ನಾನು ಡಿಎಂಕೆ ಯೋಧ, ನನ್ನನ್ನು ಉಗ್ರನಂತೆ ನಡೆಸಿಕೊಂಡರು: ಉದಯನಿಧಿ
ತಿರುಚಿರಾಪಳ್ಳಿ: ‘ಚೆನ್ನೈನಿಂದ ತಂಜಾವೂರಿಗೆ 400 ಕಿ.ಮೀ. ದೂರದವರೆಗೆ ಸುಮಾರು 3,000 ಪೊಲೀಸರೊಂದಿಗೆ ನನ್ನನ್ನು ಭಯೋತ್ಪಾದಕರಂತೆ ರಸ್ತೆಯ ಮೂಲಕ ಕರೆದೊಯ್ದರು. ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದು ತಮಿಳುನಾಡಿನ ಮಾಜಿ ಉಪ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ಆರೋಪಿಸಿದ್ದಾರೆ. ನಟಿ ತ್ರಿಶಾ ವಿರುದ್ಧ ದ್ವಂದ್ವಾರ್ಥ

ತಿರುಚಿರಾಪಳ್ಳಿ: ‘ಚೆನ್ನೈನಿಂದ ತಂಜಾವೂರಿಗೆ 400 ಕಿ.ಮೀ. ದೂರದವರೆಗೆ ಸುಮಾರು 3,000 ಪೊಲೀಸರೊಂದಿಗೆ ನನ್ನನ್ನು ಭಯೋತ್ಪಾದಕರಂತೆ ರಸ್ತೆಯ ಮೂಲಕ ಕರೆದೊಯ್ದರು. ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದು ತಮಿಳುನಾಡಿನ ಮಾಜಿ ಉಪ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ಆರೋಪಿಸಿದ್ದಾರೆ. ನಟಿ ತ್ರಿಶಾ ವಿರುದ್ಧ ದ್ವಂದ್ವಾರ್ಥದ ಮಾತುಗಳನ್ನಾಡಿ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಚೆನ್ನೈನ ನಿವಾಸದಲ್ಲಿ ಬಂಧನಕ್ಕೊಳಗಾಗಿದ್ದ ಉದಯನಿಧಿ ಅವರನ್ನು ಪೊಲೀಸರು ತಂಜಾವೂರಿಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ತಮ್ಮ ಮೇಲಿನ ಆರೋಪಗಳನ್ನು ‘ಸುಳ್ಳು’ ಎಂದು ತಳ್ಳಿ ಹಾಕಿರುವ ಉದಯನಿಧಿ, ‘ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಒಂದೇ ಅರ್ಥದಲ್ಲಿ ನೇರವಾಗಿ ಮಾತನಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.‘ನನ್ನ ಭಾಷಣದ ತುಣುಕನ್ನು ಕಟ್, ಕಾಪಿ ಹಾಗೂ ಪೇಸ್ಟ್ ಮಾಡಿ, ನಾನು ಸರಿಯಾಗಿ ಮಾತನಾಡಿಲ್ಲ ಎಂದು ಬಿಂಬಿಸಲಾಗಿದೆ. ಕೆಲವರು ನಾನು ದ್ವಂದ್ವಾರ್ಥದಲ್ಲಿ ಮಾತನಾಡಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ರೈತರಿಗೆ ನೀರಿನ ಅಗತ್ಯವಿದೆ ಎಂಬುದಷ್ಟೇ ನನ್ನ ಮಾತುಗಳ ಅರ್ಥವಾಗಿತ್ತು. ಮಹಿಳೆಯರಿಗೆ ಅಪಮಾನ ಮಾಡುವ ಯಾವುದೇ ಉದ್ದೇಶ ನನಗಿಲ್ಲ. ತಮಿಳುನಾಡಿನ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ನಾನು ನನ್ನ ಕುಟುಂಬದ ಸದಸ್ಯರೆಂದೇ ಭಾವಿಸುತ್ತೇನೆ’ ಎಂದಿದ್ದಾರೆ. ‘ರಾಜ್ಯದ ರೈತರ ನೈಜ ಸಮಸ್ಯೆಗಳನ್ನು ಈಡೇರಿಸಲು ಸಾಧ್ಯವಾಗದ ಸರ್ಕಾರ, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಈ ಬಂಧನದ ನಾಟಕವಾಡಿದೆ’ ಎಂದು ಅವರು ಆರೋಪಿಸಿದ್ದಾರೆ. ‘ಕರ್ನಾಟಕದಿಂದ ತಮಿಳುನಾಡಿಗೆ ಸಿಗಬೇಕಾದ ನ್ಯಾಯಯುತ ಕಾವೇರಿ ನೀರನ್ನು ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕರ್ನಾಟಕದಿಂದ ನೀರು ಕೇಳುವ ಧೈರ್ಯವಾಗಲಿ, ಸಾಮರ್ಥ್ಯವಾಗಲಿ ರಾಜ್ಯ ಸರ್ಕಾರಕ್ಕಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ವಿರೋಧಿಸುವ ಶಕ್ತಿಯೂ ಈ ಸರ್ಕಾರಕ್ಕಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ. ‘ನೇರವಾಗಿ ಕರೆದೊಯ್ಯುವ ಬದಲು ಚೆಂಗಲ್ಪಟ್ಟು ಪೊಲೀಸ್ ಠಾಣೆಯಲ್ಲಿ ಇದ್ದಕ್ಕಿದ್ದಂತೆ ತಡೆದು ಅನಗತ್ಯವಾಗಿ ವಿಚಾರಣೆ ನಡೆಸಿದರು. ನಂತರ ಮುಂದಕ್ಕೆ ಕರೆದೊಯ್ದರು. ವಿರೋಧ ಪಕ್ಷದ ನಾಯಕನೊಬ್ಬನನ್ನು ಕರೆದೊಯ್ಯಲು ಇಷ್ಟೊಂದು ಬೃಹತ್ ಮಟ್ಟದ ಪೊಲೀಸ್ ಭದ್ರತೆ ನಿಯೋಜಿಸಿರುವುದನ್ನು ನೋಡಿದರೆ, ಅತ್ಯಂತ ಅಪಾಯಕಾರಿ ಭಯೋತ್ಪಾದಕರಂತೆ ನನ್ನನ್ನು ನಡೆಸಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದಾರೆ. ಉದಯನಿಧಿ ಸ್ಟಾಲಿನ್ ಈಗಿನ ಆಡಳಿತವನ್ನು ‘ಸರ್ಕಸ್ ಕ್ಯಾಂಪ್’ ಎಂದು ವ್ಯಂಗ್ಯವಾಡಿದ ಡಿಎಂಕೆ ನಾಯಕ, ‘ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚಲು ಮುಖ್ಯಮಂತ್ರಿ ಹಾಗೂ ಸಚಿವರು ಫೋಟೋ, ಸೋಶಿಯಲ್ ಮೀಡಿಯಾ ರೀಲ್ಸ್ ಮತ್ತು ಟೊಳ್ಳು ಭಾಷಣಗಳಲ್ಲಿ ನಿರತರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ತಮ್ಮ ರಾಜಕೀಯ ಹಿನ್ನೆಲೆಯನ್ನು ನೆನಪಿಸಿದ ಅವರು, ‘ನಾವು ಕಲೈಂಙಾರ್ ಅವರ ಮೊಮ್ಮಗ ಮತ್ತು ಎಂ. ಕೆ. ಸ್ಟಾಲಿನ್ ಅವರ ಮಗ. ನಾನು ಡಿಎಂಕೆಯ ಯೋಧ. ಈ ಬೆದರಿಕೆ ತಂತ್ರಗಳಿಗೆ ಹೆದರುವುದಿಲ್ಲ. ಇದನ್ನು ಕಾನೂನುಬದ್ಧವಾಗಿ ಎದುರಿಸಲು ಸಿದ್ಧನಿದ್ದೇನೆ. ರೈತರ ಪರವಾಗಿ ನಾನು ಇನ್ನೂ ನೂರು ಸಲ ಧ್ವನಿ ಎತ್ತುತ್ತೇನೆ’ ಎಂದು ಘೋಷಿಸಿದ್ದಾರೆ.ತಮ್ಮ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿರುವ ಡಿಎಂಕೆ ಕಾರ್ಯಕರ್ತರು ಮತ್ತು ಮೈತ್ರಿಕೂಟದ ನಾಯಕರಿಗೆ ಧನ್ಯವಾದ ತಿಳಿಸಿದ ಅವರು, ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.‘ಈಗಿನ ಮುಖ್ಯಮಂತ್ರಿಗೆ ಡಿಎಂಕೆ ಅಥವಾ ತಮಿಳುನಾಡಿನ ಇತಿಹಾಸವೇ ಗೊತ್ತಿಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಅವರು ಎಚ್ಚರಿಸಿದ್ದಾರೆ.ನಟಿ ತ್ರಿಷಾ ವಿರುದ್ಧ ಹೇಳಿಕೆ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ, ಬಿಡುಗಡೆಮಹಿಳೆಗೆ ಅಪಮಾನ ಆರೋಪದಲ್ಲಿ ಬಂಧನ; ಅಂದು ಕರುಣಾನಿಧಿ, ಇಂದು ಉದಯನಿಧಿ ಸ್ಟಾಲಿನ್