ಸೇಂಟ್ ಲೂಯಿ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿ:ಅಗ್ರಸ್ಥಾನಕ್ಕೇರಿದ ಪ್ರಜ್ಞಾನಂದ
ಸೇಂಟ್ ಲೂಯಿಸ್: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸೇಂಟ್ ಲೂಯಿಸ್ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯಲ್ಲಿ ರ್ಯಾಪಿಡ್ ಸುತ್ತುಗಳ ಬಳಿಕ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಸಂಭವನೀಯ 18 ಸುತ್ತುಗಳಲ್ಲಿ 12 ಪಾಯಿಂಟ್ಸ್ ಗಳಿಸಿದ್ದಾರೆ.ಸ್ಪಷ್ಟವಾದ ತಂತ್ರಗಾರಿಕೆ, ಕರಾರುವಾಕ್ ನಡೆಗಳ ಮೂಲಕ ಭಾರತದ ಆಟಗಾರ 9 ಸುತ್ತುಗಳ ರ್ಯಾಪಿಡ್ ವಿಭಾಗದಲ್

ಸೇಂಟ್ ಲೂಯಿಸ್: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸೇಂಟ್ ಲೂಯಿಸ್ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯಲ್ಲಿ ರ್ಯಾಪಿಡ್ ಸುತ್ತುಗಳ ಬಳಿಕ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಸಂಭವನೀಯ 18 ಸುತ್ತುಗಳಲ್ಲಿ 12 ಪಾಯಿಂಟ್ಸ್ ಗಳಿಸಿದ್ದಾರೆ.ಸ್ಪಷ್ಟವಾದ ತಂತ್ರಗಾರಿಕೆ, ಕರಾರುವಾಕ್ ನಡೆಗಳ ಮೂಲಕ ಭಾರತದ ಆಟಗಾರ 9 ಸುತ್ತುಗಳ ರ್ಯಾಪಿಡ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು. ಈ ವಿಭಾಗದಲ್ಲಿ ಗೆಲುವಿಗೆ ತಲಾ ಎರಡು ಪಾಯಿಂಟ್ಸ್ ನೀಡಲಾಗುತ್ತದೆ.ಈ ಟೂರ್ನಿಯಲ್ಲಿ ಬಿಟ್ಝ್ ವಿಭಾಗದ 18 ಸುತ್ತುಗಳಿವೆ. ಸುಮಾರು ₹1.90 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ವಿಜೇತ ಆಟಗಾರ ₹47.50 ಲಕ್ಷ ರೂ. ಜೇಬಿಗಿಳಿಸಲಿದ್ದಾರೆ.9ನೇ ಹಾಗೂ ಅಂತಿಮ ಸುತ್ತಿನಲ್ಲಿ ಪ್ರಜ್ಞಾನಂದ, ಡಚ್ ಗ್ರ್ಯಾಂಡ್ಮಾಸ್ಟರ್ ಜೋರ್ಡನ್ ವಾನ್ ಫೋರೀಸ್ಟ್ ಅವರಿಗೆ ಸೋತರೂ, ಒಂದು ಪಾಯಿಂಟ್ ಅಂತರದಿಂದ ಮುನ್ನಡೆ ಉಳಿಸಿಕೊಳ್ಳುವಲ್ಲಿ ಸಫಲರಾದರು. ಅವರು ಪಂದ್ಯ ನಾಲ್ಕು ಗೆದ್ದು, ನಾಲ್ಕು ಡ್ರಾ ಮಾಡಿಕೊಂಡು, ಒಂದು ಪಂದ್ಯ ಸೋತರು.ವಿಶ್ವ ಚಾಂಪಿಯನ್ಷಿಪ್ ಪಟ್ಟಕ್ಕೆ ಗುಕೇಶ್ ಅವರಿಗೆ ಚಾಲೆಂಜರ್ ಆಗಿರುವ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ (11 ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ವೆಸ್ಲಿ ಸೊ (10 ಪಾಯಿಂಟ್ಸ್) ಮೂರನೇ ಸ್ಥಾನದಲ್ಲಿದ್ದಾರೆ. ಹತ್ತು ಆಟಗಾರರು ಕಣದಲ್ಲಿದ್ದಾರೆ. ಡಚ್ ಆಟಗಾರ ಅನಿಶ್ ಗಿರಿ ಮತ್ತು ಕ್ಯೂಬಾ ಮೂಲದ ಅಮೆರಿಕದ ಆಟಗಾರ ಲೀನಿಯರ್ ಡೊಮಿಂಗೆಝ್ ಪೆರೆಝ್ (ತಲಾ 9 ಪಾಯಿಂಟ್ಸ್) ನಂತರದ ಸ್ಥಾನಗಳಲ್ಲಿದ್ದಾರೆ.ರ್ಯಾಪಿಡ್ ವಿಭಾಗದ ಕೊನೆಯ ಸುತ್ತನ್ನು ಗೆದ್ದಿದ್ದಲ್ಲಿ ಅವರು ಬ್ಲಿಟ್ಝ್ ಟೂರ್ನಿಯಲ್ಲಿ ಉತ್ತಮ ಮುನ್ನಡೆಯೊಡನೆ ಕಣಕ್ಕಿಳಿಯುವ ಅವಕಾಶವಿರುತಿತ್ತು.