ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್ಗೆ ಮುಖ್ಯಮಂತ್ರಿ ಮನವೊಲಿಕೆ ಬಗ್ಗಲ್ಲ
ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಆ.13ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯುವುದಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಲ್ಲಿ ಹೇಳಿದರು.ರಾಜ್ಯದಲ್ಲಿನ ಎಲ್ಲ ಕನ್ನಡಪರ ಸಂಘಟನೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರಿ ನೌಕರರ ಸಂಘ ಸೇರಿದಂತೆ ಎಲ

ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಆ.13ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯುವುದಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಲ್ಲಿ ಹೇಳಿದರು.ರಾಜ್ಯದಲ್ಲಿನ ಎಲ್ಲ ಕನ್ನಡಪರ ಸಂಘಟನೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರಿ ನೌಕರರ ಸಂಘ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಕರ್ನಾಟಕ ಬಂದ್ಗೆ ಬೆಂಬಲ ಕೊಟ್ಟಿವೆ. ರಾಜ್ಯ ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ಹೋರಾಟಗಾರರನ್ನು ಬಂಧಿಸಲು ಮುಂದಾದರೆ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಂದ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅವರು ನನ್ನ ಮನ ಒಲಿಸಲು ಸಾಧ್ಯವಿಲ್ಲ. ಇದು ಸರ್ಕಾರದ ವಿರುದ್ಧದ ಪ್ರತಿಭಟನೆ ಅಲ್ಲ; ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಹಾಗಾಗಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಬಂದ್ನಲ್ಲಿ ಭಾಗವಹಿಸಿ, ಹೊಸ ಮುನ್ನುಡಿ ಬರೆಯಬೇಕು ಎಂದು ಸಲಹೆ ನೀಡಿದರು.‘ಕಾವೇರಿ ನೀರು ನಿರ್ವಹಣಾ ಮಂಡಳಿ ತೀರ್ಪನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕರುಣಾನಿಧಿ ಕಾಲದಿಂದಲೂ ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದ ತಕರಾರು ಇದೆ. ಅವರಿಗೆ ನಮ್ಮ ಸ್ನೇಹ ಬೇಡ; ನೀರು ಮಾತ್ರ ಬೇಕು. ನಿರ್ವಹಣಾ ಮಂಡಳಿಗೂ ಕರ್ನಾಟಕದ ಜನರ ನೋವು ಅರ್ಥ ಆಗುತ್ತಿಲ್ಲ. ದೆಹಲಿಯಲ್ಲಿ ಕುಳಿತು ಆದೇಶ ನೀಡುವ ಬದಲು, ರಾಜ್ಯಕ್ಕೆ ಬಂದು ವಾಸ್ತವ ಅರಿತುಕೊಳ್ಳಬೇಕು’ ಎಂದು ಆಗ್ರಹಿಸಿದರು.‘ಕಾವೇರಿ ನೀರು ಹರಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಈಚೆಗೆ ಸರ್ವ ಪಕ್ಷಗಳ ಸಭೆ ನಡೆಯಿತು. ಆದರೆ, ಅಲ್ಲಿದ್ದವರು ಮೂರು ಪಕ್ಷಗಳವರು ಮಾತ್ರ. ಬೇರೆಯವರಿಗೆ ಅವಕಾಶವನ್ನೇ ಕೊಡಲಿಲ್ಲ. ಸಭೆಯಲ್ಲಿ ಭಾಗವಹಿಸಿದ್ದ ಪಕ್ಷಗಳ ನಾಯಕರೆಲ್ಲರೂ ಅವರ ಆಡಳಿತ ಅವಧಿಯಲ್ಲಿ ನೀರು ಹರಿಸಿದವರೇ. ಡಿ.ಕೆ.ಶಿವಕುಮಾರ್ ಒಬ್ಬ ಜಾದೂಗಾರನಿದ್ದಂತೆ. ಮಾತಿನಲ್ಲೇ ಜಾದೂ ಮಾಡಿ, ಅವರ ಬಾಯಿ ಮುಚ್ಚಿಸಿದ್ದಾರೆ’ ಎಂದರು.ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು.ಕಾವೇರಿ ನೀರಿನ ವಿಚಾರ ಒಂದಕ್ಕೇ ಬಂದ್ಗೆ ಕರೆ ನೀಡಿಲ್ಲ. ಮೇಕೆದಾಟು ಯೋಜನೆ, ಕಳಸಾ ಬಂಡೂರಿ ಯೋಜನೆ ಅನುಷ್ಠಾನ, ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ, ಗಡಿನಾಡು ಕನ್ನಡಿಗರ ರಕ್ಷಣೆ, ಎಂಇಎಸ್ ನಿಷೇಧ, ಕರ್ನಾಟದಲ್ಲಿ ಪರಭಾಷಾ ಸಿನಿಮಾಗಳಿಗೆ ನಿರ್ಬಂಧ, ಬ್ಯಾಂಕ್ ವ್ಯವಹಾರದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸೇರಿದಂತೆ ಒಟ್ಟು 26 ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಹೋರಾಟ ರೂಪಿಸಲಾಗಿದೆ ಎಂದು ತಿಳಿಸಿದರು.ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್, ‘ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ನಮ್ಮ ವಿರೋಧ ಇದೆ. ಹಳೆ ಮೈಸೂರು ಭಾಗದ ಜನರೆಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ಗಿರೀಶ್ ಗೌಡ, ಧನಿಯಾ ಕುಮಾರ್, ಸಂತೋಷ್, ಬಸವರಾಜ, ಇಮ್ರಾನ್, ಅರುಣ್ ಕುಮಾರ್, ಶೈಲೇಂದ್ರ ಪಾಟೀಲ, ಹೊಸಕೋಟೆ ನಟರಾಜು, ರಕ್ಷಿತ್ ಕರಿಮಣ್ಣೆ, ಮೀಸೆ ಸತೀಶ್, ಸಿದ್ಧಿಕ್, ವೆಂಕಟಾಚಲ ಭಾಗವಹಿಸಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260805-17-841936227