಯಪಟ್ಟರು.ಇಷ್ಟೆಲ್ಲಾ ತಂತ್ರಜ್ಞಾನವು ನಿಮ್ಮ ಬಳಿ ಇದ್ದರೂ, ಇದನ್ನು ತಡೆಯುವ ಯಾವುದೇ ಕಾರ್ಯವಿಧಾನ ನಿಮ್ಮಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ ನ್ಯಾಯಪೀಠ, ಈ ರೀತಿಯ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳು ಸ್ವಯಂಪ್ರೇರಣೆಯಿಂದ ತೆಗೆದುಹಾಕಬೇಕು ಎಂದು ಸೂಚಿಸಿತು. ಎಥೆನಾಲ್ ವಿಷಯದಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ಅವರು ಮೆಟಾ, ಎಕ್ಸ್ ಕಾರ್ಪ್ ಮತ್ತು ಗೂಗಲ್ ಎಲ್ಎಲ್ಸಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.